ಆವೃತ್ತಿಗಳು
Kannada

ಸ್ವಂತ ಸಾಫ್ಟ್​​ವೇರ್ ಸಂಸ್ಥೆಗಿಂತ ಹೆಚ್ಚಿನ ಆಸ್ಥೆಯಿಂದ ಬೆಳೆಸಿದ ಮಿನಿ ಜಂಗಲ್ ಗಾರ್ಡನ್

ವಿಶ್ವಾಸ್​ ಭಾರಾಧ್ವಾಜ್​​

Vishwas Bharadwaj
8th Nov 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
image


ಸಾಮಾನ್ಯವಾಗಿ ಮನೆಯ ಹೊರ ಆವರಣದಲ್ಲಿ ಅಥವಾ ಹಿತ್ತಲಿನಲ್ಲಿ ಒಂದಷ್ಟು ಜಾಗವನ್ನು ಚಿಕ್ಕದಾಗಿ ಕೈ ತೋಟ ಮಾಡಿರುವುನ್ನು ಕೇಳಿರುತ್ತೇವೆ. ಮನೆಯಲ್ಲಿ ಗೃಹಿಣಿಯರು ಬಗೆಬಗೆಯ ಹೂಗಳನ್ನು, ತರಕಾರಿಗಳನ್ನು ಬೆಳೆಯೋದು ಸಾಧಾರಣ ವಿಧ್ಯಮಾನ. ಆದ್ರೆ ಮನೆಯ ಹಿಂದೆ ಆ ವ್ಯಕ್ತಿ ಬೆಳೆಸಿರುವ ಸಮೃದ್ಧ ಅಡವಿ ಉದ್ಯಾನವನ ನಿಜಕ್ಕೂ ಆಶ್ಚರ್ಯ ಮೂಡಿಸುವಂತದ್ದು. ಆ ವ್ಯಕ್ತಿಯ ಮನೆಯ ಸುತ್ತಮುತ್ತಲಿನ ಹತ್ತಾರು ಎಕರೆ ಪ್ರದೇಶದಲ್ಲಿ ಚಿಕ್ಕ ಪ್ರಮಾಣದ ಕಾಡೇ ನಿರ್ಮಾಣವಾಗಿದೆ. ಇದು ಬ್ರಿಸ್ಟಲ್ ಹೊರವಲಯದ ಯೇಟ್​​ನಲ್ಲಿರುವ ಸಾಫ್ಟ್​​ವೇರ್​​​ ಎಂಜಿನಿಯರ್ ಟಿಮ್ ವೆಲ್ಮೋಟ್​​ರ ಖಾಸಗಿ ಸಸ್ಯ ಕಾಶಿ.

image


56 ವರ್ಷದ ಟಿಮ್ ಹಾಗೂ 60 ವರ್ಷದ ಶೀಲಾ ವೆಲ್ಮೋಟ್ ದಂಪತಿಗಳ ಮನೆಯ ಕಿಟಕಿಯಿಂದ ಹೊರ ನೋಡಿದರೇ ಎತ್ತೆತ್ತಲೂ ಹಚ್ಚಹಸುರಿನ ಗಿಡಮರಗಳೇ ಕಾಣಿಸುತ್ತವೆ. ಹಾಗಂತ ಟಿಮ್ ವೆಲ್ಮೋಟ್ ಮನೆ ಕಟ್ಟಿಸಿರುವುದು ಪೆರುವಿಯನ್, ಮೆಡಿಟರೇನಿಯನ್ ಅರಣ್ಯ ಅಥವಾ ಅಮೇಜಾನ್​​ನಂತಹ ದಟ್ಟ ನಿತ್ಯಹರಿದ್ವರ್ಣದ ಕಾಡಿನ ಮಧ್ಯದಲ್ಲಲ್ಲ. ಬ್ರಿಸ್ಟಲ್​​​​ ಉಪಪಟ್ಟಣ ಯೇಟ್​ನಿಂದ ಕೇವಲ 50 ಮೀಟರ್ ದೂರದಲ್ಲಿಯೇ ಬೈಪಾಸ್ ರಸ್ತೆಯಲ್ಲಿ. ಇಲ್ಲಿನ ಸದ್ದುಗದ್ದಲದ ನಡುವೆಯೇ ಇರುವ ಟಿಮ್​​ ಅಭಯಾರಣ್ಯ ದಶಕಗಳ ಕಾಲ ಕಷ್ಟಪಟ್ಟು ನೆಟ್ಟು ಬೆಳೆಸಿದ ಸಸ್ಯ ಸಾಮ್ರಾಜ್ಯ. ಇದರ ನಿರ್ಮಾಣದ ಹಿಂದೆ ಟಿಮ್ ವೆಲ್ಮೋಟ್​​ರ ಅಪಾರ ಶ್ರದ್ಧೆ, ಅವಿರತ ಶ್ರಮ ಹಾಗೂ ಅಧಮ್ಯ ಪ್ರೀತಿ ಅಡಕವಾಗಿದೆ.

image


ಸಾಫ್ಟ್​​ವೇರ್ ಎಂಜಿನಿಯರ್​​ನ ಸಸ್ಯ ಪ್ರೀತಿ

ಟಿಮ್ ವೆಲ್ಮೋಟ್ ಬ್ರಿಸ್ಟಲ್​​ನಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿದ್ದಾರೆ. ಯೇಟ್​​ನಲ್ಲಿರುವ ತಮ್ಮ ಮನೆಯ ಆವರಣದಲ್ಲಿ ಚಿಕ್ಕ ವಿಸ್ತೀರ್ಣದ ಜಂಗಲ್ ಗಾರ್ಡನ್ ನಿರ್ಮಿಸಿಕೊಂಡಿದ್ದಾರೆ. ಅತ್ಯಂತ ಆಸ್ಥೆಯಿಂದ ಗಿಡಗಳನ್ನು ನೆಡುವ ಟಿಮ್, ಅವುಗಳ ರಕ್ಷಣೆ, ಪಾಲನೆ ಹಾಗೂ ಪೋಷಣೆಯಲ್ಲೇ ಸ್ವರ್ಗ ಕಂಡಿದ್ದಾರೆ. ತಮ್ಮದೇ ಆದ ಸಾಫ್ಟ್​​ವೇರ್​​ ಅಭಿವೃದ್ಧಿಪಡಿಸುವ ಸಂಸ್ಥೆ ಹೊಂದಿರುವ ಟಿಮ್ ತಮ್ಮ ಸಂಸ್ಥೆ ಕಟ್ಟುವುದಕ್ಕಿಂತ ಹೆಚ್ಚಿನ ಶ್ರದ್ಧೆಯಿಂದ ಈ ಜಂಗಲ್ ಬೆಳೆಸಿದ್ದಾರೆ. ಕಳೆದ ಎರಡೂವರೆ ದಶಕಗಳಿಂದ ಆ ಸಸ್ಯ ಪ್ರಂಪಚವೇ ಟಿಮ್​​ರ ಆಪ್ತ ಲೋಕ. ಟಿಮ್ ಅವುಗಳೊಂದಿಗೆ ಮಾತಾಡುತ್ತಾರೆ ಮುದ್ದಿನಿಂದ ಮೈದಡವುತ್ತಾರೆ. ಎಲ್ಲಾ ಸಸ್ಯಗಳನ್ನು ಆಲಂಗಿಸಿಕೊಳ್ಳುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಟಿಮ್ ಆ ಎಲ್ಲಾ ವನ್ಯ ಸಿರಿಯನ್ನು ತಮ್ಮ ಉಸಿರಿನಷ್ಟೇ ಗಾಢವಾಗಿ ಪ್ರೀತಿಸುತ್ತಾರೆ.

image


ತೋಟಗಾರಿಕೆ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಇತ್ತು

ಬಾಲ್ಯದಿಂದಲೇ ಅರಣ್ಯ ಪರಿಸರದ ಬಗ್ಗೆ ಒಲವು ಮೂಡಿಸಿಕೊಂಡಿದ್ದ ಟಿಮ್ ಬೆಳೆಯತೊಡಗಿದಂತೆ ಅವುಗಳ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡತೊಡಗಿದ್ದರು. ತೋಟಗಾರಿಕೆ ಅವರ ಅತ್ಯಂತ ಉತ್ಸಾಹಭರಿತ ಆಸಕ್ತಿಯೂ ಆಗಿತ್ತು. 30 ವರ್ಷಗಳ ಹಿಂದೆ ಬೇಸಿಗೆಯ ರಜೆಯ ಅವಧಿಯಲ್ಲಿ ಕನಾರಿ ದ್ವೀಪದ ಜೆಲ್ಲಿ ಪಾಮ್ ವೃಕ್ಷಗಳನ್ನು ನೋಡಿದಾಗ ಟಿಮ್​ಗೆ ತಾವೇ ಏಕೆ ಒಂದು ಪಾಮ್ ವೃಕ್ಷಗಳ ಗಾರ್ಡನ್ ಮಾಡಬಾರದು ಎನ್ನುವ ಆಲೋಚನೆ ಹೊಳೆದಿತ್ತು.

image


ಟಿಮ್ ವೆಲ್ಮೋಟ್​​ರ ಮಗ ಮ್ಯಾಕ್ಸ್ ಹಾಗೂ ಮಗಳು ಟೋಬಿ ಚಿಕ್ಕ ವಯಸ್ಸಿನವರಾಗಿದ್ದಾಗಲೇ ಅವರು ಈಗಿರುವ ಯೇಟ್​​ಗೆ ವಲಸೆ ಬಂದರು. ಅಲ್ಲಿಂದ ಶುರುವಾದ ಕಾಡಿನ ತೋಟಗಾರಿಕೆ ಇನ್ನೂ ನಡೆಯುತ್ತಲೇ ಇದೆ. ಅವರ ಮಗ ಮ್ಯಾಕ್ಸ್​​ಗೆ ಈಗ 21 ವರ್ಷ ಹಾಗೂ ಮಗಳು ಟೋಬಿಗೆ 25 ವರ್ಷ. ಮಗ ಹಾಗೂ ಮಗಳು ಕಾಡಿನ ಪಾಮ್ ವೃಕ್ಷಗಳ ಜೊತೆಯಲ್ಲಿಯೇ ಬೆಳವಣಿಗೆ ಹೊಂದಿದ್ದಾರೆ ಅನ್ನುವುದು ಟಿಮ್​​ ತಾರ್ಕಿಕ ಮಾತು.

ಟಿಮ್​​ಗೆ ಸಸ್ಯ ಪಾಲನೆ ಅಚ್ಚುಮೆಚ್ಚಿನ ಹವ್ಯಾಸ. ಅವರು ತಮ್ಮ ಮನೆಯ ಒಳಾಂಗಣದಲ್ಲಿಯೂ ಚೆಂದದ ಉದ್ಯಾನವನವನ್ನು ನಿರ್ಮಿಸಿಕೊಂಡಿದ್ದಾರೆ. ಕಳೆದ 25 ವರ್ಷಗಳಿಂದ ವಿವಿಧ ಬಗೆಯ ಗಿಡ ಮರಗಳನ್ನು ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ. 1988ರಲ್ಲಿ ಕಟ್ಟಿಸಲಾದ ಮನೆಯ ಹಿಂಭಾಗದಲ್ಲಿ ಕೈತೋಟದ ಬದಲು ಸಣ್ಣ ಪ್ರಮಾಣದ ಸಮೃದ್ಧ ಕಾಡು ಬೆಳೆದು ನಿಂತಿದೆ. ಈ ಮಿನಿ ಅರಣ್ಯಕ್ಕಾಗಿ ಇಲ್ಲಿಯವರೆಗೆ ಅವರು ಸಾವಿರಾರು ಡಾಲರ್ ಖರ್ಚು ಮಾಡಿದ್ದಾರೆ.

ಟಿಮ್​​ರ ಖಾಸಗಿ ಅರಣ್ಯದಲ್ಲಿದ್ದಾರೆ ಬಗೆಬಗೆಯ ಸಸ್ಯ ಶ್ಯಾಮಲೆಯರು

ಟಿಮ್​​ರ ವನ ಸ್ವರ್ಗದಲ್ಲಿ ಹಲವು ಪ್ರಭೇದದ ಗಿಡಗಂಟಿಗಳಿವೆ. ವಿವಿಧ ಜಾತಿಯ ಭೂತಾಳೆ ಸಸ್ಯಗಳು, ಬಣ್ಣ ಬಣ್ಣದ ಹೂಗಿಡಗಳು, ಬಾಳೆಗಿಡಗಳು, ಪಾಮ್ ವೃಕ್ಷಗಳು, ಹುಲುಸಾಗಿ ಬೆಳೆದ ಬಿದಿರು ಮೆಳೆ ಆ ಉದ್ಯಾನ ಕಾಡಿಗೆ ಮೆರುಗು ನೀಡಿದೆ. ವಿಶ್ವದ ಮೂಲೆ ಮೂಲೆಗಳಿಂದ ಆರಿಸಿ ತಂದ ವಿಭಿನ್ನ ಜಾತಿಯ ಜರೀಗಿಡಗಳು ಮತ್ತು ವಿಲಕ್ಷಣ ಸಸ್ಯಗಳು ಟಿಮ್ ತೋಟದ ಸದಸ್ಯರಾಗಿವೆ. ಬೇರೆ ಬೇರೆ ಸ್ಥಳಗಳಿಂದ ಪಾಮ್, ಜರಿ ಗಿಡಗಳು ಹಾಗೂ ವಿವಿಧ ಜಾತಿಯ ಸೀತಾಳೆ ಸಸಿಗಳನ್ನು ಟಿಮ್ ತರಿಸಿ ಬೆಳೆಸಿದ್ದಾರೆ. ಪಾಮ್ ವೃಕ್ಷಗಳಷ್ಟೇ ಎತ್ತರವಿರುವ 15 ಅಡಿಗಳ ಬಾಳೆಗಿಡ, ಪರ್ಪಲ್ ಬಣ್ಣದ ಬೀಜಗಳ ಸೀತಾಳೆ ಸಸ್ಯ, ಚೀನಾ ಮೂಲದ ಆಕರ್ಷಣೀಯ ಝರಿ ಗಿಡಗಳು ಇವರ ಮಿನಿ ಅಭಯಾರಣ್ಯಕ್ಕೆ ಮೆರುಗು ನೀಡಿವೆ.

image


ಅಲ್ಲಿ ಕೇವಲ ಪಾಮ್, ಸೀತಾಳೆ ಹಾಗೂ ಝರಿ ಸಂಕುಲದ ಸಸ್ಯಕಾಶಿ ಮಾತ್ರವಿಲ್ಲ. ಅಲ್ಲೊಂದು ಚಿಕ್ಕ 5 ಅಡಿ ಹಕ್ಕಿಗಳ ಪ್ಯಾರಡೈಸ್ ಸಹ ಇದೆ. ಪುಟಾಣಿ ಗೂಡಿನಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡಿರುವ ಪಕ್ಷಿಗಳು ಆ ಮಿನಿ ಕಾಡಿಗೆ ಶೋಭೆ ಒದಗಿಸಿದೆ. ಜಂಗಲ್ ಗಾರ್ಡನ್ ಮಧ್ಯೆಯೇ ನಿರಂತರವಾಗಿ ಹರಿಯುವ ಸಣ್ಣ ಹಾಗೂ ಕೃತಕ ಸರೋವರವೂ ಇದೆ. ಇಲ್ಲಿನ ಹಚ್ಚ ಹಸುರಿನ ಹುಲ್ಲುಹಾಸು, ವಿವಿಧ ಬಣ್ಣದ ಪುಷ್ಪಗಳ ತೋರಣ, ಓರಣವಾದ ವಾಕಿಂಗ್ ಪಾಥ್ ನಿರ್ಮಲವಾದ ನೆಮ್ಮದಿ ನೀಡುತ್ತದೆ ಅನ್ನುವುದು ಟಿಮ್​​ರ ಅಭಿಮತ. ಟಿಮ್​​ ಹುಲುಸಾದ ಕಾಡಿನಲ್ಲಿ ವಿಶಾಲವಾಗಿ ಬಿದಿರು ಮೆಳೆಗಳನ್ನು ಬೆಳೆಸಲಾಗಿದೆ. ಇಲ್ಲಿನ ಜೆಲ್ಲಿ ಪಾಮ್ ವೃಕ್ಷಗಳ ಸಸಿಯನ್ನು, ಎಡಿಬಲ್ ಅಲ್ಲದ ಬಾಳೆಹಣ್ಣಿನ ವೃಕ್ಷದ ಸಸಿಗಳನ್ನು, ಯುಕಾಸ್, ಝರಿ, ಗುನ್ನೇರಾಸ್, ರೈಸ್ ಪೆಪ್ಪರ್ಜಾತಿಯ ಸಸ್ಯಗಳನ್ನು ದಕ್ಷಿಣ ಅಮೇರಿಕಾದಿಂದ ತಂದು ನೆಡಲಾಗಿದೆ.

ಅವರ ಶ್ರದ್ಧೆ ಹಾಗೂ ಪ್ರೀತಿಗೆ ಅಂತ್ಯವೇ ಇಲ್ಲ

ಆಳುಗಳನ್ನು ಬಿಟ್ಟು ಕೆಲಸ ಮಾಡಿಸಿದರೆ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸವಾಗುವುದಿಲ್ಲ. ಜೊತೆಗೆ ಅವರು ಶ್ರದ್ಧೆ ಹಾಗೂ ಪ್ರೀತಿಯಿಂದ ಕೆಲಸ ಮಾಡುವುದಿಲ್ಲ ಅನ್ನುವ ಟಿಮ್ ಸ್ವತಃ ನಿಂತು ಪ್ರತಿ ನಿತ್ಯ ಒಂದು ಗಂಟೆ ಎಲ್ಲಾ ಗಿಡ-ಮರಗಳ ಆರೈಕೆ ಮಾಡುತ್ತಾರೆ. ಮೈ ಕೊರೆವ ಚಳಿಗಾಲವಿರಲಿ, ಸುರಿವ ಮಳೆಯಿರಲಿ ಅಥವಾ ಸುಡುವ ಬಿಸಿಲಿರಲಿ ಟಿಮ್ ಎಂದೂ ಈ ಅಭ್ಯಾಸ ತಪ್ಪಿಸುವುದಿಲ್ಲ.

ಅರಸಿಕೊಂಡು ಬಂದ ಪರಿಸರ ಪ್ರಶಸ್ತಿ-ಪುರಸ್ಕಾರ

ಈ ಸಸ್ಯ ಸಾಮ್ರಾಜ್ಯದ ಉಸ್ತುವಾರಿಗೆ ವರ್ಷವೊಂದಕ್ಕೆ ಟಿಮ್ 10 ಸಾವಿರ ಬ್ರಿಟೀಶ್ ಪೌಂಡ್ ಖರ್ಚು ಮಾಡುತ್ತಾರೆ. ಪ್ರತಿಯೊಂದು ಗಿಡವನ್ನು ರೋಗಗಳು ಬಾರದಂತೆ ಖುದ್ದಾಗಿ ಪರೀಕ್ಷಿಸಿ ಆರೈಕೆ ಮಾಡುತ್ತಾರೆ. ಈ ಮಿನಿ ಜಂಗಲ್​​ಗೆ ಅಲ್ಲಿನ ಪರಿಸರಪ್ರೇಮಿಗಳು ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸುತ್ತಾರೆ. ಜೊತೆಗೆ ಟಿಮ್​ಗೆ ಬ್ರಿಸ್ಟಲ್​​ ಆಡಳಿತದ ಪರಿಸರ ಪ್ರಶಸ್ತಿ ಸಹ ಲಭಿಸಿದೆ. ವೆಲ್ಮೋಟ್​​ರ ನಿಸ್ವಾರ್ಥ ಅರಣ್ಯಪಾಲನೆಗೆ ಹಲವು ಆಂಗ್ಲ ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಬ್ರಿಟಿಶ್ ಮಾಧ್ಯಮ ಬಿಬಿಸಿ ಸಹ ಟಿಮ್ ವೆಲ್ಮೋಟ್​​ರ ವನ್ಯ ಪ್ರೀತಿಗೆ ಮುಕ್ತ ಕಂಠದಿಂದ ಶ್ಲಾಘನೆ ವ್ಯೆಕ್ತಪಡಿಸಿ ಡಾಕ್ಯುಮೆಂಟರಿ ಮಾಡಿದೆ. ಹಲವು ಪರಿಸರ ಪ್ರಶಸ್ತಿಗಳು ಟಿಮ್​​ರನ್ನು ಅರಸಿಕೊಂಡು ಬಂದಿವೆ. ಆದ್ರೆ ಇದ್ಯಾವುದರ ಅಪೇಕ್ಷೆ ಇಲ್ಲದೆ ಟಿಮ್ ನಿರಪೇಕ್ಷಿತರಾಗಿ ಸಸ್ಯ ಪ್ರಪಂಚದಲ್ಲಿ ಮಗ್ನನಾಗಿದ್ದಾರೆ.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags