ಆವೃತ್ತಿಗಳು
Kannada

17ರ ಹರೆಯದಲ್ಲೇ ಉದ್ಯಮಕ್ಕೆ ಎಂಟ್ರಿ-ನಾಲ್ಕು ಸಂಸ್ಥೆಗಳ ಏಳು-ಬೀಳು

ಟೀಮ್​​ ವೈ.ಎಸ್​​.

YourStory Kannada
9th Nov 2015
Add to
Shares
4
Comments
Share This
Add to
Shares
4
Comments
Share

ವಿನಯ್ ಆನಂದ್. 22ರ ಹರೆಯದ ಯುವ ಉದ್ಯಮಿ. ಸದ್ಯ `ಪೈಪ್ಸ್ ನ್ಯೂಸ್' ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಇದು ಅವರ ನಾಲ್ಕನೇ ಕಂಪನಿ ಅನ್ನೋದು ವಿಶೇಷ. ಹದಿಹರೆಯದಲ್ಲೇ ಉದ್ಯಮ ಲೋಕಕ್ಕೆ ಕಾಲಿಟ್ಟ ವಿನಯ್ ತಮಗಾದ ಸಿಹಿ-ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅದು 2011ರ ಸಮಯ. ಯುವಕ, ಜೊತೆಗೆ ಭಾರತೀಯ ಎನಿಸಿಕೊಳ್ಳಲು ಸುಸಮಯ. ತಂತ್ರಜ್ಞಾನಕ್ಕೆ ಸಿಲಿಕಾನ್ ವ್ಯಾಲಿ ಮಾತ್ರ ಪರ್ಯಾಯ ಎಂಬಂಥ ಸ್ಥಿತಿ ಇರಲಿಲ್ಲ. ಭಾರತ ಕೂಡ ಔದ್ಯಮಿಕ ಪರಿಸರದಲ್ಲಿ ದಿಟ್ಟ ಹೆಜ್ಜೆ ಇಟ್ಟಿತ್ತು. ಫ್ಲಿಪ್‍ಕಾರ್ಟ್ ಆಗಲೂ ಪುಸ್ತಕಗಳನ್ನು ಮಾರಾಟ ಮಾಡ್ತಾ ಇತ್ತು. ಸ್ನ್ಯಾಪ್‍ಡೀಲ್ ಕೂಪನ್ ಮತ್ತು ಆಫರ್‍ಗಳ ಮೂಲಕ ಗ್ರಾಹಕರ ಮನಗೆದ್ದಿತ್ತು. ಆದ್ರೆ ಝೊಮೆಟೋ ಸಿರೀಸ್ ಎ ಹೂಡಿಕೆಯಲ್ಲಿ ಇನ್ನಷ್ಟೇ ಕಾಲಿಡಬೇಕಿತ್ತು.

image


ಭಾರತದ ಉದ್ಯಮ ಲೋಕದಲ್ಲೊಂದು ಹೊಸ ಹವಾ ಸೃಷ್ಟಿಸಲು ನಾನು ನಿರ್ಧರಿಸಿದ್ದೆ. ಬಡ ಕುಟುಂಬದಿಂದ ಬಂದ ನನಗೆ 17ರ ಹರೆಯದಲ್ಲಿ ಉದ್ಯಮಕ್ಕೆ ಬೇಕಾದ ಹಣ ಹೊಂದಿಸುವುದು ಹೇಗೆ ಅನೋದೇ ಪ್ರಶ್ನೆಯಾಗಿತ್ತು. ಆ ಸಮಯದಲ್ಲಿ ಝೀ ಸ್ಪೋರ್ಟ್ಸ್​​ ಪರ ವಿಶ್ವಕಪ್ ಕ್ರಿಕೆಟ್ ಬಗ್ಗೆ ವರದಿ ಮಾಡುವ ಅವಕಾಶ ಸಿಕ್ಕಿತ್ತು. ಕಾಲೇಜಿಗೆ ಕಾಲಿಟ್ಟ ಮೊದಲ ವರ್ಷದಲ್ಲೇ ನನ್ನ ಬ್ಯುಸಿನೆಸ್ ಪಾರ್ಟ್‍ನರ್ ಸಿದ್ದಾರ್ಥ್ ಗೋಲಿಯಾ ಅವರನ್ನು ಭೇಟಿಯಾಗಿದ್ದು ಕೂಡ ನನ್ನ ಅದೃಷ್ಟ. ಅಲ್ಲಿ ಇಲ್ಲಿ ಕೆಲಸ ಮಾಡಿ ಹಣ ಕೂಡಿಟ್ಟ ನಾವು ಉದ್ಯಮ ಕ್ಷೇತ್ರಕ್ಕೆ ಜಿಗಿದು ಬಿಟ್ಟಿದ್ವಿ.

1. ನೀವೇನು ಮಾಡುತ್ತಿದ್ದೀರಾ ಎಂಬುದರ ಅರಿವಿರಲಿ : ಆನ್‍ಲೈನ್ ಫುಡ್ ಆರ್ಡರಿಂಗ್ ಸೇವೆಯ `ಫುಡ್ ಫಾರ್ ಇಂಡಿಯಾ' ನನ್ನ ಮೊದಲ ಕಂಪನಿ. ಆಗ ನನಗೆ ವಿನ್ಯಾಸದ ಬಗೆಗಾಗಲಿ, ಕೋಡ್ ಬರೆಯುವ ಬಗೆಗಾಗಲಿ, ಉತ್ಪನ್ನ ತಯಾರಿಕೆಯ ಬಗ್ಗೆ ಅರಿವಿರಲಿಲ್ಲ. ಅದರ ಫಲಿತಾಂಶ ನಾನು ಮೋಸ ಹೋಗಿದ್ದೆ, ಮೂರ್ಖನಾಗಿದ್ದೆ. ಸುಮಾರು 6.5 ಲಕ್ಷ ರೂಪಾಯಿ ಬಂಡವಾಳ ಹಾಕಿ ಕಂಪನಿ ಆರಂಭಿಸಿದ್ದ ನಾವು 6.4 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ವಿ. 17ನೇ ವರ್ಷದಲ್ಲೇ ನಾನು ಬದುಕಿನ ದೊಡ್ಡ ಪಾಠ ಕಲಿತಿದ್ದೆ. ಹಾಗಾಗಿ ಎರಡನೇ ಮತ್ತು ಮೂರನೇ ಸಂಸ್ಥೆಯನ್ನು ಕಟ್ಟುವಷ್ಟರಲ್ಲಿ ನಾನು ಎಲ್ಲವನ್ನೂ ಕಲಿತಿದ್ದೆ.

2. ಗ್ರಹಿಕೆಯೇ ಸರ್ವಸ್ವ : ನೀವು ಮಿಲಿಯನ್ ಡಾಲರ್ ಹಣವನ್ನು ನೋಡಿದ್ದೀರಾ ಎಂದಾದಲ್ಲಿ ಅದು ನಿಮಗೆ ಸಿಗುತ್ತದೆ ಎಂದುಕೊಳ್ಳಿ. ಯಾಕಂದ್ರೆ ದೊಡ್ಡ ಕನಸುಗಳನ್ನೇ ಕಾಣಬೇಕು. ನೀವು ಹೇಗೆ ಡ್ರೆಸ್ ಮಾಡಿಕೊಂಡಿದ್ದೀರಾ? ನಿಮ್ಮ ಕಂಪನಿಯ ಪ್ರೊಫೈಲ್ ಹೇಗಿದೆ? ನಿಮ್ಮ ತಂಡದ ಗಾತ್ರ ಇವನ್ನೆಲ್ಲ ನೋಡಿದಾಗ ನಿಮ್ಮ ಉದ್ಯಮ ಮಿಲಿಯನ್ ಡಾಲರ್ ಮೌಲ್ಯದ್ದು ಎನಿಸುವಂತಿರಬೇಕು. ಇದನ್ನು ನಾವು ಬೇಗ ಅರ್ಥಮಾಡಿಕೊಂಡಿದ್ದೆವು. ಆನ್‍ಲೈನ್‍ನಲ್ಲಿ ನಮ್ಮ ಕಂಪನಿಯ ಪ್ರೊಫೈಲ್ ನೋಡಿದವರಾರಿಗೂ ನಾವು ಮುಂಬೈನ ಮೂಲೆಯಲ್ಲಿ ಕುಳಿತು ವ್ಯವಹಾರ ಮಾಡುತ್ತಿದ್ದೇವೆಂಬ ಬಗ್ಗೆ ಸಣ್ಣ ಸುಳಿವೂ ಇರಲಿಲ್ಲ.

3. ವೈಫಲ್ಯವೇ ಪ್ರೇರಣೆ : ಪ್ರಾಮಾಣಿಕವಾಗಿ ಹೇಳೋದಾದ್ರೆ ನನ್ನ ಮೊದಲ ಹಾಗೂ ಮೂರನೆಯ ಕಂಪನಿಗಳು ಸಂಪೂರ್ಣ ವಿಫಲವಾಗಿವೆ. ಆ ಸಂದರ್ಭದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳುವವರೇ ಹೆಚ್ಚು. ಸುತ್ತಮುತ್ತಲ ಜನರು ಕೂಡ ನಮ್ಮ ಬಗ್ಗೆ ಕೆಟ್ಟದಾಗಿ ಆಡಿಕೊಳ್ತಾರೆ. ಆದ್ರೆ ಪ್ರತಿ ಬಾರಿ ವಿಫಲನಾದಾಗಲೂ ಮತ್ತೆ ಮತ್ತೆ ಪ್ರಯತ್ನಿಸಬೇಕು, ಯಶಸ್ವಿಯಾಗಲೇಬೇಕೆಂಬ ಛಲ ನನ್ನಲ್ಲಿ ಮೂಡಿದೆ. ವೈಫಲ್ಯವೇ ನಿಮಗೆ ಪಾಠ ಕಲಿಸುತ್ತದೆ.

4. ಬಲವಾದ ತಂಡ ಕಟ್ಟಿ : ನೀವು ನೇಮಕ ಮಾಡಿಕೊಳ್ಳುವ ಮೊದಲ ಐದು ಉದ್ಯೋಗಿಗಳೇ ನಿಮ್ಮ ಕಂಪನಿಯ ಭವಿಷ್ಯ ನಿರ್ಧರಿಸುತ್ತಾರೆ. ಹಾಗಾಗಿ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು. ಉದ್ಯೋಗಿ ಕೇವಲ ಪ್ರತಿಭಾವಂತ ಮಾತ್ರವಲ್ಲ, ನಿಷ್ಠಾವಂತನಾಗಿರಬೇಕು. ನಿಮ್ಮ ಸಂಸ್ಥೆಯೊಂದಿಗೆ ಎಷ್ಟು ಎತ್ತರಕ್ಕೆ ನೀವು ಬೆಳೆಯಬಲ್ಲಿರಿ ಎಂಬುದನ್ನು ನಿಮ್ಮ ತಂಡವೇ ನಿರ್ಧರಿಸುತ್ತದೆ. ನನ್ನ ನಾಲ್ಕು ಕಂಪನಿಗಳಲ್ಲೂ ಅತ್ಯುತ್ತಮ ಸಿಬ್ಬಂದಿಯನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೆ.

5. ಮಿತವ್ಯಯ ಬಹುಮುಖ್ಯ : ಇದು ಎಷ್ಟು ಮಹತ್ವದ ಅಂಶ ಅನ್ನೋದನ್ನು ನಾನು ಒತ್ತಿ ಹೇಳಬೇಕಾಗಿಲ್ಲ. ನನ್ನ ಎರಡನೇ ಕಂಪನಿ `ಡೂಡಲ್ ಕ್ರಿಯೇಟಿವ್' ಯಶಸ್ಸಿನ ಹಾದಿಯಲ್ಲಿದ್ದಾಗ ಹಣ ಅಗ್ಗದ ವಸ್ತು ಎಂಬಂತೆ ನೋಡುತ್ತಿದ್ದೆ. ಮಿತವ್ಯಯದ ಮಹತ್ವದ ಅರಿವು ನನಗಿರಲಿಲ್ಲ. ನಾವು ಪೈಪ್ಸ್ ಕಂಪನಿಗಾಗಿ 8,50,000 ರೂಪಾಯಿ ಕೊಟ್ಟು ಒಂದು ವಿಡಿಯೋ ಮಾಡಿಸಿದ್ವಿ. ಆದ್ರೆ ಅದನ್ನು ಕೇವಲ 3000 ರೂಪಾಯಿ ಒಳಗೆ ಮಾಡಬಹುದಿತ್ತು ಅನ್ನೋದು ಆಮೇಲೆ ಅರಿವಾಯ್ತು. ಹಾಗಾಗಿ ಸೀಮಿತ ಸಂಪನ್ಮೂಲವನ್ನು ಮಿತವಾಗಿ ಬಳಸಿ.

