ಆವೃತ್ತಿಗಳು
Kannada

ನಿಜವಾದ ಶಿಕ್ಷಣ ಬೇಕಾ..? ಏಕಲವ್ಯ ಇದೆ.. !

ಟೀಮ್​​ ವೈ.ಎಸ್​​.

YourStory Kannada
26th Oct 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಮೇ 2014ರಲ್ಲಿ, ನಮ್ಮ ಕೆಲಸದಾಕೆ ನಮ್ಮ ಬಳಿಗೆ ಬಂದು ತನ್ನ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಆದರೆ ಕೆಲವು ಅಗತ್ಯ ದಾಖಲೆಗಳು ಇಲ್ಲದ ಕಾರಣ, ಸಾಧ್ಯವಾಗುತ್ತಿಲ್ಲ ಎಂದಳು. ಅವರಿಗೆ ಸಹಾಯ ಮಾಡಲು ನಾನು ಎಲ್ಲಾ ಸರಕಾರಿ ಕಚೇರಿಗಳಿಗೆ ಓಡಾಡಿದೆ. ಬೃಹನ್​​ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಸ್ಕೂಲ್ ಮತ್ತು ಸ್ಲಂಗಳಿಗೂ ಅಲೆದಾಡಿದೆ.

ಕಡಿಮೆ ವೇತನದ ಸಮುದಾಯಗಳಿಗೆ ಸಿಗುತ್ತಿರುವ ಕಳಪೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಂಡು ಚಾರ್ಮಿಯವರಿಗೆ ಅಚ್ಚರಿಯಾಗಿತ್ತು. ಹಲವು ಮಕ್ಕಳ ಜೊತೆ ಅವರು ಸಂವಹನ ನಡೆಸಿದರು. ಕಾಗದದ ಮೇಲಿನ ಅವರ ಸಾಮರ್ಥ್ಯಕ್ಕೂ ಅವರಲ್ಲಿನ ನಿಜವಾದ ಜ್ಞಾನಕ್ಕೂ ಸಾಕಷ್ಟು ವ್ಯತ್ಯಾಸವಿತ್ತು. ಶಿಕ್ಷಣ ಹಕ್ಕು ಕಾಯ್ದೆಯಿಂದ ಎಷ್ಟು ಲಾಭವಾಗಿದೆಯೋ ಅಷ್ಟೇ ಕೊರತೆಗಳೂ ಇವೆ ಎನ್ನುವುದು ಚಾರ್ಮಿ ಗಮನಕ್ಕೆ ಬಂತು.

image


ಭಾರತದಲ್ಲಿ ಶಿಕ್ಷಣ

ಆರ್​​ಟಿಇಯಿಂದಾಗಿ ಸೌಲಭ್ಯಗಳು ಹೆಚ್ಚಾಗಿವೆ. ಸಾಕಷ್ಟು ಮಕ್ಕಳನ್ನು ಶಾಲೆಗೆ ಕರೆತಂದಿದೆ. ಶೌಚಾಲಯಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ವಿಫಲವಾಗಿದೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ, ಸೌಲಭ್ಯಗಳು ಹೆಚ್ಚಾಗಿವೆ. ಆದರೆ, ಹಾಜರಾತಿ ಮತ್ತು ಮಕ್ಕಳಲ್ಲಿ ಮುಖ್ಯವಾಗಿ ಗಣಿತ ಕಲಿಕೆಯ ಗುಣಮಟ್ಟ ಅತ್ಯಂತ ಕಳಪೆಯಾಗಿದೆ.

ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಮಕ್ಕಳು ತಾವು ಇರಬೇಕಾದ ಗ್ರೇಡ್​​ಗಿಂತ ಕನಿಷ್ಟ 3 ಗ್ರೇಡ್​​ಗಳಷ್ಟು ಹಿಂದಿದ್ದಾರೆ. ಈ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಸರಕಾರಿ ಶಾಲೆಯ 5ನೇ ತರಗತಿಯ ಅರ್ಧದಷ್ಟು ಮಕ್ಕಳು 2010ರಲ್ಲಿ 2ನೇ ತರಗತಿಯ ಪಠ್ಯವನ್ನು ಓದಲು ಸಫಲರಾಗಿದ್ದರೆ, 2012ರ ವೇಳೆಗೆ ಈ ಪ್ರಮಾಣ, ಶೇಕಡಾ 41.7ಕ್ಕೆ ಕುಸಿದಿತ್ತು. ಹಾಗೆಯೇ, ಕಳೆದ ನಾಲ್ಕು ವರ್ಷಗಳಲ್ಲಿ 100ರವರೆಗಿನ ಸಂಖ್ಯೆಗಳನ್ನು ಗುರುತಿಸಬಲ್ಲ ವಿದ್ಯಾರ್ಥಿಗಳ ಸಂಖ್ಯೆ ಶೇ.70ಕ್ಕಿಂತ ಶೇ.50ಕ್ಕೆ ಇಳಿದಿತ್ತು. ಆರ್​​ಟಿಇ ಜಾರಿಗೆ ಬಂದ ಮೇಲೂ ಈ ಕುಸಿತ ದಾಖಲಾಗಿರುವುದು ಗಮನಾರ್ಹ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಳಪೆ ಗುಣಮಟ್ಟದ ತರಬೇತಿ ಮತ್ತು ಕ್ಲಾಸ್​​ರೂಂ ಬೋಧನೆಯ ಕೊರತೆ, ಪರೀಕ್ಷೆಗಳನ್ನು ನಿಲ್ಲಿಸಿರುವುದು ಎಲ್ಲವೂ ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವಾಗಿದೆ. ಸಾಂಪ್ರದಾಯಿಕ ವಾರ್ಷಿಕ ಪರೀಕ್ಷೆಗಳು ಇಲ್ಲದೇ ಇರುವುದರಿಂದ, ಒಂಭತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಅಳೆಯಲೂ ಸಾಧ್ಯವಾಗುತ್ತಿಲ್ಲ. ಆರ್​​ಟಿಇಯಿಂದ ಶಾಲೆಯ ಹಕ್ಕು ದೊರೆತಿದ್ದರೂ, ಶಿಕ್ಷಣದ ಹಕ್ಕು ಮಾತ್ರ ದೊರೆತಿಲ್ಲ.

ಏಕಲವ್ಯ !

ಇದೆಲ್ಲವೂ ಎಎಸ್ಇಆರ್​​​ನ ವರದಿ. ಬಹುತೇಕ, ಇದೇ ಫಲಿತಾಂಶ ಚಾರ್ಮಿಯವರಿಗೂ ಸಿಕ್ಕಿತ್ತು. “ಬಹುತೇಕರಿಗೆ ಮೂಲಭೂತ ವಿಚಾರಗಳೂ ಗೊತ್ತಿರಲಿಲ್ಲ. ಮಕ್ಕಳ ಜೊತೆ ಮಾತನಾಡುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ತುಂಬಾ ಕೆಟ್ಟದ್ದು ಏನೆಂದರೆ, ಈ ಮಕ್ಕಳಿಗೆ ತಮ್ಮ ಹಕ್ಕಾಗಿದ್ದರೂ ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದೇ ಗೊತ್ತಿಲ್ಲ. ನಾನು ಮನೆಗೆ ಹೋದ ಮೇಲೆ ಯೋಚನೆ ಮಾಡಿದೆ. ನನ್ನಂತಹ ವಿದ್ಯಾವಂತರು ಈ ಮಕ್ಕಳ ಅಭಿವೃದ್ಧಿಗಾಗಿ ಏನು ಮಾಡಬಹುದು ಎಂದು ಯೋಚಿಸಿದೆ. ಶಿಕ್ಷಣ ಎನ್ನುವುದು ಮೂಲಭೂತ ಅಗತ್ಯ ಅದು ಹಕ್ಕು ಮತ್ತು ಎಲ್ಲಾ ಮಕ್ಕಳು ಅದಕ್ಕೆ ಅರ್ಹರು. ಆದರೆ, ಬಹುತೇಕ ಮಕ್ಕಳಿಗೆ ಅದನ್ನು ಪಡೆದು ಗೊತ್ತಿಲ್ಲ.”

ಹಾಗೆ ಹುಟ್ಟಿಕೊಂಡಿದ್ದೇ ಏಕಲವ್ಯ- ಯೂ ಬಿಲಾಂಗ್. ಶಿಕ್ಷಣದಲ್ಲಿನ ಅಂತರವನ್ನು ಕಡಿಮೆ ಮಾಡುವುದೇ ಇದರ ಮುಖ್ಯ ಗುರಿ. “ವಿದ್ಯಾವಂತರು, ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಂದ ಬಂದಿರುವ ಇಂತಹ ವಿದ್ಯಾರ್ಥಿಗಳಲ್ಲಿನ ಪ್ರತಿಭಾನ್ವೇಷಣೆಗೆ ಸಹಕರಿಸಬಹುದು. ಸ್ವಯಂ ಅಭಿವ್ಯಕ್ತಿ ಮತ್ತು ಶಿಕ್ಷಣದ ಮೂಲಕ ಮಕ್ಕಳಲ್ಲಿ ವಿಶ್ವಾಸ ಮತ್ತು ನಾಗರಿಕ ಜವಬ್ದಾರಿಗಳನ್ನು ಬೆಳೆಸಿ ಪ್ರತಿಯೊಂದು ಮಗುವನ್ನೂ ಸಬಲೀಕರಿಸಬಹುದು. ನಾವು ಇಂತಹ ಮಕ್ಕಳ ಬದುಕನ್ನೇ ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ. ಅವರು ತುಂಬಾ ಅಗತ್ಯ ಮತ್ತು ಅವರನ್ನು ನಾವು ಪಾಲಿಸುತ್ತೇವೆ ಎಂಬ ಭರವಸೆಯನ್ನು ಮೂಡಿಸುತ್ತಿದ್ದೇವೆ,” ಎನ್ನುತ್ತಾರೆ ಸಹ ಸಂಸ್ಥಾಪಕಿ ಮಾನ್ಯ ಶರ್ಮಾ.

ಮುಂಬೈನ ಅಶೋಕ್ ವನ ಪಾರ್ಕ್​ನಲ್ಲಿ ತರಗತಿ ನಡೆಸಲು ಈ ಇಬ್ಬರು 2014ರ ಆಗಸ್ಟ್ 17ರಂದು ಸರ್ಕಾರದಿಂದ ಅನುಮತಿ ಪಡೆದರು. ಆರಂಭದಲ್ಲಿ 75 ವಿದ್ಯಾರ್ಥಿಗಳು ಮತ್ತು 10 ಸ್ವಯಂ ಸೇವಕ ಶಿಕ್ಷಕಿಯರನ್ನು ನೋಂದಣಿ ಮಾಡಿಕೊಂಡರು. ಚಾರ್ಮಿಯವರು ಇಂಟಿರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಾರೆ, ಮಾನ್ಯ ಅವರು ಕಾನೂನು ಅಧ್ಯಯನ ಮಾಡುತ್ತಿದ್ದು, ಮಹಿಳೆ ಮತ್ತು ಲಿಂಗ ಸಮಾನತೆ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ತೀರ್ಮಾನಿಸಿದ್ದಾರೆ.

ಏಕಲವ್ಯ ಮೊದಲಿಗೆ ಆರು ತಿಂಗಳ ಕಾಲ ಪೈಲಟ್ ಯೋಜನೆ ರೂಪಿಸಿತು. ಕಡಿಮೆ ಆದಾಯದ ಸಮುದಾಯದ ಮಕ್ಕಳ ಜೊತೆ ಕೆಲಸ ಆರಂಭಿಸಿದರು. ಇದರಿಂದಾಗಿ ಮಕ್ಕಳ ಅಗತ್ಯ ಮತ್ತು ಮಕ್ಕಳ ನಡತೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಯಿತು. ಅಲ್ಲದೆ, ಮುನಿಸಿಪಲ್ ಶಾಲೆಗಳಲ್ಲೂ ಶಿಕ್ಷಣದ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಿದರು. ಜೊತೆಗೆ ಮಕ್ಕಳ ಶಿಕ್ಷಣದಲ್ಲಿ ಅವರ ಪೋಷಕರನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನೂ ಅರಿತುಕೊಂಡರು.

2015ರ ಜನವರಿಯಲ್ಲಿ ಏಕಲವ್ಯ 15 ಮಂದಿ ವಿವಿಧ ಕ್ಷೇತ್ರಗಳ ತಜ್ಞರ ತಂಡವೊಂದನ್ನು ರಚಿಸಿತು. ಆದರೆ ಅವರೆಲ್ಲರ ಆಸಕ್ತಿ ಒಂದೇ ಆಗಿತ್ತು. ಅವರ ಪರಿಣತಿ ಮತ್ತು ಆಸಕ್ತಿಗೆ ಅನುಗುಣವಾಗಿ ಅವರಿಗೆ ಜವಬ್ದಾರಿಗಳನ್ನು ಕೊಡಲಾಗಿದೆ. ಪಠ್ಯ ರಚನೆ, ಕಾರ್ಯಾಚರಣೆ, ತರಬೇತಿ, ಅಕೌಂಟ್ಸ್, ಡೊನೇಷನ್ಸ್ ಮತ್ತು ನಿಧಿ ಸಂಗ್ರಹ ಹೀಗೆ ವಿವಿಧ ಕೆಲಸಗಳನ್ನು ಹಂಚಲಾಗಿದೆ.

image


ದಾಖಲಾತಿ ಪರೀಕ್ಷೆ ನಡೆಸಿದ ಬಳಿಕ ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 180 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಅವರ ಪ್ರಸಕ್ತ ಜಾನ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅವರನ್ನು ವಿಂಗಡಿಸಲಾಗುತ್ತದೆ.

ಹವ್ಯಾಸಕ್ಕೆ 21 ದಿನಗಳು

ಯಾವುದೇ ಒಂದು ವಿಚಾರ ಹವ್ಯಾಸವಾಗಿ ಬದಲಾಗಲು ಕನಿಷ್ಟ 21 ದಿನಗಳ ಬೇಕಂತೆ. ಏಕಲವ್ಯ ಈ ಮಾತನ್ನು ತನ್ನ ಚಟುವಟಿಕೆಯಲ್ಲೂ ಅಳವಡಿಸಿಕೊಂಡಿದೆ. ಇದರ ಪಠ್ಯ ಚಟುವಟಿಕೆಗಳನ್ನು ತಲಾ 21 ದಿನಗಳಂತೆ ವಿಂಗಡಿಸಲಾಗುತ್ತದೆ. ಇದು ಶಾಲಾ ಬಳಿಕದ ಚಟುವಟಿಕೆಯಾಗಿದ್ದು, ಮಕ್ಕಳಿಗೆ ಪರೀಕ್ಷೆ ಸಂದರ್ಭದಲ್ಲಿ ಅವರ ಡೌಟ್​​ಗಳು ಮತ್ತು ರಿವಿಷನ್​ಗೂ ಸಹಕಾರ ನೀಡಲಾಗುತ್ತದೆ. ಅಲ್ಲದೆ, ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಬೆಳೆಸಲು ವ್ಯಕ್ತಿಗತ ಗಮನ ನೀಡಲಾಗುತ್ತದೆ.

ಪರಿಣಾಮ

ಕೇವಲ ಐದೇ ವರ್ಷಗಳಲ್ಲಿ, ಸುಮಾರು 200 ವಿದ್ಯಾರ್ಥಿಗಳ ಬದುಕು ಬದಲಾಯಿಸಲಾಗಿದೆ. ಮಕ್ಕಳ ಪೋಷಕರಿಂದಲೂ ಧನಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ ಎನ್ನುತ್ತಾರೆ ಚಾರ್ಮಿ. ಸರಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಶಿಕ್ಷಕರ ಕೊರತೆ ಇದೆ. ಏಕಲವ್ಯ ತಂಡವು ವ್ಯಕ್ತಿಗತ ಗಮನ ಕೊಟ್ಟು, ಮಕ್ಕಳ ಅಗತ್ಯಗಳನ್ನು ಪೂರೈಸುತ್ತಿದೆ. 2016ರ ವೇಳೆಗೆ 1000 ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದ್ದಾರೆ ಚಾರ್ಮಿ.

ಏಕಲವ್ಯದ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮತ್ತಷ್ಟು ಪರಿಣಾಮ ಮೂಡಿಸಲು ಚಾರ್ಮಿ ಯೋಚಿಸಿದ್ದಾರೆ.

ಹೆಚ್ಚು ಹೆಚ್ಚು ಮಕ್ಕಳಿಗೆ ಸ್ಪರ್ಧಾತ್ಮಕ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಅವರಿಗೆ ಮತ್ತು ಅವರ ಕುಟುಂಬಕ್ಕೆ ನೆರವಾಗುವುದೇ ಏಕಲವ್ಯದ ಉದ್ದೇಶ. ಇದು ದೇಶದ ಅಭಿವೃದ್ಧಿಗೆ ನೆರವಾಗುವುದರಲ್ಲಿ ಎರಡು ಮಾತೇ ಇಲ್ಲ ಎನ್ನುತ್ತಾರೆ ಚಾರ್ಮಿ.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories