ಕೋವಿಡ್‌-19ನಿಂದ ರಕ್ಷಿಸಲು ಬಂತು ಕೊರೊನಾಕವಚ ಅಪ್ಲಿಕೇಶನ್

ಮೀಟಿವೈ ಭಾರತಕ್ಕಾಗಿ ಕೊರೊನ ವೈರಸ್ ಟ್ರ್ಯಾಕರ್ ಅನ್ನು ನಿರ್ಮಿಸಿದ್ದು, ಇದನ್ನು ಇತರೆ ಸಾರ್ಕ್ ರಾಷ್ಟ್ರಗಳಿಗೂ ಲಭ್ಯವಾಗುವಂತೆ ಮಾಡಲು ಸರ್ಕಾರ ಯೋಜಿಸಿದೆ.

ಕೋವಿಡ್‌-19ನಿಂದ ರಕ್ಷಿಸಲು ಬಂತು ಕೊರೊನಾಕವಚ ಅಪ್ಲಿಕೇಶನ್

Friday March 27, 2020,

2 min Read

ಭಾರತದಲ್ಲಿ ಈ ವಾರದಲ್ಲಿ ಕೊರೊನ ವೈರಸ್ ಪ್ರಕರಣಗಳು 700ರ ಗಟಿಯನ್ನು ದಾಟುತ್ತಿವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ(ಮೀಟಿವೈ) ರಾಷ್ಟ್ರೀಯ ಇ-ಆಡಳಿತ ವಿಭಾಗವು ಸ್ಥಳ ಆಧಾರಿತ ಕೋವಿಡ್-19 ಟ್ರ್ಯಾಕಿಂಗ್ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿ ಪಡಿಸಿದೆ.


ಕೊರೊನ ಕವಚ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಅಪ್ಲಿಕೇಶನ್ ಬಳಕೆದಾರರ ಸ್ಥಳವನ್ನು ಭೌಗೋಳಿಕವಾಗಿ ಟ್ರೇಸ್ ಮಾಡುತ್ತದೆ ಮತ್ತು ಅವರು ಕೊರೊನ ವೈರಸ್‌ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆಯೇ ಎಂದು ಅವರಿಗೆ ತಿಳಿಸುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದರ ಬೀಟಾ ಆವೃತ್ತಿಯನ್ನು ಬಿಡುಗಡೆಗೊಳಿಸಿದ ಎರಡೇ ದಿನಗಳಲ್ಲಿ 10,000ಕ್ಕೂ ಹೆಚ್ಚು ಜನ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.


ಮೀಟಿವೈ ಅಪ್ಲಿಕೇಶನ್ ನ ವಿವರಣೆಯಲ್ಲಿ, “ಮಾಹಿತಿಯನ್ನು ನೀಡಲು ಮತ್ತು ಕೊರೊನ ವೈರಸ್ ಹರಡುವಿಕೆಯನ್ನು ತಗ್ಗಿಸಲು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇಲ್ಲಿನ ಮಾಹಿತಿಯನ್ನು ವಿಶ್ಲೇಷಿಸಲು ಮತ್ತು ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಒದಗಿಸಲು ಇದನ್ನು ಬಳಸಲಾಗುತ್ತದೆ," ಎಂದು ಬರೆಯಲಾಗಿದೆ.




ಕೊರೊನ ಕವಚ ಅಪ್ಲಿಕೇಶನ್ ಹೆಚ್ಚುವರಿ ವೈಶಿಷ್ಟ್ಯಗಳಾದ ನಿಮ್ಮ ಉಸಿರಾಟದ ಸಾಮರ್ಥ್ಯವನ್ನು ಪತ್ತೆ ಹಚ್ಚುವ ಮತ್ತು ನಿಮ್ಮ ರೋಗ ಲಕ್ಷಣಗಳ ಪರೀಕ್ಷಿಗೆ ಸಹಾಯವಾಗಬಲ್ಲ ಸಮೀಕ್ಷೆ ಪತ್ರವನ್ನು ಹೊಂದಿದೆ ಮತ್ತು ಅಗತ್ಯವಿದ್ದರೆ ವೈದ್ಯರನ್ನು ಭೇಟಿ ಮಾಡಲು ನಿಮಗೆ ಮಾರ್ಗದರ್ಶನ ನೀಡುತ್ತದೆ.


ಈ ಅಪ್ಲಿಕೇಶನ್ ನೊವೆಲ್ ಕೊರೊನ ವೈರಸ್‌ಗೆ ಸಂಬಂಧಿಸಿದಂತ ಸರ್ಕಾರದ ಸಲಹೆಗಳು ಮತ್ತು ಸುರಕ್ಷತಾ ಶಿಫಾರಸ್ಸುಗಳನ್ನು ಸಹ ಒಳಗೊಂಡಿದೆ ಮತ್ತು ಆಟೋ ಅಪಡೇಟ್‌ನ್ನು‌ ಒದಗಿಸುತ್ತದೆ.


ಈ ಅಪ್ಲಿಕೇಶನ್ ನೀವಿರುವ ಸ್ಥಳದ ಮಾಹಿತಿಯನ್ನು ಕೇಳುತ್ತದೆ, ‌ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಅದರ ಪರಿಶೀಲನೆಯ ನಂತರ ಖಾತೆಯನ್ನು ರಚಿಸಬಹುದಾಗಿದೆ.


ಕೋವಿಡ್-19 ಸಮುದಾಯದಲ್ಲಿ ಹರಡುವ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಾಗರಿಕರನ್ನು ಸೋಂಕಿತ ಬಳಕೆದಾರರಿಂದ ದೂರವಿರಿಸಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ ಎಂದು ಸರ್ಕಾರ ನಂಬುತ್ತದೆ. "ನಿಮ್ಮ ಲೋಕೆಶನ್ ಡಾಟಾ ಆಫ್‌ಲೈನ್‌ನಲ್ಲಿರುತ್ತದೆ ಮತ್ತು ಆರೋಗ್ಯದ ಅಪಾಯವಿದ್ದಾಗ ಮಾತ್ರ ಹಂಚಿಕೊಳ್ಳಲಾಗುತ್ತದೆ‌," ಎಂದು ಅದು ಹೇಳುತ್ತದೆ.


ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿಯವರು‌‌ ಈ ವೈರಸ್ ಪತ್ತೆ ಹಚ್ಚುವ ಸಾಫ್ಟ್‌ವೇರ್‌ ಅನ್ನು ಇತರೆ ಸಾರ್ಕ್ ರಾಷ್ಟ್ರಗಳೊಂದಿಗೆ (ಪಾಕಿಸ್ತಾನ, ಅಫ್ಘಾನಿಸ್ತಾನ, ಭೂತಾನ್, ನೇಪಾಳ, ಶ್ರೀಲಂಕಾ,‌ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶ) ಹಂಚಿಕೊಳ್ಳಲು ಮುಂದಾಗಿದ್ದಾರೆ.


"ಇದು ಮೊಬೈಲ್‌ ಅಪ್ಲಿಕೇಷನ್‌ನ ಬೀಟಾ ಆವೃತ್ತಿಯಾಗಿದ್ದು, ಅಧಿಕೃತ ಬಿಡುಗಡೆಯ ಮೊದಲು ಅಂತಿಮ ಪರೀಕ್ಷೆಗೆ ಒಳಪಟ್ಟಿದೆ," ಎಂದು ಮೀಟಿವೈ ಹೇಳಿದೆ.


ಇದಕ್ಕೂ ಮುಂಚೆ, ಕೊರೊನ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರವು ಮೈಗವ್ ಕೊರೊನ ಹೆಲ್ಪ್ ಡೆಸ್ಕ್‌ (MyGov Corona Help desk) ವಾಟ್ಸಾಪ್ ಚಾಟ್‌ಬಾಟ್ ಅನ್ನು ರಚಿಸಿತ್ತು.


ಚಾಟ್‌ಬಾಟ್ ಸಂದೇಶವನ್ನು ಸ್ವೀಕರಿಸಿದಾಗ, ಅದು ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಪರಿಹರಿಸಲು ಮಶೀನ್ ಲರ್ನಿಂಗ್ ಅನ್ನು ಬಳಸುತ್ತದೆ. ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಬಳಕೆದಾರರು 93213-98773ಗೆ ಸಂದೇಶ ಕಳುಹಿಸಬಹುದಾಗಿದೆ.