ಆವೃತ್ತಿಗಳು
Kannada

ಯಾರನ್ನೂ ಕೇಳಿಲ್ಲ..ಯಾರಿಂದಲೂ ಏನೂ ಬಯಸಲ್ಲ..! ಇದು ಸಾಲು ಮರದ ತಿಮ್ಮಕ್ಕನ ಕಥೆ..!

ವಿಸ್ಮಯ

6th Nov 2015
Add to
Shares
0
Comments
Share This
Add to
Shares
0
Comments
Share

ಒಮ್ಮೆ ದಾವಣಗೆರೆಯ ಲೋಕಸಭಾ ಸದಸ್ಯರಾಗಿದ್ದ ಶ್ಯಾಮನೂರು ಶಿವಶಂಕರಪ್ಪನವರು ತುಮಕೂರಿನ ಕಾರ್ಯಕ್ರಮವನ್ನು ಮುಗಿಸಿಕೊಂಡು ತಮ್ಮ ಕಾರಿನಲ್ಲಿ ವಾಪಾಸ್​​​ ಬರುತ್ತಿದ್ದರು. ಮಾಗಡಿಯ ಮೂಲಕ ಕನಕಪುರದಲ್ಲಿನ ಕಾರ್ಯಕ್ರಮಕ್ಕೆ ಹೋಗುವಾಗ ದಾರಿಯ ಮಧ್ಯದಲ್ಲಿ ವಾಹನದಿಂದ ಕೆಳಗಿಳಿದು ದೇಹಬಾಧೆ ತೀರಿಸಿಕೊಳ್ಳಲೆಂದು ಮರಗಳ ಮರೆಗೆ ಸಾಗುತ್ತಾರೆ. ಅಲ್ಲಿ ಸಾಲು ಸಾಲು ಮರಗಳು ಬೆಳೆದಿರುವುದನ್ನು ಕಂಡು ಅಚ್ಚರಿಗೊಳ್ಳುತ್ತಾರೆ. ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ವ್ಯಕ್ತಿಯನ್ನು ನಿಲ್ಲಿಸಿ , ಈ ಮರಗಳನ್ನೆಲ್ಲ ಯಾವ ಗ್ರಾಮ ಪಂಚಾಯತ್‍ನವ್ರು ಬೆಳೆಸಿದ್ದಾರೆ ? ಎಂದು ಪ್ರಶ್ನೆ ಕೇಳಿದ್ದರು. ಆಗ ಆ ವ್ಯಕ್ತಿ ಹೇಳಿದ ಮಾತು ಕೇಳಿ ಶಿವಶಂಕರಪ್ಪನವರಿಗೆ ಆಶ್ಚರ್ಯದ ಜೊತೆಗೆ ಮನಸ್ಸು ತುಂಬಿ ಬರುವಂತೆ ಮಾಡಿತ್ತು. ಯಾಕೆಂದ್ರೆ ಸುಮಾರು ನಾಲ್ಕು ಕಿಲೋ ದೂರದವರೆಗೆ 291 ಮರಗಳನ್ನು ನೆಟ್ಟು ಬೆಳೆಸಿದವರು ಬಡತನದಲ್ಲಿ ಬದುಕುತ್ತಿರೋ ದಂಪತಿ ಎಂಬುದು ತಿಳಿಯಿತು. ಅಲ್ಲಿಯೇ ಇದ್ದ ಬಿಕ್ಕಲ ಚಿಕ್ಕಯ್ಯ ಮತ್ತು ತಿಮ್ಮಕ್ಕನವರಿಗೆ ನಿಮಗೆಷ್ಟು ಮಕ್ಕಳು ? ಎಂದು ಕೇಳಿದಾಗ ನಮಗೆ ಮಕ್ಕಳೇ ಬೇಡ ಸ್ವಾಮಿ.. ಈ ಮರಗಳೇ ನಮಗೆ ಮಕ್ಕಳು ಎಂದು ಹೇಳಿದವರು ಇವರು.

