ಆವೃತ್ತಿಗಳು
Kannada

ಸಿಗ್ನಲ್​​ನಲ್ಲಿ ನಿಂತ್ರೆ ಮೈಕೆಲ್ ಜಾಕ್ಸನ್ ಸ್ಟೆಪ್ : ಇವರು ರಿಯಲ್ ಲೈಫ್​​ನ ‘ದಬಾಂಗ್’ ಪೊಲೀಸ್..!

ಟೀಮ್​​ ವೈ.ಎಸ್​​. ಕನ್ನಡ

1st Dec 2015
Add to
Shares
3
Comments
Share This
Add to
Shares
3
Comments
Share

ಹಳೆ ಇಂದೋರ್​​​ನ ಟ್ರಾಫಿಕ್ ಪೊಲೀಸ್ ಪ್ರಧಾನ ಕಚೇರಿಯ ಸುತ್ತಲಿನ ರಸ್ತೆಗಳಲ್ಲಿ ಸಂಜೆ ವೇಳೆ ಕೆಲ ವಾಕಿಟಾಕಿಗಳ ಸದ್ದು ಮಾತ್ರ ಕೇಳಿಬರುತ್ತಿತ್ತು. ಬೇಸಿಗೆಯ ಕಾಲವಾಗಿದ್ದರಿಂದ ಹಗಲಿನಲ್ಲಿ ನಗರವೆಲ್ಲ ಬಿಸಿಲಿನ ಝಳಕ್ಕೆ ತತ್ತರಿಸಿತ್ತು. ಸಂಜೆಯ ನಂತರ ಒಂದಷ್ಟು ತಣ್ಣಗಿನ ವಾತಾವರಣ ಕಾಣಿಸುತ್ತೆ. ಇದರ ಹೊರತಾಗಿಯೂ ರಸ್ತೆ ಮಧ್ಯೆ ಚಿತ್ರ ನಟನಂತೆ ಡಾನ್ಸ್ ಮಾಡುವ ಟ್ರಾಫಿಕ್ ಪೊಲೀಸ್ ಒಬ್ಬನನ್ನು ನೋಡಬಹುದಾಗಿದೆ. ಆತನ ಬಗ್ಗೆ ಹಲವು ಅಚ್ಚರಿಯ ಸಂಗತಿಗಳನ್ನು ಇಂದೋರ್ ಜನತೆ ಮೆಚ್ಚುಗೆಯಿಂದ ಹೇಳಿಕೊಳ್ಳುತ್ತಾರೆ. ಯಾಕಂದ್ರೆ ಅವರೆಲ್ಲರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಆತನ ಕೈಲಿ ಸಿಕ್ಕಿ ಹಾಕಿಕೊಂಡಿದ್ದರು.

image


ಇಂದೋರ್​​​ನ ‘ಸಿಂಗಂ’ ರಂಜೀತ್ ಸಿಂಗ್..!

ಹೀಗಿರುವ ಟ್ರಾಫಿಕ್ ಪೊಲೀಸ್​​​ನ ನಿಜವಾದ ಹೆಸರು ಗೊತ್ತಿರಲಿಲ್ಲ. ಎಲ್ಲರೂ ಆತನನ್ನು ‘ಸಿಂಗಂ’ ಅಂತಲೋ, ‘ದಬಾಂಗ್ ಕಾಪ್’ ಅಂತಲೋ ತಿಳಿದುಕೊಂಡಿದ್ದರು. ತನ್ನ ಗಟ್ಟಿ ನಿಲುವು ಹಾಗೂ ವಿಶಿಷ್ಟವಾದ ಡಾನ್ಸ್ ಮೂಲಕ ಟ್ರಾಫಿಕ್ ಕಂಟ್ರೋಲ್ ಮಾಡೋದನ್ನ ಮಾತ್ರ ನೋಡಿದ್ದರು. ಆತನನ್ನ ನೋಡಬೇಕು ಅಂತಿದ್ರೆ ಇಂದೋರ್​​ನ ಹೈಕೋರ್ಟ್ ಟ್ರಾಫಿಕ್ ಜಂಕ್ಷನ್ ಮೂಲಕ ಹಾದು ಹೋಗಬೇಕು. ಮೈಕಲ್ ಜಾಕ್ಸನ್ಸ್​​ಗೆ ಸೆಡ್ಡು ಹೊಡೆಯುವಂತೆ ಆತನದ್ದೇ ಸ್ಟೆಪ್​​ಗಳನ್ನು ಅನುಕರಣೆ ಮಾಡುತ್ತಾ ಟ್ರಾಫಿಕ್ ಸಮಸ್ಯೆಯನ್ನು ಹತೋಟಿಗೆ ತರುತ್ತಿರುತ್ತಾನೆ. ಪೀಕ್ ಅವರ್​​​ಗಳಲ್ಲೂ ಈತ ಸುಗಮ ಸಂಚಾರಕ್ಕೆ ಕಾರಣಕರ್ತನಾಗಿರುತ್ತಾನೆ! ಇದರಿಂದಾಗಿ ಹಲವು ನಿಕ್​​ನೇಮ್​​ಗಳು ಹಾಗೂ ಬಿರುದುಗಳನ್ನೂ ಗಳಿಸಿಕೊಂಡಿದ್ದಾನೆ.

ಈ ದಬಾಂಗ್ ಕಾಪ್ ಹೆಸರು ರಂಜೀತ್ ಸಿಂಗ್ (37). ನಿಜ ನಾಮಧೇಯಕ್ಕಿಂತಲೂ ಬಿರುದಾವಳಿಗಳಿಂದಲೇ ಈತ ಹೆಚ್ಚು ಹೆಸರುವಾಸಿ. ಟ್ರಾಫಿಕ್ ಪೊಲೀಸ್ ಅಂದ್ರೆ ಹಣ ಕೀಳೋದಕ್ಕೇ ಇರೋವ್ರು ಅನ್ನೋ ಭಾವನೆ ಇರುವ ಭಾರತದಲ್ಲಿ, ರಂಜೀತ್ ಕೊಂಚ ವಿಭಿನ್ನವಾಗಿ ಕಾಣಿಸಿಕೊಳ್ತಾರೆ. “ಯಾವುದೇ ಕೆಲಸವಾದ್ರೂ ಮಾಡುವ ವ್ಯಕ್ತಿಯನ್ನಾಧರಿಸಿರುತ್ತದೆಯೇ ಹೊರತು ಅದರಲ್ಲಿರುವ ತಪ್ಪುಗಳಿಂದಲ್ಲ” ಎಂದು ತೋರಿಸಿಕೊಟ್ಟಿದ್ದಾರೆ.

image


ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ರಂಜೀತ್ಸಿಂಗ್, ಸಾರಿಗೆ ನಿಯಮಗಳನ್ನು ಪಾಲಿಸದ ಹಿರಿಯ ಅಧಿಕಾರಿಗಳು, ತಂದೆ ಸೇರಿದಂತೆ ಎಲ್ಲರಿಗೂ ದಂಡ ವಿಧಿಸಿದ್ದಾರೆ. ಇವೆಲ್ಲವುಗಳಿಂದ ಒಂದಷ್ಟು ಬೈಗುಳಗಳನ್ನೂ ಕೇಳಿಸಿಕೊಂಡಿದ್ದಾರೆ. ಆದರೂ ಇವರ ಕೆಲಸದ ಬಗ್ಗೆ ಯಾರೊಬ್ಬರೂ ಕೊಂಕು ಮಾತನಾಡುವುದಿಲ್ಲ. ಬದಲಿಗೆ ಟ್ರಾಫಿಕ್ ಕಂಟ್ರೋಲ್ ಮಾಡುವ ಸ್ಟೈಲ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇದರಿಂದಾಗಿ ಮಧ್ಯಪ್ರದೇಶ ಪೊಲೀಸ್ ಇಲಾಖೆ ಸೇರಿದಂತೆ ಹಲವು ಸಂಘಸಂಸ್ಥೆಗಳು ಇವರನ್ನು ಗೌರವಿಸಿವೆ.

“ನಾನು ಕೆಲಸಕ್ಕೆ ಸೇರಿದ ದಿನದಿಂದಲೂ ರಸ್ತೆಯ ಮಧ್ಯೆಯೇ ನಿಂತಿದ್ದೇನೆ. ಅದು ಬೇಸಿಗೆಯ 45 ಡಿಗ್ರಿ ತಾಪಮಾನದ ದಿನವಾಗಿರಬಹುದು ಅಥವಾ ಜಡಿಮಳೆಯ ಮುಸ್ಸಂಜೆಯಾಗಿರಬಹುದು. ಕೆಲವರು ಆಡಿದ ಕುಹುಕಗಳನ್ನೂ ಮರೆತಿಲ್ಲ. ಇವೆಲ್ಲದರ ನಡುವೆಯೂ ಕಳೆದ 9ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ” ಎಂದು ರಂಜೀತ್ ಹೇಳಿಕೊಳ್ಳುತ್ತಾರೆ.

ಆರಂಭದಲ್ಲಿ ರಸ್ತೆ ಮಧ್ಯೆ ನಿಂತು ಡಾನ್ಸ್ ಮೂಲಕ ಟ್ರಾಫಿಕ್ ಕಂಟ್ರೋಲ್ ಮಾಡೋದನ್ನ ನೋಡಿ ಜನ ಹಲವು ರೀತಿಯಲ್ಲಿ ಆಡಿಕೊಳ್ಳುತ್ತಿದ್ದರು. ದಿನ ಕಳೆದಂತೆ ಇವರೊಬ್ಬ ಕಟ್ಟುನಿಟ್ಟಿನ ಅಧಿಕಾರಿ ಎಂದು ಮನವರಿಕೆಯಾಯಿತು. ಅವರು ಡ್ಯೂಟಿಯಲ್ಲಿದ್ದರೆ ಯಾರೊಬ್ಬರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಿಲ್ಲ.

ತಮ್ಮ ಡಿಫ್ರೆಂಟ್ ಮ್ಯಾನರಿಸಂನಿಂದಾಗಿಯೇ ಹೆಸರು ಮಾಡಿರುವ ರಂಜೀತ್​ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾವಿರಾರು ಬೆಂಬಲಿಗರಿದ್ದಾರೆ. ವೃತ್ತಿ, ಪ್ರೀತಿ-ಪ್ರೇಮದ ಕುರಿತಂತೆ ಇವರ ಮಾತು ಹಾಗು ಅಭಿಪ್ರಾಯಗಳನ್ನು ಯುವಜನತೆ ಮೆಚ್ಚುತ್ತಾರೆ. ವೃತ್ತಿಯಲ್ಲಿ ಕಟ್ಟುನಿಟ್ಟಾಗಿರುವ ಇವರ ಧೋರಣೆಗಳ ಬಗ್ಗೆ ಹಲವರಿಗೆ ಭಿನ್ನಾಭಿಪ್ರಾಯಗಳಿವೆ. ಅಲ್ಲದೆ ಕೆಲವರು, ಪೊಲೀಸರೂ ಭ್ರಷ್ಟರಾಗಿದ್ದಾರೆ ಎಂದು ಅವಹೇಳನವನ್ನೂ ಮಾಡಿದ್ದಿದೆ. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ರಂಜೀತ್, ಪೊಲೀಸರಿಗೆ ಹಣ ಕೊಡುವ ಜನ ಕಾನೂನು ಉಲ್ಲಂಘಿಸಿದ್ದಕ್ಕೆ ದಂಡ ಕಟ್ಟಲು ಹಿಂದೇಟು ಹಾಕುತ್ತಾರೆ. ಅಂಥವರು ವಿದ್ಯಾವಂತರಾಗಿದ್ದರೂ ಉಪಯೋಗವಿಲ್ಲ ಎನ್ನುತ್ತಾರೆ.

ಹೀಗೆ ನಿರ್ಭಯವಾಗಿ ವ್ಯವಹರಿಸುವ ರಂಜೀತ್ ಜೀವನದಲ್ಲೂ ಸಾಕಷ್ಟು ಏರಿಳಿತಗಳಾಗಿವೆ. 2008ರಲ್ಲಿ ಒಮ್ಮೆ ಕಾರು ಅಪಘಾತದಲ್ಲಿ ಕಾಲು ಮುರಿದುಕೊಂಡು 3 ತಿಂಗಳು ಹಾಸಿಗೆಯಲ್ಲಿ ಕಳೆದಿದ್ದು, ಟ್ರಾನ್ಸ್​​ಫರ್​​ನಿಂದಾಗಿ ಕಚೇರಿಯಲ್ಲಿ ಕಡತಗಳ ವಿಲೇವಾರಿ ಮಾಡುತ್ತಿದ್ದುದು, ಮೊದಲಾದವು ಅವರ ಜೀವನದ ಕೆಟ್ಟ ಸಮಯ ಎಂದೇ ಭಾವಿಸುತ್ತಾರೆ. ಟ್ರಾಫಿಕ್ ಜಂಕ್ಷನ್​​ನಲ್ಲಿ ನಿಂತು ಕೆಲಸ ಮಾಡುವುದೇ ತಮ್ಮ ಜೀವನದ ಗುರಿ ಎಂದುಕೊಂಡಿರುವ ರಂಜೀತ್ ಅದನ್ನೇ ತಮ್ಮ ಕರ್ಮಭೂಮಿ ಎಂದುಕೊಂಡಿದ್ದಾರೆ.

ನಗರದಲ್ಲಿ ಸಂಚಾರಿ ಸಮಸ್ಯೆ ಹೆಚ್ಚಿದ್ದರಿಂದಾಗಿ ಹಿರಿಯ ಅಧಿಕಾರಿಗಳು ಇವರನ್ನು ಮತ್ತೆ ಟ್ರಾಫಿಕ್ ಕಂಟ್ರೋಲರ್ ಹುದ್ದೆಗೆ ಮರಳಿ ಕಳುಹಿಸಿದರು.

ರಂಜೀತ್ ಸಿಂಗ್ ಹೆಜ್ಜೆ ಗುರುತು

ಹಲವು ಏರಿಳಿತಳನ್ನು ಕಂಡಿರುವ ಇವರು ತಾವು ನಡೆದು ಬಂದ ಹೆಜ್ಜೆಗುರುತುಗಳನ್ನು ಮರೆತಿಲ್ಲ. ಪೊಲೀಸ್ ಪೇದೆಯ ಮಗನಾಗಿದ್ದ ರಂಜೀತ್, ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ತಂದೆಯ ಕೈಲಿ ಹೊಡೆಸಿಕೊಂಡಿದ್ದನ್ನೂ ನೆನಪಿಟ್ಟುಕೊಂಡಿದ್ದಾರೆ. 12ನೇ ತರಗತಿಯಲ್ಲಿ ಫೇಲ್ ಆಗಿ ಮನೆ ತೊರೆದು ಇಂದೋರ್​​ನಲ್ಲಿರುವ ಸಂಬಂಧಿಕರ ಮನೆಗೆ ಬರುತ್ತಾರೆ. ತಮಗಾದ ಅವಮಾನವನ್ನು ಮೆಟ್ಟಿ ನಿಂತು ದೃಢನಿರ್ಧಾರ ಮಾಡಿ ಟ್ರಾಫಿಕ್ ಪೊಲೀಸ್ ಕೆಲಸಕ್ಕೆ ಸೇರುತ್ತಾರೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ರಂಜೀತ್ ಬೆಸ್ಟ್ ಕೆಡೆಟ್ ಎಂಬ ಪ್ರಶಂಸೆಗೂ ಪಾತ್ರರಾಗುತ್ತಾರೆ.

image


ಹೀಗೆ ಸ್ವಯಂಪ್ರೇರಣೆಯಿಂದ ರಂಜೀತ್ ಉನ್ನತಿ ಸಾಧಿಸಿದರು. ಇಲ್ಲದೇ ಹೋಗಿದ್ದರೆ ರಸ್ತೆ ಮಧ್ಯೆ ನಿಂತು 10 ಗಂಟೆ ಕೆಲಸ ಮಾಡುವುದರೊಳಗೆ ಎಂಥವರದ್ದಾದರೂ ಆತ್ಮವಿಶ್ವಾಸ ಉಡುಗಿಹೋಗುತ್ತದೆ. ಅದನ್ನು ನಿರಂತರವಾಗಿ ಉಳಿಸಿಕೊಂಡುಬರುವುದೇ ದೊಡ್ಡ ಸವಾಲಿನ ಮಾತಾಗಿರುತ್ತದೆ.

ರಂಜೀತ್ ಆರೋಗ್ಯದ ಗುಟ್ಟೇನು..?

ಇವೆಲ್ಲ ತೊಂದರೆಗಳಿಂದ ಪಾರಾಗಲು ಇವರು ಮನೆಗೆ ಮರಳಿದ ಮೇಲೆ ಕೆಲ ಗಂಟೆ ಚೆನ್ನಾಗಿ ನಿದ್ದೆ ಮಾಡುತ್ತಾರೆ. ಪ್ರತಿ ಮುಂಜಾನೆ 5.30ಕ್ಕೆ ಎದ್ದು ಯೋಗ ಹಾಗೂ ಜಿಮ್​​ನಲ್ಲಿ ಕಸರತ್ತು ಮಾಡುವ ರಂಜೀತ್ ತಮ್ಮ ಆರೋಗ್ಯದ ಜೊತೆಯಲ್ಲಿ ಮಾನಸಿಕ ಸ್ವಾಸ್ಥ್ಯವನ್ನೂ ಉತ್ತಮವಾಗಿಸಿಕೊಳ್ಳುತ್ತಿದ್ದಾರೆ. ಎರಡು ಮಕ್ಕಳ ತಂದೆಯಾಗಿರುವ ರಂಜೀತ್ಗೆ ತಮ್ಮ ಜೀವನದಲ್ಲಿ ದೇಶ ಸೇವೆಯೇ ಪರಮೋದ್ದೇಶ ಎಂಬ ಭಾವನೆಯಿದೆ.

ಕೇವಲ ತಮ್ಮ ಕೆಲಸದ ಮೂಲಕ ನಗರದ ಜನತೆಯ ಮನ ಗೆದ್ದಿರುವ ದಬಾಂಗ್ ಕಾಪ್ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎನ್ನುವುದು ಎಲ್ಲರ ಆಶಯ.

ಲೇಖಕರು: ದೀಪ್ತಿ ನಾಯರ್​​​

ಅನುವಾದಕರು: ಎಸ್​​.ಡಿ.


Add to
Shares
3
Comments
Share This
Add to
Shares
3
Comments
Share
Report an issue
Authors

Related Tags