ಆವೃತ್ತಿಗಳು
Kannada

ಬಡವರ ನೋವಿಗೆ ಮಿಡಿಯಿತು ಮನ – ಕಷ್ಟದಲ್ಲಿದ್ದರೂ ಲಕ್ಷಾಂತರ ರೂಪಾಯಿ ಔಷಧಿ ದಾನ

ಟೀಮ್​ ವೈ.ಎಸ್​. ಕನ್ನಡ

20th Dec 2015
Add to
Shares
0
Comments
Share This
Add to
Shares
0
Comments
Share


ಬಾಬಾ ಎಂದ ತಕ್ಷಣ ನಮ್ಮ ಮನಸ್ಸಿನ ಪಟಲದಲ್ಲಿ ಹಾದು ಹೋಗುವುದು ಕಾವಿ ತೊಟ್ಟ, ಶಾಂತ ಧ್ವನಿಯಲ್ಲಿ ಧರ್ಮ ಬೋಧನೆ ಮಾಡುವ ವ್ಯಕ್ತಿ. ಆದರೆ ಈಗ ನಾವು ಹೇಳ ಹೊರಟಿರುವ ಬಾಬಾ ಹಾಗಿಲ್ಲ. ಜಾತಿ,ಧರ್ಮದ ಮಿತಿ ಅವರಿಗಿಲ್ಲ. ಮಾನವೀಯತೆಗೆ ಮಹತ್ವ ಕೊಡುವ ಅವರು, ಬಡ ಜನರ ಸ್ವಾಸ್ಥ್ಯಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.

ಅವರೇ ಮೆಡಿಸಿನ್ ಬಾಬಾ. ಅವರ ನಿಜವಾದ ಹೆಸರು ಓಂಕಾರನಾಥ್ ಶರ್ಮಾ. ವಯಸ್ಸು 79. ಓಂಕಾರ್ ನಾಥ್ ನೋಯ್ಡಾದ ಕೈಲಾಶ್ ಆಸ್ಪತ್ರೆಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡಿದ್ದರು. ವಿಕಲಾಂಗರಾಗಿರುವ ಅವರು ಯುವಕರನ್ನೂ ನಾಚಿಸುವಷ್ಟು ಉತ್ಸಾಹಿ. ಬಡ ಜನರಿಗೆ ಉಚಿತ ಔಷಧಿ ನೀಡುವುದು ಜೀವನದ ಮೂಲ ಉದ್ದೇಶ. ಹಾಗಾಗೇ ಜನ ಅವರನ್ನು ಮೆಡಿಸಿನ್ ಬಾಬಾ ಎಂದು ಕರೆಯುತ್ತಾರೆ.

image


ದೆಹಲಿಯ ಲಕ್ಷ್ಮೀ ನಗರದ ಮೆಟ್ರೋ ಕಾಮಗಾರಿ ವೇಳೆ ನಡೆದ ದುರ್ಘಟನೆಯಲ್ಲಿ ಕೆಲವರು ಸಾವನ್ನಪ್ಪಿದ್ದರು. ಅನೇಕರಿಗೆ ಗಾಯಗಳಾಗಿದ್ದವು. ಈ ಘಟನೆ ಬಾಬಾ ಅವರ ಮನಸ್ಸು ಕದಡಿತ್ತು. ಅವರ ನಿದ್ದೆಗೆಡಿಸಿತ್ತು.

ಬಡವರಿಗೆ ಔಷಧಿ ಖರೀದಿ ಒಂದು ಸವಾಲು. ಆಸ್ಪತ್ರೆಗೆ ಹೋದ್ರೆ ವೈದ್ಯರು ಔಷಧಿ ತರುವಂತೆ ಚೀಟಿ ಬರೆದು ಕೊಡ್ತಾರೆ. ಆದ್ರೆ ಅದರ ಬೆಲೆ ದುಬಾರಿ. ಔಷಧಿ ಇಲ್ಲದೆ ಬರಿಗೈನಲ್ಲಿ ಬಂದ್ರೆ ಚಿಕಿತ್ಸೆ ಸಿಗೋದಿಲ್ಲ. ಹಾಗಾಗಿ ಬಡವರು ರೋಗದಿಂದ ಹೊರ ಬರೋದು ಅಸಾಧ್ಯ. ಅವರಿಗೆ ಏನಾದ್ರೂ ಮಾಡಬೇಕೆಂದು ಚಿಂತಿಸಿದ್ರು ಮೆಡಿಸಿನ್ ಬಾಬಾ. ಹಾಗೇ ಔಷಧಿ ಸಂಗ್ರಹ ಕಾರ್ಯಕ್ಕಿಳಿದರು.

image


ಓಂಕಾರನಾಥ್ ಒಂದು ಕೇಸರಿ ಕುರ್ತಾ ಧರಿಸಿ, ಅದರ ಮೇಲೆ ತಮ್ಮ ಮೊಬೈಲ್ ನಂಬರ್ , ಇ ಮೇಲ್ ಐಡಿ ಬರೆದುಕೊಂಡು ರಸ್ತೆಗಿಳಿದೇ ಬಿಟ್ಟರು. ಅಂದು ಶುರುವಾದ ಔಷಧಿ ಸಂಗ್ರಹ ಕಾರ್ಯ ಇಂದೂ ಮುಂದುವರೆದಿದೆ. ಅನೇಕ ವರ್ಷಗಳಿಂದ ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರಗಾಂವ್ ನ ಗಲ್ಲಿ ಗಲ್ಲಿ ತಿರುಗಿ ಹಳೆಯ ಔಷಧಿಗಳನ್ನು ನೀಡುವಂತೆ ಜನರಲ್ಲಿ ಮನವಿ ಮಾಡ್ತಾರೆ. ಮನೆ ಮನೆಗೆ ಹೋಗುವ ಅವರು ಜನರು ಬಿಟ್ಟ ಔಷಧಿಗಳನ್ನು ನೀಡುವಂತೆ ಕೇಳ್ತಾರೆ. ಅವರು ಕೊಟ್ಟ ಔಷಧಿಗಳನ್ನು ಆಸ್ಪತ್ರೆಗೆ ದಾನ ಮಾಡ್ತಾರೆ. ಬಡವರಿಗೆ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧಿ ಸಿಗಲಿ ಹಾಗೂ ಅವರ ರೋಗ ಗುಣವಾಗಲಿ ಎಂಬುದು ಬಾಬಾ ಉದ್ದೇಶ.

image


ಮೆಡಿಸಿನ್ ಬಾಬಾ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಯನ್ನು ಪ್ರತಿ ತಿಂಗಳು ಆಸ್ಪತ್ರೆಗೆ ದಾನ ಮಾಡ್ತಾರೆ. ದೆಹಲಿಯ ಏಮ್ಸ್, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಮತ್ತು ದೀನ್ ದಯಾಳ್ ಉಪಾಧ್ಯಾಯ್ ಆಸ್ಪತ್ರೆಗಳಿಗೆ ಔಷಧಿಗಳನ್ನು ದಾನ ಮಾಡ್ತಾರೆ.

ವಿದೇಶದಿಂದಲೂ ಬಂತು ಮೆಡಿಸಿನ್

ದೇಶವೊಂದೇ ಅಲ್ಲ ವಿದೇಶದಲ್ಲೂ ಮೆಡಿಸಿನ್ ಬಾಬಾ ಪ್ರಸಿದ್ಧಿ ಪಡೆದಿದ್ದಾರೆ. ಜನ ಮೆಡಿಸಿನ್ ಬಾಬಾ ಅವರಿಗೆ ಔಷಧಿಗಳನ್ನು ಕಳುಹಿಸಿಕೊಡುತ್ತಾರೆ. ಈಗೀಗ ಗಾಲಿಕುರ್ಚಿ, ಆಮ್ಲಜನಕದ ಸಿಲಿಂಡರ್, ಹಾಸಿಗೆಗಳು, ಸಿರಿಂಜ್ ಗಳನ್ನು ಕಳುಹಿಸಿಕೊಡ್ತಿದ್ದಾರೆ. ಅವರು ಇದನ್ನು ಬಡವರಿಗೆ ತಲುಪಿಸುತ್ತಾರೆಂಬ ನಂಬಿಕೆಯಲ್ಲಿ ಜನ ಮೆಡಿಸಿನ್ ಬಾಬಾ ಜೊತೆ ಕೈಜೋಡಿಸಿದ್ದಾರೆ. ಉತ್ತರಖಂಡ್ ವಿಪತ್ತಿನ ವೇಳೆಯೂ ಮೆಡಿಸಿನ್ ಬಾಬಾ ಸಹಾಯಕ್ಕೆ ನಿಂತಿದ್ದರು. ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಯನ್ನು ಅಲ್ಲಿಗೆ ಕಳುಹಿಸಿಕೊಟ್ಟಿದ್ದರು.

image


ಔಷಧಿ ಬ್ಯಾಂಕ್ ತೆರೆಯುವ ಕನಸು

ಮೆಡಿಸಿನ್ ಬಾಬಾ ಅವರಿಗೆ ಔಷಧಿ ನಿರ್ವಹಣೆ ಕಷ್ಟವಾಗ್ತಾ ಇದೆ. ಅವರು ಒಂದು ಸಣ್ಣ ಬಾಡಿಗೆ ರೂಮಿನಲ್ಲಿ ವಾಸಿಸ್ತಾ ಇದ್ದಾರೆ. ಅಲ್ಲೇ ಅವರ ಕಚೇರಿ ಕೂಡ ಇದೆ. ಕೆಲಸದ ವಸ್ತುಗಳು ಬಿಟ್ಟರೆ ಅವರ ಬಳಿ ಯಾವುದೇ ಬೇರೆ ವಸ್ತುಗಳಿಲ್ಲ. ಸರ್ಕಾರ ಸಹಾಯ ಮಾಡಿದರೆ, ದೊಡ್ಡ ಕೊಠಡಿಯಲ್ಲಿ ಇವುಗಳನ್ನು ಇಡಬಹುದು ಎಂಬ ಆಶಯ ಅವರದ್ದು. ಭವಿಷ್ಯದಲ್ಲಿ ಔಷಧಿ ಬ್ಯಾಂಕ್ ತೆರೆಯುವ ಬಯಕೆ ಹೊಂದಿರುವ ಮೆಡಿಸಿನ್ ಬಾಬಾ, ಬ್ಯಾಂಕ್ ಮೂಲಕ ಜನರಿಗೆ ಉಚಿತವಾಗಿ ಔಷಧಿ ಒದಗಿಸುವ ಕನಸು ಹೊಂದಿದ್ದಾರೆ.

ಬಾಬಾ ವಿಕಲಾಂಗರು. ಅವರಿಗೆ ಸರಿಯಾಗಿ ನಡೆಯಲು ಸಾಧ್ಯವಿಲ್ಲ. ಆದರೆ ಬಡವರಿಗೆ ಸಹಾಯ ಮಾಡುವ ಉತ್ಸಾಹ ಸದಾ ಅವರಿಗೆ ಮುಂದೆ ಹೋಗಲು ಸ್ಫೂರ್ತಿ ನೀಡುತ್ತದೆ. ಮೆಡಿಸಿನ್ ಬಾಬಾ ನಿಸ್ವಾರ್ಥವಾಗಿ ಸೇವೆ ಸಲ್ಲಿಸ್ತಾ ಇದ್ದಾರೆ. ಆರೋಗ್ಯಕರ ಭಾರತವನ್ನು ನೋಡುವುದು ಅವರ ಕನಸು. ಬಡವರ ಸೇವೆಯನ್ನು ಧರ್ಮ ಎಂದು ನಂಬಿರುವ ಅವರಿಗೆ ಈ ಕೆಲಸ ಸಂತೋಷ ನೀಡ್ತಾ ಇದೆ. ದೇಶದ ಜನತೆ ಬಡ ಜನರ ಸಹಾಯಕ್ಕೆ ಬರಬೇಕೆಂದು ಅವರು ಆಶಿಸುತ್ತಾರೆ. ನೀವು ಕೂಡ ಮೆಡಿಸಿನ್ ಬಾಬಾ ಕಾರ್ಯದಲ್ಲಿ ಕೈ ಜೋಡಿಸಬಹುದು. ಕೋರ್ಸ್ ಅರ್ಧಕ್ಕೆ ಬಿಟ್ಟಿದ್ದರಿಂದ ನಿಮ್ಮ ಬಳಿ ಉಳಿದಿರುವ ಔಷಧಿಗಳನ್ನು ಮೆಡಿಸಿನ್ ಬಾಬಾ ಮೂಲಕ ಬಡವರಿಗೆ ತಲುಪಿಸಬಹುದು. ಆಸಕ್ತಿಯುಳ್ಳವರು ಈ ದೂರವಾಣಿ ಸಂಖ್ಯೆ (09250243298)ಗೆ ಸಂಪರ್ಕಿಸಬಹುದು.


ಲೇಖಕ : ಅಶುತೋಷ್ ಕಾಂತ್ವಾಲ್

ಅನುವಾದಕರು: ರೂಪಾ ಹೆಗಡೆ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags