ಹೈದರಾಬಾದ್ ಪ್ರಾಧ್ಯಾಪಕನ ನೂತನ ಸಂಶೋಧನೆ, ಕೇವಲ 40 ರೂಪಾಯಿಗಳಿಗೆ ಪ್ಲಾಸ್ಟಿಕ್‍ನಿಂದ ತಯಾರಿಸಿದ ಇಂಧನ.

ಯಾಂತ್ರಿಕ ಅಭಿಯಂತರ(ಮೆಕ್ಯಾನಿಕಲ್ ಇಂಜಿನಿಯರ್) ಹಾಗೂ ಪ್ರಾಧ್ಯಾಪಕರು ಆಗಿರುವಂತಹ ಸತೀಶ್ ಕುಮಾರ್ ಎನ್ನುವವರು ಈ ಪ್ಲಾಸ್ಟಿಕ್‍ನಿಂದ ಇಂಧನ ತಯಾರಿಸುವುದನ್ನು ಸಂಶೋಧಿಸಿದ್ದಾರೆ. ಪ್ಲಾಸ್ಟಿಕ್‍ನ್ನು ಇಂಧನವನ್ನಾಗಿಸಲು ಮೂರು ಹಂತಗಳು ಬೇಕಾಗುತ್ತದೆ. ಈ ವಿಧಾನಕ್ಕೆ ಪ್ಲಾಸ್ಟಿಕ್ ಪೈರೋಲಿಸಿಸ್ ಎಂದು ಕರೆಯುತ್ತಾರೆ.

ಹೈದರಾಬಾದ್ ಪ್ರಾಧ್ಯಾಪಕನ ನೂತನ ಸಂಶೋಧನೆ, ಕೇವಲ 40 ರೂಪಾಯಿಗಳಿಗೆ ಪ್ಲಾಸ್ಟಿಕ್‍ನಿಂದ ತಯಾರಿಸಿದ ಇಂಧನ.

Saturday July 20, 2019,

2 min Read

ನಾವೆಲ್ಲರು ಇಂಧನದ ಬೆಲೆ ಏರಿಕೆ ಬಗ್ಗೆ ದೂರುತ್ತಿರುತ್ತೇವೆ. ಇಂಧನ ಬೆಲೆಯೇರಿಕೆಯಿಂದ ಜನಸಾಮಾನ್ಯರ ಜೇಬು ಬರಿದಾಗುತ್ತಿರುವುದೆಂತು ನಿಜ. ಆದರೆ ಈ ಬಗ್ಗೆ ಪರ್ಯಾಯ ಮಾರ್ಗವನ್ನು ಯಾರು ಯೋಚಿಸಿರಲಿಲ್ಲ.


ದೇಶದೆಲ್ಲಡೆ ಸರ್ಕಾರವು ಜೈವಿಕ ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಜನರನ್ನು ಪ್ರೋತ್ಸಾಹಿಸುತ್ತಿದೆ. ವಿದ್ಯುಚ್ಛಾಲಿತ ವಾಹನಗಳಿಗೆ ಪೆಟ್ರೋಲ್-ಡಿಸೇಲ್‍ನ ಅರ್ಧದಷ್ಟು ವೆಚ್ಚ ಮಾತ್ರ ತಗಲುವುದರಿಂದ ಹಲವು ಪ್ರಯಾಣಿಕರು ವಿದ್ಯುಚ್ಛಾಲಿತ ವಾಹನಗಳಿಗೂ ಮೊರೆ ಹೋಗಿದ್ದಾರೆ.


q

ಪ್ರಾಧ್ಯಾಪಕ ಸತೀಶ್ ಕುಮಾರ್

ಆದರೆ ಹೈದರಾಬಾದಿನ 45 ವರ್ಷದ ಯಾಂತ್ರಿಕ ಅಭಿಯಂತರ (ಮೆಕ್ಯಾನಿಕಲ್ ಇಂಜಿನಿಯರ್) ಸತೀಶ್ ಕುಮಾರ್ ಈ ಸಮಸ್ಯೆಗೆ ವಿಭಿನ್ನ ಪರಿಹಾರೋಪಾಯವನ್ನು ಸಂಶೋಧಿಸಿದ್ದಾರೆ. ಅದೇ ಪ್ಲಾಸ್ಟಿಕ್‍ನಿಂದ ಇಂಧನ ತಯಾರಿಕೆ. ಈ ಪ್ಲಾಸ್ಟಿಕ್ ಇಂಧನವು ಈಗ ಲೀಟರ್‍ಗೆ 40ರೂ.ಗಳಂತೆ ಸ್ಥಳೀಯ ಕಾರ್ಖಾನೆಗಳಲ್ಲಿ ವ್ಯಾಪಾರವಾಗುತ್ತಿದೆ.


ಸತೀಶ ಅವರು ತಮ್ಮ ಈ ಪ್ಲಾಸ್ಟಿಕ್ ಇಂಧನ ತಯಾರಿಕಾ ಕಂಪನಿಯನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಯ ಸಚಿವಾಲಯದಡಿಯಲ್ಲಿ ನೊಂದಣಿಯನ್ನು ಮಾಡಿಕೊಂಡಿದ್ದಾರೆ.


ಪೈರೋಲಿಸಿಸ್ ಎಂದು ಕರೆಯಲ್ಪಡುವ ಮೂರು ಹಂತದ ಈ ಪ್ಲಾಸ್ಟಿಕ್ ಇಂಧನ ತಯಾರಿಕೆಯ ಹಂತದಲ್ಲಿ ನಿರ್ವಾತದಲ್ಲಿ ಅಧಿಕ ಉಷ್ಣತೆಯಲ್ಲಿ ಪ್ಲಾಸ್ಟಿಕ್ ಕರಗಿಸುವುದು ಒಂದು. ಇದಕ್ಕೆ ನೀರಿನ ಅವಶ್ಯಕತೆಯಿಲ್ಲ. ಮತ್ತು ಇದು ಯಾವುದೇ ರೀತಿಯ ತ್ಯಾಜ್ಯವನ್ನು ಉಳಿಸುವುದಿಲ್ಲ.


ಕ

ತಾಜಾ ಇಂಧನದ ಒಂದು ನೋಟ (ಚಿತ್ರ:ದಿ ನ್ಯೂಸ್ ಮಿನಿಟ್)

ಇವರು 2016ರಿಂದ ಸುಮಾರು 50ಟನ್‍ಗಳಷ್ಟು ಪುನರ್ಬಳಕೆ ಮಾಡಲಾಗದ ಪ್ಲಾಸ್ಟಿಕನ್ನು ಇಂಧನವನ್ನಾಗಿ ಪರಿವರ್ತಿಸಿದ್ದಾರೆ. ಪ್ರಸ್ತುತ ಅವರ ಕಂಪನಿಯು 200ಕೆ.ಜಿ. ಪ್ಲಾಸ್ಟಿಕ್ ಮರುಬಳಕೆ ಮಾಡುತ್ತಿದೆ ಮತ್ತು 200ಲೀ.ನಷ್ಟು ಪೆಟ್ರೋಲನ್ನು ತಯಾರಿಸುತ್ತಿದೆ.


ಅವರು ನ್ಯೂಸ್18 ಜೊತೆ ಮಾತನಾಡುತ್ತಾ ಹೀಗೆ ಹೇಳಿದರು,


“ಈ ಪ್ಲಾಸ್ಟಿಕ್ ಇಂಧನ ತಯಾರಿಕಾ ವಿಧಾನವು ಮರುಬಳಕೆಯ ಪ್ಲಾಸ್ಟಿಕನ್ನು ಡಿಸೇಲ್, ಪೆಟ್ರೋಲ್ ಮತ್ತು ವಿಮಾನದ ಅಥವಾ ವಾಯುಯಾನದ ಇಂಧನವಾಗಿಯೂ ಪರಿವರ್ತಿಸಬಹುದು. 500ಕೆ.ಜಿ. ಮರುಬಳಕೆಗೆ ಸಾಧ್ಯವಿಲ್ಲದ ಪ್ಲಾಸ್ಟಿಕ್‍ನಿಂದ ಸುಮಾರು 400ಲೀ. ಇಂಧನ ತಯಾರಿಸಬಹುದು. ಇದನ್ನು ನಿರ್ವಾತ ಪ್ರದೇಶದಲ್ಲಿ ಮಾಡುವುದರಿಂದ ವಾಯುಮಾಲಿನ್ಯದ ಸಮಸ್ಯೆಯೂ ಇಲ್ಲ.”


ಈ ಕ್ರಿಯೆಯಲ್ಲಿ ಮುಖ್ಯವಾದ ಅಂಶವೆಂದರೆ ಇದು ಯಾವುದೇ ರೀತಿಯ ಮಾಲಿನ್ಯವನ್ನು ಮಾಡದು ಮತ್ತು ಗಾಳಿಯನ್ನು ಕಲುಷಿತಗೊಳಿಸದು. ಪ್ರೊ.ಸತೀಶ್ ಕುಮಾರರು ಈ ಪ್ಲಾಸ್ಟಿಕ್ ಇಂಧನ ತಯಾರಿಕೆಯಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಜೊತೆಗೆ ಪೋಲಿವಿನೈಲ್ ಕ್ಲೋರೈಡ್ (ಪಿ.ವಿಸಿ) ಮತ್ತು ಪಾಲಿಥೀಲೀನ್ ಟೆರೆಫ್ಲೇಟ್(ಪಿ.ಇ.ಟಿ)ಯನ್ನು ಸ್ವೀಕರಿಸುತ್ತಾರೆ ಎಂದು ಐಬಿ ಟೈಮ್ಸ್ ವರದಿಯಲ್ಲಿ ಹೇಳಿದೆ.


ಆದಾಗ್ಯೂ ಈ ಇಂಧನವನ್ನು ವಾಹನಗಳಿಗೆ ಬಳಸಲು ಯೋಗ್ಯವೋ? ಇಲ್ಲವೋ? ಎಂಬುದನ್ನು ಇನ್ನೂ ಪರೀಕ್ಷೆಗೊಳಪಡಿಸಿ ತಿಳಿಯಬೇಕಿದೆ.