ಮಾನವ ಹೃದಯದ ಜೀವಕೋಶಗಳು ಬಾಹ್ಯಾಕಾಶದಲ್ಲಿ ವಿಭಿನ್ನವಾಗಿ ವರ್ತಿಸುತ್ತವೆ

ಮಾನವ ಹೃದಯದ ಸ್ನಾಯುಗಳಲ್ಲಿರುವ ಜೀವಕೋಶಗಳು ಬಾಹ್ಯಾಕಾಶದಲ್ಲಿ ವಿಭಿನ್ನವಾಗಿ ವರ್ತಿಸುತ್ತವೆ ಮತ್ತು ಭೂಮಿಗೆ ವಾಪಾಸಾದ ಹತ್ತು ದಿನಗಳ ನಂತರ ಅವು ಸಹಜ ಸ್ಥಿತಿಗೆ ಮರಳುತ್ತವೆ ಎಂದು ಒಂದು ಅಧ್ಯಯನವು ತಿಳಿಸಿದೆ.

ಮಾನವ ಹೃದಯದ ಜೀವಕೋಶಗಳು ಬಾಹ್ಯಾಕಾಶದಲ್ಲಿ ವಿಭಿನ್ನವಾಗಿ ವರ್ತಿಸುತ್ತವೆ

Friday November 15, 2019,

3 min Read

ಬೋಸ್ಟನ್: ಜೀವಕೋಶ ಹಂತದ ಹೃದಯ ಕಾರ್ಯ ಮತ್ತು ಮಾನವ ಹೃದಯದಲ್ಲಿನ ಜೀವಕೋಶಗಳ ಮೇಲೆ ವಂಶವಾಹಿನಿಗಳ ಪರಿಣಾಮವನ್ನು 5.5 ವಾರಗಳವರಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪರೀಕ್ಷಿಸಿದ ಈ ಸಂಶೋಧನೆಯ ವಿವರಗಳು ಸ್ಟೆಮ್ ಸೆಲ್ಸ್ ರಿಪೋರ್ಟ್ಸ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.


ಬಾಹ್ಯಾಕಾಶದಲ್ಲಿದ್ದಾಗ ಸೂಕ್ಷ್ಮಗುರುತ್ವಾಕಾರ್ಷಣೆಗೆ ಒಳಗಾದ ಸಾವಿರಾರು ವಂಶವಾಹಿನಿಗಳ ಪರಿಣಾಮಗಳು ಬದಲಾಗುತ್ತವೆ ಮತ್ತು ಈ ವಂಶವಾಹಿನಿಗಳ ಪರಿಣಾಮಗಳು ಭೂಮಿಗೆ ವಾಪಾಸಾದ ಹತ್ತು ದಿನಗಳ ನಂತರ ಸ್ವಾಭಾವಿಕ ಸ್ಥಿತಿಗೆ ಮರಳುತ್ತವೆ ಎಂಬುದನ್ನು ಸಂಶೋಧಕರು ದೃಢಪಡಿಸಿದ್ದಾರೆ.


“ನಮ್ಮ ಅಧ್ಯಯನವು ಅನನ್ಯವಾಗಿದೆ. ಏಕೆಂದರೆ ಅದು ಮೊಟ್ಟ ಮೊದಲ ಬಾರಿಗೆ ಮಾನವ ಪ್ಲೂರಿಪೊಟೆಂಟ್ ಸ್ಟೆಮ್ ಜೀವಕೋಶಗಳನ್ನು ಉಪಯೋಗಿಸಿ ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವಾಗ ಮನುಷ್ಯನ ಹೃದಯದ ಕಾರ್ಯದಲ್ಲಿ ಆಗುವ ಬದಲಾವಣೆಗಳನ್ನು ತಿಳಿಯಲು ಮಾಡಿದ ಅಧ್ಯಯನವಾಗಿದೆ” ಎಂದು ಅಮೇರಿಕಾದ ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಮೆಡಿಸಿನ್ನಿನ ಜೋಸೆಫ್ ಸಿ ವು ಹೇಳಿದ್ದಾರೆ.


“ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿದ್ದಾಗ ಮಾನವ ದೇಹದ ಮೇಲೆ ಅದರ ಸಂಪೂರ್ಣ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಿಲ್ಲ ಮತ್ತು ಈ ರೀತಿಯ ಅಧ್ಯಯನಗಳು ಮಾನವ ದೇಹದ ಜೀವಕೋಶಗಳು ಬಾಹ್ಯಾಕಾಶದಲ್ಲಿದ್ದಾಗ ಹೇಗೆ ವರ್ತಿಸುತ್ತವೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತವೆ. ಈ ಸಂಶೋಧನೆಯು ಚಂದ್ರ ಮತ್ತು ಮಂಗಳ ಗ್ರಹಗಳಂತಹ ದೂರದ ಬಾಹ್ಯಾಕಾಶ ಕಾಯಗಳ ಅಧ್ಯಯನ ಕೈಗೊಂಡಿರುವ ವಿಶ್ವಪ್ರಯತ್ನದ ಯುಗದಲ್ಲಿ ಅತ್ಯಂತ ಮಹತ್ವದ್ದಾಗಿದೆ,” ಎಂದು ವು ತಿಳಿಸಿದ್ದಾರೆ.


ಮಾನವನ ಬಾಹ್ಯಾಕಾಶ ಪಯಣದ ಸಮಯದಲ್ಲಿ ಹೃದಯದ ಬಡಿತದ ವೇಗವು ಕಡಿಮೆಯಾಗುವುದು, ಆರ್ಟೇರಿಯಲ್ ಒತ್ತಡವು ಕಡಿಮೆಯಾಗುವುದು ಮತ್ತು ಹೃದಯವು ರಕ್ತವನ್ನು ಹೊರಹಾಕುವ ಕಾರ್ಯದ ಹೆಚ್ಚಳವಾಗುವಿಕೆ ಮುಂತಾದ ಪರಿಣಾಮಗಳನ್ನು ಈ ಹಿಂದಿನ ಅಧ್ಯಯನಗಳು ಸಾಬೀತುಪಡಿಸಿವೆ.


ಆದರೆ ಇಂದಿನವರೆಗೆ ಸೂಕ್ಷ್ಮ ಗುರುತ್ವಾಕರ್ಷಣೆಯು ಹೃದಯದ ಭೌತಿಕತೆಯ ಮೇಲೆ ಮಾಡುವ ಪರಿಣಾಮಗಳನ್ನು ತಿಳಿಯಲು ಮಾಡಿರುವ ಅಧ್ಯಯನಗಳು ಮಾನವ ಹೃದಯವನ್ನು ಹೋಲುವ ಮಾದರಿಗಳ ಮೇಲೆ ಅಥವಾ ಮಾನವ ಅಂಗ ಅಥವಾ ಮಾನವ ಅಂಗಾಂಶದ ಮಟ್ಟದಲ್ಲಿ ಮಾತ್ರ ನಡೆದಿವೆ.


ಜೀವಕೋಶದ ಮಟ್ಟದಲ್ಲಿ ಮಾನವ ಹೃದಯದ ಮೇಲೆ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮಗಳ ಬಗ್ಗೆ ಹೆಚ್ಚಿನದೇನೂ ತಿಳಿದಿರಲಿಲ್ಲ.


ವು ಮತ್ತು ಅವರ ತಂಡದ ಸದಸ್ಯರು ಮಾನವ ಪ್ಲೂರಿಪೊಟೆಂಟ್ ಸ್ಟೆಮ್ ಜೀವಕೋಶಗಳ ಕಾರ್ಡಿಯೋಮಯೋಸೈಟ್ಸ್ (ಹೈಪಿ ಎಸ್ ಸಿ- ಸಿ ಎಂ) ಪ್ರಕ್ರಿಯೆಯನ್ನು ಅಧ್ಯಯನ ಮಾಡಿದ್ದಾರೆ.


ಅವರು ಮೂವರು ವ್ಯಕ್ತಿಗಳ ರಕ್ತದ ಜೀವಕೋಶಗಳಿಂದ ಹೈಪಿ ಎಸ್ ಸಿ ನಾಳಗಳನ್ನು ರಚಿಸಿ ನಂತರ ಅವುಗಳನ್ನು ಹೈಪಿ ಎಸ್ ಸಿ- ಸಿ ಎಂ ಗಳನ್ನಾಗಿ ಪರಿವರ್ತಿಸಿದ್ದಾರೆ.


ಬಡಿತದಲ್ಲಿದ್ದ ಹೈಪಿ ಎಸ್ ಸಿ- ಸಿ ಎಂಗಳನ್ನು ಅಧ್ಯಯನದ ಸಲುವಾಗಿ ಬಾಹ್ಯಾಕಾಶದಲ್ಲಿದ್ದ ಒಂದು ಬಾಹ್ಯಾಕಾಶ ನೌಕೆಯಲ್ಲಿ ಇಡಲಾಯಿತು.


ಅದೇ ಕಾಲದಲ್ಲಿ ಹೋಲಿಕೆಯ ಉದ್ದೇಶದ ಸಲುವಾಗಿ ಭೂಮಿಯ ಮೇಲೆ ಈ ಹೈಪಿ ಎಸ್ ಸಿ- ಸಿ ಎಂಗಳನ್ನು ಪ್ರಯೋಗಾಲಯದಲ್ಲಿ ಅಧ್ಯಯನಕ್ಕೆ ಒಳಪಡಿಸಲಾಯಿತು.


ಬಾಹ್ಯಾಕಾಶದಲ್ಲಿ ಹಾರಾಟದಲ್ಲಿದ್ದ ಹೈಪಿ ಎಸ್ ಸಿ- ಸಿ ಎಂಗಳು ಭೂಮಿಗೆ ವಾಪಾಸಾದ ನಂತರ ಸ್ವಾಭಾವಿಕ ರಚನೆ ಮತ್ತು ವರ್ತನೆಗಳಿಗೆ ಮರಳಲ್ಪಟ್ಟವು.


ಅವುಗಳ ಬಡಿತದ ಮಾದರಿ ಮತ್ತು ಕ್ಯಾಲ್ಸಿಯಮ್ ಮರುಬಳಕೆಯ ಮಾದರಿಗಳನ್ನು ಬದಲಾಯಿಸಿಕೊಂಡು ಸಹಜ ಸ್ಥಿತಿಗೆ ಮರಳಿದವು ಎಂದು ಸಂಶೋಧಕರು ತಿಳಿಸಿದರು.


4.5 ವಾರಗಳವರಗೆ ಬಾಹ್ಯಾಕಾಶದಲ್ಲಿದ್ದ ಹೈಪಿ ಎಸ್ ಸಿ- ಸಿ ಎಂ ಗಳು ಭೂಮಿಗೆ ತಲುಪಿದ 10 ದಿನಗಳ ನಂತರ ಆರ್ ಎನ್ ಎ ಸೀಕ್ವೆನ್ಸಿಂಗ್ ಮಾಡಲಾಯಿತು.


ಈ ಅಧ್ಯಯನದಲ್ಲಿ 2635 ವಂಶವಾಹಿನಿಗಳು ಬಾಹ್ಯಾಕಾಶದಲ್ಲಿದ್ದಾಗ, ಬಾಹ್ಯಾಕಾಶದ ಹಾರಾಟದ ನಂತರ ಮತ್ತು ಭೂಮಿಗೆ ವಾಪಾಸಾದಾಗ ವಿಭಿನ್ನವಾಗಿ ವರ್ತಿಸುತ್ತವೆಯೆಂಬುದು ತಿಳಿಯಿತು ಎಂದು ಸಂಶೋಧಕರು ಹೇಳಿದರು.


ಮೈಟೋಕಾಂಡ್ರಿಯಾ ಕಾರ್ಯಕ್ಕೆ ಸಂಬಂಧಿಸಿದ ವಂಶವಾಹಿನಿಗಳು ಬಾಹ್ಯಾಶದ ಹಾರಾಟದ ಹೈಪಿ ಎಸ್ ಸಿ- ಸಿ ಎಂಗಳಲ್ಲಿ ಹೆಚ್ಚು ಚಟುವಟಿಕೆಯಿಂದ ಕೂಡಿದ್ದವು ಎಂದು ಅವರು ತಿಳಿಸಿದರು.


ಭೂಮಿಯ ಮೇಲಿನ ಮತ್ತು ಬಾಹ್ಯಾಕಾಶ ಹಾರಾಟದಲ್ಲಿದ್ದ ಮಾದರಿಗಳನ್ನು ಹೋಲಿಕೆ ಮಾಡಿದಾಗ, ಬಾಹ್ಯಾಕಾಶ ಹಾರಾಟದಲ್ಲಿದ್ದ ಹೈಪಿ ಎಸ್ ಸಿ- ಸಿ ಎಂಗಳಲ್ಲಿ ಒಂದು ಅನನ್ಯ ಮಾದರಿಯ ವಂಶವಾಹಿನಿ ಚಟುವಟಿಗಳು ಕಂಡುಬಂದಿವೆ ಮತ್ತು ಭೂಮಿಯ ಸ್ವಾಭಾವಿಕ ಗುರುತ್ವಾಕರ್ಷಣೆಗೆ ವಾಪಾಸಾದಾಗ ಅವು ಸಹಜ ಸ್ಥಿತಿಗೆ ಮರಳಲ್ಪಟ್ಟವು ಎಂದು ಸಂಶೋಧಕರು ತಿಳಿಸಿದರು.


“ಮಾನವ ಹೃದಯದಲ್ಲಿರುವ ಸ್ನಾಯುಗಳ ಜೀವಕೋಶಗಳು ಸೂಕ್ಷ್ಮ ಗುರುತ್ವಾಕರ್ಷಣೆಯೂ ಒಳಗೊಂಡಂತೆ ಎಷ್ಟೊಂದು ಬೇಗ ಅವುಗಳಿದ್ದ ಪರಿಸರಕ್ಕೆ ಹೊಂದಿಕೊಳ್ಳಬಲ್ಲವು ಎಂಬುದನ್ನು ತಿಳಿದು ನಮಗೆ ಆಶ್ಚರ್ಯವಾಗಿದೆ” ಎಂದು ವು ಹೇಳಿದರು.


“ಈ ಅಧ್ಯಯನಗಳು ಖಗೋಳ ಯಾತ್ರಿಗಳು ಬಾಹ್ಯಾಕಾಶ ಹಾರಾಟದಲ್ಲಿ ತೊಡಗಿದಾಗ ಅವರ ಹೃದಯದ ಜೀವಕೋಶಗಳ ಕಾರ್ಯದ ಬಗ್ಗೆ ತಿಳಿದು ಅವರ ಆರೋಗ್ಯದ ಮೇಲೆ ನಿಗಾ ಇಡಲು ಪ್ರಯೋಜನಕಾರಿಯಾಗಿವೆ ಅಥವಾ ಭೂಮಿಯ ಮೇಲಿರುವ ಮನುಷ್ಯನ ಹೃದಯದ ಆರೋಗ್ಯವನ್ನು ಸುಧಾರಿಸಲು ಹೊಸ ಪ್ರಯತ್ನಕ್ಕೆ ಬುನಾದಿ ಹಾಕಲು ಸಹಾಯ ಮಾಡುತ್ತವೆ” ಎಂದು ವು ತಿಳಿಸಿದರು.