ಶುಲ್ಕರಹಿತ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ ಕೊಚ್ಚಿಯ ಈ ಹನ್ನೆರಡು ವರ್ಷದ ವಿದ್ಯಾರ್ಥಿನಿ

ಟಿ.ಡಿ. ಹೈಸ್ಕೂಲಿನ ಎಂಟನೇ ತರಗತಿಯ ವಿದ್ಯಾರ್ಥಿನಿ ಯಶೋಧ ಶೆಣೈ ತಮ್ಮ ಮನೆಯಲ್ಲಿಯೇ ಒಂದು ಗ್ರಂಥಾಲಯವನ್ನು ನಡೆಸುತ್ತಿದ್ದಾರೆ. ಇದರಲ್ಲಿ ಇಂಗ್ಲಿಷ್, ಮಲಯಾಳಂ, ಹಿಂದಿ, ತಮಿಳು, ಸಂಸ್ಕೃತ ಹಾಗು ಕೊಂಕಣಿ ಭಾಷೆ ಸೇರಿ ಸುಮಾರು ಮೂರು ಸಾವಿರ ಪುಸ್ತಕಗಳಿವೆ.

ಶುಲ್ಕರಹಿತ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ ಕೊಚ್ಚಿಯ ಈ ಹನ್ನೆರಡು ವರ್ಷದ ವಿದ್ಯಾರ್ಥಿನಿ

Sunday July 21, 2019,

2 min Read

ಒಮ್ಮೆ ಕಲ್ಪಿಸಿಕೊಳ್ಳಿ. ನೀವು ಗ್ರಂಥಾಲಯದಿಂದ ತಂದ ಪುಸ್ತಕವನ್ನು ತಡವಾಗಿ ಹಿಂದಿರುಗಿಸಿದರೂ ದಂಡ ಕಟ್ಟಿಸಿಕೊಳ್ಳದ, ಸದಸ್ಯತ್ವ ಶುಲ್ಕವನ್ನೂ ಪಡೆಯದ ಒಂದು ಗ್ರಂಥಾಲಯವಿದ್ದರೆ ಹೇಗಿರುತ್ತದೆ? ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಕನಸಲ್ಲವೇ ಇದು?


ಕೇರಳದ ಕೊಚ್ಚಿಯ ಜನರಿಗೆ ಈ ಕನಸು ನನಸಾಗಿದೆ. ಟಿ.ಡಿ. ಹೈಸ್ಕೂಲಿನ ಎಂಟನೇ ತರಗತಿಯ ವಿದ್ಯಾರ್ಥಿನಿ ಯಶೋಧ ಶೆಣೈ ತಮ್ಮ ಮನೆಯಲ್ಲಿಯೇ ಒಂದು ಉಚಿತ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ. ಇದರಲ್ಲಿ ಇಂಗ್ಲಿಷ್, ಮಲಯಾಳಂ, ಹಿಂದಿ, ತಮಿಳು, ಸಂಸ್ಕೃತ ಹಾಗು ಕೊಂಕಣಿ ಭಾಷೆ ಸೇರಿ ಸುಮಾರು 3,500 ಪುಸ್ತಕಗಳಿವೆ.


ಕ

ತಮ್ಮ ಗ್ರಂಥಾಲಯದಲ್ಲಿ ಯಶೋಧ ಶೆಣೈ (ಚಿತ್ರ: ಅರುಣ್ ಅಂಗೆಲ)

ಎಡೆಕ್ಸ್ ಲೈವ್ ನೊಂದಿಗಿನ ತನ್ನ ಸಂದರ್ಶನದಲ್ಲಿ ಯಶೋಧ,


"ನನ್ನ ಸಹೋದರ ಗ್ರಂಥಭಂಡಾರವೊಂದರ ಸದಸ್ಯನಾಗಿದ್ದ. ಕೆಲವೊಮ್ಮೆ ನಾನೂ ಅವನೊಟ್ಟಿಗೆ ಅಲ್ಲಿಗೆ ಹೋಗುತ್ತಿದ್ದೆ. ಒಮ್ಮೆ ನಮ್ಮ ತಂದೆ ಗ್ರಂಥ ಪಾಲಕರಿಗೆ ಹಣ ನೀಡುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು. ಈ ಪದ್ಧತಿಯೇ ತಪ್ಪು ಎಂಬುದು ನನ್ನ ಅಭಿಪ್ರಾಯವಾಗಿತ್ತು. ಅಷ್ಟಕ್ಕೂ ಯಾರಿಗಾದರೂ ಓದಿಸುವುದೆಂದರೆ ಅದು ಸೇವೆ ಮಾಡಿದಂತೆ. ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ ಎಲ್ಲರೂ ಓದಬೇಕು ಎಂಬುದು ನನ್ನ ಆಸೆ"


ಯಶೋಧ ತಮ್ಮ ಗ್ರಂಥಾಲಯದಲ್ಲಿ ಯಾವುದೇ ಸದಸ್ಯತ್ವ ಶುಲ್ಕವನ್ನೂ ತೆಗೆದುಕೊಳ್ಳುವುದಿಲ್ಲವಾದರು, ಸಮಯಕ್ಕೆ ಸರಿಯಾಗಿ ಪುಸ್ತಕವನ್ನು ಹಿಂದಿರುಗಿಸುವಂತೆ ಕೇಳಿಕೊಳ್ಳುತ್ತಾರೆ.


ಯಶೋಧ ಅವರಿಗೆ ಗ್ರಂಥಾಲಯವನ್ನು ಪ್ರಾರಂಭಿಸುವುದು ಸುಲಭದ ಮಾತಾಗಿರಲಿಲ್ಲ. ಹಾಗಾಗಿ , ಅವರು ತಮ್ಮ ತಂದೆ ದಿನೇಶ್ ಶೆಣೈ ಅವರ ಸಹಾಯ ಕೋರಿದರು. ದಿನೇಶ್ ಶೆಣೈ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ, ತಮ್ಮ ಮಗಳ ಶುಲ್ಕರಹಿತ ಗ್ರಂಥಾಲಯದ ಬಗ್ಗೆ ಪ್ರಸ್ತಾಪಿಸಿ ಸಹಾಯ ಮಾಡುವಂತೆ ಕೋರಿದಾಗ ತಮ್ಮ ಕುಟುಂಬ ಮತ್ತು ಬಂಧುವರ್ಗದವರು 10,000ರೂ. ಮೌಲ್ಯದ ಪುಸ್ತಕಗಳನ್ನು ಕಳುಹಿಸಿ ಸಹಾಯ ಮಾಡಿದ್ದಾರೆ.


ನಂತರದಲ್ಲಿ ಯಶೋಧ ಸಹ ಹಳೆ ಪುಸ್ತಕ ವ್ಯಾಪಾರಿಗಳ ಬಳಿ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ.


"ಹೊಚ್ಚ ಹೊಸ ಪುಸ್ತಕಗಳು ಉಪಯೋಗಗೊಳ್ಳದೆ, ಬೇಜವಾಬ್ದಾರಿಯಿಂದ ಎಸೆಯಲ್ಪಟ್ಟಾಗ ದುಖಃವೆನಿಸುತ್ತದೆ‌. ಒಮ್ಮೆ ಮಾಜಿ ಸಂಸದ ಕೆ.ವಿ.ಥಾಮಸ್ ಹತ್ತು ಮತ್ತು ಹನ್ನೆರಡನೆ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿದ್ದರು. ಅವುಗಳು ಸಹ ನಿರ್ಲಕ್ಷ್ಯಕ್ಕೊಳಗಾಗಿದ್ದನ್ನು ನೋಡಿ, ಮೇಧಾವಿ ವಿದ್ಯಾರ್ಥಿಗಳೂ ಸಹ ಪುಸ್ತಕಗಳನ್ನು ಉಪಯೋಗಿಸದೆ ಎಸೆದದ್ದನ್ನು ಕಂಡು ಖೇದವಾಯಿತು. ನಾನು ಆ ಪುಸ್ತಕಗಳನ್ನು ಉಳಿಸಬಹುದಲ್ಲ ಎಂಬುದನ್ನು ಅರಿತು ಸಂತಸವಾಯಿತು." ನ್ಯೂ ಇಂಡಿಯಾ ಎಕ್ಸ್ಪ್ರೆಸ್ ಗೆ ಯಶೋಧ ಹೇಳಿದರು.


ಯಶೋಧ ಪ್ರಾರಂಭಿಸಲು ಹೊರಟ ಗ್ರಂಥಭಂಡಾರಕ್ಕೆ ಸ್ಥಳ ಬೇಕಾದಾಗ, ಚಿತ್ರ ಕಲಾವಿದರಾದ ಅವರ ತಂದೆ, ತಮ್ಮ ಗ್ಯಾಲರಿಯ ಒಂದು ಭಾಗವನ್ನು ಬಿಟ್ಟುಕೊಟ್ಟಿದ್ದಾರೆ‌. ಅವರ ಕುಟುಂಬದ ಗೆಳೆಯರೊಬ್ಬರು ಪುಸ್ತಕಗಳನ್ನಿಡಲು ಕಪಾಟುಗಳನ್ನು ತಯಾರಿಸಲು ಸಹಾಯ ಮಾಡಿದ್ದಾರೆ.


ಸದ್ಯದಲ್ಲಿ 110 ಜನ ಗ್ರಂಥಾಲಯದಲ್ಲಿ ಸದಸ್ಯರಾಗಿದ್ದಾರೆ. ಸಾಧ್ಯವಾದಲ್ಲಿ ಪ್ರತಿಯೊಬ್ಬರೂ ಸಹ ತಮ್ಮ ಸ್ವಂತ ಸಂಗ್ರಹದಲ್ಲಿರುವ ಕೆಲ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುವಂತೆ ಯಶೋಧ ವಿನಂತಿಸಿಕೊಂಡಿದ್ದಾರೆ.


ಇತ್ತೀಚೆಗೆ, ಯಶೋಧ ತಮ್ಮ ಗ್ರಂಥಾಲಯಕ್ಕೆ ಸಹಾಯ ಮಾಡುವಂತೆ ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

"ಈಗ ನಾನು ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ.ಅವರು ಪುಸ್ತಕಗಳನ್ನು ಕಳುಹಿಸುತ್ತಾರೆಂಬ ಭರವಸೆ ನನಗಿದೆ" ಎನ್ನುತ್ತಾರೆ ಯಶೋಧ.