6. ಸಮಯ : ನಾನು ಇದೆಲ್ಲದರಿಂದ ಕಲಿಬೇಕಾದ ಒಂದೇ ಒಂದು ಅಂಶ ಅಂದ್ರೆ ಸಮಯ. ಮೊದಲ ಕಂಪನಿಯನ್ನು ಲಾಂಚ್ ಮಾಡುವಾಗ ನನಗೆ ಸಮಯದ ಅರಿವಿರಲಿಲ್ಲ. 2011ರ ಬದಲಿ 2013 ಅಥವಾ 2014ರಲ್ಲಿ ಲಾಂಚ್ ಮಾಡಿದ್ರೆ ಕಂಪನಿಯ ಭವಿಷ್ಯವೇ ಬೇರೆಯಾಗಿರ್ತಿತ್ತು. ಸಮಯ ನಿಮಗೆ ಬೇಕಾದುದನ್ನೆಲ್ಲಾ ಕೊಡುತ್ತೆ, ಸಮಯವೇ ನಿಮ್ಮಿಂದ ಎಲ್ಲವನ್ನೂ ಕಿತ್ತುಕೊಳ್ಳುತ್ತೆ.

7. ಒಂದು ವಸ್ತು ಇನ್ನೊಂದನ್ನು ಮುನ್ನಡೆಸುತ್ತೆ : ಇದೇ ಮಾತನ್ನು ನನ್ನ ತಂದೆ ಯಾವಾಗಲೂ ಹೇಳುತ್ತಿರುತ್ತಿದ್ರು, ಆದ್ರೆ ನಾನ್ಯಾವತ್ತೂ ಅದಕ್ಕೆ ಬೆಲೆ ಕೊಟ್ಟಿರಲಿಲ್ಲ. ಪ್ರತಿ ಬಾರಿ ನಾನು ಸೋಲುತ್ತಿದ್ದೇನೆ ಅನಿಸಿದಾಗಲೆಲ್ಲ ಅವರು ಇದನ್ನೇ ಹೇಳುತ್ತಿದ್ರು. ನಿಮ್ಮ ಸೃಷ್ಟಿಯನ್ನ ಕೈಯಾರೆ ಮುಚ್ಚಿ ಹಾಕುವುದಕ್ಕಿಂತ ಹೀನ ಕೆಲಸ ಜಗತ್ತಿನಲ್ಲಿ ಇನ್ಯಾವುದೂ ಇಲ್ಲ. ನನ್ನ ಮೊದಲ ಕಂಪನಿ ಫುಡ್ ಫಾರ್ ಇಂಡಿಯಾವನ್ನು ಮುಚ್ಚಿದಾಗಲೂ ನನ್ನ ತಂದೆ ಅದನ್ನೇ ಹೇಳಿದ್ರು. ಆತ್ಮವಿಶ್ವಾಸದ ಕಿಚ್ಚು ಒಳಗೇ ಇರಲಿ, ಒಂದು ವಸ್ತು ಇನ್ನೊಂದಕ್ಕೆ ದಾರಿ ಮಾಡಿಕೊಡುತ್ತದೆ ಎಂದಿದ್ರು. ನಿಮ್ಮಲ್ಲಿ ನೀವು ನಂಬಿಕೆಯಿಟ್ಟು ಮುನ್ನಡೆದಾಗಲೇ ಯಶಸ್ಸು ಸಿಗಲು ಸಾಧ್ಯ.

ಈಗ ನಾನು ಸಂಪೂರ್ಣ ಯಶಸ್ಸಿಯಾಗಿದ್ದೇನೆಂದು ಅರ್ಥವಲ್ಲ. ನನ್ನ ಪಯಣ ಇನ್ನೂ ಮುಂದುವರಿಯುತ್ತಲೇ ಇದೆ. ನನ್ನ ನಾಲ್ಕೂವರೆ ವರ್ಷಗಳ ಉದ್ಯಮ ಬದುಕಿನ ಅನುಭವವನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದೇನೆ.

Add to
Shares
4
Comments
Share This
Add to
Shares
4
Comments
Share
Report an issue
Authors

Related Tags