ಪ್ರವಾಹವನ್ನು ಎದುರಿಸಲು ಸಜ್ಜಾದ ಕೇರಳದ ನೀರಿನಲ್ಲಿ ತೇಲುವ ಮನೆಗಳು
ಕೇರಳದ ವಾಜಪ್ಪಿಳ್ಳಿಯ ನಿವಾಸಿ ಪಿ ಗೋಪಾಲಕೃಷ್ಣನ್ ಆಚಾರಿ ವಿನೂತನವಾಗಿ ಮರದ ದಿಮ್ಮಿಗಳು ಮತ್ತು ಸ್ಟೀಲ್ ಪೈಪ್ ಗಳನ್ನು ಬಳಸಿ ಕಡಿಮೆವೆಚ್ಚದಲ್ಲಿ ನೆರೆಯನ್ನು ಎದುರಿಸಬಹುದಾದ ರೀತಿಯಲ್ಲಿ ತಮ್ಮ ಮನೆಯನ್ನು ಸಜ್ಜುಗೊಳಿಸಿದ್ದಾರೆ.
- +0
- +0
ಹೆಚ್ಚುತ್ತಿರುವ ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ಇವೆಲ್ಲವೂ, ಪ್ರಕೃತಿ ವಿಕೋಪದಲ್ಲಿ ಕೊನೆಗಾಣುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ವಿವಿಧ ಭಾಗದಲ್ಲಿ ಅತೀವೃಷ್ಟಿ - ಭೂಕುಸಿತ ಮೊದಲಾದ ಘಟನೆಗಳು ಜರುಗಿದ್ದು ಅತೀವ ಪ್ರಾಣ ಹಾನಿ ಆಸ್ತಿ ಪಾಸ್ತಿಗಳು ಹಾನಿಗೊಂಡಿರುವುದು ನಮಗೆಲ್ಲರಿಗೂ ಮರೆಯಲಾಗದ ವಿಷಯ.
ಇಂತಹ ಸಂಧರ್ಭದಲ್ಲಿ ಸರ್ವಸ್ವವನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಕೆಲವರು ಮುಳುಗಿದ್ದರೆ, ಇನ್ನು ಕೆಲವರು ಇದರಿಂದ ಉಂಟಾಗುವ ಹಾನಿಯನ್ನು ಹೇಗೆ ತಪ್ಪಿಸಬಹುದೆಂದು ಯೋಚಿಸುತ್ತಾರೆ. ಹೀಗೆ ಯೋಚಿಸಿದವರು ಕೇರಳ ರಾಜ್ಯದ ವಾಜಪ್ಪಿಲ್ಲಿನ ನಿವಾಸಿ ಪಿ ಗೋಪಾಲಕೃಷ್ಣನ್ ಆಚಾರಿ.
ಕಳೆದ ಕೆಲವು ವರ್ಷಗಳಿಂದ ಕೇರಳ ರಾಜ್ಯವು ಮನೆ ನಿರ್ಮಿಸಲು ಅಗತ್ಯವಾದ ಲೋಹ, ಮರಳು ಮೊದಲಾದ ವಸ್ತುಗಳ ಅಭಾವವನ್ನು ಎದುರಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ಕೇರಳದ ವಾಜಪ್ಪಿಳ್ಳಿಯ ನಿವಾಸಿ ಪಿ ಗೋಪಾಲಕೃಷ್ಣನ್ ಆಚಾರಿ ವಿನೂತನವಾಗಿ ಮರದ ದಿಮ್ಮಿಗಳು ಮತ್ತು ಸ್ಟೀಲ್ ಪೈಪ್ ಗಳನ್ನು ಬಳಸಿ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದರು. ಇತ್ತೀಚಿಗೆ ಕೇರಳ ನೆರೆಪ್ರವಾಹವನ್ನು ಎದುರಿಸಿದ ಸಂದರ್ಭದಲ್ಲಿ ಗೋಪಾಲಕೃಷ್ಣನ್ ಆಚಾರಿ ಅವರು ಪ್ರವಾಹಕ್ಕೆ ಹೊಂದಿಕೊಳ್ಳುವಂತೆ ತಮ್ಮ ಮನೆಯನ್ನು ಸಜ್ಜುಗೊಳಿಸಿದರು.

ಗೋಪಾಲಕೃಷ್ಣನ್ ಅವರ ಮನೆ (ಚಿತ್ರಕೃಪೆ: ಮನೋರಮ ಆನ್ಲೈನ್)
ಈ ತೇಲುವ ಮನೆಯ ರಚನೆಯನ್ನು ಗೋಪಾಲಕೃಷ್ಣನ್ ಅವರ ಪ್ರಕಾರ ವಿವರಿಸುವುದಾದರೆ,
ಮನೆಯ ಗೋಡೆಯ ಆಧಾರಕ್ಕೆ ನಾಲ್ಕು ಸ್ಟೀಲ್ ಪಿಸ್ಟನ್ಗಳನ್ನು ನಾಲ್ಕು ಮೂಲೆಗಳಲ್ಲಿ ನಿಲ್ಲಿಸಲಾಗಿದೆ. ಈ ಪಿಸ್ಟನ್ಗಳು ಮನೆಯ ಹೊರಗಿನಿಂದ ಅಥವಾ ಒಳಗಿನಿಂದ ಗೋಚರಿಸುವುದಿಲ್ಲ ಮತ್ತು ಅವು ಭೂಮಿಯಲ್ಲಿ 25 ಅಡಿಗಳಷ್ಟು ಆಳದಲ್ಲಿ ಭದ್ರವಾಗಿವೆ.
ಮನೆ ಈ ಪಿಸ್ಟನ್ಗಳ ಮೇಲೆ ನಿಂತಿದೆ, ಮನೆ ಭೂಮಿಯನ್ನು ಮುಟ್ಟುವುದಿಲ್ಲ. ಪ್ರವಾಹದ ಸಮಯದಲ್ಲಿ, ಮನೆ ಪಿಸ್ಟನ್ನ ಬೆಂಬಲದೊಂದಿಗೆ ಏರ್ ಟ್ಯಾಂಕ್ನೊಂದಿಗೆ ಮೇಲಕ್ಕೆ ಚಲಿಸುತ್ತದೆ. ಏರ್ ಟ್ಯಾಂಕ್ ಸುಮಾರು 6 ಟನ್ ಭಾರವನ್ನು ತಡೆಯುತ್ತದೆ. ನೀರು ಕಡಿಮೆಯಾದಾಗ ಅದು ಸ್ವಯಂಚಾಲಿತವಾಗಿ ಸಾಮಾನ್ಯ ಮಟ್ಟಕ್ಕೆ ಬರುತ್ತದೆ. ಮನೆ ಒಂದು ಇಂಚು ಇನ್ನೊಂದು ಬದಿಗಳಿಗೆ ಚಲಿಸುವುದಿಲ್ಲ, ವರದಿ ಮನೋರಮ ಆನ್ಲೈನ್.

ತಯಾರಾದ ಮಾದರಿ ಮನೆ (ಚಿತ್ರಕೃಪೆ: ಮನೋರಮ ಆನ್ಲೈನ್)
ಎಲ್ಲರಿಗೂ ಕೈ ಗೆಟಕುವ ದರದಲ್ಲಿ ಸುಂದರ ಮನೆ
ಗೋಪಾಲಕೃಷ್ಣ ಆಚಾರಿ ಅವರೆ ಹೇಳುವಂತೆ ಈ ಮನೆಯ ಪ್ರತಿ ಚದರ ಅಡಿಗೆ ಅವರು ಮಾಡಿರುವ ಖರ್ಚು 1,600 ರೂಪಾಯಿಗಳು. ಆದರೆ ಇದು ನುರಿತ ಕೆಲಸಗಾರರನ್ನು ಬಯಸುವ ಕೆಲಸ. ವೆಲ್ಡಿಂಗ್ ಮತ್ತು ಮರಕೆಲಸ, ಕೊಳಾಯಿ ಕೆಲಸ ಮೊದಲಾದ ಕೆಲಸವನ್ನು ನಾಜೂಕಿನಿಂದ ನಿಭಾಯಿಸಬೇಕು ಎಂಬುವುದು ಅವರ ಅಭಿಪ್ರಾಯ, ವರದಿ ದಿ ಬೆಟರ್ ಇಂಡಿಯಾ.

ಪುರಸ್ಕೃತರಾದ ಗೋಪಾಲಕೃಷ್ಣನ್ ಆಚಾರಿ (ಬಲಗಡೆ) (ಚಿತ್ರಕೃಪೆ: ಪಿ ಗೋಪಾಲಕೃಷ್ಣನ್ ಆಚಾರಿ)
ಸುಮಾರು 1300 ಚದರ ಮೀಟರ್ ಅಡಿಯಲ್ಲಿ ನಿರ್ಮಿಸಲಾದ ಈ ಮನೆ ಸುಮಾರು 15 ಲಕ್ಷ ವೆಚ್ಚದಲ್ಲಿ 4 ತಿಂಗಳ ಅವಧಿಯ ಒಳಗೆ ಕಾಮಗಾರಿ ಪೂರ್ಣಗೊಂಡಿದೆ. ಈ ಮಾದರಿ ಮನೆಯು ಕುಟ್ಟನಾಡಿನಂತಹ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಹಾಯ ಮಾಡುತ್ತದೆ, ಮಾತ್ರವಲ್ಲದೆ ಇವರ ಈ ಕೆಲಸವು ರಾಜ್ಯದ ಮತ್ತು ಪಕ್ಕದ ರಾಜ್ಯಗಳ ಗಮನ ಸೆಳೆದಿದ್ದು, ಹಲವಾರು ಸಿವಿಲ್ ಎಂಜಿನಿಯರ್ ಗಳು, ವಾಸ್ತುಶಿಲ್ಪಿಗಳು, ಮೊದಲಾದವರು ಇವರಿಂದ ಪ್ರಭಾವಿತರಾಗಿದ್ದಾರೆ.
ಒಟ್ಟಿನಲ್ಲಿ ಗೋಪಾಲಕೃಷನ್ ಅವರ ಈ ವಿನೂತನ ಪ್ರಯತ್ನ ಮುಂದಿನ ದಿನಕ್ಕೆ ಆಶಾಕಿರಣ ಎಂದರೆ ತಪ್ಪಾಗಲಾರದು. ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪ ಮತ್ತು ವಿರಳವಾಗುತ್ತಿರುವ ಮರಳು ಹಾಗೂ ಇತರ ಸಾಧನಗಳು, ಇವೆಲ್ಲದರ ಮಧ್ಯೆ ಈ ಮನೆ, ಬಡವರ ಬಂಧುವೇ ಸರಿ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.
- +0
- +0