image


ಸಾಲು ಸಾಲಾಗಿರೋ ಮರಗಳು. ಮರಗಳನ್ನೇ ತನ್ನ ಜೀವನಾಡಿ ಎಂಬಂತೆ ಪ್ರೀತಿ ಮಾಡೋ ಮಹಿಳೆ. ಮರಗಳ ರಕ್ಷಣೆಗಾಗಿ ತನ್ನ ಪ್ರಾಣ ಬಿಡೋಕ್ಕೂ ಸಿದ್ದರಿದ್ದ ಧೀರ ಮಹಿಳೆ ಈಕೆ. ಎಲ್ಲರ ಮೆಚ್ಚುಗೆ ಪಾತ್ರವಾಗಿರೋ ಈಕೆ ಎಲ್ಲರಿಗೂ ಚಿರಪರಿಚಿತ.. ಸಾಲುಮರದ ತಿಮ್ಮಕ್ಕ ಅಂದ್ರೆ ಸಾಕು ಅಭಿಮಾನ ಮೂಡಿಬರುತ್ತೆ. ಇಳಿ ವಯಸ್ಸಿನಲ್ಲೂ ತನ್ನ ಕಾಯಕವನ್ನು ಬಿಡದೇ, ನಿರಂತರವಾಗಿ ಮರಗಳ ರಕ್ಷಣೆಗೆ ಮುಂದಾಗಿದ್ದಾರೆ. ಮಕ್ಕಳಿಲ್ಲದ ತಿಮ್ಮಕ್ಕನಿಗೆ ಮರಗಳೇ ಮಕ್ಕಳು. ಮರಗಳೇ ಈಕೆಗೆ ಉಸಿರು. ಪರಿಸರ ಪ್ರೇಮಿಯಾಗಿರೋ ತಿಮ್ಮಕ್ಕ, ಪತಿ ಬಿಕ್ಕಲು ಚಿಕ್ಕಯ್ಯನೊಂದಿಗೆ ಸೇರಿ ಮಾಗಡಿ ಬಳಿಯ ಹುಲಿಕಲ್ ರಸ್ತೆಯ ಎರಡು ಬದಿಗಳಲ್ಲಿ ಸಾಲಾಗಿ ಸಸಿ ನೆಟ್ಟು ಪೋಷಿದ್ದರು. ನಂತರ ಈಗ ಸಾಲು ಗಿಡಗಳು ಹೆಮ್ಮರವಾಗಿ ಬೆಳೆದಿದೆ. ಇವ್ರ ಈ ಪ್ರೀತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಕಷ್ಟು ಪ್ರಶಸ್ತಿಗಳನ್ನ ನೀಡಿ ಗೌರವಿಸಿದೆ. ‘

ಸ್ವಾಭಿಮಾನಿ ತಿಮ್ಮಕ್ಕ..!

ಸಾಲುಮರದ ತಿಮ್ಮಕ್ಕನಿಗೆ ಈಗ 80 ವರ್ಷ ವಯಸ್ಸಿನ ಅಸುಪಾಸು. ದೇಹಕ್ಕೆ ವಯಸ್ಸಾದ್ರೂ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ. ಸರಳತೆಯ ಜೊತೆಗೆ ಸಾಧು ಸ್ವಭಾವದ ತಿಮ್ಮಕ್ಕ ಎಲ್ಲರಿಗೂ ಮಾದರಿ. 1991ರಲ್ಲಿ ತಮ್ಮ ಪತಿ ತೀರಿ ಹೋದ ಬಳಿಕ ಒಂಟಿ ಜೀವನ ನಡೆಸುತ್ತಿರೋ ತಿಮ್ಮಕ್ಕ ಬಹಳ ಸ್ವಾಭಿಮಾನಿ. ಪತಿಯ ಮರಣದ ನಂತ್ರ ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾಜದ ಕಾಯಕಕ್ಕೆ ಮುಡಿಪಿಟ್ಟಿದ್ದಾರೆ. ಹಲವು ಸಂಘಟನೆಗಳು ತಿಮ್ಮಕ್ಕರನ್ನು ನೋಡಿಕೊಳ್ಳಲು ಮುಂದೆ ಬಂದರೂ ಅದನ್ನು ತಿರಸ್ಕರಿಸಿದ್ದಾರೆ. ಆಗ ತಿಮ್ಮಕ್ಕ ಹೇಳಿದ ಮಾತು, ನಾನು ನನ್ನ ಪತಿ ಬೆಳೆಸಿರುವ ಸಾಲುಮರಗಳನ್ನ ನೋಡುತ್ತಾ, ಆದ್ರ ನೆರಳಿನಲ್ಲೇ ವಿಹರಿಸುತ್ತಾ ಹುಲಿಕಲ್‍ನಲ್ಲೇ ಇರುತ್ತೇನೆಂದು ಮಹಾತಾಯಿ ತಿಮ್ಮಕ್ಕ ಹೇಳಿದ್ರು. ಇನ್ನು ಎಲ್ಲಾದ್ರೂ ಸಸಿ ನೆಡುವ ಕಾರ್ಯಕ್ರಮ ಇದ್ದರಂತೂ ತಿಮ್ಮಕ್ಕನವರ ಅಮೃತ ಹಸ್ತ ಇರಲೇಬೇಕು.. ಇಲ್ಲವಾದ್ರೆ ಅದು ಪರಿಪೂರ್ಣವಾಗೋಲ್ಲ ಅನ್ನೋದು ಅವರ ನಂಬಿಕೆ.. ಪರಿಸರ ರಕ್ಷಣೆಯ ಕಾಯಕದ ಜೊತೆಗೆ ಸಮಾಜ ಸೇವಾ ಕೆಲಸಗಳನ್ನು ತಿಮ್ಮಕ್ಕ ಮಾಡತ್ತಿದ್ದಾರೆ .

image


ಸಮಾಜ ಸೇವಕಿ ತಿಮ್ಮಕ್ಕ..!

