ಕನಸುಗಳನ್ನು ನನಸಾಗಿಸಲು ಕಷ್ಟಗಳ ವಿರುದ್ಧ ಹೋರಾಡಿದ ಎಫ್ 4 ರೇಸರ್ ಸ್ನೇಹ ಶರ್ಮಾ

ಪೈಲಟ್ ಮತ್ತು ಭಾರತದ ವೇಗದ ಮಹಿಳೆ ಎಫ್ 4 ರೇಸರ್ ಸ್ನೇಹ ಶರ್ಮಾ ಅವರು ಮನಸ್ಸಿದ್ದಲ್ಲಿ ಮಾರ್ಗ ಎನ್ನುತ್ತ ಗೆಲುವನ್ನು ತಮ್ಮದಾಗಿಸಿಕೊಂಡವರು.

ಕನಸುಗಳನ್ನು ನನಸಾಗಿಸಲು ಕಷ್ಟಗಳ ವಿರುದ್ಧ ಹೋರಾಡಿದ ಎಫ್ 4 ರೇಸರ್ ಸ್ನೇಹ ಶರ್ಮಾ

Monday February 17, 2020,

4 min Read

ಸ್ನೇಹ ಶರ್ಮಾ ಕಾರು ಮತ್ತು ಬೈಕಿನ ಚಾಲನಾ ಪರವಾನಗಿ ಪಡೆಯುವ ಮೊದಲು ತಮ್ಮ ವಿಮಾನ ಮತ್ತು ರೇಸಿಂಗ್ ಪರವಾನಗಿಗಳನ್ನು ಪಡೆದಿದ್ದರು. ಆದರೆ ಇದೆಲ್ಲ ಇಷ್ಟು ಸುಲಭವಾಗಿರಲಿಲ್ಲ, 29 ವರ್ಷದ ಸ್ನೇಹ ಸಮಾನ್ಯವಲ್ಲದ ವೃತ್ತಿ ಮಾರ್ಗವನ್ನು ಆಯ್ದುಕೊಂಡಿದ್ದರಿಂದ ತಮ್ಮ ಕುಟುಂಬ ಮತ್ತು ಸಮಾಜದ ನೀತಿ ನಿಯಮಗಳ ವಿರುದ್ಧ ಹೋರಾಡಬೇಕಾಗಿತ್ತು.


ಆದರೆ ಅವರು ಹಿಂದೆ ಸರಿಯಲ್ಲ, ಅವರ ಕನಸುಗಳಿಗೆ ಹಾರಾಟವನ್ನು ನೀಡಿದರು ಮತ್ತು ತಮ್ಮ ಹಾದಿಯಿಂದ ಇತರರಿಗೆ ಸ್ಫೂರ್ತಿ ನೀಡಿದರು.


ಗೇರ್ ಸೈಕಲ್ ನಲ್ಲಿ ತಮ್ಮ ಸ್ನೇಹಿತರ ಜೊತೆ ರೇಸಿಂಗ್ ಮಾಡುವುದನ್ನು ಪ್ರೀತಿಸುತ್ತಿದ್ದ ಸ್ನೇಹಾ, ಈಗ ಭಾರತದ ವೇಗದ ಮಹಿಳೆ ಎಫ್ 4 ರೇಸರ್ ಎಂದು ಕರೆಯಲ್ಪಡುತ್ತಾರೆ. ಕುತೂಹಲಕಾರಿ ಅಂಶವೆಂದರೆ, ಅವರು ಈಗ ತಾನು ಪ್ರೀತಿಸುವ ರೇಸಿಂಗ್ ಮತ್ತು ಫ್ಲೈಯಿಂಗ್‌ಗಳಿಗೆ ತಮ್ಮ ಸಮಯವನ್ನು ನೀಡುತ್ತಾರೆ.


ರೇಸಿಂಗ್ ತನ್ನ ಮೊದಲ ಪ್ರೀತಿ ಎಂದು ಇಂಡಿಗೊ ಏರ್‌ಲೈನ್ಸ್‌ನ ಪೈಲಟ್ ಸ್ನೇಹ ಶರ್ಮಾ ಹೇಳುತ್ತಾರೆ.


ಇಂಡಿಗೊ ಏರ್ಲೈನ್ಸ್ ನಲ್ಲಿ ಪೈಲಟ್ ಆಗಿರುವ ಅವರು ಏರ್ಬಸ್ 320 ಅನ್ನು ತಿಂಗಳಿಗೆ 6 ದಿನ ಹಾರಿಸುತ್ತಾರೆ. ಉಳಿದ ದಿನಗಳು ಫಾರ್ಮುಲಾ 4 ರೇಸರ್ ಆಗಿ ಕೆಲಸ ಮಾಡುತ್ತಾರೆ. ಅವರು 40 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರೇಸ್‌ಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಅವುಗಳನ್ನು ಜೆಕೆ ಟೈರ್ಸ್ ಮತ್ತು ಇಂಡಿಗೊ ಕಂಪನಿಗಳು ಪ್ರಾಯೋಜಿಸಿದೆ.


ಸಂದರ್ಶನವೊಂದರಲ್ಲಿ, ರೇಸಿಂಗ್ “ನನ್ನ ಮೊದಲ ಪ್ರೀತಿ. ಆದರೆ ನಾನು ಹಾರುವುದನ್ನು ತುಂಬಾ ಪ್ರೀತಿಸುತ್ತೇನೆ. ಅವರೆಡು ಭಾರೀ ವೇಗದ ಯಂತ್ರಗಳೊಂದಿಗೆ ವ್ಯವಹರಿಸುತ್ತವೆ ಮತ್ತು ಅದರಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ,” ಎಂದಿದ್ದಾರೆ.


ರೇಸರ್ ಆಗಿ ಬದಲಾಗುವುದು

ತನ್ನ ಸ್ನೇಹಿತರೊಂದಿಗೆ ರೇಸಿಂಗ್ ಮಾಡುವುದು ಮತ್ತು ಅವರಿಗಿಂತ ಮೊದಲು ಬರುವುದು ಕೇವಲ ಮೋಜಿನ ಸಂಗತಿಯಲ್ಲ, ಆದೇ ಜೀವನದ ಉದ್ದೇಶ ಎಂದು ತಿಳಿದಾಗ ಸ್ನೇಹಾಗೆ 16 ವರ್ಷ. ಕೋಲ್ಕತ್ತಾದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದ ಅವರು ಪೊವಾಯ್‌ನಲ್ಲಿ ಗೋ-ಕಾರ್ಟಿಂಗ್ ಟ್ರ್ಯಾಕ್ ಅನ್ನು ಕಂಡುಕೊಂಡರು ಮತ್ತು ತಮ್ಮ ಮೊದಲ ಪ್ರಯತ್ನದಲ್ಲೆ ಅತೀ ವೇಗದ ಲ್ಯಾಪ್ ಟೈಮ್‌ ಮಾಡಿದರು.


ತನ್ನ ಆಸಕ್ತಿಯನ್ನು ಅನುಸರಿಸಲು ಉತ್ಸುಕರಾಗಿದ್ದ, 11 ನೇ ತರಗತಿಯ ವಿಜ್ಞಾನದ ವಿದ್ಯಾರ್ಥಿ ಸ್ನೇಹ ತಮ್ಮ ಪಾಕೆಟ್ ಮನಿಯನ್ನು ರೇಸಿಂಗ್ ಟ್ರ್ಯಾಕ್‌ಗಳಲ್ಲಿ ತಮ್ಮ ಕೌಶಲ್ಯಗಳಿಗಾಗಿ ಖರ್ಚು ಮಾಡಲು ಪ್ರಾರಂಭಿಸಿದರು. ಅವರು ಆಗಾಗ್ಗೆ ಬಿಡುವಿನ ಸಮಯವನ್ನು ಪೊವಾಯಿ ಟ್ರ್ಯಾಕ್‌ನಲ್ಲಿ ಕಳೆಯುತ್ತಿದ್ದರು, ಅಲ್ಲಿ ಮೆಕ್ಯಾನಿಕ್ ಕೆಲಸಗಳನ್ನು ಮಾಡುತ್ತಿದ್ದರು ಮತ್ತು ವೃತ್ತಿಪರರು ಪರಸ್ಪರರ ವಿರುದ್ಧ ರೇಸಿಂಗ್ ಮಾಡುವುದನ್ನು ನೋಡುತ್ತಿದ್ದರು.


“ನಾನು ಒಮ್ಮೆ ಅವರ ಬಳಿಗೆ ಹೋಗಿ ನನಗೆ ತರಬೇತಿ ನೀಡುವಂತೆ ಕೇಳಿದೆ. ರೇಸಿಂಗ್ ಕಾರ್ ಡ್ರೈವರ್ ತಿಳಿದುಕೊಳ್ಳಬೇಕಾದ ಮೂಲಭೂತ ಕೌಶಲ್ಯಗಳನ್ನು ನಾನು ಶೀಘ್ರದಲ್ಲೇ ಕಲಿತೆ,” ಎಂದು ಸ್ನೇಹ ನೆನಪಿಸಿಕೊಳ್ಳುತ್ತಾರೆ.


ಅದೇ ವರ್ಷ, ನಗರ ಮಟ್ಟದ ರೇಸ್‌ಗಳಲ್ಲಿ ಪ್ರದರ್ಶನ ನೀಡಿದ ನಂತರ, ಅವರನ್ನು ರಾಷ್ಟ್ರೀಯ ರೇಸಿಂಗ್ ತಂಡವು ಆಯ್ಕೆ ಮಾಡಿತು. ಅವರು ಟೈಮ್ಸ್ ಆಫ್ ಇಂಡಿಯಾ ನಡೆಸಿದ ಸ್ಪೀಡ್ ಟೂರ್ನಮೆಂಟ್ ಅನ್ನು ಸಹ ಗೆದ್ದರು, ಆದರೆ ಅವರ ಪೋಷಕರು ಅವರ ಈ ನಡೆಯನ್ನು ಒಪ್ಪಲಿಲ್ಲ.


ಸ್ನೇಹಾ ತನ್ನ ರೇಸಿಂಗ್ ಕಾರಿನ ಮುಂದೆ ಟ್ರ್ಯಾಕ್‌ನಲ್ಲಿ ಪೋಸ್ ನೀಡುತ್ತಿರುವುದು.


ಎಲ್ಲ ಪೋಷಕರಂತೆ, ಸ್ನೇಹ ಅವರ ಪೋಷಕರು, ಸ್ನೇಹ ಶಿಕ್ಷಣದ ಮೇಲೆ ಕೇಂದ್ರೀಕರಿಸಲು ಮತ್ತು ಒಳ್ಳೆಯ ಕೆಲಸ ಪಡೆಯಬೇಕೆಂದು ಬಯಸಿದ್ದರು. ಅವರ ಪ್ರಕಾರ ರೇಸಿಂಗ್ ಎಂಬುದು ಅಪಾಯಕಾರಿ ಮತ್ತು ಭಯಪಡಿಸುವಂತದ್ದಾಗಿತ್ತು.


ಆದರೆ ಅದು ಸ್ನೇಹ ಅವರನ್ನು ತಡೆಯಲಿಲ್ಲ.


ನಾನು ನನ್ನ ಹೆಲ್ಮೆಟ್ ಅನ್ನು ನನ್ನ ಚೀಲದಲ್ಲಿ ಇಟ್ಟುಕೊಳ್ಳುತ್ತಿದ್ದೆ. ರೇಸಿಂಗ್ ಜೊತೆಗೆ ಓದುವುದು ಸಹ ನನ್ನ ಆದ್ಯತೆ ಎಂದು ನಾನು ಹೇಳಿದ್ದರಿಂದ ನಾನು ನನ್ನ ಪುಸ್ತಕಗಳನ್ನು ಎಲ್ಲ ಕಡೆ ತೆಗೆದುಕೊಂಡು ಹೋಗುತ್ತಿದ್ದೆ. ನಾನು ಟ್ರ್ಯಾಕ್‌ಗಳು, ಬಸ್ ಎನ್ನದೆ ಎಲ್ಲಿಬೇಕೆಂದರಲ್ಲಿ ಮತ್ತು ಯಾವಾಗ ಬೇಕಾದರಾವಾಗ ಓದುತ್ತಿದ್ದೆ,” ಎಂದು ಅವರು ಹೇಳುತ್ತಾರೆ.


ಸ್ನೇಹಾ ತನ್ನ ಪರೀಕ್ಷೆಗಳನ್ನು ಅದ್ಭುತವಾಗಿ ಮಾಡಿದರು, ಮತ್ತು ರಾಷ್ಟ್ರಮಟ್ಟದ ಎಂ ಆರ್ ಎಫ್ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಾಗಿ ಹೊರಬಂದರು.


ಸಮಯದ ವಿರುದ್ಧ ರೇಸ್

ಮಹಾರಾಷ್ಟ್ರ ರಾಜ್ಯ ಮಂಡಳಿ ವಿದ್ಯಾರ್ಥಿನಿಯಾದ ಸ್ನೇಹ ದಿನಕ್ಕೆ ಮೂರು ತರಗತಿಗಳಿಗೆ ಹೋಗಬೇಕಿತ್ತು, ಅವುಗಳಲ್ಲಿ ಒಂದು ಮಾತ್ರ ಕಡ್ಡಾಯವಾಗಿತ್ತು. ಆದರೂ, ಅವರು ಯಾವಾಗಲೂ ಒಂದು ಹೆಜ್ಜೆ ಮುಂದಿರುವುದರಿಂದ ಪ್ರತಿ ತರಗತಿಗಳಿಗೆ ಹಾಜರಾದರು, ಇದಕ್ಕೆ ಅವರ ಸಮಯ ಬಹಳ ಕಮ್ಮಿ ಇದೆ ಎನ್ನುವ ಮನೋಭಾವವೆ ಕಾರಣ.


ಒಂದು ಸಾಮಾನ್ಯ ದಿನವು ಬಹಳಷ್ಟು ಕಷ್ಟಗಳನ್ನು ಅನ್ನು ಒಳಗೊಂಡಿತ್ತು. ತರಗತಿಗೆ ಹಾಜರಾದ ನಂತರ, ಅವರು ಮಧ್ಯಾಹ್ನ 3 ಗಂಟೆಗೆ ಬೋರಿವಾಲಿ ನಿಲ್ದಾಣದಿಂದ ಸ್ಥಳೀಯ ರೈಲನ್ನು ಹಿಡಿದು ತನ್ನ ಪೈಲಟ್ ತರಬೇತಿಗೆ ಹೋಗುತ್ತಿದ್ದರು. ಸಮಯ ಸಿಕ್ಕರೆ, ಅವರು ರೇಸಿಂಗ್ ಟ್ರ್ಯಾಕ್‌ಗೆ ಹೋಗುತ್ತಿದ್ದರು. ಅಲ್ಲದೇ ಇದು ಹೆಚ್ಚಾಗಿ ರಾತ್ರಿ 9 ರವರೆಗೆ ಮಾತ್ರ ತೆರೆದಿರುತ್ತದೆ. ಈ ಎಲ್ಲಾ ಕಷ್ಟಗಳು 16 ನೇ ವಯಸ್ಸಿನಲ್ಲಿ ಅವರು ನಿಭಾಯಿಸಿದರು, ಮತ್ತು ಬಿಡುವಿಲ್ಲದ ಜೀವನಕ್ಕಾಗಿ ಅದು ಅವರನ್ನು ಸಿದ್ಧಪಡಿಸಿತು.


ಸ್ನೇಹ ಶರ್ಮಾ ಅವರ ರೇಸಿಂಗ್ ಟ್ರ್ಯಾಕ್ನಲ್ಲಿನ ಪ್ರದರ್ಶನಗಳು ಅನೇಕ ಪ್ರಶಂಸೆಯನ್ನು ಗಳಿಸಿವೆ


2007 ರಲ್ಲಿ, ಸ್ನೇಹ ವಿಮಾನ ಚಾಲನೆ ತರಗತಿಗಳಿಗಾಗಿ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗಬೇಕಾಗಿತ್ತು. ಅವರು ತನ್ನ ಕನಸು ಮತ್ತು ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲು ಪ್ರಯತ್ನಿಸುತ್ತಿದ್ದರಿಂದ ಇದು ಕಷ್ಟದ ಆಯ್ಕೆಯಾಗಿತ್ತು (ಅವರ ಕುಟುಂಬವು ವಿದೇಶದಲ್ಲಿ ಅವರ ಅಧ್ಯಯನಕ್ಕಾಗಿ ಸಾಲವನ್ನು ತೆಗೆದುಕೊಂಡಿತ್ತು).


ನಾನು ರೇಸಿಂಗ್ ಟ್ರ್ಯಾಕ್‌ಗೆ ಮತ್ತೆ ಬರುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ನಾನು ನನ್ನ ಸ್ನೇಹಿತರಿಗೆ ಹೇಳಿದೆ. ಆದರೆ ಈ ಸಣ್ಣ ವಿಷಯಗಳು ನನ್ನ ದಾರಿಗೆ ಅಡ್ಡ ಬರಬಾರದು ಎಂದು ನನ್ನ ಶಿಕ್ಷಕರು ಹೇಳಿದ್ದರು,” ಎಂದು ಸ್ನೇಹ ನೆನಪಿಸಿಕೊಳ್ಳುತ್ತಾರೆ.


ತನ್ನ ರೇಸಿಂಗ್ ತನ್ನ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ. ಅಲ್ಲದೇ ಸ್ನೇಹ, ತನ್ನ ಬ್ಯಾಚ್‌ನಲ್ಲಿ, ಒಬ್ಬರೇ ವಿಮಾನವನ್ನು ಹಾರಾಟ ನಡೆಸಿದ ಮೊದಲ ವಿದ್ಯಾರ್ಥಿಯಾದರು.


ಕೋರ್ಸ್ ನಂತರ, ಅವರು ಭಾರತಕ್ಕೆ ಮರಳಿದರು, ಮತ್ತು ಅವರ ಯುಎಸ್ ಫ್ಲೈಯಿಂಗ್ ಲೈಸೆನ್ಸ್ ಅನ್ನು ಭಾರತೀಯ ಲೈಸೆನ್ಸ್ ಆಗಿ ಬದಲಾಯಿಸುವ ಕೆಲಸವನ್ನು ಮಾಡಿದರು. ಕೊನೆಗೆ ಅದು 2011 ರಲ್ಲಿ ನಡೆಯಿತು, ಮತ್ತು ಅಲ್ಲಿಯವರೆಗೆ ಸ್ನೇಹ ಮೆಕ್ಯಾನಿಕ್, ಫೈನ್-ಟ್ಯೂನಿಂಗ್ ಎಂಜಿನ್, ತರಬೇತಿ, ಖಾತೆಗಳನ್ನು ನೋಡಿಕೊಳ್ಳುವುದು, ಉಪಕರಣಗಳನ್ನು ಲೋಡ್ ಮಾಡುವುದು ಮತ್ತು ಆನ್ ಲೋಡ್ ಮಾಡುವುದು ಸೇರಿದಂತೆ ರೇಸಿಂಗ್ ಟ್ರ್ಯಾಕ್‌ಗಳಲ್ಲಿ ಅರೆಕಾಲಿಕ ಕೆಲಸಗಳನ್ನು ಮಾಡಿದರು.


“ನಾನು ಸಂಜೆಯವರೆಗೆ ಇತರರ ಕಾರುಗಳ ಕೆಲಸ ಮಾಡಬೇಕಾಗಿತ್ತು ಆದ್ದರಿಂದ ನನಗೆ ಹೆಚ್ಚಿನ ದಣಿವಾಗುತ್ತಿತ್ತು. ನನ್ನ ರೇಸಿಂಗ್ ಕನಸುಗಳಿಗೆ ನಾನು ಇದರಿಂದ ಮಾತ್ರ ಹಣವನ್ನು ನೀಡಬಹುದಿತ್ತು. ನನಗೆ ಸರಿಯಾದ ಗೇರ್ ಪಡೆಯಲು ಸಾಧ್ಯವಾಗಲಿಲ್ಲ, ಮತ್ತು ಇದು ಒಮ್ಮೆ ಗಂಭೀರವಾದ ಗಾಯಕ್ಕೆ ಕಾರಣವಾಯಿತು,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.


ರೆಕ್ಕೆಗಳನ್ನು ಹರಡುವ ಸಮಯ

2010 ರಲ್ಲಿ, ಸ್ನೇಹ ದೇಶಾದಾದ್ಯಂತ ಆಯ್ದ 20 ಚಾಲಕರೊಂದಿಗೆ ಚೆನ್ನೈ ಮತ್ತು ಕೊಯಮತ್ತೂರು ರೇಸಿಂಗ್ ಟ್ರ್ಯಾಕ್‌ಗಳಲ್ಲಿ ಸ್ಪರ್ಧಿಸಿದರು. ವೋಲ್ಸ್‌ವ್ಯಾಗನ್ ಪೊಲೊ ಕಪ್ ಮತ್ತು ಟೊಯೋಟಾ ಇಎಂಆರ್ ನಲ್ಲಿ ಓಡಿಸಿದ ಏಕೈಕ ವ್ಯಕ್ತಿ ಅವರು.


ಒಂದು ವರ್ಷದ ನಂತರ, ಅವರು ಎರಡು ವಿಮಾನಯಾನ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದರು ಮತ್ತು ಇಂಡಿಗೊ ಏರ್ಲೈನ್ಸ್‌ಗೆ ಸೇರಲು ನಿರ್ಧರಿಸಿದರು.


ಅದೇ ವರ್ಷ, ಅವರು ಮರ್ಸಿಡಿಸ್ ಯಂಗ್ ಸ್ಟಾರ್ ಚಾಲಕ ಕಾರ್ಯಕ್ರಮದಲ್ಲಿ ಮೊದಲ ಐದು ಸ್ಥಾನಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಗ್ರೇಟರ್ ನೋಯ್ಡಾದ ಬುದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ 270 ಕಿ.ಮೀ ವೇಗದಲ್ಲಿ ತನ್ನ ಕಾರನ್ನು ಓಡಿಸಿದ್ದರು.


ಹೆಸರಾಂತ ಫಾರ್ಮುಲಾ 1 ಚಾಲಕ ಮೈಕೆಲ್ ಷೂಮಕರ್ ಈ ಓಟದ ನಂತರ ಸಹಿ ಮಾಡಿದ ಮಾಡೆಲ್ ಕಾರನ್ನು ಅವರಿಗೆ ನೀಡಿದರು.

ಇದೀಗ, ಸ್ನೇಹ ಅವರ ಮಹತ್ವಾಕಾಂಕ್ಷೆಗಳು ಬೆಳೆದಿವೆ. ಅವರು ಫಾರ್ಮುಲಾ 1 ಅನ್ನು ಓಡಿಸಲು ಇಷ್ಟಪಟ್ಟಿದ್ದಾರೆ, ಆದರೆ ಅದಿನ್ನು ಸಾಕಾರವಾಗದೆ ಆಗಾಗ್ಗೆ ಪ್ರಾಯೋಜಿತ ರೇಸಿಂಗ್ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ.


ಸ್ನೇಹಾ ಶರ್ಮಾ ಮಹಿಳೆಯರಿಗೆ ಮಾದರಿಯಾಗಿ ಮುಂದೆ ನಿಲ್ಲುತ್ತಾರೆ, ಅವರು ತಮ್ಮ ಮಹತ್ವಾಕಾಂಕ್ಷೆಗಳನ್ನು ಹೇಗೆ ಮೇಲಕ್ಕೆತ್ತಬಹುದು ಎಂಬುದನ್ನು ತೋರಿಸಿದ್ದಾರೆ.


ಇಂಡಿಗೊದಲ್ಲಿ ಕೆಲಸ ಮಾಡುತ್ತಿದ್ದಾಗ ಮತ್ತು ಪ್ರಾಯೋಜಿತ ರೇಸಿಂಗ್ ಸ್ಪರ್ಧೆಗಳನ್ನು ಮಾಡುವಾಗ ಜೆಕೆ ಟೈರ್ಸ್ ಕಂಪನಿಯು ಅವರನ್ನು ರಾಷ್ಟ್ರೀಯ ರೇಸಿಂಗ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲು ಸಂಪರ್ಕಿಸಿತು. ಅಂದಿನಿಂದ, ಸ್ನೇಹ ಅವರ ಆಟಗಳನ್ನು ಜೆಕೆ ಟೈರ್ಸ್ ಪ್ರಾಯೋಜಿಸುತ್ತಿದೆ. ಇಂಡಿಗೊ ಸಹ ಸ್ನೇಹಾ ಅವರ ಪ್ರದರ್ಶನವನ್ನು ನೋಡಿದ ನಂತರ ಪ್ರಯೋಜಕತ್ವವನ್ನು ನೀಡಲು ಮುಂದೆ ಬಂದಿದೆ.


ಈಗ ಜೆಕೆ ಟೈರ್ಸ್ ಮತ್ತು ಇಂಡಿಗೊದ ಬ್ರಾಂಡ್ ಅಂಬಾಸಿಡರ್ ಆಗಿರುವ ಸ್ನೇಹಾ ತನ್ನ 2020 ಕ್ಯಾಲೆಂಡರ್ ಅನ್ನು ಸಹ ಪಟ್ಟಿ ಮಾಡಿದ್ದಾರೆ.


ಸ್ನೇಹ ಕಾದು ಕುಳಿತಿರುವ ಸ್ಪರ್ಧೆಗಳೆಂದರೆ, ಬ್ರಿಟಿಷ್ ಎಫ್ 4, ಫಾರ್ಮುಲಾ 4 ಸ್ಪ್ಯಾನಿಷ್ ಚಾಂಪಿಯನ್‌ಶಿಪ್, ಫಾರ್ಮುಲಾ 4 ಸೌತ್ ಈಸ್ಟ್ ಏಷ್ಯಾ, ಎಫ್ 2000 ಸರಣಿ ಮಧ್ಯಪ್ರಾಚ್ಯ, ಫಾರ್ಮುಲಾ ರೆನಾಲ್ಟ್ ಏಷ್ಯಾ ಮತ್ತು ಜಪಾನೀಸ್ ಫಾರ್ಮುಲಾ 4 ಮುಂತಾದವು.


ಸ್ಪಷ್ಟವಾಗಿ ಹೇಳಬೇಕೆಂದರೆ, ಸ್ನೇಹ ಅವರ ಕಠಿಣ ಪರಿಶ್ರಮವು ಅವರ ವೃತ್ತಿಜೀವನವನ್ನು ಉನ್ನತ ಮಟ್ಟದಲ್ಲಿ ಇರಿಸಿದೆ.