ನಮ್ಮ ಬೆಂಗಳೂರನ್ನು ವಾಯು ಮಾಲಿನ್ಯದಿಂದ ರಕ್ಷಿಸುತ್ತಿರುವ ನಮ್ಮ ಆಟೋ ಪ್ರೊಜೆಕ್ಟ್

ಆಟೋ ಡ್ರೈವರ್‌ಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿಲು ಸಾಲ ನೀಡುವ ಮೂಲಕ ನಮ್ಮ ಆಟೋ ಪ್ರೊಜೆಕ್ಟ್ ನಗರ ಸ್ಥಳಗಳಲ್ಲಿ ಸುಸ್ಥಿರ ಕೊನೆಯ ಮೈಲಿ ಸಂಪರ್ಕವನ್ನು ಉತ್ತೇಜಿಸುತ್ತಿದೆ.

ನಮ್ಮ ಬೆಂಗಳೂರನ್ನು ವಾಯು ಮಾಲಿನ್ಯದಿಂದ ರಕ್ಷಿಸುತ್ತಿರುವ ನಮ್ಮ ಆಟೋ ಪ್ರೊಜೆಕ್ಟ್

Wednesday February 19, 2020,

4 min Read

ವಾಸುದೇವ ಕೆ ಕಳೆದ 53 ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದಾರೆ. ಅವರು ತಮ್ಮ ದಿನದ ಬಹುತೇಕ ಸಮಯವನ್ನು ಕಿಕ್ಕಿರಿದ ಬೀದಿಗಳು ಮತ್ತು ಟ್ರಾಫಿಕ್‌ಜಾಮ್‌ಗಳಲ್ಲಿಯೇ ಕಳೆಯುತ್ತಾರೆ. ವಾಸುದೇವ ಅವರನ್ನು ಇತರರಿಂದ ಭಿನ್ನವಾಗಿ ನಿಲ್ಲಿಸುವ ಅಂಶವೆಂದರೆ, ಅವರ ವಾಹನವು ಇತರ ವಾಹನಗಳಂತೆ ಹೊಗೆಯನ್ನು ಬಿಡುವುದಿಲ್ಲ. 53ರ ವರ್ಷದ ವಾಸುದೇವ ತಮ್ಮ ಆಟೋವನ್ನು ಎಲೆಕ್ಟ್ರಿಕ್ ಕಿಟ್‌ನೊಂದಿಗೆ ಮರುಜೋಡಿಸಿ ಸುಧಾರಣೆಮಾಡಿದ ನಗರದ ಮೊದಲ ಚಾಲಕರಲ್ಲಿ ಒಬ್ಬರಾಗಿದ್ದಾರೆ.


ಇದೆಲ್ಲ ಸಾಧ್ಯವಾಗಿದ್ದು ಫೋಂಡಾಜಿಯೋನ್ ಎಸಿಆರ್‌ಎ, ಎನ್‌ವಿಐಯು ಫೌಂಡೇಶನ್, ದಿ ಎನರ್ಜಿ ಆ್ಯಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ (ಟೆರಿ), ಮತ್ತು ಮಹಿಳಾ ಆರೋಗ್ಯ ಮತ್ತು ಅಭಿವೃದ್ಧಿ (ಡಬ್ಲ್ಯುಎಚ್‌ಎಡಿ) ನಂತಹ ಸಂಸ್ಥೆಗಳ ಒಕ್ಕೂಟದ ನಮ್ಮ ಆಟೋ ಪ್ರಾಜೆಕ್ಟ್‌ನಿಂದ. ಸ್ವಿಚ್ ಏಷ್ಯಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮತ್ತು ಯುರೋಪಿಯನ್ ಒಕ್ಕೂಟದಿಂದ ಧನಸಹಾಯ ಪಡೆದ ಈ ಕಾರ್ಯಕ್ರಮವು ಪರಿಸರ ಸ್ನೇಹಿ ವಿದ್ಯುತ್ ರಿಕ್ಷಾಗಳನ್ನು ಸಾಮೂಹಿಕ ಸಾಗಣೆಯಲ್ಲಿ ಸಂಯೋಜಿಸುವ ಮತ್ತು ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.


ನಮ್ಮ ಆಟೋ ಪ್ರಾಜೆಕ್ಟ್‌ನ ತಂಡ


2015 ರಲ್ಲಿ ಪ್ರಾರಂಭವಾದ ಈ ಯೋಜನೆಯನ್ನು ಪ್ರಸ್ತುತ ಬೆಂಗಳೂರು ಮತ್ತು ಚೆನ್ನೈನಲ್ಲಿ ರಿಕ್ಷಾ ಚಾಲಕರು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಲು ಸಹಾಯ ಮಾಡುತ್ತಿದೆ. ಅದರ 40 ಸದಸ್ಯರ ತಂಡವು ಈ ಬದಲಾವಣೆಯನ್ನು ತರಲು ನಾಲ್ಕು ಪಟ್ಟಿನ ತಂತ್ರವನ್ನು ಅನುಸರಿಸುತ್ತಿದೆ.


ಯುವರ್ ಸ್ಟೋರಿಯೊಂದಿಗೆ ಮಾತನಾಡಿದ ನಮ್ಮ ಆಟೋ ಪ್ರೊಜೆಕ್ಟ್ ನ ಮುಖ್ಯಸ್ಥ ಮಂಜು ಮೆನನ್,


"ಆಟೋ-ರಿಕ್ಷಾಗಳು ನಗರ ಪ್ರದೇಶಗಳಲ್ಲಿ ಕನಿಷ್ಠ 10 ಪ್ರತಿಶತದಷ್ಟು ರಸ್ತೆಗಳಲ್ಲಿ ಓಡಾಡುತ್ತವೆ. ಅವುಗಳು ಹೊರಹಾಕುವ ಹೊಗೆಯು ವಾಯು ಮಾಲಿನ್ಯದ ಬಹುಪಾಲಿಗೆ ಕಾರಣವಾಗುತ್ತಿದೆ. ಆದ್ದರಿಂದ, ಆಟೋ ಚಾಲಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ತೆಗೆದುಕೊಳ್ಳಲು ಸಾಲವನ್ನು ಒದಗಿಸುವುದರ ಮೂಲಕ, ಜಾಗೃತಿ ಮೂಡಿಸುವುದರ ಜೊತೆಗೆ ಸಾರ್ವಜನಿಕರಿಗೆ ವರ್ತನೆಯ ಬದಲಾವಣೆಯ ಘಟನೆಗಳನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ಈ ವಲಯದಲ್ಲಿನ ನೀತಿ-ಮಟ್ಟದ ಅಂತರವನ್ನು ಸರಿದೂಗಿಸುವ ಮೂಲಕ ನಾವು ಇದಕ್ಕೆ ಕೊನೆಯ ಮೈಲಿ ಪರ್ಯಾಯವನ್ನು ನೀಡುತ್ತಿದ್ದೇವೆ,” ಎಂದರು.


ಕಳೆದ ನಾಲ್ಕು ವರ್ಷಗಳಲ್ಲಿ ಕಡಿಮೆ ಬಡ್ಡಿ ಸಾಲಕ್ಕೆ ಅನುಕೂಲವಾಗುವ ಮೂಲಕ ಪರಿಸರ ಸ್ನೇಹಿ ರಿಕ್ಷಾಗಳನ್ನು ಖರೀದಿಸಲು ಈ ಯೋಜನೆಯು 30,000 ಕ್ಕೂ ಹೆಚ್ಚು ಆಟೋ ಚಾಲಕರನ್ನು ತಲುಪಲು ಸಾಧ್ಯವಾಗಿದೆ. ಇದು ಅವರಲ್ಲಿ ಸುಮಾರು 1,100 ಜನರನ್ನು ವಿವಿಧ ವಿಮಾ ಯೋಜನೆಗಳಿಗೆ ದಾಖಲಿಸಿದೆ.


ನಮ್ಮ ಆಟೋ ಪ್ರೊಜೆಕ್ಟ್ ಇದುವರೆಗೆ ಸಾವಿರಾರು ಆಟೋ ಚಾಲಕರನ್ನು ತಲುಪಿದೆ.


ಪ್ರಾರಂಭದ ಹಂತ

ನಮ್ಮ ಆಟೋ ಪ್ರೊಜೆಕ್ಟ್ ನೆದರ್‌ಲ್ಯಾಂಡ್ ಮೂಲದ ಎನ್ವಿಯು ಎಂಬ ಸಾಮಾಜಿಕ ಉದ್ಯಮದಿಂದ ಹೊರಹೊಮ್ಮಿತು.


ಸ್ವತಂತ್ರ ಘಟಕವಾದ ಎನ್ವಿಯು ನ ಎಲ್ಲಾ ಪ್ರಯತ್ನಗಳು ಸಾಮಾಜಿಕ ಅಥವಾ ಪರಿಸರ ಕ್ಷೇತ್ರದ ಮೇಲೆ ಪ್ರಭಾವವನ್ನು ಉಂಟುಮಾಡುವ ಸಂಸ್ಥೆಗಳನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕೃತವಾಗಿವೆ. ತ್ರೀ ವೀಲ್ಸ್ ಯುನೈಟೆಡ್ ಅವುಗಳಲ್ಲಿ ಒಂದು. 2014 ರಲ್ಲಿ ಸ್ಥಾಪನೆಯಾದ ಈ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಆಟೋ-ರಿಕ್ಷಾಗಳಿಗೆ ಹಣಕಾಸು ಒದಗಿಸುವ ಮಾದರಿಯನ್ನು ಅಭಿವೃದ್ಧಿಪಡಿಸಿತು. ಇದಕ್ಕೆ ಬಹು ಪಾಲುದಾರರಿಂದ ಒಂದು ಪ್ರಯತ್ನ ಬೇಕು ಎಂದು ಅರಿತುಕೊಂಡರು. ಎನ್ವಿಯುನ ತ್ರೀ ವೀಲ್ಸ್ ಯುನೈಟೆಡ್ ಡಬ್ಲ್ಯೂಎಚ್‌ಎಡಿ, ಎಸಿಆರ್‌ಎ, ಮತ್ತು ಟಿಇಆರ್‌ಐ ನಂತಹ ಸಂಸ್ಥೆಗಳನ್ನು ಸೇರಲು ಮತ್ತು ಒಕ್ಕೂಟವನ್ನು ರಚಿಸಲು ಸಂಪರ್ಕಿಸಿದ ಪರಿಣಾಮವಾಗಿ ನಮ್ಮ ಆಟೋ ಪ್ರೊಜೆಕ್ಟ್ ರೂಪುಗೊಂಡಿತು.


“ತ್ರೀ ವೀಲ್ಸ್ ಯುನೈಟೆಡ್‌ನ ಧ್ಯೇಯವನ್ನು ಬಲಪಡಿಸಲು ನಮ್ಮ ಆಟೋ ಪ್ರೊಜೆಕ್ಟ್ ಅನ್ನು ಪ್ರಾರಂಭಿಸಲಾಯಿತು, ಇದು ಡ್ರೈವರ್‌ಗಳಿಗೆ ಮಾಲಿನ್ಯವನ್ನುಂಟು ಮಾಡದ ಆಟೋ ರಿಕ್ಷಾಗಳಿಗೆ ಬದಲಾಯಿಸಲು ಸಹಾಯ ಮಾಡುತ್ತದೆ. ನಾವೆಲ್ಲರೂ ಈಗ ಮುಂದಿನ ಹಂತಕ್ಕೆ ಸಜ್ಜಾಗಿದ್ದೇವೆ,” ಎಂದು ತ್ರೀ ವೀಲ್ಸ್ ಯುನೈಟೆಡ್‌ನ ಸಿಇಒ ಮತ್ತು ಎನ್ವಿಯು ಪ್ರತಿನಿಧಿ ಸೆಡ್ರಿಕ್ ಟಂಡೊಂಗ್ ನೆಬಾ ಹೇಳುತ್ತಾರೆ.


ಒಟ್ಟಾರೆ ಧ್ಯೇಯವಾಕ್ಯವು ಜವಾಬ್ದಾರಿಯುತ ಉತ್ಪಾದನೆ ಮತ್ತು ಬಳಕೆಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) 12 ಗೆ ಅನುಗುಣವಾಗಿದೆ ಎಂದು ಕಂಡುಬಂದ ಕಾರಣ, ಇಯು ತನ್ನ ಸ್ವಿಚ್ ಏಷ್ಯಾ ಕಾರ್ಯಕ್ರಮದ ಭಾಗವಾಗಿ ಮಿಲಿಯನ್ ಯುರೋಗಳನ್ನು ಅನುದಾನದ ರೂಪದಲ್ಲಿ ತನ್ನ ಬೆಂಬಲವನ್ನು ವಿಸ್ತರಿಸಿತು.


ಎಲೆಕ್ಟ್ರಿಕ್ ರಿಕ್ಷಾಗಳು ಸುಗಮ ಪರಿವರ್ತನೆ ಸಾಧ್ಯವಾಗಿಸುತ್ತವೆ

ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದರ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಆಟೋ ಡ್ರೈವರ್‌ಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳೊಂದಿಗೆ ನಮ್ಮ ಆಟೋ ಪ್ರೊಜೆಕ್ಟ್ ಪ್ರಾರಂಭವಾಯಿತು.


"ನಾವು ಇದರ ಭಾಗವಾಗಿ ಸಾವಿರಾರು ಚಾಲಕರೊಂದಿಗೆ ಮಾತನಾಡಿದ್ದೇವೆ ಮತ್ತು ಅವರಲ್ಲಿ ಹೆಚ್ಚಿನವರು ಎಲೆಕ್ಟ್ರಿಕ್ ಆಟೋಗಳಿಗೆ ಬದಲಾವಣೆ ಹೊಂದಲು ಸಿದ್ಧರಾಗಿದ್ದಾರೆಂದು ಅರಿತುಕೊಂಡಿದ್ದೇವೆ. ಆದರೆ ಅಗತ್ಯವಾದ ಹಣಕಾಸು ಅಥವಾ ಬಂಡವಾಳ ಅವರಲ್ಲಿಲ್ಲ. ಆದ್ದರಿಂದ, ಈ ಎಲ್ಲ ಚಾಲಕರನ್ನು ಗುರುತಿಸಿ ವಿದ್ಯುತ್ ಆಟೋಗಳಿಗೆ ಪರಿವರ್ತಿಸಲು ಸಾಲ ಪಡೆಯುವುದನ್ನು ಸುಲಭಗೊಳಿಸಲು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ನಾವು ಪ್ರಾರಂಭಿಸಿದ್ದೇವೆ,” ಎಂದು ಮಂಜು ಹೇಳುತ್ತಾರೆ.


ಈ ಯೋಜನೆಯು ಆಟೋ ಚಾಲಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸಾಲವನ್ನು ಒದಗಿಸುತ್ತದೆ.

ಇಂದು ಕೆಲವು ರಾಷ್ಟ್ರೀಯ ಬ್ಯಾಂಕುಗಳು ಬ್ಯಾಂಕಿಂಗ್ ಸರ್ಕ್ಯೂಟ್ನಿಂದ ಕಡಿತಗೊಳ್ಳುವ ಕಾರಣದಿಂದ ಅಥವಾ ಕಡಿಮೆ ಸಿಬಿಲ್ ರೇಟಿಂಗ್ ಗಳ ಕಾರಣದಿಂದ ಚಾಲಕರಿಗೆ ಸಾಲಗಳನ್ನು ನೀಡಲು ನಿರಾಕರಿಸುತ್ತವೆ. ಆಟೋ ಚಾಲಕರುಗಳು ಪರವಾಗಿ ಕೆನರಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಮತ್ತು ಬ್ಯಾಂಕಿಂಗ್ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿಗಳು) ಮುಂತಾದ ಬ್ಯಾಂಕುಗಳೊಂದಿಗೆ ನಮ್ಮ ಆಟೋ ಪ್ರೊಜೆಕ್ಟ್ ತಂಡವು ಜೊತೆಯಾಗಿ ಸಾಲ ಮರುಪಾವತಿಯ ಖಚಿತತೆಯನ್ನು ಬ್ಯಾಂಕ್‌ಗಳಿಗೆ ನೀಡುತ್ತಿದೆ.


“ಹೆಚ್ಚಿನ ಚಾಲಕ ಸಮುದಾಯಗಳು ಬಡತನದ ಹಿನ್ನೆಲೆಯಿಂದ ಬಂದವರು. ಆದ್ದರಿಂದ ನಾವು ಅವರಿಗೆ ಸಣ್ಣ ಸಾಲ ಮರುಪಾವತಿ ಮಾಡುವ ವೇಳಾಪಟ್ಟಿಗಳನ್ನು ವಿನ್ಯಾಸಗೊಳಿಸಿದ್ದೇವೆ. ಉದಾಹರಣೆಗೆ, ಪ್ರತಿ ತಿಂಗಳ ಕೊನೆಯಲ್ಲಿ 5,000 ರೂ. ಪಾವತಿಸುವ ಬದಲು ಅವರು ಪ್ರತಿ ವಾರ 1,250 ರೂ. ಅಥವಾ ಪ್ರತಿದಿನ 166 ರೂ. ಸಾಲ ಮರುಪಾವತಿ ಮಾಡಬಹುದಾಗಿದೆ. ಇದಲ್ಲದೆ ಈ ಸಾಲಗಳ ಮೇಲಿನ ಬಡ್ಡಿದರಗಳು ಶೇಕಡಾ 18 ರಷ್ಟಿದೆ ಮತ್ತು ಇದನ್ನು ಮತ್ತಷ್ಟು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ,” ಎಂದು ಮಂಜು ಹೇಳುತ್ತಾರೆ.

ಎಲೆಕ್ಟ್ರಿಕ್ ಆಟೋಗಳ ಖರೀದಿ ಮತ್ತು ವಹಿವಾಟಿನಲ್ಲಿ ಒಳಗೊಂಡಿರುವ ಕಾರ್ಯವು ಯೋಜನೆಯ ವ್ಯಾಪ್ತಿಯಲ್ಲಿದೆ. ಮೂಲ ಸಲಕರಣೆಗಳ ತಯಾರಕರಂತಹ (ಒಇಎಂ) ಬಜಾಜ್, ಟಿವಿಎಸ್ ಮತ್ತು ಮಹೀಂದ್ರಾಗಳೊಂದಿಗಿನ ಒಕ್ಕೂಟವು ಈ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ.


ಬೆಂಗಳೂರಿನಲ್ಲಿ ಆಟೋ ಚಾಲಕರ ಕೋ-ಆಪರೇಟಿವ್ ಸೊಸೈಟಿ ನಡೆಸಿದ ಕಾರ್ಯಕ್ರಮ.


ಇವುಗಳಲ್ಲದೆ, ನಮ್ಮ ಆಟೋ ಪ್ರೊಜೆಕ್ಟ್ ಚಾಲಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ನಿರ್ವಹಿಸಲು ತರಬೇತಿ ಶಿಬಿರಗಳನ್ನು ನಡೆಸುವುದು, ಎನ್‌ಜಿಒಗಳು, ಶಿಕ್ಷಣ ತಜ್ಞರು, ಸರ್ಕಾರಿ ಅಧಿಕಾರಿಗಳು, ಆಟೋ ಯೂನಿಯನ್‌ಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಎಲೆಕ್ಟ್ರಿಕ್ ವಾಹನ ಜಾಗದಲ್ಲಿ ನೀತಿ-ಮಟ್ಟದ ಅಂತರವನ್ನು ನಿವಾರಿಸುವ ಮುಂತಾದ ಇತರ ಚಟುವಟಿಕೆಗಳಲ್ಲಿ ತೊಡಗಿದೆ. ಮತ್ತು ನಮ್ಮ ಆಟೋ ಚಾಲಕರ ಸಹಕಾರ ಸೊಸೈಟಿಯಂತಹ ಆಟೋ ಚಾಲಕರ ರಾಜ್ಯಮಟ್ಟದ ಸಹಕಾರ ಸಂಘಗಳನ್ನು ರಚಿಸುತ್ತಿದೆ.


ಸುಸ್ಥಿರ ಕೊನೆಯ ಮೈಲಿ ಸಾರಿಗೆಯನ್ನು ಉತ್ತೇಜಿಸಲು ಯೋಜನೆಯನ್ನು ಮುನ್ನಡೆಸುವ ಒಕ್ಕೂಟವು ಬೆಂಗಳೂರಿನಲ್ಲಿ

ಹೇಲ್ ಮೊಬಿಲಿಟಿ

ಎಂಬ ಇ-ರಿಕ್ಷಾ ರೈಡ್-ಬುಕಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಪ್ರಸ್ತುತ ಅದರ ಪ್ರಾಯೋಗಿಕ ಹಂತದಲ್ಲಿರುವ ಈ ಅಪ್ಲಿಕೇಶನ್ ಮೆಟ್ರೊ ಸೇವೆಗಳನ್ನು ನಿಯಮಿತವಾಗಿ ಬಳಸುವ ಜನರಿಗೆ ಮಾತ್ರ ಸಿಗುತ್ತಿದೆ. ಆಟೋಗಳನ್ನು ಕಾಯ್ದಿರಿಸಲು ಮತ್ತು ಪೂರ್ವ ನಿಗದಿತ ಮಾರ್ಗಗಳು ಮತ್ತು ದರಗಳಿಗೆ ಅನುಗುಣವಾಗಿ ಕಚೇರಿ ಅಥವಾ ನಿವಾಸಗಳನ್ನು ಸಂಪರ್ಕಿಸುವ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ.


ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮಾರ್ಗವನ್ನು ನಿರ್ಮಿಸುವುದು

ನಮ್ಮ ಆಟೋ ಪ್ರೊಜೆಕ್ಟ್ ಇದುವರೆಗೆ 1,500 ಕ್ಕೂ ಹೆಚ್ಚು ಆಟೋ ಡ್ರೈವರ್‌ಗಳಿಗೆ ಬಂಡವಾಳದ ಪಡೆಯಲು ಮತ್ತು ಹಸಿರು ಆಟೋಗಳಿಗೆ ಮಾರ್ಪಾಡುಗೊಳ್ಳಲು ಸಹಾಯ ಮಾಡಿದೆ. ಅವರಲ್ಲಿ ವಾಸುದೇವ ಕೂಡ ಒಬ್ಬರು.


53 ವರ್ಷದ ಆಟೋ ಚಾಲಕ ವಾಸುದೇವ


“ನನ್ನ ಹಳೆಯ ಆಟೋ ಅವಾಗವಾಗ ರಿಪೇರಿ ಬಂದ ನಂತರ ಮತ್ತು ಶುದ್ಧ ಸಾರಿಗೆಯ ಮಹತ್ವವನ್ನು ಅರಿತುಕೊಂಡ ನಂತರ, ಸುಮಾರು ಎರಡು ವರ್ಷಗಳ ಹಿಂದೆ ನನ್ನ ವಾಹನವನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು ನಿರ್ಧರಿಸಿದೆ. ನಮ್ಮ ಆಟೋ ಪ್ರೊಜೆಕ್ಟ್ ಮೂಲಕ 1.5 ಲಕ್ಷ ರೂಪಾಯಿ ಸಾಲ ಪಡೆದ ನಂತರವೇ ನನಗೆ ಇದನ್ನು ಮಾಡಲು ಸಾಧ್ಯವಾಯಿತು. ನನ್ನ ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸಿ ಬ್ಯಾಂಕುಗಳು ನನಗೆ ಅಗತ್ಯವಾದ ಬಂಡವಾಳವನ್ನು ನೀಡುತ್ತಿರಲಿಲ್ಲ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ನಮ್ಮ ಆಟೋ ಪ್ರೊಜೆಕ್ಟ್ ಬೆಂಗಳೂರಿಗೆಂದೆ ಮೂರು ವರ್ಷಗಳ ಆಳವಾದ ಅಧ್ಯಯನವನ್ನು ಸಹ ನಡೆಸಿತು ಮತ್ತು ಆಟೋರಿಕ್ಷಾಗಳಲ್ಲಿ ಕಾರ್ಯತಂತ್ರದ ಮತ್ತು ಪರಿಸರ ಸ್ನೇಹಿ ಬದಲಾವಣೆಗಳನ್ನು ಮಾಡುವುದರಿಂದ ಸಂಚಾರ ತೊಂದರೆಗಳನ್ನು ಕಡಿಮೆ ಮಾಡಲು ಮತ್ತು ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಸಮರ್ಥವಾಗಿದೆ ಎಂದು ಕಂಡುಕೊಂಡಿತು.

"ನಗರದ ಎರಡು ಲಕ್ಷ ರಿಕ್ಷಾಗಳನ್ನು ಎಲೆಕ್ಟ್ರಿಕ್ ಆಟೋಗಳಾಗಿ ಪರಿವರ್ತಿಸುವುದರಿಂದ 7.4 ಲಕ್ಷ ಟನ್ ಇಂಗಾಲದ ಡೈಆಕ್ಸೈಡ್ (ಸಿಒ 2) ಹೊರಸೂಸುವಿಕೆಯನ್ನು ತಡೆಯುತ್ತದೆ ಎಂಬುದು ಒಂದು ಪ್ರಮುಖ ಅಂಶವಾಗಿದೆ. ಪರಿಸರದ ಮೇಲೆ ಇದರ ಸಕಾರಾತ್ಮಕ ಪರಿಣಾಮವು ಅಪಾರವಾಗಿರುತ್ತದೆ. ನಿರೂಪಣೆಯನ್ನು ಸುಸ್ಥಿರ ಚಲನಶೀಲತೆಗೆ ಬದಲಾಯಿಸುವ ಮೂಲಕ ಇದನ್ನು ಸಾಧಿಸಲು ನಮ್ಮ ಯೋಜನೆಯು ಉತ್ಸುಕವಾಗಿದೆ,” ಎಂದು ಮಂಜು ಹೇಳುತ್ತಾರೆ.