ತಿಮ್ಮಕ್ಕರಿಗೆ ಸಂಘ ಸಂಸ್ಥೆಗಳು ಧನಸಹಾಯ ಮಾಡಿದ್ರೆ, ತಿಮ್ಮಕ್ಕನವರು ತಮ್ಮ ಹಳ್ಳಿಗೆ ಹೆರಿಗೆ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಇನ್ನಿತರ ಸೇವೆಗಳಿಗೆ ಹಣ ನೀಡತ್ತಾರೆ. ಚೈತನ್ಯದ ಚಿಲುಮೆಯಾಗಿ ಪರಿಸರಕ್ಕಾಗಿ ಕೆಲಸ ಮಾಡುತ್ತಿರುವ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ. ಶಾಲೆಗೆ ಹೋಗಿ ಏನು ಕಲಿಯದೇ ಇದ್ದರೂ, ಪರಿಸರ ಪ್ರೀತಿಯಿಂದ ಸಸ್ಯ ಲೋಕದ ಜ್ಞಾನವನ್ನು ಸಂಪಾದಿಸಿದ್ದಾರೆ. ಯಾವುದೇ ಗಿಡದ ಎಲೆಯಾದ್ರೂ ತಟ್ಟನೆ ಗುರುತಿಸುತ್ತಾರೆ. ವಿದ್ಯೆ ಇಲ್ಲದಿದ್ದರೂ, ಬುದ್ಧಿವಂತೆಯಾಗಿರೋ ತಿಮ್ಮಕ್ಕ, ಇಂದು ಶಾಲಾ ಮಕ್ಕಳ ಪುಸ್ತಕದಲ್ಲಿ ಪಾಠವಾಗಿದ್ದಾಳೆ. ಅಮೆರಿಕಾದ ಸಂಯುಕ್ತ ಸಂಸ್ಥಾನದ ನಾಲ್ಕು ವಿ.ವಿಗಳಲ್ಲಿ ಅವರ ಹೆಸರಿನ ಪರಿಸರ ಅಧ್ಯಯನಗಳಿವೆ.

image


ಇನ್ನು ನೂರಾರು ಗಿಡಗಳು, ಮರಗಳಾಗಿ ಸಾವಿರಾರು ಹಕ್ಕಿ, ಪಕ್ಷಿಗಳ ವಾಸಸ್ಥಾನಕ್ಕೆ ತಿಮ್ಮಕ್ಕ ಕಾರಣರಾಗಿದ್ದಾರೆ. ಇವರಿಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಹೆದ್ದಾರಿಯ 4 ಕಿಲೋಮೀಟರ್​​​ ಉದ್ದಳತೆಯಲ್ಲಿ ನೆಟ್ಟಿರುವ 284 ಮರಗಳ ಪೋಷಣೆಯನ್ನು ಗಮನಿಸಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಗೌರವ ಪುರಸ್ಕರ ನೀಡಿವೆ. ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ವೀರ ಚಕ್ರ ಪ್ರಶಸ್ತಿ ,ಕರ್ನಾಟಕ ಸರಕಾರದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯಿಂದ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೀಯ ಪ್ರಮಾಣ, ಕರ್ನಾಟಕ ಪ್ರಶಸ್ತಿ, ಗಾಡ್‍ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ ,ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಕ್ಷಿ ಪ್ರಶಸ್ತಿ, ಹೀಗೆ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ತಿಮ್ಮಕ್ಕೆ ಮಾಡಿದ ಸೇವೆಗೆ ಸಂದಿದೆ. ತಿಮ್ಮಕ್ಕೆ ಬಗ್ಗೆ ಹೇಳತ್ತಾ ಹೋದ್ರೆ ಅದು ದೊಡ್ಡ ಕಥೆಯೇ ಆಗುತ್ತದೆ. ಅಷ್ಟರ ಮಟ್ಟಿಗೆ ತಿಮ್ಮಕ್ಕ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ.ನಾವು ಜೀವಿಸುವ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರೋ ತಿಮಕ್ಕರಿಗೆ 2015ನೇ ಸಾಲಿನ ಹಸಿರು ಪ್ರಶಸ್ತಿಯ ಗರಿಯೂ ಸಿಕ್ಕಿದೆ. ಯಾರೂ ಹೇಳದೇ, ಯಾರನ್ನೂ ಕೇಳದೆ ಜೊತೆಗೆ ಯಾರಿಂದಲೂ ಏನನ್ನೂ ಬಯಸದೇ ತಿಮ್ಮಕ್ಕೆ ಮಾಡಿರುವ ಸಾಮಾಜಿಕ ಕಾರ್ಯ ಎಲ್ಲರಿಗೂ ಮಾದರಿ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags