ಶೂನ್ಯ ತ್ಯಾಜ್ಯ ಸ್ಯಾನಿಟರಿ ಪ್ಯಾಡ್‌ ನಿರ್ಮಿಸಿದ ತೆಲಂಗಾಣದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು

ಮುಲ್ಕಪಲ್ಲಿಯ ಜಿಲ್ಲಾ ಪರಿಷದ್‌ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಯಾರಿಸಿರುವ ಸ್ತ್ರೀ ಶಕ್ತಿ ಪ್ಯಾಡ್‌ಗಳನ್ನು ಸುಲಭವಾಗಿ ವಿಘಟನೆಗೊಳ್ಳಬಲ್ಲ ಸಾವಯವ ವಸ್ತುಗಳಿಂದ ತಯಾರಿಸಲಾಗಿದೆ.

ಶೂನ್ಯ ತ್ಯಾಜ್ಯ ಸ್ಯಾನಿಟರಿ ಪ್ಯಾಡ್‌ ನಿರ್ಮಿಸಿದ ತೆಲಂಗಾಣದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು

Thursday January 07, 2021,

2 min Read

ಭಾರತದಲ್ಲಿ ಕೈಗೆಟಕುವ ದರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಾಗುವುದಿಲ್ಲ, ಜತೆಗೆ ಈಗ ಮಾರುಕಟ್ಟೆಯಲ್ಲಿ ಸಿಗುವ ಬಹುಪಾಲು ಪ್ಯಾಡ್‌ಗಳನ್ನು ಬಳಸಿ ಬಿಸಾಡುವುದರಿಂದ ಆಗುತ್ತಿರುವ ಮಾಲಿನ್ಯ ದೊಡ್ಡದು.


ಇದಕ್ಕೆ ಮುಖ್ಯ ಕಾರಣ ಈ ಪ್ಯಾಡ್‌ಗಳನ್ನು ತಯಾರಿಸಲು ಬಳಸುವ ಪ್ಲಾಸ್ಟಿಕ್‌, ಅದರಿಂದ ಪ್ಯಾಡ್‌ ವಿಘಟನೆಗೊಳ್ಳದೆ ಮಾಲಿನ್ಯಕ್ಕೆ ಕಾರಣವಾಗುತ್ತದೆ.


ಈ ಸಮಸ್ಯೆಯನ್ನು ಬಗೆಹರಿಸಲು ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಶೂನ್ಯ ತ್ಯಾಜ್ಯ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಿದ್ದಾರೆ.


ಹಯಸಿಂತ್ ಎಲೆಗಳು, ಮೆಂತ್ಯ ಬೀಜಗಳು, ಸುಬ್ಜಾ ಅಥವಾ ತುಳಸಿ ಬೀಜಗಳು, ಅರಿಶಿನ, ಬೇವಿನ ಎಲೆಗಳು ಮತ್ತು ಹತ್ತಿಯಿಂದ ತಯಾರಿಸಲಾಗಿರುವ ಸ್ತ್ರೀ ಶಕ್ತಿ ಪ್ಯಾಡ್‌ಗಾಗಿ ಮುಲ್ಕಪಲ್ಲಿಯ ಜಿಲ್ಲಾ ಪರಿಷದ್‌ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ತೆಂಲಗಾಣ ಸ್ಕೂಲ್‌ ಇನ್ನೋವೆಷನ್‌ ಚಾಲೆಂಜ್‌ ಗೆದ್ದಿದ್ದಾರೆ.

ತಮ್ಮ ಸಂಶೋಧನೆಯ ಬಗ್ಗೆ ಎಎನ್‌ಐ ಜತೆಗೆ ಮಾತನಾಡುತ್ತಾ ಜಿಲ್ಲಾ ಪರಿಷದ್‌ ಪ್ರೌಢ ಶಾಲೆಯ ವಿದ್ಯಾರ್ಥಿ ಸ್ವಾಥಿ, “ಸ್ಯಾನಿಟರಿ ಪ್ಯಾಡ್‌ಗಳು ಸೃಷ್ಟಿಸುವ ತ್ಯಾಜ್ಯವನ್ನು ತಡೆಯಲು ನಾವು ಸಾವಯವ ವಸ್ತುಗಳಿಂದ ಪ್ಯಾಡ್‌ ತಯಾರಿಸಿದ್ದೇವೆ. ಇಂದು ಬಹುತೇಕ ಜನರು ಬಳಸುವ ಪ್ಯಾಡ್‌ಗಳನ್ನು ಪೇಟ್ರೋಲಿಯಂ ರಾಸಾಯನಿಕಗಳಿಂದ ಮಾಡಲಾಗಿದೆ, ಅವುಗಳು ಉಂಟು ಮಾಡುವ ಅಡ್ಡಪರಿಣಾಮಗಳು ಹಲವು. ಅಲ್ಲದೆ ಅವು ವಿಘಟನೆಗೊಳ್ಳಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಂಡು ಪರಿಸರ ಹಾನಿಗೂ ಕಾರಣವಾಗುತ್ತವೆ,” ಎಂದಳು.


ಹಯಸಿಯಾಂತ್‌ನಲ್ಲಿ ಆಯುರ್ವೇದಿಕ್‌ ಸತ್ವ ಇರುವುದರಿಂದ ಹಳೆ ಕಾಲದಲ್ಲಿ ಸಗಣಿ ಜತೆಗೆ ಅದನ್ನು ಬಟ್ಟೆಯಲ್ಲಿ ಸೇರಿಸಿ ಬಳಸುತ್ತಿದ್ದರು ಎಂದು ನಮಗೆ ತಿಳಿದಿದೆ, ಇದನ್ನೆಲ್ಲ ಇಟ್ಟುಕೊಂಡು ನಾವು ಸಮಕಾಲೀನ ಪ್ಯಾಡ್‌ ತಯಾರಿಸಲು ನಿರ್ಧರಿಸಿದೆವು,” ಎಂದು ಸ್ವಾತಿ ವಿವರಿಸಿದಳು.

ವಾಟರ್‌ ಹಯಸಿಯಾಂತ್‌ ಅನ್ನು ಬೇವಿನ ಎಲೆಗಳು, ಮೆಂತ್ಯ ಬೀಜಗಳು ಮತ್ತು ಅರಿಶಿನದೊಂದಿಗೆ ಬೆರೆಸಿ ಪೇಸ್ಟ್‌ ತಯಾರಿಸಿಕೊಂಡು ಗಟ್ಟಿಯಾದ ಬೋರ್ಡ್‌ ಆಗುವವರೆಗೂ ಒಣಗಿಸಲಾಗುತ್ತದೆ. ನಂತರ ಅದನ್ನು ಸ್ಯಾನಿಟರಿ ಪ್ಯಾಡ್‌ ಗಾತ್ರಕ್ಕೆ ಕತ್ತರಿಸಲಾಗುತ್ತದೆ. ಮೆಂತ್ಯ ಅಥವಾ ತುಳಸಿ ಬೀಜವನ್ನು ಜೇನು ಮೇಣ ಅಂಟಿನೊಂದಿಗೆ ಇದಕ್ಕೆ ಸೇರಿಸಲಾಗುತ್ತದೆ. ಎರಡು ಹತ್ತಿಯ ಪದರುಗಳ ನಡುವೆ ಬೋರ್ಡ್‌ ಅನ್ನು ಇಟ್ಟು ಸೀಲ್‌ ಮಾಡಲಾಗುತ್ತದೆ.


ಸ್ಯಾನಿಟರಿ ಪ್ಯಾಡ್‌ ತಯಾರಿಸುವಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಶಿಕ್ಷಕಿ ಕಲ್ಯಾಣಿಯವರು, “ಹಳ್ಳಿಗಳಲ್ಲಿ ವಾಸಿಸುವ ಹೆಣ್ಣು ಮಕ್ಕಳು ದುಬಾರಿ ಬೆಲೆಯ ಪ್ಯಾಡ್‌ಗಳನ್ನು ಕೊಳ್ಳಲಾಗದೆ ಹಳೆ ಕಾಲದ ಸಂಪ್ರದಾಯವನ್ನೆ ಪಾಲಿಸುತ್ತಿದ್ದಾರೆ. ಅದಲ್ಲದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಡ್‌ಗಳು ಹಲವು ಬಗೆಯ ಅಡ್ಡ ಪರಿಣಾಮಗಳು ಮತ್ತು ಗಂಭೀರವಾದ ಸಮಸ್ಯೆಗಳಿಗೂ ಕಾರಣವಾಗುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಸ್ತ್ರೀ ರಕ್ಷಾ ಪ್ಯಾಡ್‌ ಎನ್ನುವ ಸಾವಯವ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಿದ್ದಾರೆ. ಅವರ ಬಗ್ಗೆ ನನಗೆ ಹೆಮ್ಮೆಯಿದೆ,” ಎಂದರು.