ಕೊರೊನಾವೈರಸ್‌: ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾದ ಸರ್ಕಾರ, 1 ಕೋಟಿ ಮೀಸಲು

ನಿರ್ಮಲಾ ಸೀತಾರಾಮನ್‌ ಅವರ ಪ್ಯಾಕೆಜ್‌ನ 3ನೇ ಕಂತು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಮೇಲೆ ಕೇಂದ್ರಿತವಾಗಿತ್ತು.

ಕೊರೊನಾವೈರಸ್‌: ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾದ ಸರ್ಕಾರ, 1 ಕೋಟಿ ಮೀಸಲು

Friday May 15, 2020,

2 min Read

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಮಂಡಿಸಿದ 20 ಲಕ್ಷ ಕೋಟಿ ಪ್ಯಾಕೆಜ್‌ 3 ನೇ ಕಂತಿನ 11 ಘೋಷಣೆಗಳಲ್ಲಿ 8 ಬಲವರ್ಧನೆಗೆ ಸಂಬಂಧಪಟ್ಟಿದ್ದರೆ ಉಳಿದವು ಆಡಳಿತ ಸುಧಾರಣೆಗಾಗಿ ತಂದ ಬದಲಾವಣೆಗಳಾಗಿವೆ.


ಸುಗ್ಗಿಯ ನಂತರದ ನಿರ್ವಹಣೆ ಮತ್ತು ಶೀತಾಗಾರ ಮೂಲಸೌಕರ್ಯಗಳಲ್ಲಿ ಸಾಕಷ್ಟು ಸೌಲಭ್ಯಗಳು ಲಭ್ಯವಿಲ್ಲದಿರುವುದರಿಂದ ರೈತರಿಗೆ ಆಗುತ್ತಿರುವ ಹಾನಿಯನ್ನು ತಪ್ಪಿಸಲು ಸರ್ಕಾರ 1 ಲಕ್ಷ ಕೋಟಿ ರೂ.ಯನ್ನು ವಿನಿಯೋಗಿಸಿ ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗಿದೆ. ಇದರಿಂದ ಕೃಷಿ ಉದ್ಯೋಗಿಗಳಿಗೆ, ಸ್ಟಾರ್ಟಪ್‌ಗಳಿಗೆ ಸಹಾಯವಾಗಲಿದೆ.


ಸಣ್ಣ ಆಹಾರ ಉದ್ಯಮಗಳಿಗೆ ಉತ್ತೇಜನ ನೀಡಲು 10,000 ಕೋಟಿ ರೂ. ನೀಡಲಿರುವ ಸರ್ಕಾರ, ಸ್ಥಳೀಯ ವಸ್ತುಗಳ ಖರೀದಿಗೆ ಪ್ರಧಾನಿಯವರು ನೀಡಿದ ಕರೆಗೆ ಈ ಕ್ರಮ ಬಲ ನೀಡಲಿದೆ ಎಂದರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌.


ಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆಯ ಮೂಲಕ ಮೀನುಗಾರರಿಗೆ 20,000 ಕೋಟಿ ರೂ. ಮೀಸಲಿಡಲಾಗುತ್ತಿದ್ದು, ಇದರಿಂದ ಮುಂದಿನ 5 ವರ್ಷಗಳಲ್ಲಿ 70 ಲಕ್ಷ ಟನ್‌ ಉತ್ಪಾದನೆ ಹೆಚ್ಚಲಿದ್ದು, 55 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ ಮತ್ತು ರಫ್ತು ದ್ವಿಗುಣಗೊಳ್ಳಲಿದೆ.


ಖಾಸಗಿ ಬಂಡವಾಳಕ್ಕೆ ಸಹಕಾರಿಯಾಗುವಂತೆ ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿಗೆ 15,000 ಕೋಟಿ ರೂ. ನಿಧಿಯನ್ನು ಮೀಸಲಿಡಲಾಗುತ್ತಿದೆ.


ಕಾಲು ಮತ್ತು ಬಾಯಿ ರೋಗ (ಎಫ್‌ಎಂಡಿ) ಹಾಗೂ ಬ್ರುಸೆಲ್ಯೋಸಿಸ್‌ ರೋಗಗಳಿಂದ ಎಮ್ಮೆ, ದನ, ಮೇಕೆ ಮತ್ತು ಇತರ ಪ್ರಾಣಿಗಳಿಗೆ ಲಸಿಕೆ ಹಾಕುವುದನ್ನು ಖಾತರಿ ಪಡಿಸಲು ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣಾ ಯೋಜನೆಯಲ್ಲಿ ರೂ. 13,343 ಕೋಟಿಯನ್ನು ವಿನಿಯೋಗಿಸಲಿದೆ ಸರ್ಕಾರ.


ಜೇನು ಸಾಕಣೆ ಉಪಕ್ರಮಗಳಿಗೆ 500 ಕೋಟಿ ರೂ.ಗಳ ಅನುದಾನ ನೀಡಲಿರುವ ಸರ್ಕಾರ, ಅದನ್ನು ಜೇನು ಸಾಕಣೆ ಮೂಲಸೌಕರ್ಯ, ಸಂಗ್ರಹಣೆ ಮತ್ತು ಮಾರುಕಟ್ಟೆಯ ಅಭಿವೃದ್ಧಿಗೆ ಬಳಸಲಿದೆ. ಈ ಕ್ರಮದಿಂದ 2 ಲಕ್ಷ ಜೇನು ಸಾಕಣೆದಾರರ ಆದಾಯವನ್ನು ಹೆಚ್ಚಿಲಿದ್ದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಜೇನನ್ನು ನೀಡಲು ಸಹಕಾರಿಯಾಗಲಿದೆ.


ಔಷಧಿ ಸಸ್ಯಗಳ ವ್ಯವಸಾಯಕ್ಕೆ ಉತ್ತೇಜನ ನೀಡಲು 4,000 ಕೋಟಿ ರೂ. ಖರ್ಚಿನಲ್ಲಿ 10 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ಗಿಡಮೂಲಿಕೆಗಳನ್ನು ಮುಂದಿನ 2 ವರ್ಷಗಳಲ್ಲಿ ಬೆಳೆಯಲಾಗುವುದು. ಇದು ಕೃಷಿಕರಿಗೆ 5,000 ಕೋಟಿ ರೂ. ಲಾಭವನ್ನು ಒದಗಿಸಲಿದೆ.


ಬೆಳೆಗಳ ಸರಬರಾಜು ಜಾಲಕ್ಕೆ ನೆರವು ನೀಡಲು 500 ಕೋಟಿ ರೂ. ವಿನಿಯೋಗಿಸಲಿರುವ ಸರ್ಕಾರ ಸಾರಿಗೆಗೆ ಮತ್ತು ಶೇಖರಣೆಗೆ ಶೇ. 50 ರಷ್ಟು ಸಬ್ಸಿಡಿಯನ್ನು ಒದಗಿಸಲಿದೆ. ಇದನ್ನು 6 ತಿಂಗಳ ವರೆಗೆ ಪ್ರಾಯೋಗಿಕವಾಗಿ ನಡೆಸಲಿರುವ ಸರ್ಕಾರ ಇದರಿಂದ, ರೈತರಿಗೆ ಒಳ್ಳೇಯ ದರ ಸಿಗಲಿದೆ ಮತ್ತು ಆಹಾರ ನಾಶ ಕಡಿಮೆಯಾಗಲಿದೆ ಎನ್ನುತ್ತದೆ.


ಇಷ್ಟೇ ಅಲ್ಲದೆ ಸರ್ಕಾರಿ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗೆ ಕೆಲವೊಂದು ಬದಲಾವಣೆಗಳನ್ನು ವಿತ್ತ ಸಚಿವರು ಇಂದು ಘೋಷಿಸಿದರು.


ರೈತರು ಬೆಳೆಯುವ ಮುಂಚೆ ತಮ್ಮ ಫಸಲಿಗೆ ಎಷ್ಟು ಬೆಲೆಯೆಂದು ತಿಳಿದುಕೊಳ್ಳಲು ಸಹಕಾರಿಯಾಗುವಂತೆ ಅನುಕೂಲಕರ ಕಾನೂನು ಚೌಕಟ್ಟು ಒದಗಿಸಲು ಸರ್ಕಾರ ಮುಂದಾಗಿದೆ. ಇದರಿಂದ ರೈತರು ಪ್ರವರ್ತಕರು, ಸಂಗ್ರಾಹಕರು, ರಫ್ತುದಾರರು ಮತ್ತು ದೊಡ್ಡ ಚಿಲ್ಲರೆ ವ್ಯಪಾರಿಗಳೊಂದಿಗೆ ಪಾರದರ್ಶಕವಾಗಿ ವ್ಯವಹಾರ ನಡೆಸಲು ಸಹಾಯವಾಗುತ್ತದೆ.


ರೈತರಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಅಗತ್ಯ ಸರಕುಗಳ ಕಾಯಿದೆಗೆ ತಿದ್ದುಪಡಿತರಲಿದೆ ಸರ್ಕಾರ. ಅಲ್ಲದೇ ಕೃಷಿಕರು ತಮ್ಮ ಉತ್ಪನ್ನದ ಮಾರಾಟವನ್ನು ಎಪಿಎಂಸಿಗಳಿಗೆ ಸೀಮಿತಗೊಳಿಸದೆ, ಬೇರೆ ರಾಜ್ಯಕ್ಕೆ ಮಾರಾಟ ಮಾಡುವಂತೆ ಮತ್ತು ಅಂತರ್ಜಾಲ ಆಧಾರಿತ ವ್ಯವಹಾರಕ್ಕೆ ಚೌಕಟ್ಟನ್ನು ಒದಗಿಸಿ ಅವರಿಗೆ ಮಾರುಕಟ್ಟೆ ಆಯ್ಕೆ ನೀಡಲು ಸರ್ಕಾರ ಮುಂದಾಗಿದೆ.