ಬೆಂಗಳೂರಿಗೆ ಸ್ಟೀಲ್ ಫ್ಲೈ ಓವರ್ ಕನಸು- ಪರ, ವಿರೋಧಗಳ ನಡುವೆ ನಡೆಯುತ್ತಿದೆ ಲೆಕ್ಕಾಚಾರದ ಚರ್ಚೆ..!

ಟೀಮ್​ ವೈ.ಎಸ್​. ಕನ್ನಡ

ಬೆಂಗಳೂರಿಗೆ ಸ್ಟೀಲ್ ಫ್ಲೈ ಓವರ್ ಕನಸು- ಪರ, ವಿರೋಧಗಳ ನಡುವೆ ನಡೆಯುತ್ತಿದೆ ಲೆಕ್ಕಾಚಾರದ ಚರ್ಚೆ..!

Sunday October 16, 2016,

4 min Read

ಬೆಂಗಳೂರು ನಿಜಕ್ಕೂ ಅತ್ಯದ್ಭುತ ನಗರ. ಭಾರತದ ಸುಂದರ ನಗರಗಳ ಪೈಕಿ ಬೆಂಗಳೂರಿಗೂ ಒಂದು ಸ್ಥಾನ ಇದ್ದೇ ಇದೆ. ಹವಾಮಾನದಿಂದ ಹಿಡಿದು, ಎಲ್ಲವೂ ಇಲ್ಲಿ ಜೀವಿಸುವುದಕ್ಕೆ ಫರ್ಫೆಕ್ಟ್ ಪ್ಲೇಸ್. ಆರಂಭದಲ್ಲಿ ಬೆಂಗಳೂರು ನಿವೃತ್ತರ ಸ್ವರ್ಗ ಅಂತ ಕರೆಸಿಕೊಂಡಿತ್ತು. ಅದಾದಮೇಲೆ ಐಟಿ ಹಬ್ ಆಗಿ ಬೆಳೆದು ನಿಂತಿದೆ. ಈಗ ಸ್ಟಾರ್ಟ್ಅಪ್​ಗಳ ಮಹಾನಗರಿ ಅನ್ನೋ ಖ್ಯಾತಿಯನ್ನು ಕೂಡ ಪಡೆದುಕೊಂಡಿದೆ. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸಿಲಿಕಾನ್ ಸಿಟಿಯ ಟ್ರಾಫಿಕ್ ಅಂತೂ ಮಹಾನ್ ನರಕ. ಅದಕ್ಕೊಂದು ಪರಿಹಾರವೂ ಸಿಗುತ್ತಿಲ್ಲ. ಟ್ರಾಫಿಕ್ ಸಿಗ್ನಲ್​ಗಳು ಮತ್ತು ಸಂಚಾರ ದಟ್ಟಣೆ ಬೆಂಗಳೂರಿಗರ ಅತೀ ದೊಡ್ಡ ತಲೆನೋವು. ಟ್ರಾಫಿಕ್ ನಿಯಂತ್ರಿಸಲು ಸರ್ಕಾರ ಕೆಲ ಕ್ರಮಗಳನ್ನು ಕೈಗೊಂಡಿದೆ. ಟ್ರಾಫಿಕ್ ಸಮಸ್ಯೆಗಳನ್ನು ನಿವಾರಿಸಲು ಕೆಲವೊಂದು ಕ್ರಮಗಳನ್ನು ತರಾತುರಿಯಲ್ಲಿ ಕೈಗೊಳ್ಳಲಾಗಿದೆ. ಈ ನಿರ್ಣಯಗಳು ಬೆಂಗಳೂರಿನ ಖ್ಯಾತಿಗೆ ಕಪ್ಪುಚುಕ್ಕೆ ತರುವ ಭಯವೂ ಆವರಿಸಿದೆ.

ಬೆಂಗಳೂರಿನ ಸಾರ್ವಜನಿಕ ಸಾರಿಗೆ ದೇಶದಲ್ಲೇ ಅತ್ಯುತ್ತಮ. ಬಿಎಂಟಿಸಿ ಬಸ್​ಗಳು ದೇಶದ ಸರ್ವಶ್ರೇಷ್ಠ ಸಾರಿಗೆ ಸಂಸ್ಥೆ. ಮೆಟ್ರೋ ಕೂಡ ಪ್ರಯಾಣಿಕರ ನೆರವಿಗೆ ಇದೆ. ಆದ್ರೆ ನಗರೀಕರಣ ಬೆಂಗಳೂರನ್ನು ಟ್ರಾಫಿಕ್ ಸಮಸ್ಯೆಗೆ ಸಿಲುಕಿಸಿದೆ. ಆದ್ರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸ್ಟೀಲ್ ಮೇಲ್ಸೇತುವೆಯನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಬೆಂಗಳೂರಿನ ಬ್ಯುಸಿ ರಸ್ತೆ ಎಂದೇ ಹೆಸರಾಗಿರುವ ಏರ್​ಪೋರ್ಟ್ ರೋಡ್​ಗೆ ಉಕ್ಕಿನ ಮೇಲ್ಸೇತುವೆ ನಿರ್ಮಿಸುವ ಯೋಜನೆ ಸರ್ಕಾರದ್ದು. ಬಸವೇಶ್ವರ ಸರ್ಕಲ್​ನಿಂದ ಹೆಬ್ಬಾಳದವರೆಗೆ ಸುಮಾರು 6.7 ಕಿಲೋಮೀಟರ್ ಉದ್ದದ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಸುಮಾರು 1791 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧವಿದೆ. ಆದ್ರೆ ಉಕ್ಕಿನ ಮೇಲ್ಸೇತುವೆಯನ್ನು ಕಟ್ಟಬೇಕಾದ್ರೆ ಸುಮಾರು 812 ಮರಗಳನ್ನು ಧರೆಗುರುಳಿಸ ಬೇಕಾಗುತ್ತದೆ. ಅಷ್ಟೇ ಅಲ್ಲ ಉಕ್ಕಿನ ಮೇಲ್ಸೇತುವೆ ಹಾದು ಹೋಗುವ ಸ್ಥಳಗಳಲ್ಲಿ ಸಿಗುವ ಐತಿಹಾಸಿಕ ಕಟ್ಟಡಗಳನ್ನು ಕೂಡ ನೆಲಸಮ ಮಾಡಬೇಕಾಗುತ್ತದೆ. ಈ ಬಗ್ಗೆ ಸಾರ್ವಜನಿಕರ ತಕರಾರು ಕೂಡ ಇದೆ. ಅಭಿವೃದ್ಧಿಯ ನೆಪದಲ್ಲಿ ಇತಿಹಾಸವನ್ನು ಮತ್ತು ಐತಿಹಾಸಿಕ ಕಟ್ಟಡ ಮತ್ತು ಸ್ಥಳಗಳನ್ನು ಕಳೆದುಕೊಳ್ಳುವ ಭಯ ಬೆಂಗಳೂರಿಗೆ ಇದೆ.

image


ಯೋಜನೆಯಂತೆ 6.7. ಕಿಲೋಮೀಟರ್ ಉದ್ದದ ಉಕ್ಕಿನ ಮೇಲ್ಸೇತುವೆ ನಿರ್ಮಾಣಗೊಂಡ್ರೆ ದಿನಕ್ಕೆ 2,68,000 ವಾಹನಗಳು ಓಡಾಡಲಿವೆ. ಆದ್ರೆ ನಿಜವಾದ ಪ್ರಶ್ನೆ ಇರೋದೇ ಬೇರೆ. ಕೇವಲ 7ರಿಂದ 10 ನಿಮಿಷಗಳನ್ನು ಉಳಿಸುವುದಕ್ಕೆ ಇಷ್ಟೊಂದು ಖರ್ಚಿನ ಜೊತೆಗೆ ಮರಗಳನ್ನು, ಐತಿಹಾಸಿಕ ಕಟ್ಟಡಗಳನ್ನು ನೆಮಸಮ ಮಾಡಬೇಕೇ ಎಂಬ ಚರ್ಚೆಗಳು ಜೋರಾಗೇ ನಡೆಯುತ್ತಿವೆ.

ಸರ್ಕಾರ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಮಾಡಿ ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದೆ. ಆದ್ರೆ ಇದ್ರ ಬಗ್ಗೆ ವಿರೋಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಭ್ರಷ್ಟಾಚಾರ ವಿರೋಧಿ ಸಂಘಟನೆಗಳು, ನಾಗರೀಕ ಕಾರ್ಯಕರ್ತರು, ವಾಸ್ತು ಶಿಲ್ಪಿಗಳು, ಕಲಾವಿದರು, ರಾಜಕೀಯ ನೇತರಾರರು, ಸಾರ್ವಜನಿಕ ನೀತಿ ತಜ್ಞರು ಸರ್ಕಾರದ ಯೋಜಿತ ಉಕ್ಕಿನ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಹೋರಾಟ ಆರಂಭಿಸಿದ್ದಾರೆ. ಇದರ ಜೊತೆಗೆ ಫೇಸ್​ಬುಕ್, ಟ್ವಿಟರ್, ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳನ್ನು ಬೆಂಗಳೂರಿನ ಸಹಜ ಸೌಂದರ್ಯ ಉಳಿಸಿಕೊಡಿ ಅನ್ನೋ ಬಗ್ಗೆ ಹೋರಾಟಗಳು ಆರಂಭವಾಗಿದೆ.

ಇದನ್ನು ಓದಿ: ಎಲ್ಲರಿಗೂ ಮಾದರಿ, ಭಾರತದಲ್ಲಿರುವ ಮೆಕ್ಸಿಕೋ ರಾಯಭಾರಿ!

ಯೋಜನೆ ಹೇಗಿದೆ..?

2015ರ ಆಗಸ್ಟ್​ನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು 16 ಪುಟಗಳ ಪ್ರನಾಳಿಕೆಯನ್ನುಸಿದ್ಧಪಡಿಸಿತ್ತು. ಇದರಲ್ಲಿ ನಗರದ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮೊದಲ ಆದ್ಯತೆ ನೀಡಲಾಗಿತ್ತು. ಈ ಪ್ರನಾಳಿಕೆಯಲ್ಲಿ ಉತ್ತರ-ದಕ್ಷಿಣ ಕಾರಿಡಾರ್ ಮತ್ತು ಪೂರ್ವಪಶ್ಚಿಮ ಕಾರಿಡಾರ್ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಇದರ ಜೊತೆಗೆ ಮೊನೋರೈಲು ಮತ್ತು ಹೆಚ್ಚುವರಿ ರೈಲ್ವೇ ಲೈನ್​ಗಳ ಬಗ್ಗೆಯೂ ಪ್ರಸಾಪ ಮಾಡಲಾಗಿತ್ತು. ಈ ಪ್ರನಾಳಿಕೆಯಲ್ಲಿ 40 ಜಂಕ್ಷನ್​ಗಳಲ್ಲಿ 40 ಫ್ಲೈ ಓವರ್​ಗಳನ್ನು ನಿರ್ಮಾಣ ಮಾಡುವ ಪ್ರೊಪೊಸಲ್​ನ್ನು ಕೂಡ ಹೊಂದಿತ್ತು.

ಈ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಎದುರಾದ ಹಿನ್ನಲೆಯಲ್ಲಿ ಪ್ರನಾಳಿಕೆಯಲ್ಲಿದ್ದ ಯೋಜನೆಗಳು ಹಾಗೇ ಉಳಿದುಕೊಂಡಿದ್ದವು. ಆದ್ರೆ ಕಳೆದ ಜೂನ್ ತಿಂಗಳಲ್ಲಿ ಈ ಯೋಜನೆ ಮತ್ತೆ ಸದ್ದು ಮಾಡಿತ್ತು. ಉಕ್ಕಿನ ಮೇಲ್ಸೇತುವೆ ವಿರೋಧಿಗಳು ತಲೆ ಕೆಡಿಸಿಕೊಂಡರೆ, ಅದರ ಪರ ಇದ್ದವರು ಸಂಭ್ರಮಿಸಿದರು. ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​ಗಳು ಸರ್ಕಾರದ ಯೋಜನೆಯನ್ನು ವಿರೋಧಿಸಿದ್ದವು. ಇದರ ಜೊತೆಗೆ ನಮ್ಮ ಬೆಂಗಳೂರು ಫೌಂಡೇಷನ್ ಕೂಡ ಯೋಜನೆಯನ್ನು ವಿರೋಧಿಸಿತ್ತು. ಪ್ರಕಾಶ್ ಬೆಳವಾಡಿ, ನರೇಶ್ ನರಸಿಂಹನ್​ರಂತಹ ಖ್ಯಾತನಾಮ ವ್ಯಕ್ತಿಗಳು ಯೋಜನೆಯನ್ನು ವಿರೋಧಿಸಿದ್ರು.

image


ಈ ಮಧ್ಯೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೂಡ ಯೋಜನೆಯ ಬಗ್ಗೆ ವಿಸ್ತೃತ ವರದಿ ಪ್ರಕಟಗೊಳಿಸಿತ್ತು. ಉಕ್ಕಿನ ಮೇಲ್ಸೇತುವೆ ಬೆಂಗಳೂರಿಗೆ ಯಾಕೆ ಅಗತ್ಯ ಅನ್ನೋದೇ ಈ ವರದಿ ಮೂಲ ಉದ್ದೇಶವಾಗಿತ್ತು. ಈ ವರದಿಯಲ್ಲಿ NH7ಕ್ಕೆ ಮೇಲ್ಸೇತುವೆ ಮೂಲಕ ಎಷ್ಟು ಬೇಗ ತಲುಪಬಹುದು ಮತ್ತು ಟ್ರಾಫಿಕ್ ತಲೆನೋವಿನಿಂದ ಬೇಗನೆ ಬಿಡಿಸಿಕೊಳ್ಳಬೇಕಾಗಬಹುದು ಅನ್ನೋ ಬಗ್ಗೆ ಹೆಚ್ಚು ಅಂಶಗಳಿತ್ತು. ಬೆಂಗಳೂರಿನ ಭವಿಷ್ಯ ಮತ್ತು ಏರ್​​ಪೋರ್ಟ್ ರಸ್ತೆಯ ಮಹತ್ವವನ್ನು ಉಲ್ಲೇಖಿಸಿ ಉಕ್ಕಿನ ಮೇಲ್ಸೇತುವೆ ರಚನೆ ಬಗ್ಗೆ ವರದಿ ಸಲ್ಲಿಸಿತ್ತು. ಆದ್ರೆ ಈ ಬಗ್ಗೆ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಏರ್​ಪೋರ್ಟ್​ಗೆ ರಸ್ತೆ ಮಾಡಬೇಕು ಅನ್ನೋ ನೆಪದಲ್ಲಿ ಬೆಂಗಳೂರಿನ ಐತಿಹಾಸಿಕ ಮಹತ್ವವನ್ನು ಬಲಿಕೊಡುವುದು ಸರಿಯಲ್ಲಿ ಅನ್ನೋದು ಇವರ ವಾದ. ಅಷ್ಟೇ ಅಲ್ಲ ಯೋಜಿತ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ಬೇರೆ ದಾರಿ ಮತ್ತು ಜಾಗವನ್ನು ಹುಡುಕೊಳ್ಳಿ ಅನ್ನೋದು ಇವರ ವಾದ.

ಹಲವರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಮಾಡಿಯೇ ಬಿಡೋಣ ಅನ್ನೋ ನಿರ್ಧಾರಕ್ಕೆ ಬಂದಿದೆ. 1791 ಕೋಟಿ ವೆಚ್ಚದ ಫ್ಲೈಓವರ್ ನಿರ್ಮಾಣದ ಯೋಜನೆಯನ್ನು ಸಾಕಷ್ಟು ಯೋಚಿಸಿ ಮತ್ತು ಚರ್ಚಿಸಿ ಜಾರಿಗೆ ತರಲಾಗಿದೆ ಅನ್ನೋದು ಸರ್ಕಾರದ ವಾದ.

image


ಉಕ್ಕಿನ ಮೇಲ್ಸೇತುವೆ ನಿರ್ಮಾಣದ ಯೋಜನೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡಿತ್ತು. ಆದ್ರೆ ಅದು ಎಲೆವೆಟೇಡ್ ಕಾರಿಡಾರ್ ಅನ್ನೋ ಯೋಜನೆ ಆಗಿತ್ತು. ಆದ್ರೆ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು 2014-15ರ ರಾಜ್ಯ ಸರಕಾರದ ಬಜೆಟ್​ನಲ್ಲಿ. ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್​ನಲ್ಲಿ ಈ ಯೋಜನೆಗೆ ಹೆಚ್ಚು ಹಣ ಮೀಸಲಿಟ್ಟಿದ್ದರು. 2104ರಲ್ಲಿ ಮೇಲ್ಸೇತುವೆ ಯೋಜನೆ ಬಗ್ಗೆ ಪ್ಲಾನ್ ಸಜ್ಜಾಗಿತ್ತಾದರೂ ಅದನ್ನು ಸಾರ್ವಜನಿಕರ ಮುಂದೆ ತರಲಿಲ್ಲ. ಈ ಹಂತದಲ್ಲೇ ಸುಪ್ರೀಂ ಕೋರ್ಟ್ ವಿವಾವಿದ್ದರೂ ಅರಮನೆ ಸುತ್ತಮುತ್ತದ ಪ್ರದೇಶಗಳನ್ನು ಮೇಲ್ಸೇತುವೆ ಯೋಜನೆಗಾಗಿ ವಶಪಡಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದ್ರೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಬಹುದು ಅನ್ನೋ ಭಯದಲ್ಲಿ ಸರ್ಕಾರ ಯಾವುದೇ ಕೆಲಸವನ್ನು ಕೂಡ ಅಧಿಕೃತವಾಗಿ ಮಾಡಿರಲಿಲ್ಲ.

ಆದ್ರೆ ಇತ್ತೀಚೆಗೆ ಸರಕಾರ ಉಕ್ಕಿನ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಕೆಲಸ ಆರಂಭಿಸುವ ಹುಮ್ಮಸ್ಸಿನಲ್ಲಿದೆ. ಆದ್ರೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ನೇತೃತ್ವದ ನಮ್ಮ ಬೆಂಗಳೂರು ಫೌಂಡೇಷನ್ ಸೇರಿದಂತೆ ಹಲವು ಗಣ್ಯರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

1791 ಕೋಟಿ ರೂಪಾಯಿ ಮೌಲ್ಯದ ಉಕ್ಕಿನ ಮೇಲ್ಸೇತುವೆ ಯೋಜನೆ ಜಾರಿಗೆ ಬಂದರೆ 800ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಲಿವೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಆಗಲಿದೆ. ಅಷ್ಟೇ ಅಲ್ಲ ಮೇಲ್ಸೇತುವೆಗಾಗಿ ಸುಭಾಷ್ ಚಂದ್ರ ಬೋಸ್, ವಿಶ್ವೇಶ್ವರಯ್ಯರಂತಹ ಖ್ಯಾತನಾಮ ವ್ಯಕ್ತಿಗಳು ಜೀವಿಸಿದ್ದ ಐತಿಹಾಸಿಕ ಸ್ಥಳಗಳನ್ನು ಕೂಡ ನಾವು ಮರೆಯಬೇಕಾಗಿದೆ. ಈ ಮಧ್ಯೆ ಕರ್ನಾಟಕ ಹೈ ಕೊರ್ಟ್ ಆದೇಶದ ನಂತರ ಬಿಡಿಎ 60,000 ಗಡಿಗಳನ್ನು ನೆಡವು ಭರವಸೆಯನ್ನೂ ನೀಡಿದೆ.

ಒಟ್ಟಿನಲ್ಲಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಆದ್ರೆ ಅದಕ್ಕಾಗಿ ಮರಗಳನ್ನು ಮತ್ತು ಐತಿಹಾಸಿಕ ಸ್ಥಳಗಳನ್ನು ಬಲಿಕೊಡುವುದು ಸರಿಯಲ್ಲ. ಈಗಾಗಲೇ ಬೆಂಗಳೂರು ವಾಯುಮಾಲಿನ್ಯದಿಂದ ಕಂಗೆಟ್ಟಿದೆ. ಇನ್ನು ಮರಗಳ ಧರೆಗರುಳಿದ್ರೆ ಬೆಂಗಳೂರನ್ನು ಭಗವಂತನೇ ಕಾಪಾಡಬೇಕು.

ಇದನ್ನು ಓದಿ:

1. ಅಮ್ಮನದ್ದೇ ಕೈರುಚಿ- ಅನಾರೋಗ್ಯದ ಬಗ್ಗೆಯೂ ಬೇಡ ಭೀತಿ

2. ಆನ್​ಲೈನ್​ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..!

3. ಮೈಸೂರಿನಿಂದ ಮುಂಬೈವರೆಗೆ- ಸ್ಯಾಂಡಲ್​ವುಡ್​ಗಿಂತಲೂ ಬಾಲಿವುಡ್​ನಲ್ಲಿ ಡಿಮ್ಯಾಂಡ್