ಹತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಹೊತ್ತು ಪೋಷಕಾಂಶಭರಿತ ಬಿಸಿಯೂಟ ಒದಗಿಸುತ್ತಿರುವ ಗುರುಗ್ರಾಮದ ಶಾಲೆ

ನಿವೃತ್ತ ಕ್ಯಾಪ್ಟನ್ ರಾಜೇಶ್ ಶರಣ್ ಮತ್ತು ಶಾಂತಾ ಶರಣರಿಂದ 2008 ರಲ್ಲಿ ಸ್ಥಾಪಿತವಾದ ಗುರುಗ್ರಾಮದ ದೀಕ್ಷಾ ಶಾಲೆ 410 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಹೊತ್ತು ಪೋಷಕಾಂಶಭರಿತ ಬಿಸಿಯೂಟವನ್ನು ನೀಡುತ್ತಿದೆ.

ಹತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಹೊತ್ತು ಪೋಷಕಾಂಶಭರಿತ ಬಿಸಿಯೂಟ ಒದಗಿಸುತ್ತಿರುವ ಗುರುಗ್ರಾಮದ ಶಾಲೆ

Thursday September 19, 2019,

3 min Read

ಭಾರತದಲ್ಲಿ 195.9 ದಶಲಕ್ಷ ಜನರು ಅಪೌಷ್ಟಿಕತೆಯಿಂದ ಬಳಲುತಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ ಐದು ವರ್ಷ ವಯಸ್ಸಿನೊಳಗೆ ಸಾವನ್ನಪ್ಪುವ ಅರ್ಧದಷ್ಟು ಮಕ್ಕಳ ಸಾವಿಗೆ ಅಪೌಷ್ಟಿಕತೆ ಕಾರಣವಾಗಿದೆ. ಈ ಮಕ್ಕಳು ಅಪೌಷ್ಟಿಕತೆಯಿಂದಾಗಿ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡು ಆಗಾಗ ಸಾಮಾನ್ಯ ಸೋಂಕು ರೋಗಗಳಿಗೆ ತುತ್ತಾಗುತ್ತಾರೆ. ಅಪೌಷ್ಟಿಕತೆಯು ಸೋಂಕಿನ ತೀವ್ರತೆಯನ್ನು ಹೆಚ್ಚಿಸುದಲ್ಲದೆ ಚೇತರಿಕೆಯನ್ನು ವಿಳಂಬಗೊಳಿಸುತ್ತದೆ ಮತ್ತು ಇದರಿಂದಾಗಿ ಮಕ್ಕಳು ಸಾವನ್ನಪ್ಪುವ ಅಪಾಯವಿರುತ್ತದೆ.


ಸರ್ಕಾರ ಮತ್ತು ಹಲವಾರು ಸರ್ಕಾರೇತರ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳ ಮೂಲಕ ಈ ಸಮಸ್ಯಗೆ ಪರಿಹಾರ ಕಂಡುಹಿಡಿಯಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಈ ದೃಷ್ಟಿಯಿಂದ ಗುರುಗ್ರಾಮದ ಈ ಶಾಲೆಯು ಸ್ಥಾಪಿತವಾದ ವರ್ಷದಿಂದಲೇ (2008) ವಿದ್ಯಾರ್ಥಿಗಳಿಗೆ ಸಮತೋಲಿತ ಆಹಾರವನ್ನು ಒದಗಿಸುತ್ತಿದೆ.


ಅದಲ್ಲದೇ ಬಡವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಈ ಶಾಲೆಯ ಮತ್ತೊಂದು ಸಮಾಜಮುಖಿ ಕಾರ್ಯವಾಗಿದೆ. ವಾಯುಸೇನೆಯ ನಿವೃತ್ತ ಪೈಲಟ್ ಕ್ಯಾಪ್ಟನ್ ರಾಜೇಶ್ ಶರಣ್ ಮತ್ತು ಅವರ ಪತ್ನಿ ಶಾಂತಾ ಶರಣರಿಂದ ಸ್ಥಾಪಿತವಾದ ಶಾಲೆಯಲ್ಲಿ ಇಂದು ಒಟ್ಟು 410 ವಿದ್ಯಾರ್ಥಿಗಳಿದ್ದಾರೆ.


ಬಹಳಷ್ಟು ವಿದ್ಯಾರ್ಥಿಗಳು ಇತರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರ, ಕೊಳಚೆ ಪ್ರದೇಶಗಳ ಮತ್ತು ಚೌಮಾ ಗ್ರಾಮ, ಧರಮ್ ಕಾಲೋನಿ, ಕಾತರ್ಪುರಿ, ಹೊಸ ಪಾಲಮ್ ವಿಹಾರದಲ್ಲಿ ವಾಸಿಸುತ್ತಿರುವ ದುರ್ಬಲ ವರ್ಗದ ಜನರ ಮಕ್ಕಳಾಗಿದ್ದಾರೆ.


ಚಿತ್ರಕೃಪೆ: ಎನ್ ಡಿ ಟಿವಿ




ಶಿಕ್ಷಣ ಪಡೆಯಲು ಯಾವುದೇ ಬೆಂಬಲವಿಲ್ಲದೇ ನಲುಗುತಿದ್ದ 13 ಮಕ್ಕಳಿಂದ ಈ ಶಾಲೆಯು ಪ್ರಾರಂಭವಾಯಿತು.


“ನಾವು ಈ ಮಕ್ಕಳು ದೈಹಿಕವಾಗಿ ಬಹಳಷ್ಟು ನಿಶ್ಯಕ್ತರಾಗಿದ್ದಾರೆಂಬುದನ್ನು ಗಮನಿಸಿದೆವು. ಈ ಮಕ್ಕಳು ಆಗಾಗ್ಗೆ ಬೆಳಗಿನ ಉಪಹಾರವಿಲ್ಲದೇ ಶಾಲೆಗೆ ಬರುತಿದ್ದರು. ಏಕೆಂದರೆ ಈ ಮಕ್ಕಳ ಪೋಷಕರು ಕಟ್ಟಡ ಕಾರ್ಮಿಕರು, ರಿಕ್ಷಾಗಾಡಿ ಎಳೆಯುವವರು, ಮನೆಗೆಲಸ ಮಾಡುವ ದಿನಗೂಲಿ ನೌಕರರು ಅಥವಾ ವಲಸೆ ಕಾರ್ಮಿಕರಾಗಿದ್ದು ಅವರೆಲ್ಲರೂ ಕೆಲಸಕ್ಕಾಗಿ ಮುಂಜಾವಿನಲ್ಲಿಯೇ ಮನೆ ಬಿಟ್ಟವರು ವಾಪಾಸು ಬರುತಿದ್ದುದು ಸಂಜೆಯಲ್ಲಿ ಮಾತ್ರವಾಗಿತ್ತು” ಎಂದು ಶಾಲೆಯ ಸಹ-ಸಂಸ್ಥಾಪಕರಾದ ಶಾಂತಾ ಶರಣ್ ಎನ್ ಡಿ ಟಿವಿಗೆ ಹೇಳಿದ್ದಾರೆ.


ಇದರಿಂದಾಗಿ ಮಕ್ಕಳು ಆಗಾಗ ಅಸ್ವಸ್ಥರಾಗುತಿದ್ದರು. ಶಿಕ್ಷಣದೊಂದಿಗೆ ಈ ಮಕ್ಕಳಿಗೆ ಪೌಷ್ಟಿಕ ಆಹಾರದ ಅಗತ್ಯವಿರುವುದನ್ನು ಶಾಲೆಯ ಸಂಸ್ಥಾಪಕರು ಮನಗಂಡರು.

ಮಧ್ಯಾಹ್ನದ ಪೋಷಕಾಂಶಭರಿತ ಬಿಸಿಯೂಟ

ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮತೋಲಿತ ಊಟವನ್ನು ತಯಾರಿಸಿ ಬಡಿಸಲು ಇಬ್ಬರು ಪೂರ್ಣಕಾಲಿಕ ಅಡುಗೆಯವರಿದ್ದಾರೆ. ತಯಾರಿಸಿದ ಊಟವನ್ನು ವಿದ್ಯಾರ್ಥಿಗಳಿಗೆ ಬಡಿಸುವ ಮೊದಲು ಸ್ವಯಂ ಸೇವಕರ ತಂಡದವರು ಮೊದಲು ತಿಂದು ರುಚಿ ಮತ್ತು ಸತ್ವವನ್ನು ಪರೀಕ್ಷಿಸುತ್ತಾರೆ.


ಮಕ್ಕಳಿಗೆ ಬೇಕಾದ ಪೌಷ್ಟಿಕತೆಯನ್ನು ಪೂರೈಸುವಂತೆ ಊಟದ ವಿವಿಧ ಆಹಾರಗಳನ್ನು ಆಯ್ಕೆ ಮಾಡಲಾಗುತ್ತದೆ.


“ಮಧ್ಯಾಹ್ನದ ಊಟವು ತರಕಾರಿ-ಬೇಳೆಯ ಸಾಂಬಾರ್, ಅನ್ನ ಮತ್ತು ಕಿಚಡಿಗಳನ್ನು ಒಳಗೊಂಡಿರುತ್ತದೆ. ನಾವು ನೀಡುವ ಆಹಾರದಲ್ಲಿ ಎಲ್ಲಾ ಪೋಷಕಾಂಶಗಳು ಸೇರಿರುವಂತೆ ನೋಡಿಕೊಳ್ಳತ್ತೇವೆ. ಮಕ್ಕಳಿಗೆ ಚಪಾತಿಯನ್ನು ಕೊಡಲು ಆಗುತ್ತಿಲ್ಲ. ಏಕೆಂದರೆ 410 ಮಕ್ಕಳಿಗೆ ಸಾಕಾಗುವಷ್ಟು ಚಪಾತಿಗಳನ್ನು ತಯಾರಿಸುವುದು ಮತ್ತು ಸರಿಯಾದ ಸಮಯಕ್ಕೆ ಅವುಗಳನ್ನು ನೀಡುವುದು ಸಾಧ್ಯವಾಗುವುದಿಲ್ಲ. ನಾವು ವಿವಿಧ ರೀತಿಯ ಬೇಳೆ ಕಾಳುಗಳು, ಸೊಪ್ಪುಗಳು, ಇಡ್ಲಿ, ಸೋಯಾ ಮುಂತಾದ ಪೋಷಕಾಂಶಭರಿತ ಆಹಾರವನ್ನು ಮಕ್ಕಳಿಗೆ ನೀಡುತ್ತೇವೆ” ಎಂದು ಶಾಲೆಯ ಪ್ರಾಂಶುಪಾಲರಾದ ವಂದನಾ ಅನೇಜಾ ಎನ್ ಡಿ ಟೀವಿಗೆ ಹೇಳಿದ್ದಾರೆ.


ಒಂದು ದಿನದ ಅಡುಗೆಗೆ 16 ಕಿಲೋಗ್ರಾಮ್ ಅಕ್ಕಿ, 14 ಕಿಲೋಗ್ರಾಮ್ ಬೇಳೆಗಳು ಮತ್ತು ಆರರಿಂದ ಎಂಟು ಕಿಲೋಗ್ರಾಮ್ ತರಕಾರಿಗಳು ಬೇಕಾಗುತ್ತವೆ. ಇವುಗಳ ಒಟ್ಟು ಬೆಲೆ 3,500 ರೂಪಾಯಿಗಳಾಗುತ್ತದೆ. ಇದಕ್ಕಾಗಿ ಚಂದಾ ಎತ್ತುವ ಅಭಿಯಾನಗಳನ್ನು ನಡೆಸಿ ಸ್ವಯಂ ದಾನಿಗಳು, ನೆರೆಹೊರೆಯವರು ಮತ್ತು ಕಾರ್ಪೋರೇಟ್ ಸಂಸ್ಥೆಗಳಿಂದ ಆರ್ಥಿಕ ಬೆಂಬಲವನ್ನು ಪಡೆಯಲಾಗುತ್ತಿದೆ.


ಚಿತ್ರಕೃಪೆ: ಎನ್ ಡಿ ಟಿವಿ




ಕೊಹಿನೂರಿನ ಭತ್ತ ಬೆಳೆಗಾರರ ಸಹಯೋಗದೊಂದಿಗೆ ಮೆಕ್ ಕಾರ್ಮಿಕ್ ಇಂಡಿಯಾ (ಐಟಿ ಸಪೋರ್ಟ) ಎನ್ನುವ ಸಂಸ್ಥೆಯು ಶಾಲೆಗೆ ಪ್ರತಿ ತಿಂಗಳಿಗೆ ಬೇಕಾಗಿರುವ ಅಕ್ಕಿಯನ್ನು ದಾನವಾಗಿ ನೀಡುತ್ತದೆ ಎಂದು ಮಿಲಾಪ ವರದಿ ಮಾಡಿದೆ.


ತನ್ನ ಮಗಳಿಗೆ ಸರಿಯಾದ ಆಹಾರವನ್ನು ಒದಗಿಸಲಾಗದ ತನ್ನ ದುಸ್ಥಿತಿಯನ್ನು ನೆನೆದು, ದೀಕ್ಷಾ ಶಾಲೆಯಲ್ಲಿ ಓದುತ್ತಿರುವ ಎಂಟು ವರ್ಷದ ನೇಹಾ ಎಂಬ ಹುಡುಗಿಯ 29 ವರ್ಷ ವಯಸ್ಸಿನ ತಾಯಿ ರಜನಿ ಎನ್ ಡಿ ಟಿವಿ ಹೀಗೆ ಹೇಳುತ್ತಾಳೆ.


“ನಾವು ಮುಖ್ಯವಾಗಿ ಹೊಟ್ಟೆ ತುಂಬಿಸಿಕೊಳ್ಳಲು ಮತ್ತು ಆಶ್ರಯ ಪಡೆಯುವ ಸೂರಿಗಾಗಿ ದುಡಿಯುತ್ತೇವೆ. ನಾವು ತಿನ್ನುವ ಆಹಾರದ ಪೋಷಕಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಸಿಕ್ಕದ್ದನ್ನು ತಿನ್ನುತ್ತೇವೆ. ನಮ್ಮ ಕುಟುಂಬದಲ್ಲಿ ಏಳು ಜನರಿದ್ದು ಎಲ್ಲರಿಗೂ ಆಹಾರ ಒದಗಿಸಬೇಕಾಗಿದೆ. ಸಾಮಾನ್ಯವಾಗಿ ನಮ್ಮ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಗಂಡಸರ ಊಟವಾದ ನಂತರ ಊಟ ಮಾಡುತ್ತೇವೆ. ಕೆಲವೊಂದು ಸಲ ಹೊಟ್ಟೆ ತುಂಬಾ ಊಟ ಸಿಕ್ಕಿದರೂ ಇನ್ನು ಕೆಲವು ಬಾರಿ ಊಟ ಉಳಿಯುವುದಿಲ್ಲ. ನನ್ನ ಮಗಳು ಶಾಲೆಯಲ್ಲಿ ಹೊಟ್ಟೆ ತುಂಬಾ ಒಂದು ಊಟವನ್ನಾದರೂ ಮಾಡುತ್ತಾಳೆಂಬುದು ನನಗೆ ಸಂತೋಷದ ವಿಷಯವಾಗಿದೆ”

ಸರ್ವತೋಮುಖ ಪ್ರಗತಿ

ಪೋಷಕಾಂಶಭರಿತ ಆಹಾರವನ್ನು ಒದಗಿಸುವುದೇ ಅಲ್ಲದೇ ಶಾಲೆಯ ವಿದ್ಯಾರ್ಥಿಗಳು ದೈಹಿಕವಾಗಿ ಆರೋಗ್ಯವಾಗಿರಬೇಕೆಂಬ ಧ್ಯೇಯವನ್ನು ಸಂಸ್ಥಾಪಕರು ಹೊಂದಿದ್ದಾರೆ. ಇದಕ್ಕಾಗಿ ಪ್ರತಿ ವಾರದಲ್ಲಿ ಒಂದು ಯೋಗ ತರಗತಿ, ಒಂದು ಆಟದ ಪೀರಿಯಡ್ಡು, ಒಂದು ದೈಹಿಕ ತರಬೇತಿ ಪೀರಿಯಡ್ಡನ್ನು ಶಾಲೆಯಲ್ಲಿ ನಡೆಸಲಾಗುತ್ತದೆ.


ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದೇ ಅಲ್ಲದೇ ಅವರ ಪೋಷಕರಿಗೂ ಕೂಡ ಕುಡಿತ, ಮಾದಕವಸ್ತುಗಳ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕಾರ್ಯಾಗಾರಗಳನ್ನು ಏರ್ಪಡಿಸಿ ಅರಿವು ಮೂಡಿಸಲಾಗುತ್ತದೆ. ಈ ಕಾರ್ಯಾಗಾರಗಳ ನೇತೃತ್ವವನ್ನು ಶಾಲೆಯ ಮಾಧ್ಯಮ ಸಂಯೋಜಕರಾದ ಆಸ್ತಾ ಗುಲಾಟಿ ವಹಿಸುತ್ತಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.