ಆವೃತ್ತಿಗಳು
Kannada

ಸಮಾಜ ಸೇವಕರಿಗೆ ನಮ್ಮ ಸಲಾಮ್- ಇದು ಥ್ಯಾಂಕ್‍ಶಿಪ್ ಕಹಾನಿ

ಟೀಮ್​ ವೈ.ಎಸ್​​.

YourStory Kannada
28th Oct 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

‘ಸಮಾಜ ಸೇವೆ ಕೃತಜ್ಞತೆಯಿಲ್ಲದ ಕೆಲಸ ಅನ್ನೋದು ಎಲ್ಲರಿಗೂ ಗೊತ್ತೇ ಇ ದೆ. ಜನ ಸಮಾಜ ಸೇವೆಗೆ ಪ್ರೇರಣೆ ಹೊಂದದೇ ಇರಲು ಇದೂ ಒಂದು ಕಾರಣ. ಹೀಗಾಗಿಯೇ ಒಂದು ಕರ್ತವ್ಯವೆಂದು ತಿಳಿದು ಸಮಾಜ ಸೇವೆ ಮಾಡುವ ಮೂಲಕ ಸಾಮಾಜಿಕ ಬದಲಾವಣೆಗೆ ಜನರೇ ಮುಂದಾಗಬೇಕು’ – ಇದು ಅಜಯ್ ಸಾಗರ್ ಅಭಿಪ್ರಾಯ. ಒಳ್ಳೆಯ ಕೆಲಸ ಮಾಡುವಾಗ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಬೇಷರತ್ತಾಗಿ ಮಾಡಬೇಕು. ಅದೇನೇ ಇರಲಿ ಸಹಾಯ ಪಡೆದವರಿಗೆ ನಿಮ್ಮ ಬಗ್ಗೆ ಕೊಂಚ ಕೃತಜ್ಞತಾಭಾವ ಇದ್ದರೆ ಸಾಕು, ಇದು ಜನರನ್ನು ಒಳ್ಳೆಯ ಕೆಲಸ ಮಾಡಲು ಮತ್ತಷ್ಟು ಪ್ರೇರೇಪಣೆ ನೀಡುತ್ತದೆ. ಥ್ಯಾಂಕ್‍ಶಿಪ್ ಕೂಡ ಇದನ್ನೇ ಮಾಡುತ್ತಿದೆ.

image


ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಮಂದಿಯನ್ನು ಗುರುತಿಸಿ, ಅವರ ಬೆನ್ನು ತಟ್ಟಲು ಥ್ಯಾಂಕ್‍ಶಿಪ್ ಸಾಮಾಜಿಕ ವೇದಿಕೆ ಕಲ್ಪಿಸಿಕೊಟ್ಟಿದೆ. ಒಬ್ಬರ ಜೀವನದಲ್ಲಿ ಒಳ್ಳೆಯ ಬದಲಾವಣೆ ತರುವ ವ್ಯಕ್ತಿಯನ್ನು ಪ್ರಶಂಸಿಸುವುದು ಹಾಗೂ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರೇಪಿಸುವುದೇ ಥ್ಯಾಂಕ್‍ಶಿಪ್ ಧ್ಯೇಯ. ಲಲಿತ್ ಸಾಗರ್ ಹಾಗೂ ಅಜಯ್ ಸಾಗರ್ ಸಹೋದರರು, ಥ್ಯಾಂಕ್‍ಶಿಪ್ ಸಂಸ್ಥಾಪಕರು. 25ರ ಡಿಸೆಂಬರ್ 2014ರಲ್ಲಿ ಥ್ಯಾಂಕ್‍ಶಿಪ್ ಪ್ರಾರಂಭವಾಗಿದ್ದು, ಸದ್ಯಕ್ಕೆ ಕೇವಲ 150+ ಬಳಕೆದಾರರೊಂದಿಗೆ ಕಣ್ತೆರೆಯುವ ಹಂತದಲ್ಲಿದೆ.

‘ಥ್ಯಾಂಕ್‍ಶಿಪ್‍ನಲ್ಲಿ ಆನ್‍ಲೈನ್ ಮೂಲಕ ಒಬ್ಬರು ಮತ್ತೊಬ್ಬರಿಗೆ ಧನ್ಯವಾದ ತಿಳಿಸಬಹುದು, ಪ್ರಶಂಸನಾ ಪತ್ರ ಕಳುಹಿಸಬಹುದು ಹಾಗೂ ಒಳ್ಳೆಯ ಕೆಲಸ ಮಾಡಿದವರಿಗೆ ಪ್ರಶಂಸಿಸಬಹುದು.’ ಅಂತಾರೆ ಈ ಸಾಗರ್ ಸಹೋದರರು.

ನೀವು ಮಾಡಿರುವ ಎಲ್ಲಾ ಸಾಮಾಜಿಕ ಹಾಗೂ ಮಾನವೀಯ ಕೆಲಸಗಳನ್ನು ಪಟ್ಟಿ ಮಾಡಿ, ಅದರ ಸಹಾಯದಿಂದ ಥ್ಯಾಂಕ್‍ಶಿಪ್ ತಾಣದಲ್ಲಿ ನಿಮ್ಮ ಸಂಕ್ಷಿಪ್ತ ವ್ಯಕ್ತಿಚಿತ್ರ ನಿರ್ಮಿಸುತ್ತದೆ. ಫೇಸ್‍ಬುಕ್ ವಯಕ್ತಿಕ ಮತ್ತು ಸಾಮಾಜಿಕ ಜೀವನ, ಎರಡೂ ಕಡೆಗಳಲ್ಲಿ ಗಮನ ಹರಿಸುವ ಕಾರಣ ಥ್ಯಾಂಕ್‍ಶಿಪ್ ಅದಕ್ಕಿಂತ ವಿಭಿನ್ನವಾಗಿದೆ. ಮತ್ತೊಂದೆಡೆ ಲಿಂಕೆಡ್‍ಇನ್, ಒಬ್ಬ ವ್ಯಕ್ತಿಯ ಶೈಕ್ಷಣಿಕ ಮಾಹಿತಿಯನ್ನಷ್ಟೇ ತಿಳಿಸುತ್ತದೆ. ಆದ್ರೆ ಥ್ಯಾಂಕ್‍ಶಿಪ್‍ನಲ್ಲಿ ಒಬ್ಬ ವ್ಯಕ್ತಿಗೆ ದೊರಕಿದ ಎಲ್ಲಾ ಅಭಿನಂದನಾ ಮತ್ತು ಪ್ರಶಂಸಾಪತ್ರಗಳು, ಮನ್ನಣೆಗಳು ಹಾಗೂ ಶಿಫಾರಸ್ಸುಗಳು ಎಲ್ಲವನ್ನೂ ನೋಡಬಹುದು. ಹೀಗೆ ಪ್ರಶಸ್ತಿಗಳು ಮತ್ತು ಪ್ರಶಂಸೆಗಳಿಂದ ತುಂಬಿರುವ ಒಬ್ಬರ ಥ್ಯಾಂಕ್‍ಶಿಪ್ ಪ್ರೊಫೈಲ್‍ಅನ್ನು ನೋಡಿ, ಮತ್ತೊಬ್ಬರು ಕೂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಲು ಪ್ರೇರೇಪಣೆ ಪಡೆಯುತ್ತಾರೆ. ‘ನೀವೇನಾದರೂ ತುಂಬಾ ಬೇಜಾರಲ್ಲಿದ್ದಾಗ, ವಿಶ್ವಾಸ ಕುಂದಿದ ಸಮಯದಲ್ಲಿ ನಿಮ್ಮ ಪ್ರೊಫೈಲ್‍ಅನ್ನು ನೀವೇ ನೋಡಿಕೊಳ್ಳಬಹುದು. ಆಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಾಗೇ ಇದನ್ನು ನಿಮ್ಮ ಗೆಳೆಯರ ನಡುವೆ ಹಾಗೂ ಪರಿಚಯದವರಿಗೆ ಶೇರ್ ಮಾಡಬಹುದು’ ಅಂತ ಥ್ಯಾಂಕ್‍ಶಿಪ್ ಕುರಿತು ಮಾಹಿತಿ ನೀಡ್ತಾರೆ ಲಲಿತ್ ಸಾಗರ್.

ಥ್ಯಾಂಕ್‍ಶಿಪ್ ಸಾಮಾಜಿಕ ಬದಲಾವಣೆ ತರಲು ನಿಟ್ಟಿನಲ್ಲಿ ಎಲ್ಲರನ್ನೂ ಪ್ರೇರೇಪಿಸಲು ಸೃಷ್ಟಿಯಾಗಿರುವ ಒಂದು ವಿನೂತನ ಕಲ್ಪನೆ. ಒಬ್ಬ ವ್ಯಕ್ತಿ ತಾನು ಮಾಡಿರುವ ಎಲ್ಲಾ ಸಾಮಾಜಿಕ ಕೆಲಸಗಳ ಕುರಿತು ಹೇಳಿಕೊಳ್ಳಲು ಈಗಿರುವ ಯಾವುದೇ ಅಂತರ್ಜಾಲ ತಾಣದಲ್ಲೂ ಸಾಧ್ಯವಿಲ್ಲ. ಆದ್ರೆ ಥ್ಯಾಂಕ್‍ಶಿಪ್ ಆ ವೇದಿಕೆ ಕಲ್ಪಿಸುತ್ತದೆ. ವ್ಯಕ್ತಿಯೊಬ್ಬರು ಮಾಡಿರುವ ಸಮಾಜ ಸೇವೆಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಯಾರು, ಎಲ್ಲಿ ಬೇಕಾದರೂ ಕುಳಿತು ಆನ್‍ಲೈನ್ ಮೂಲಕವೇ ನೋಡಬಹುದು.

‘ಸಮಾಜ ಸೇವಕರು ತಾವು ಮಾಡಿರುವ ಕೆಲಸಗಳ ಕುರಿತು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವುದು ಹಾಗೂ ಪ್ರಶಸ್ತಿ ಪ್ರದಾನ ಮಾಡುವ ಸಂಘ- ಸಂಸ್ಥೆಗಳಿಗೆ ಮಾಹಿತಿ ನೀಡುವುದು ಸುಲಭದ ಮಾತಲ್ಲ. ಬಹುತೇಕ ಸಮಯದಲ್ಲಿ ಸ್ಫೂರ್ತಿ, ಪ್ರೇರೇಪಣೆಗಳಲ್ಲಿದೆ ಅವರಲ್ಲಿನ ಸಮಾಜ ಸೇವೆಯ ಆಸೆಗಳು ಮಣ್ಣಾಗೋದೂ ಉಂಟು. ಸಮಾಜ ಸೇವಕರ ಸಂಖ್ಯೆ ಕಡಿಮೆ ಇರಲು ಇದೇ ಕಾರಣ ಕೂಡ. ಆದ್ರೆ ಥ್ಯಾಂಕ್‍ಶಿಪ್ ಇಂತಹ ಸಮಾಜ ಸೇವಕರಿಗೆ ಜನ ಅಭಿನಂದನೆ ಸಲ್ಲಿಸಲು ಹಾಗೂ ಪ್ರಶಂಸಿಸಲು ಒಂದು ವೇದಿಕೆ ಕಲ್ಪಿಸುತ್ತದೆ. ಸಾಮಾಜಿಕ ಬದಲಾವಣೆಯಲ್ಲಿ ಅಂತಹ ವ್ಯಕ್ತಿಯ ಪಾತ್ರದ ಕುರಿತು ಹೆಚ್ಚಿನ ಜನರಿಗೆ ಮಾಹಿತಿ ನೀಡುವಲ್ಲಿ ಸಹಕಾರಿಯಾಗಿದೆ. ಇಂತಹ ಒಂದು ಧನ್ಯವಾದ, ಒಬ್ಬ ಸಮಾಜ ಸೇವಕನಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ. ಹಾಗೂ ಆತ ಒಳ್ಳೆಯ ಕಾರ್ಯಗಳನ್ನು ಮುಂದುವರಿಸಲು ಪ್ರೇರೇಪಿಸುತ್ತೆ.’ ಅಂತಾರೆ ಅಜಯ್ ಸಾಗರ್.

image


ಫೇಸ್‍ಬುಕ್, ಟ್ವಿಟರ್‍ನಂತಹ ಸಾಮಾಜಿಕ ಅಂತರ್ಜಾಲ ತಾಣಗಳನ್ನು ಬಳಸುವವರು ಒಂದಲ್ಲಾ ಒಂದು ಬಾರಿ ನಕಾರಾತ್ಮಕ ಪ್ರತಿಕ್ರಿಯೆಗೆ ಒಳಗಾಗಿರ್ತಾರೆ. ಆದ್ರೆ ಥ್ಯಾಂಕ್‍ಶಿಪ್‍ನಲ್ಲಿ ಇರೋದೇ ಸಕಾರಾತ್ಮಕ, ಮೆಚ್ಚುಗೆ ಹಾಗೂ ಒಳ್ಳೆಯ ಶಿಫಾರಸ್ಸುಗಳು. ವ್ಯಕ್ತಿಯೊಬ್ಬರ ಒಳ್ಳೆಯ ಕೆಲಸಗಳು ಹಾಗೂ ಮತ್ತೊಬ್ಬರನ್ನು ಪ್ರೇರೇಪಿಸುವ ನೈಜ ಘಟನೆಗಳ ಕುರಿತು ಥ್ಯಾಂಕ್‍ಶಿಪ್‍ನಲ್ಲಿ ಬರೆಯಬಹುದು. ವಿಶೇಷ ಅಂದ್ರೆ ಥ್ಯಾಂಕ್‍ಶಿಪ್ ಮೂಲಕ ಜಿಮೇಲ್, ಟ್ವಿಟರ್, ಫೇಸ್‍ಬುಕ್ ಸೇರಿದಂತೆ ಬೇರೆ ಸಾಮಾಜಿಕ ಅಂತರ್ಜಾಲ ತಾಣಗಳಲ್ಲೂ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಬಹುದು.

ಸಮಾಜ ಸೇವಕರನ್ನು ಥ್ಯಾಂಕ್‍ಶಿಪ್‍ನಲ್ಲಿ ಫಾಲೋ ಮಾಡಬಹುದು. ಆ ಮೂಲಕ ಅವರು ಏನೇನು ಕೆಲಸಗಳನ್ನು ಮಾಡುತ್ತಿದ್ದಾರೆ ಅನ್ನೋದರ ಕುರಿತು ಮಾಹಿತಿ ಪಡೆಯಬಹುದು. ಹಾಗೇ ಉಪಯುಕ್ತ, ನಾಯಕ ಹಾಗೂ ಸೃಜನಶೀಲ ಎಂದು ಆ ಸಮಾಜ ಸೇವಕನ ಕುರಿತು ತಾವೂ ಅಭಿಪ್ರಾಯ ನೀಡಬಹುದು.

ಥ್ಯಾಂಕ್‍ಶಿಪ್‍ನಿಂದ ಹಲವಾರು ಉಪಯೋಗಗಳಿದ್ದು, ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಜನರನ್ನು ಹೆಚ್ಚಾಗಿ ಸೆಳೆಯುತ್ತಿದೆ. ಜನ ಥ್ಯಾಂಕ್‍ಶಿಪ್ ಮೂಲಕ ತಮ್ಮ ಕುಟುಂಬದವರು ಹಾಗೂ ಸ್ನೇಹಿತರನ್ನು, ಅವರು ಮಾಡುತ್ತಿರುವ ಕೆಲಸಗಳ ಕುರಿತು ಅಭಿನಂದಿಸಬಹುದು. ಸ್ವಯಂ ಸೇವಾ ಸಂಸ್ಥೆಗಳು ಥ್ಯಾಂಕ್‍ಶಿಪ್ ಮೂಲಕ ತನ್ನ ಸದಸ್ಯರು, ದಾನಿಗಳು ಹಾಗೂ ಮಧ್ಯಸ್ಥಗಾರರಿಗೆ ಧನ್ಯವಾದ ತಿಳಸಬಹುದು. ಉದ್ಯಮಿಗಳೂ ಕೂಡ ತಮ್ಮ ಸಾಮಾಜಿಕ ಕೆಲಸಗಳ ಕುರಿತು ಹೇಳಿಕೊಳ್ಳಬಹುದು. ಕೆಲಸ ಮಾಡುವ ಸ್ಥಳಗಳಲ್ಲೂ ಉದ್ಯೋಗಿಗಳು, ತಮ್ಮ ಸಹೋದ್ಯೋಗಿಗಳ ಕಠಿಣ ಪರಿಶ್ರಮವನ್ನು ಪ್ರಶಂಸಿಸಬಹುದು. ಹೀಗೆ ಹಲವು ರೀತಿ ಥ್ಯಾಂಕ್‍ಶಿಪ್ ಉಪಯುಕ್ತವಾಗಿದೆ.

‘ಥ್ಯಾಂಕ್‍ಶಿಪ್ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ನನ್ನ ಕೆಲ ಗೆಳೆಯರ ಸಮಾಜಮುಖೀ ಕೆಲಸಗಳ ಕುರಿತ ಮಾಹಿತಿ ದೊರೆಯಿತು. ಅವರಲ್ಲಿ ಒಬ್ಬರು ದೆಹಲಿ ಮೂಲದ ಅಶುತೋಷ್. ಅವರು ಬಡಬಗ್ಗರಿಗೆ ಬಟ್ಟೆ ಹಾಗೂ ಹೊದಿಕೆಗಳನ್ನು ದಾನ ಮಾಡಿದ್ದರು. ಈ ಕಥೆಯನ್ನು ಥ್ಯಾಂಕ್‍ಶಿಪ್‍ನಲ್ಲಿ ನಾವು ಬರೆದಿದ್ದೆವು. ಆಗ ಅಶುತೋಷ್ ಮತ್ತವರ ಸ್ನೇಹಿತರಿಂದ ನನಗೆ ಕರೆ ಬಂತು. ನಾನು ಮಾಡಿದ ಕೆಲಸವನ್ನು ಯಾರೂ ಗುರುತಿಸೋದೇ ಇಲ್ಲ ಅಂದುಕೊಂಡಿದ್ದೆ. ನನಗಂತೂ ನಿಮ್ಮ ಪ್ರಶಂಸೆಯಿಂದ ಆಶ್ಚರ್ಯ ಹಾಗೂ ಖುಷಿಯಾಗ್ತಿದೆ, ಇನ್ನುಮುಂದೆ ಪ್ರತಿ ವರ್ಷ ನಾನು ಈ ಸಾಮಾಜಿಕ ಕೆಲಸವನ್ನು ಮುಂದುವರಿಸುತ್ತೇನೆ ಎಂದಿದ್ದರು. ಹಾಗೇ ನನ್ನ ಕೆಲ ಗೆಳೆಯರೂ ಸಹ ಅಶುತೋಷ್ ಕಥೆ ಓದಿ ಪ್ರೇರೇಪಿತರಾಗಿ ತಮ್ಮದೇ ರೀತಿಯಲ್ಲಿ ಹಲವರಿಗೆ ಸಹಾಯ ಮಾಡಿದ್ದಾರೆ’ ಎಂದು ಖುಷಿಯಾಗುತ್ತಾರೆ ಅಜಯ್ ಸಾಗರ್.

image


ಸದ್ಯ ಸಾಗರ್ ಸಹೋದರರು ಥ್ಯಾಂಕ್‍ಶಿಪ್‍ಗೆ ಹೊಸ ರೂಪ ನೀಡಲು ಸಿದ್ಧತೆ ನಡೆಸಿದ್ದಾರೆ. ಇದರಿಂದ ಹಣ, ಉಡುಗೊರೆ ಪತ್ರಗಳನ್ನು ಕಳುಹಿಸುವಂತ ಆಯ್ಕೆಗಳನ್ನೂ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗೇ ಫೇಸ್‍ಬುಕ್‍ನಲ್ಲಿ ಲೈಕ್ ಹಾಗೂ ಟ್ವಿಟರ್‍ನಲ್ಲಿ ಟ್ವೀಟ್ ಮಾಡುವಂತ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ. ಹಾಗೇ ಕಾರ್ಪೊರೇಟ್ ಕಂಪನಿಗಳಿಗೂ ತಮ್ಮ ಥ್ಯಾಂಕಿಶಿಪ್ ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದಾರೆ. ‘ನೂರು ಕೋಟಿಗೂ ಹೆಚ್ಚು ಜನರು ಸಕ್ರಿಯರಾಗಿ ಇದರಲ್ಲಿ ಪಾಲ್ಗೊಂಡು, ಒಬ್ಬರು ಮತ್ತೊಬ್ಬರ ಸಮಾಜ ಸೇವೆ ಕುರಿತು ಪ್ರಶಂಸಿಸುವಂತೆ ಮಾಡಬೇಕು ಅನ್ನೋದೇ ನಮ್ಮ ಅತಿ ದೊಡ್ಡ ಕನಸು. ಈ ಪಯಣ ಸುಲಭವಲ್ಲ ಹಾಗೂ ಸುಖಕರವಾಗಿರಲ್ಲ ಅಂತ ಗೊತ್ತು. ಆದ್ರೂ ನಾವು ಈ ದಾರಿಯಲ್ಲಿ ಸಾಗಲು ಸಜ್ಜಾಗಿದ್ದೇವೆ’ ಅಂತ ಯುದ್ಧಕ್ಕೆ ಸನ್ನದ್ಧರಾದಂತೆ ದೃಢ ಸಂಕಲ್ಪದಿಂದ ನುಡಿಯುತ್ತಾರೆ ಸಾಗರ್ ಸಹೋದರರು.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags