68ರ ಹರೆಯದಲ್ಲೂ ಶಾಲೆಗೆ ಹೋಗುವ ಉತ್ಸಾಹ - ನೇಪಾಳದ ಹಿರಿಯ ವಿದ್ಯಾರ್ಥಿ ದುರ್ಗಾ ಕಮಿ

ಟೀಮ್​ ವೈ.ಎಸ್​. ಕನ್ನಡ

68ರ ಹರೆಯದಲ್ಲೂ ಶಾಲೆಗೆ ಹೋಗುವ ಉತ್ಸಾಹ - ನೇಪಾಳದ ಹಿರಿಯ ವಿದ್ಯಾರ್ಥಿ ದುರ್ಗಾ ಕಮಿ

Sunday June 26, 2016,

2 min Read

ಅರವತ್ತಾಯ್ತು ಅಂದ್ರೆ ಬಹುತೇಕ ಎಲ್ಲರದ್ದೂ ವಿಶ್ರಾಂತಿ ಜೀವನ. ಬೆಳ್ಳಂಬೆಳಗ್ಗೆ ಎದ್ದು ಕಾಫಿ ಹೀರುತ್ತ ದಿನಪತ್ರಿಕೆ ಓದುವುದರಿಂದ ಅವರ ದಿನಚರಿ ಆರಂಭವಾಗುತ್ತದೆ. ಆದ್ರೆ 68ರ ದುರ್ಗಾ ಕಮಿ ಅವರು ಮಾತ್ರ ಹಾಗಲ್ಲ. ಬೆಳಗ್ಗೆ ಬೇಗನೆ ಎದ್ದು ತಮ್ಮ ಉದ್ದನೆಯ ಬಿಳಿ ಗಡ್ಡವನ್ನು ನೀಟಾಗಿ ಬಾಚಿಕೊಂಡು, ಬಿಳಿ ಅಂಗಿ, ಟೈ ಹಾಗೂ ಬೂದುಬಣ್ಣದ ಪ್ಯಾಂಟ್ ಯೂನಿಫಾರ್ಮ್ ಧರಿಸಿ ಹೊರಡ್ತಾರೆ. ಅರೆ ಈ ವಯಸ್ಸಿನಲ್ಲೂ ಕಚೇರಿಗೆ ಹೋಗ್ತಾರಾ ಅಂದ್ಕೋಬೇಡಿ ದುರ್ಗಾ ಹೋಗೋದು ಕಚೇರಿಗಲ್ಲ ಶಾಲೆಗೆ. ಹೌದು ಸುಮಾರು ಒಂದು ಗಂಟೆ ನಡೆದುಕೊಂಡೇ ಅವರು ಶಾಲೆ ಸೇರ್ತಾರೆ. ಇಳಿ ವಯಸ್ಸಿನಲ್ಲೇ ಕಲಿಯಬೇಕೆಂಬ ಹಂಬಲ ಅವರದ್ದು.

ಒಳ್ಳೆ ಶಿಕ್ಷಣ ಪಡೆದು ಶಿಕ್ಷಕರಾಗಿ ಮಕ್ಕಳಿಗೆ ಪಾಠ ಹೇಳಬೇಕೆಂಬ ಆಸೆ ದುರ್ಗಾ ಅವರಿಗಿತ್ತು. ಆದ್ರೆ ಬಡತನದಿಂದಾಗಿ ಅವರ ಕನಸು ನನಸಾಗಲೇ ಇಲ್ಲ. ಬಾಳ ಮುಸ್ಸಂಜೆಯಲ್ಲಿರುವ ದುರ್ಗಾ ಅವರದ್ದೀಗ ಒಂಟಿ ಬದುಕು. ಪತ್ನಿ ಕೂಡ ಇಹಲೋಕ ತ್ಯಜಿಸಿದ್ದಾರೆ. ಏಕಾಂಗಿಯಾಗಿ ಬದುಕು ಸವೆಸುವ ಬದಲು ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳೋಣ ಎಂದುಕೊಂಡ ಅವರು ಮತ್ತೆ ಶಾಲೆಗೆ ದಾಖಲಾದ್ರು. ದುಃಖವನ್ನು ಮರೆಯಲೆಂದೇ ನಾನು ಶಾಲೆಗೆ ಹೋಗುತ್ತೇನೆ ಎನ್ನುತ್ತಾರೆ ಅವರು. ಬಹುಷಃ ದುರ್ಗಾ ನೇಪಾಳದ ಅತ್ಯಂತ ಹಿರಿಯ ವಿದ್ಯಾರ್ಥಿ. ಶ್ರೀ ಕಲಾ ಭೈರವ ಪ್ರೌಢ ಶಾಲೆಯ 200 ವಿದ್ಯಾರ್ಥಿಗಳಲ್ಲಿ ದುರ್ಗಾ ಕೂಡ ಒಬ್ಬರು.

image


ಒಂಟಿ ಕೋಣೆಯ ಮನೆಯಲ್ಲಿ ಏಕಾಂಗಿಯಾಗಿ ನೀರಸ ಬದುಕು ಸವೆಸಬೇಕಿದ್ದ ತಮ್ಮಲ್ಲಿ ಶಾಲೆಯ ಮಕ್ಕಳು ಹೊಸ ಉತ್ಸಾಹ ಹಾಗೂ ಚೇತನ ತುಂಬಿದ್ದಾರೆ ಎನ್ನುತ್ತಾರೆ ಅವರು. ``ಈ ವಯಸ್ಸಾದ ವ್ಯಕ್ತಿ ಯಾಕೆ ಶಾಲೆಗೆ ಬರುತ್ತಿದ್ದಾರೆ ಎಂದು ನನಗೆ ಮೊದಮೊದಲು ಅಚ್ಚರಿಯಾಗುತ್ತಿತ್ತು. ಆದ್ರೆ ಈಗ ಅವರೊಂದಿಗೆ ಹೊಂದಿಕೊಂಡಿದ್ದೇನೆ, ಗೆಳೆತನ ಬೆಳೆದಿದೆ ಎನ್ನುತ್ತಾನೆ ದುರ್ಗಾ ಅವರ ಸಹಪಾಠಿ, 14ರ ಬಾಲಕ ಸಾಗರ್ ಥಾಪಾ. ಆರಂಭದಲ್ಲಿ ದುರ್ಗಾ ಕಲಿಕೆಯಲ್ಲಿ ಕೊಂಚ ಹಿಂದಿದ್ದರು, ನಾವೆಲ್ಲ ಅವರಿಗೆ ನೆರವಾಗಿದ್ದೇವೆ ಎಂದು ಸಾಗರ್ ಖುಷಿಯಿಂದ ಹೇಳಿಕೊಂಡಿದ್ದಾನೆ.

ಇದನ್ನು ಓದಿ: ಬಳಸಿಕೊಂಡಿದ್ದು ಸೆಕೆಂಡ್​ಹ್ಯಾಂಡ್​ ವಸ್ತು- ತಯಾರಾಗಿದ್ದು ಪರಿಸರ ಸ್ನೇಹಿ ಕಾರು..!

ದುರ್ಗಾ ಅವರಿಗೆ ಚಿಕ್ಕ ಮಕ್ಕಳ ಜೊತೆ ಕುಳಿತು ಪಾಠ ಕಲಿಯಲು ಮುಜಗರವೇನಿಲ್ಲ. ಅವರಿಗೆ ಓದಲು ಬರೆಯಲು ಬರುತ್ತಿರಲಿಲ್ಲ. ಕಹರಯ್ ಪ್ರಾಥಮಿಕ ಶಾಲೆಯಲ್ಲಿ 10-11 ವರ್ಷದ ಪುಟ್ಟ ಮಕ್ಕಳೊಂದಿಗೆ ಕುಳಿತು ಕಲಿತು ದುರ್ಗಾ 5ನೇ ತರಗತಿಯಲ್ಲಿ ಉತ್ತೀರ್ಣರಾದ್ರು. ಬಳಿಕ ಕಲಾಭೈರವ ಪ್ರೌಢಶಾಲೆಯ ಶಿಕ್ಷಕರಾದ ಡಿ.ಆರ್.ಕೊಯಿರಾಲ ಶಿಕ್ಷಣ ಮುಂದುವರಿಸಲು ದುರ್ಗಾ ಅವರನ್ನು ತಮ್ಮ ಶಾಲೆಗೆ ಆಹ್ವಾನಿಸಿದ್ರು. ಅಷ್ಟೇ ಅಲ್ಲ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಕೂಡ ಒದಗಿಸಿದ್ರು. ``ನನ್ನ ತಂದೆಯ ವಯಸ್ಸಿನವರಿಗೆ ಪಾಠ ಹೇಳುತ್ತಿರುವುದು ಇದೇ ಮೊದಲು. ಇದು ನನಗೆ ಖುಷಿ ಕೊಟ್ಟಿದೆ'' ಎನ್ನುತ್ತಾರೆ ಡಿ.ಆರ್.ಕೊಯಿರಾಲ. ಶಾಲೆಯಲ್ಲಿ ವಿದ್ಯಾರ್ಥಿ ವೇತನ ಕೂಡ ದುರ್ಗಾ ಅವರಿಗೆ ಸಿಕ್ಕಿದೆ. ಆದ್ರೆ ಕಿತ್ತು ತಿನ್ನುವ ಬಡತನದಿಂದಾಗಿ ಮೂರು ಹೊತ್ತು ಸೊಂಪಾಗಿ ಊಟ ಮಾಡುವ ಭಾಗ್ಯ ಅವರಿಗಿಲ್ಲ. ಬೆಳಗ್ಗೆ ಅನ್ನ ಹಾಗೂ ತರಕಾರಿ ಸೇವಿಸಿದ್ರೆ ಅವರು ಮತ್ತೆ ಊಟ ಮಾಡುವುದು ರಾತ್ರಿಯೇ.

image


10ನೇ ತರಗತಿಯಲ್ಲಿರುವ ಅವರ ಸಹಪಾಠಿಗಳು ದುರ್ಗಾ ಅವರನ್ನು ``ಬಾ'' ಎಂದೇ ಕರೆಯುತ್ತಾರೆ, ಅದರರ್ಥ ನೇಪಾಳಿಯಲ್ಲಿ ತಂದೆ ಎಂದು. ಹಿರಿ ವಯಸ್ಸಿನವರೆಂದು ಅವರನ್ನು ದೂರವಿಟ್ಟಿಲ್ಲ. ಎಲ್ಲ ಚಟುವಟಿಕೆಯಲ್ಲೂ ದುರ್ಗಾ ಪಾಲ್ಗೊಳ್ಳುತ್ತಾರೆ. ಮಕ್ಕಳೊಂದಿಗೆ ಮಕ್ಕಳಾಗಿ ವಾಲಿಬಾಲ್ ಕೂಡ ಆಡುತ್ತಾರೆ. ಕಲಿಕೆಯನ್ನು ಮುಂದುವರಿಸುವ ಬಯಕೆ ದುರ್ಗಾ ಅವರದ್ದು, ಸಾಯುವ ವರೆಗೂ ಕಲಿಯುತ್ತಲೇ ಇರಬೇಕೆಂದು ತಮ್ಮಾಸೆ ಎನ್ನುತ್ತಾರೆ ಅವರು. ತಮ್ಮಂತೆ ಬಿಳಿ ಗಡ್ಡದೊಂದಿಗೆ ಶಾಲೆಗೆ ಹೋಗುವ ಎಲ್ಲ ಹಿರಿಯರಿಗೂ ಪ್ರೇರಣೆಯಾಗಬೇಕು ಅನ್ನೋದು ದುರ್ಗಾ ಅವರಾಸೆ. ಒಟ್ಟಿನಲ್ಲಿ ಇಳಿವಯಸ್ಸಿನಲ್ಲೂ ಮಕ್ಕಳೊಂದಿಗೆ ಮಕ್ಕಳಾಗಿ ಶಾಲೆಗೆ ಹೋಗ್ತಾ ಇರೋ ದುರ್ಗಾ ಅವರನ್ನು ಮೆಚ್ಚಲೇಬೇಕು. ವಯಸ್ಸಿನ ಪರಿವೆಯಿಲ್ಲದೆ ಬಡತನವನ್ನು ಲೆಕ್ಕಿಸದೆ ಶಿಕ್ಷಣವೇ ಜೀವನ ಎಂದುಕೊಂಡಿರುವ ನೇಪಾಳದ ಈ ಹಿರಿಜೀವ ನಿಜಕ್ಕೂ ಎಲ್ಲರಿಗೂ ಮಾದರಿ. 

ಇದನ್ನು ಓದಿ:

1. ರಂಜಾನ್ ತಿಂಗಳಲ್ಲೊಂದು ಪವಿತ್ರ ಕೆಲಸ- ಅರಬ್ ದೇಶಗಳಲ್ಲಿ ಸುಮಯ್ಯ ಹೊಸ ಸಾಹಸ

2. ಭಾರತೀಯ ರೈಲ್ವೇಗೂ ಬಂತೂ ಬದಲಾವಣೆಯ ಕಾಲ..!

3. "ತಿಥಿ"ಫೇಮಸ್ ಆಗಿದ್ದು ಹೇಗೆ ಗೊತ್ತಾ..? ಸೆಕ್ಯುರಿಟಿ ಗಾರ್ಡ್​ನ ಕಥೆಗೆ ಸಿಕ್ತು ನ್ಯೂ ಲುಕ್​...!

    Share on
    close