ಆವೃತ್ತಿಗಳು
Kannada

ಯಶಸ್ಸಿಗೆ ಮೆಟ್ಟಿಲಾದ ಪಾರದರ್ಶಕತೆ...

ಟೀಮ್​​ ವೈ.ಎಸ್​​. ಕನ್ನಡ

18th Dec 2015
Add to
Shares
0
Comments
Share This
Add to
Shares
0
Comments
Share

ಪ್ರದೀಪ್ ಗೋಯಲ್ ಅವರ ಉದ್ಯಮ ಪಯಣದ ಅನುಭವದ ಮೂಟೆ ಇದು. ಅನುಭವದಿಂದ ಕಲಿತ ಪಾಠ, ತಿಳಿದುಕೊಂಡ ವಿಚಾರಗಳನ್ನು ಅವರು ತೆರೆದಿಟ್ಟಿದ್ದಾರೆ. ಪಾರದರ್ಶಕತೆ ಅನ್ನೋದು ಉದ್ಯಮದಲ್ಲಿ ಎಷ್ಟು ಮಹತ್ವ ಅನ್ನೋದನ್ನು ವಿವರಿಸಿದ್ದಾರೆ.

ನಿಮ್ಮ ಸಹೋದ್ಯೋಗಿಯ ಸಂಬಳ ಎಷ್ಟು ಅನ್ನೋದು ನಿಮಗೆ ಗೊತ್ತಾ? ಬಹುಷಃ ನಿಮಗೆ ತಿಳಿದಿರಬಹುದು. ಅವಳು ನಿಮಗೆ ಸರಿಸಮನಾಗಿ ದುಡಿಯುತ್ತಿರಬಹುದು. ನಿಮ್ಮ ಬಾಸ್ ಸಂಬಳ ಎಷ್ಟು ಅನ್ನೋದು ನಿಮಗೆ ಗೊತ್ತಾ? ಡೈರೆಕ್ಟರ್, ಉಪಾಧ್ಯಕ್ಷರು, ಸಿಇಓ ಯಾರ ವೇತನ ಎಷ್ಟು ಅನ್ನೋದು ತಿಳಿದಿದೆಯಾ? ಕಂಪನಿಗಳ ಆ್ಯಕ್ಟ್​​ನಂತೆ ಅದನ್ನು ಬಹಿರಂಗಪಡಿಸಿದ್ರೆ ಮಾತ್ರ ನಿಮಗದು ತಿಳಿದಿರಲು ಸಾಧ್ಯ. ಒಪ್ಪಂದವನ್ನು ಯಶಸ್ವಿಯಾಗಿ ಕುದುರಿಸಿದ್ದು ಹೇಗೆ ಅನ್ನೋದನ್ನು ನಿಮ್ಮ ಸೇಲ್ಸ್ ಡೈರೆಕ್ಟರ್ ಬಳಿ ಕೇಳಿದ್ರೆ ಅಥವಾ ಮಾರ್ಕೆಟಿಂಗ್ ಮುಖ್ಯಸ್ಥರ ಬಳಿ ಗ್ರಾಹಕರನ್ನು ಹೇಗೆ ಆಕರ್ಷಿಸುತ್ತಾರೆಂದು ಕೇಳಿದ್ರೆ, ಇಂತಹ ಪ್ರಶ್ನೆಗಳನ್ನು ಕೇಳುವುದನ್ನು ಬಿಟ್ಟು ಕೆಲಸದ ಮೇಲೆ ಗಮನಹರಿಸುವಂತೆ ನಿಮಗೆ ಸಲಹೆ ಕೊಡ್ತಾರೆ. ಸಂಸ್ಥೆಯ ಬೆಳವಣಿಗೆ ರಹಸ್ಯವನ್ನು ಅವರು ಬಿಟ್ಟುಕೊಡುವುದಿಲ್ಲ. ಕಂಪನಿಯನ್ನು ಅಭಿವೃದ್ಧಿಪಡಿಸುವ ತಂತ್ರ, ಸಂಬಳ, ಮಾರ್ಕೆಟಿಂಗ್ ಹೀಗೆ ಆಂತರಿಕ ವಿಚಾರಗಳನ್ನು ಕೇಳಿದ್ರೆ ನಿಮಗದಕ್ಕೆ ಉತ್ತರ ಸಿಗಲಾರದು. ಅಂತಹ ಪ್ರಯತ್ನಕ್ಕೆ ಕೈಹಾಕಲು ಹೋಗಬೇಡಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಉದ್ಯಮವನ್ನು ಹೇಗೆ ಮುನ್ನಡೆಸುತ್ತಿದ್ದೇವೆ ಅನ್ನೋದನ್ನು ಕೆಲವು ಕಂಪನಿಗಳು ರಹಸ್ಯವಾಗಿಡುತ್ತಿಲ್ಲ. ಉತ್ಪನ್ನ ಅಭಿವೃದ್ಧಿ, ವಿನ್ಯಾಸ, ಸೇಲ್ಸ್, ಮಾರ್ಕೆಟಿಂಗ್, ನೇಮಕಾತಿ, ಆದಾಯ, ವೆಚ್ಚಗಳ ವಿವರ, ನಿಧಿ ಸಂಗ್ರಹ ಈ ಎಲ್ಲ ಮಾಹಿತಿಗಳನ್ನೂ ಬಹಿರಂಗವಾಗಿ ಹಂಚಿಕೊಳ್ಳುತ್ತಿವೆ.

ಬಫರ್...

ಸಾಮಾಜಿಕ ಮಾಧ್ಯಮಗಳ ವೇಳಾಪಟ್ಟಿಯ ಅಪ್ಲಿಕೇಷನ್ `ಬಫರ್' ಅನ್ನು ಬಳಸಲು ಆರಂಭಿಸಿದಾಗಿನಿಂದ ನಾನು ಪಾರದರ್ಶಕತೆ ಸಂಸ್ಕೃತಿಯನ್ನು ಕಲಿಯಲು ಆರಂಭಿಸಿದ್ದೇನೆ. ಪಾರದರ್ಶಕ ಕಂಪನಿ `ದಿ ಬಫರ್ ವೇ'ಯನ್ನು ಕಟ್ಟಿ ಬೆಳೆಸಲು ಇದು ನೆರವಾಗಿದೆ. ವೇತನ, ಈಕ್ವಿಟಿ ಫಾರ್ಮುಲಾ ಎಲ್ಲವೂ ಇಲ್ಲಿ ಖುಲ್ಲಂಖುಲ್ಲಾ. ಇದು ಉದ್ಯಮಗಳ ಪಾಲಿಗೆ ಅತ್ಯಂತ ಸಹಕಾರಿ. ಬಫರ್ 3.5 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದ್ದು ಹೇಗೆ? ಹೂಡಿಕೆದಾರರನ್ನು ಅವರು ಹುಡುಕಿದ್ದು ಹೇಗೆ? ತಮ್ಮ ಪಿಚ್ ಡೆಕ್, ಮೆಟ್ರಿಸೆಸ್, ಟರ್ಮ್ ಶೀಟ್ ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ. ಬಫರ್ ಬಗ್ಗೆ ಇನ್ನಷ್ಟು ಮಾತನಡುವ ಮುನ್ನ ಉಳಿದ ಕಂಪನಿಗಳ ಬಗ್ಗೆ ತಿಳಿದುಕೊಳ್ಳೋಣ.

image


ಗ್ರೂವ್...

`ಗ್ರೂವ್'ನ ಸಂಸ್ಥಾಪಕ ಅಲೆಕ್ಸ್ ಕೂಡ ಸಂಸ್ಥೆಯ ಸಂಪೂರ್ಣ ಆಗುಹೋಗುಗಳನ್ನು ಬಿಚ್ಚಿಟ್ಟಿದ್ದಾರೆ. ಪ್ರತಿ ತಿಂಗಳು 0-5,00,000 ಡಾಲರ್ ವರೆಗಿನ ಆದಾಯ ಸಂಗ್ರಹದ ಪಯಣವನ್ನು ಹಂಚಿಕೊಂಡಿದ್ದಾರೆ. ಮೊದಲ 1000 ಗ್ರಾಹಕರನ್ನು ಗಳಿಸಿದ್ದು ಹೇಗೆ ಅನ್ನೋದನ್ನು ಅವರು ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ. ಉತ್ಪನ್ನದ ಗುಣಲಕ್ಷಣಗಳು, ಹೂಡಿಕೆದಾರರು, ವಿನ್ಯಾಸ, ಮಾರ್ಕೆಟಿಂಗ್, ಆದಾಯ, ತಂತ್ರ ಎಲ್ಲವನ್ನೂ ಅವರು ವೈಫಲ್ಯದಿಂದ್ಲೇ ಕಲಿತಿದ್ದಾರೆ. ಇತ್ತೀಚೆಗಷ್ಟೆ 50ಕ್ಕೂ ಹೆಚ್ಚು ಕಂಪನಿಗಳಿಗೆ ಅವರು 20,000 ಡಾಲರ್ ಮೊತ್ತದ ಉಪಕರಣಗಳನ್ನು ನೀಡಿದ್ದಾರೆ. ಆರಂಭಿಕ ಹಂತದಲ್ಲಿ ಉದ್ಯಮಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸಾಮಾನ್ಯವಾಗಿ ಇಂತಹ ಪ್ರಯೋಜನಗಳನ್ನು ಕೇವಲ ವೇಗವಾಗಿ ಬೆಳೆಯುತ್ತಿರುವ ಮತ್ತು ಹೂಡಿಕೆ ಮಾಡಿದ ಕಂಪನಿಗಳಿಗೆ ಮಾತ್ರ ನೀಡಲಾಗುತ್ತದೆ. ಆದ್ರೆ ಗ್ರೂವ್ ಈ ಅವಕಾಶವನ್ನು ಎಲ್ಲಾ ಸಂಸ್ಥೆಗಳಿಗೂ ನೀಡಿದೆ.

ಮೊಝ್...

ನಿಮ್ಮದು ಡಿಜಿಟಲ್ ಸಂಸ್ಥೆಯಾಗಿದ್ರೆ ನೀವು ಎಸ್‍ಇಓ ಶಕ್ತಿಯನ್ನು ಕಡೆಗಣಿಸುವಂತಿಲ್ಲ. ಎಸ್‍ಇಓ ಬಗ್ಗೆ ನಿಮಗೆ ಗೊತ್ತಿಲ್ಲದೇ ಇದ್ರೆ ಮೊಝ್ ನಿಮಗೆ ಉಚಿತವಾಗಿ ಎಸ್‍ಇಓ ಮತ್ತು ಮಾರ್ಕೆಟಿಂಗ್ ಶೋಧದ ಬಗ್ಗೆ ಕಲಿಸಿಕೊಡುತ್ತದೆ. ಯಾವುದೇ ಸೇಲ್ಸ್ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳದೆ ಮೊಝ್, ತನ್ನ ಮೌಲ್ಯವನ್ನು 35 ಮಿಲಿಯನ್ ಡಾಲರ್‍ಗೆ ಹೆಚ್ಚಿಸಿಕೊಂಡಿದೆ. ಮೊಝ್‍ನ ಸಿಇಓ ರ್ಯಾಂಡ್ ಹಾಗೂ ಫಿಶ್‍ಕಿನ್ ಪಾರದರ್ಶಕತೆ ಮತ್ತು ಹಂಚಿಕೊಳ್ಳುವ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿದ್ದಾರೆ.

ತಮ್ಮ ಕಂಪನಿಯ ತೆರೆದ ಸಂಸ್ಕೃತಿ ಬಗ್ಗೆ ರ್ಯಾಂಡ್ ಕೂಡ ಅನುಭವಗಳನ್ನು ಹಂಚಿಕೊಂಡಿದ್ದಾರೆ. ``ಮೊಝ್‍ನ ಪ್ರಾಡಕ್ಟ್ ಟೀಮ್‍ನಲ್ಲಿ ನನ್ನ ಜೊತೆ ಮಹಿಳೆಯೊಬ್ಬಳು ಕೆಲಸ ಮಾಡುತ್ತಿದ್ಲು. ಅವಳು ನನ್ನ ಫೇವರಿಟ್ ಎಂಜಿನಿಯರ್‍ಗಳಲ್ಲಿ ಒಬ್ಬಳು. ಆಕೆ ಒಬ್ಬ ಮಂಗಳಮುಖಿಯಾಗಿದ್ಲು, ಲಿಂಗ ಪುನರ್​​ವಿತರಣೆ ಶಸ್ತ್ರಚಿಕಿತ್ಸೆ ಬಗ್ಗೆ ಎಲ್ಲವನ್ನೂ ನನ್ನ ಬಳಿ ಹೇಳಿಕೊಂಡಿದ್ಲು. ಅದು ಮೊಝ್‍ನಲ್ಲಿ ನನ್ನ ಬೆಸ್ಟ್ ದಿನವಾಗಿತ್ತು ಯಾಕಂದ್ರೆ ಆಕೆ ನಮ್ಮೆಲ್ಲರೊಂದಿಗೆ ಬೆರೆತು ಆ ಪರಿಸರದಲ್ಲಿ ಆರಾಮದಾಯಕ ಭಾವನೆ ಹೊಂದಿದ್ದಾಳೆ ಅನ್ನೋದು ಖುಷಿ ಕೊಟ್ಟಿತ್ತು''.

ಮೊಝ್ `ವೈಟ್‍ಬೋರ್ಡ್ ಫ್ರೈಡೇ' ಅನ್ನೋ ಜನಪ್ರಿಯ ಸರಣಿಯೊಂದನ್ನು ನಡೆಸುತ್ತಿದೆ. ಪ್ರತಿ ಶುಕ್ರವಾರ ಎಸ್‍ಇಓನ ಅತ್ಯಮೂಲ ಒಳನೋಟಗಳನ್ನು ಹಂಚಿಕೊಳ್ಳುತ್ತದೆ.

ಹಬ್‍ಸ್ಪಾಟ್...

ಇದು ಮಾರ್ಕೆಟಿಂಗ್ ಹಾಗೂ ಸೇಲ್ಸ್ ವ್ಯಕ್ತಿಗಳಿಗೆ ಸ್ವರ್ಗವಿದ್ದಂತೆ. ಮಾರ್ಕೆಟಿಂಗ್ ಹಾಗೂ ಸೇಲ್ಸ್ ಬಗ್ಗೆ ತಿಳಿಸಲು ಪ್ರತ್ಯೇಕ ಬ್ಲಾಗ್‍ಗಳನ್ನು ಬಳಸುತ್ತಿದೆ. ಹಬ್‍ಸ್ಪಾಟ್ ಕಳೆದ 9 ವರ್ಷಗಳಿಂದ ಪಾರದರ್ಶಕತೆ ಹಾಗೂ ಉದ್ಯಮ ಸಂಸ್ಕೃತಿಯ ವಕೀಲನಂತಿದೆ. `ಹಬ್‍ಸ್ಪಾಟ್ ಸ್ಟಾರ್ಟ್‍ಅಪ್ ಕಲ್ಚರ್'ನಲ್ಲಿ ನೀವು ಈ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆಯಬಹುದು. ನೀವು ಡಿಜಿಟಲ್ ಮಾರ್ಕೆಟಿಂಗ್ ಆರಂಭಿಸಬೇಕೆಂದಿದ್ದರೆ ಹಬ್‍ಸ್ಪಾಟ್ ನಿಮಗೆ ಸೂಕ್ತ ಸ್ಥಳ. ಅವರ ಬ್ಲಾಗ್, ಡಿಜಿಟಲ್ ಮಾರ್ಕೆಟಿಂಗ್‍ನ ಬೈಬಲ್ ಇದ್ದಂತೆ. ಅಲ್ಲಿ ಉಚಿತ ಇ-ಬುಕ್‍ಗಳು, ಮಾರ್ಕೆಟಿಂಗ್ ಟೆಂಪ್ಲೆಟ್‍ಗಳು, ಹಂತಹಂತವಾದ ಸಲಹೆ, ಇನ್ಫೋ-ಗ್ರಾಫಿಕ್ ಹಾಗೂ ಉಚಿತ ಚಿತ್ರಗಳು ದೊರೆಯುತ್ತವೆ. ಇದಲ್ಲದೆ, ಗ್ರಾಹಕರು, ಸಿಬ್ಬಂದಿ, ಮಾರಾಟಗಾರರು ಮತ್ತು ಹೂಡಿಕೆದಾರರು ಇಷ್ಟಪಡುವಂತಹ ಕಂಪನಿಯನ್ನು ಬೆಳೆಸುವುದು ಹೇಗೆ ಅನ್ನೋದನ್ನು ಕೂಡ ನೀವು ತಿಳಿದುಕೊಳ್ಳಬಹುದು.

37 ಸಿಗ್ನಲ್ಸ್...

1999ರಲ್ಲಿ ಅವರು ವೆಬ್ ಡಿಸೈನ್ ಕಂಪನಿಯೊಂದನ್ನು ಆರಂಭಿಸಿದ್ರು. 2004ರಲ್ಲಿ `ಬೇಸ್‍ಕ್ಯಾಂಪ್' ಹೆಸರಿನ ಸರಳ ಕಾರ್ಯ ನಿರ್ವಹಣಾ ಉಪಕರಣವನ್ನು ತಯಾರಿಸಿತ್ತು. ಅವರು ತೆರೆದ ಮೂಲದ ಅಭಿವೃದ್ಧಿ ಚೌಕಟ್ಟು `ರಬ್ಬಿ ಆನ್ ರೇಲ್ಸ್'ನ ಸೃಷ್ಟಿಕರ್ತರು ಕೂಡ ಹೌದು. `ಗೆಟ್ಟಿಂಗ್ ರಿಯಲ್' ಹಾಗೂ `ರಿವರ್ಕ್ & ರಿಮೋಟ್' ಪುಸ್ತಕವನ್ನು ಕೂಡ ಬರೆದಿದ್ದಾರೆ. ಪಾರದರ್ಶಕತೆ ಮೆರೆಯುವ ಮೂಲಕ ಉದ್ಯಮ ಲೋಕದಲ್ಲಿ ಅಪಾರ ಮೌಲ್ಯ ಗಳಿಸಿದ್ದಾರೆ. ಒಮ್ಮೆ ಮಧ್ಯರಾತ್ರಿ `ಬೇಸ್‍ಕ್ಯಾಂಪ್' ಸರ್ವರ್ ಡೌನ್ ಆಗಿತ್ತು. ಆದ್ರೆ ಈ ವಿಚಾರ ಶೇ.99ರಷ್ಟು ಗ್ರಾಹಕರಿಗೆ ಗೊತ್ತೇ ಇರಲಿಲ್ಲ, ಅನಿರೀಕ್ಷಿತ ಡೌನ್‍ಟೈಮ್ ಅನ್ನೋ ನೋಟಿಸ್ ಅನ್ನು ಅವರೇ ಬ್ಲಾಗ್‍ನಲ್ಲಿ ಪ್ರಕಟಿಸಿದ್ರು. ``ಇವತ್ತು ಬೆಳಗ್ಗೆ ಆದ ಅಡಚಣೆಗೆ ಕ್ಷಮೆ ಕೋರುತ್ತೇವೆ, ಕೆಲ ಡಾಟಾಬೇಸ್ ಸಮಸ್ಯೆಗಳಿಂದಾಗಿ ಅಡಚಣೆ ಉಂಟಾಗಿದೆ. ಆ ಸಮಸ್ಯೆಯನ್ನೂ ಈಗಾಗ್ಲೇ ಬಗೆಹರಿಸಿದ್ದು, ಭವಿಷ್ಯದಲ್ಲಿ ಇಂತಹ ತೊಂದರೆಯಾಗದಂತೆ ಜಾಗ್ರತೆ ವಹಿಸುತ್ತೇವೆ. ನಿಮ್ಮ ಸಹನೆಗಾಗಿ ಧನ್ಯವಾದಗಳು'' ಅಂತಾ ಬ್ಲಾಗ್‍ನಲ್ಲಿ ಪ್ರಕಟಿಸಲಾಗಿತ್ತು.

``ಎಲ್ಲ ಶೆಫ್‍ಗಳು ತಮ್ಮ ರೆಸಿಪಿಗಳನ್ನು ಅಡುಗೆ ಪುಸ್ತಕದಲ್ಲಿ ಪ್ರಕಟಿಸುತ್ತಾರೆ. ಆದ್ರೆ ರೆಸಿಪಿಗಳನ್ನೆಲ್ಲ ಕಲಿತರೂ ಯಾರೂ ಅವರಂಥ ಅದ್ಭುತ ಶೆಫ್‍ಗಳಾಗಲು ಸಾಧ್ಯವಾಗಿಲ್ಲ. ಅದ್ಭುತ ಅಡುಗೆಯನ್ನು ಮಾಡುವವರು ಬಾಣಸಿಗರೇ ಹೊರತು ರೆಸಿಪಿ ಅಲ್ಲ'' - ಈ ಮಾತು `ರಿ ವರ್ಕ್' ಪುಸ್ತಕದಲ್ಲಿದೆ. ಪಾರದರ್ಶಕತೆ ಬಗೆಗಿನ ಈ ಪಾಠ ನನಗೆ ಇಷ್ಟವಾಯ್ತು. ಇಷ್ಟಾದ್ರೂ ಜನರು ಯಾಕೆ ಐಡಿಯಾಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕ್ತಾರೆ ಅನ್ನೋದೇ ನನಗೆ ಅಚ್ಚರಿಯ ವಿಚಾರ.

ಪಾರದರ್ಶಕತೆಯ ಪ್ರಯೋಜನಗಳು...

ಇದುವರೆಗೆ ಭಾರತೀಯ ಉದ್ಯಮ ಪರಿಸರದಲ್ಲಿ ಪಾರದರ್ಶಕತೆಗೆ ನಾವು ಸಾಕ್ಷಿಯಾಗಿಲ್ಲ. ಅದಿನ್ನೂ ವಿಕಾಸದ ಹಂತದಲ್ಲಿರುವುದೇ ಇದಕ್ಕೆ ಕಾರಣ ಇರಬಹುದು. ಪಾರದರ್ಶಕತೆ ಅನ್ನೋದು ಒಂದು ಸಂಸ್ಥೆಯ ಭವಿಷ್ಯವಿದ್ದಂತೆ. ಒಂದಲ್ಲ ಒಂದು ದಿನ ದೊಡ್ಡ ದೊಡ್ಡ ಕಂಪನಿಗಳು ಕೂಡ ಇದನ್ನೇ ಅನುಸರಿಸುತ್ತವೆ. ಪರಿಸರ ತೀವ್ರಗತಿಯಲ್ಲಿ ಬದಲಾದಾಗ ಪ್ರಬಲ ಮತ್ತು ಹೊಂದಿಕೊಳ್ಳುವಿಕೆ ವಿಕಾಸದ ನಿಯಮ. ಉದ್ಯಮ ಪರಿಸರ ಕೂಡ ಈಗ ಬದಲಾಗುತ್ತಿದೆ. ಸಮುದಾಯ ಮತ್ತು ಮುಕ್ತತೆ ಮೂಲಭೂತ ಪ್ರಯೋಜನಗಳು, ಪಾರದರ್ಶಕತೆ ಎಂತಹ ಬಿರುಗಾಳಿಯನ್ನಾದರೂ ಎದುರಿಸಬಲ್ಲದು.

ಹೆಚ್ಚಿನ ವಿಶ್ವಾಸ...

ನೀವು `ವಾಕ್ ದಿ ಟಾಕ್' ಮಾಡಿದ್ರೆ ಜನರು ನಿಮ್ಮನ್ನು ನಂಬುತ್ತಾರೆ. ನೀವೇನನ್ನೂ ಮುಚ್ಚಿಡದಿದ್ರೆ ಜನರಿಗೆ ನಿಮ್ಮಲ್ಲಿ ವಿಶ್ವಾಸ ಮೂಡುತ್ತದೆ. ನೀವು ಪಾರದರ್ಶಕವಾಗಿದ್ರೆ, ನಿಮಗೆ ಒಂದೇ ಮುಖವಿದ್ರೆ ಜನರು ನಿಮ್ಮನ್ನು ನಂಬುತ್ತಾರೆ. ಇದು ನಿಮ್ಮ ಕುಟುಂಬಕ್ಕೆ, ಸಿಬ್ಬಂದಿಗೆ, ಗ್ರಾಹಕರಿಗೆ ಮತ್ತು ಹೂಡಿಕೆದಾರರಿಗೆ ಕೂಡ ಸಮನಾಗಿ ಅನ್ವಯಿಸುತ್ತದೆ. ನೀವು ಏನನ್ನೂ ರಹಸ್ಯವಾಗಿಟ್ಟುಕೊಳ್ಳದೇ ಇದ್ರೆ ನಿಮ್ಮನ್ನು ಅವರು ನಂಬುತ್ತಾರೆ. ನಿಮ್ಮ ಕಷ್ಟ-ಸುಖದಲ್ಲಿ ಜೊತೆಯಾಗಿರುತ್ತಾರೆ.

ದಕ್ಷತೆ...

ನೀವು, ಮೌಲ್ಯಗಳಿಂದ ಆವೃತವಾಗಿರುವವರ ಜೊತೆ ಕೆಲಸ ಮಾಡುತ್ತಿದ್ದೀರಾ, ಹೊರತು ನಿಯಮಗಳ ಮೂಟೆ ಹೊತ್ತವರ ಜೊತೆಗಲ್ಲ. ಹಾಗಾಗಿ ಸಹಜವಾಗಿಯೇ ಅವರು ತಮ್ಮ ಕಾರ್ಯದಲ್ಲಿ ದಕ್ಷತೆ ತೋರಿಸುತ್ತಾರೆ. ನೀವು ನೇಮಕವಾದ ದಿನ ಸಹಿ ಮಾಡಿರುತ್ತೀರಲ್ಲ, ಆ ದಾಖಲೆಗಳಲ್ಲಿ ಬರೆದಿದ್ದು ಕಂಪನಿಯ ಸಂಸ್ಕೃತಿಯಲ್ಲ. ನಿಮ್ಮ ಸುತ್ತಮುತ್ತ ಬಾಸ್ ಇಲ್ಲದೇ ಇದ್ದಾಗ ನೀವೇನು ಮಾಡುತ್ತೀರೋ ಅದೇ ಕಂಪನಿಯ ಸಂಸ್ಕೃತಿ.

ನಿಷ್ಠೆ...

ನೀವು ಯಾರನ್ನು ನಂಬುತ್ತೀರೋ ಅವರಿಗೆ ನೀವು ನಿಷ್ಠರಾಗಿರುತ್ತೀರಾ. ಗ್ರಾಹಕರು, ಹೂಡಿಕೆದಾರರು ಮತ್ತು ಸಿಬ್ಬಂದಿ ಎಲ್ಲಿಯವರೆಗೆ ನಿಮ್ಮ ಮೇಲೆ ನಂಬಿಕೆ ಇಟ್ಟಿರುತ್ತಾರೋ ಅಲ್ಲಿಯವರೆಗೆ ನಿಷ್ಠೆಯಿಂದಿರುತ್ತಾರೆ. ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುವವರೆಗೂ ನೀವು ಪರಿಶ್ರಮಪಟ್ಟು ಕೆಲಸ ಮಾಡುತ್ತೀರಾ ಎನ್ನುವುದು ಅವರಿಗೆ ಗೊತ್ತಿರುವುದರಿಂದ ನಿಮ್ಮ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸುತ್ತಾರೆ.

ಕಡಿಮೆ ಒತ್ತಡ...

ಉದ್ಯೋಗಿಗಳು, ಗ್ರಾಹಕರು, ಹೂಡಿಕೆದಾರರು ಅಧಿಕಾರಿಗಳ ಒಂದು ಚಿತ್ರಣವನ್ನು ನೀವು ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುತ್ತೀರಾ. ಪ್ರತಿ ಸಭೆಯಲ್ಲೂ ನೀವು ಯಾರ್ಯಾರಿಗೆ ಏನೇನು ವಾಗ್ದಾನ ಮಾಡಿದ್ದೀರೆಂದು ನೆನಪಿಸಿಕೊಳ್ಳುತ್ತೀರಾ. ಅದೇ ಒತ್ತಡಕ್ಕೆ ಕಾರಣ. ನಿಮ್ಮ ಯೋಜನೆಗಳು, ವಾಗ್ದಾನ, ಬದ್ಧತೆ ಮತ್ತು ಕೆಲಸ ತೆರೆದ ಪುಸ್ತಕದಂತಿದ್ದರೆ ನೀವು ನೆಮ್ಮದಿಯಿಂದ ನಿದ್ರಿಸಬಹುದು. ರಾಜಕೀಯದ ಆಟದ ಬಗ್ಗೆ ತಲೆಕೆಡಿಸಿಕೊಳ್ಳದೆ, ಉತ್ಪನ್ನದ ಬಗ್ಗೆ ಹೆಚ್ಚು ಗಮನಹರಿಸಬಹುದು.

ತೀರ್ಮಾನ...

ಪಾರದರ್ಶಕತೆ ಮಾದಕವಾದದ್ದು, ಆದ್ರೆ ಎಲ್ಲರ ಪಾಲಿಗೂ ಅಲ್ಲ. ಪಾರದರ್ಶಕತೆ ಸಂಸ್ಕøತಿಯೆಡೆಗಿನ ಅರ್ಧ ಹಾದಿ ನಾಗರಹಾವಿನ ಒಂದು ತೊಟ್ಟು ವಿಷವಿದ್ದಂತೆ. ನಿಮ್ಮ ಸಂಸ್ಥೆಯ ಸಂಸ್ಕøತಿ ನಿಮ್ಮ ವಿಸ್ತರಣೆಯಿದ್ದಂತೆ. ನಿಮ್ಮ ಮನೆಯಲ್ಲೇ ನೀವು ಪಾರದರ್ಶಕವಾಗಿಲ್ಲದಿದ್ರೆ, ನೀವೊಂದು ಕಂಪನಿ ಕಟ್ಟಲು ಹೇಗೆ ಸಾಧ್ಯ? ನಾನು ಆದಾಯದ ಬಗ್ಗೆ ಮಾಹಿತಿ ಕೊಡುತ್ತೇನೆ, ಆದ್ರೆ ಆದಾಯ ಸಂಗ್ರಹದ ಮಾರ್ಗದ ಗುಟ್ಟು ಬಿಟ್ಟು ಕೊಡಲಾರೆ ಅಂತಾ ನೀವು ಹೇಳುವ ಹಾಗಿಲ್ಲ. ನೀವದನ್ನು ಬಹಿರಂಗಪಡಿಸದೇ ಇದ್ದಲ್ಲಿ, ಆ ಅಂತರವನ್ನು ಜನರು ತಮ್ಮ ಊಹೆ ಮೂಲಕ ಭರ್ತಿ ಮಾಡುತ್ತಾರೆ. ಪಾರದರ್ಶಕತೆ ಮೂಲಕ ಯಶಸ್ಸು ಕಂಡ ಕಂಪನಿಗಳನ್ನು ನೀವು ಅನುಸರಿಸಬಹುದು.

ಲೇಖಕರು: ಪ್ರದೀಪ್​​ ಗೊಯೆಲ್​

ಅನುವಾದಕರು: ಭಾರತಿ ಭಟ್​​

Add to
Shares
0
Comments
Share This
Add to
Shares
0
Comments
Share
Report an issue
Authors

Related Tags