ರೈತರು, ಮನರೇಗಾ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿರುವ ತಮಿಳುನಾಡಿನ ಇಂಜಿನೀಯರ್‌ಗಳು

ಹಳ್ಳಿಯ ಬಯಲು ಪ್ರದೇಶವನ್ನೆ ತರಗತಿ ಮಾಡಿಕೊಂಡಿರುವ ಈ ನಾಲ್ಕು ಇಂಜಿನೀಯರ್‌ಗಳು ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ಪಾಠ ಮಾಡುತ್ತಾರೆ.

ರೈತರು, ಮನರೇಗಾ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿರುವ ತಮಿಳುನಾಡಿನ ಇಂಜಿನೀಯರ್‌ಗಳು

Friday September 25, 2020,

2 min Read

ತಮಿಳುನಾಡಿನ ಅರವಿಂದ್‌, ವಿಘ್ನೇಶ್‌, ಭವಾನಿಶಂಕರ ಮತ್ತು ಸರಥಾಸ್‌ ಎಂಬ 4 ಜನ ಇಂಜನೀಯರಗಳು ಸಾಂಕ್ರಾಮಿಕದ ನಡುವೆ ಶಿಕ್ಷಕರಾಗಿ, ರೈತರ ಮಕ್ಕಳಿಗೆ ಲಾಕ್‌ಡೌನ್‌ ಸಮಯದಲ್ಲಿ ಪಾಠ ಮಾಡುತ್ತಿದ್ದಾರೆ.


1,500 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ತಮಿಳುನಾಡಿನ ಪುಡುಕೋಟೈನಲ್ಲಿರುವ ಥೊಂಡೈಮಾನ್ ಹಳ್ಳಿಯಲ್ಲಿ ಡಿಜಿಟಲ್ ಸಮಸ್ಯೆಯನ್ನು ನಿವಾರಿಸಲು ಈ ನಾಲ್ಕು ಎಂಜಿನಿಯರ್‌ಗಳು ಶ್ರಮಿಸುತ್ತಿದ್ದಾರೆ. ಈ ಊರಿನಲ್ಲಿ ಹೆಚ್ಚಿನವರು ಕೃಷಿ ಕಾರ್ಮಿಕರು ಅಥವಾ ಮನರೇಗಾ ಕಾರ್ಮಿಕರಾಗಿದ್ದಾರೆ, ಇವರ ಬಳಿ ಸ್ಮಾರ್ಟ್‌ಫೋನ್ಗಳಿಲ್ಲ. ಇಲ್ಲಿ ಆನ್‌ಲೈನ್‌ ಶಿಕ್ಷಣ ಸುಲಭವಲ್ಲ.


ಈ ಕಾರಣದಿಂದ ನಾಗರಿಕ ಸೇವೆಗಳ ಮಹಾತ್ವಾಕಾಂಕ್ಷಿಗಳಾದ ಇಂಜಿನೀಯರಗಳು ಒಂದು ವೇಳಾಪಟ್ಟಿ ತಯಾರಿಸಿ ಮನೆಯ ಮುಂದಿನ ಬಯಲು ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶುರುಮಾಡಿದರು. ಬೆಳಿಗ್ಗೆ 10 ರಿಂದ 2 ರ ವರೆಗೆ 10 ನೇ ತರಗತಿ ಓದುತ್ತಿರುವ 12 ವಿದ್ಯಾರ್ಥಿಗಳಿಗೆ ಪಾಠವಾದರೆ, ಮಧ್ಯಾಹ್ನ 2 ರಿಂದ 6 ರವರೆಗೆ 6 ರಿಂದ 9 ನೇ ತರಗತಿ ಓದುತ್ತಿರುವ 28 ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ.


ಶಾಲೆಗಳು ಪುಸ್ತಕ ವಿತರಿಸಿದ ಮೇಲೆ ಜುಲೈನಲ್ಲಿ ಇವರು ಪಾಠ ಹೇಳಲು ಶುರು ಮಾಡಿದ್ದಾರೆ.


ಹಳ್ಳಿಯ ಬಯಲು ಪ್ರದೇಶವನ್ನೆ ಕಪ್ಪು ಹಲಗೆ ಇಟ್ಟು ತರಗತಿ ಮಾಡಿಕೊಂಡಿದ್ದಾರೆ. ಇವರು ಮುಖ್ಯವಾಗಿ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ನೀಡುತ್ತಿದ್ದು, ವಾರಕ್ಕೊಮ್ಮೆ ಭಾನುವಾರ ಈ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳುತ್ತಾರೆ.

ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌


“ಟಿಎನ್‌ಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ನಮಗೆ ಸೀನಿಯರ್‌ಗಳು ಸಹಾಯ ಮಾಡಿದ್ದರು. ಇದು ನಮ್ಮ ಹಳ್ಳಿಯ ಮಕ್ಕಳಿಗೆ ಪಾಠ ಹೇಳುವಂತೆ ಮಾಡಿತು,” ಎಂದು ಅರವಿಂದ್‌ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


“ಸಮಾಜಕ್ಕೆ ಏನಾದರೂ ಸಹಾಯ ಮಾಡಿದಂತೆ ಇದು. 6 ರಿಂದ 10 ನೇ ತರಗತಿಯ ವರೆಗಿನ ಪಠ್ಯಕ್ರಮ ಟಿಎನ್‌ಪಿಎಸ್‌ಸಿ ಗ್ರೂಪ್‌-1 ಪರೀಕ್ಷೆಗೆ ತುಂಬಾ ಮುಖ್ಯ,” ಎನ್ನುತ್ತಾರೆ ಮೆಕ್ಯಾನಿಕಲ್‌ ಇಂಜಿನೀಯರ್‌ ವಿಘ್ನೇಶ್‌.


ಹಳ್ಳಿಗರು ಇವರ ಈ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.

“ನನ್ನ ಇಬ್ಬರು ಹೆಣ್ಣುಮಕ್ಕಳು ಪ್ರತಿದಿನ ತರಗತಿಗೆ ಹೋಗುತ್ತಾರೆ. ಮೊದಮೊದಲು ಅವರಿಗೆ ಆನ್‌ಲೈನ್‌ ತರಗತಿಯ ಸೌಲಭ್ಯವಿರಲಿಲ್ಲವೆಂದು ನನಗೆ ಭಯವಾಗಿತ್ತು. ಈ ಯುವಕರು ದೇವರಂತೆ ಬಂದಿದ್ದಾರೆ,” ಎಂದು ಹಳ್ಳಿಯ ನಿವಾಸಿಯಾದ ಸೌಂದರವಳ್ಳಿ ದಿ ಲಾಜಿಕಲ್‌ ಇಂಡಿಯನ್‌ ಗೆ ಹೇಳಿದರು.