ಕಾಶ್ಮೀರಿ ಹೆಣ್ಣುಮಕ್ಕಳ ಮುಜುಗರವನ್ನು ಹೊಗಲಾಡಿಸುತ್ತಿರುವ ಈ ಐ. ಎ. ಎಸ್. ಅಧಿಕಾರಿ

ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಉಪ ಆಯುಕ್ತರಾಗಿರುವ 33 ವರ್ಷದ ಸೈಯದ್ ಸೆಹ್ರಿಶ್ ಅಸ್ಗರ್‌ ಎಂಬ ಐಐಎಸ್ ಅಧಿಕಾರಿ ತಮ್ಮ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಹೆಣ್ಣುಮಕ್ಕಳ‌ ಶಾಲೆ ಹಾಗೂ ಕಾಲೇಜುಗಳಲ್ಲಿ ಹಾಗೂ ಶ್ರೀನಗರದಲ್ಲಿ ನೈರ್ಮಲ್ಯ ಕರವಸ್ತ್ರ (ಸ್ಯಾನಿಟರಿ‌ ಪ್ಯಾಡ್) ವಿತರಕ ಯಂತ್ರ ಹಾಗೂ ದಹನಕಾರಿ ಯಂತ್ರಗಳನ್ನು ಅಳವಡಿಸಲು ನಿರ್ದೇಶಿಸಿದ್ದಾರೆ.

ಕಾಶ್ಮೀರಿ ಹೆಣ್ಣುಮಕ್ಕಳ ಮುಜುಗರವನ್ನು ಹೊಗಲಾಡಿಸುತ್ತಿರುವ ಈ ಐ. ಎ. ಎಸ್. ಅಧಿಕಾರಿ

Wednesday July 17, 2019,

2 min Read

ಅನೇಕ ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ಕೂಡ ಇನ್ನೂ ಅನೇಕ‌ ಪ್ರದೇಶಗಳಲ್ಲಿ ವಿಶೇಷವಾಗಿ, ಗ್ರಾಮೀಣ ಭಾರತದಲ್ಲಿ ಮುಟ್ಟಿನ ವಿಷಯವು ನಿಷೇಧದ ವಿಷಯವಾಗಿಯೇ ಉಳಿದಿದೆ‌.


ಮುಟ್ಟಿನ ಆರೋಗ್ಯ ಹಾಗೂ ನೈರ್ಮಲ್ಯದ ಪ್ರಾಮುಖ್ಯತೆಯ ಕುರಿತಾಗಿ ದೇಶದ ಹೆಚ್ಚಿನ ಮಹಿಳೆಯರಿಗೆ ಪ್ರಚಾರ ಮಾಡಬೇಕಿದೆ. ಮುಟ್ಟು ಹಾಗೂ ಮುಟ್ಟಿನ ಆರೋಗ್ಯದ ಕುರಿತು ಮಾತಾನಾಡುವುದು ಸರಿಯಾಗಿದೆ ಎಂಬ ಸಂದೇಶವನ್ನು ನಿರಂತರವಾಗಿ ಹಾಗೂ ಸ್ಥಿರವಾಗಿ ಪುನರುಚ್ಚರಿಸಬೇಕಾಗಿದೆ.


ಕಾಶ್ಮೀರದ ಬುಡ್ಗಾಮ್ ಜಿಲ್ಲಾಧಿಕಾರಿ ಸೈಯದ್ ಸೆಹ್ರೀಶ್ ಅಸ್ಗರ್ ಅವರು ಈ ನಡುವೆ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವಂತ ವಿನೂತನ ಪ್ರಯತ್ನವನ್ನು ಕೈಗೊಂಡಿದ್ದಾರೆ.


Kashmir IAS

ಸೈಯದ್ ಸೆಹ್ರೀಶ್ ಅಸ್ಗರ್ ರವರು ಜಾಗೃತಿ ಶಿಬಿರವನ್ನು ನಡೆಸುತ್ತಿರುವುದು (ಚಿತ್ರ:ಶೀ ದಿ ಪೀಪಲ)

ಅವರು 'ಶೀ ದಿ ಪಿಪಲ್' ಜೊತೆಗೆ ಮಾತಾನಾಡುತ್ತ,


"ಮಹಿಳೆಯರು ತಮ್ಮ ಆರೋಗ್ಯ ಹಾಗೂ ನೈರ್ಮಲ್ಯದ ಕುರಿತಾಗಿ ಕಾಳಜಿ ವಹಿಸುವಂತಹ ಹಾಗೂ ಅದರ ಬಗ್ಗೆ ನಾಚಿಕೆ ಪಡದಂತಹ ಮುಕ್ತ ವಾತಾವರಣದ ಸಮಾಜವನ್ನು ರಚಿಸಲು ನಾವು ಪ್ರಯತ್ನಿಸಬೇಕು. ಘನತಯಿಂದ ಬದುಕುವುದು ಅವರ ಹಕ್ಕು. ಮುಟ್ಟಿನ ಸುತ್ತಲು ಹೊಂದಿರುವ ಕಳಂಕವನ್ನು ಮೊದಲು ಬಗೆಹರಿಸಬೇಕಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಮಗೆ ಹಾಯಾಗಿರಲು ದೇಹದ ರಚನೆಗಳು ಆರಾಮದಾಯಕವಾಗಿ ಇರಬೇಕಾಗುತ್ತವೆ".


ಸೈಯದ್ ಸೆಹ್ರಿಶ್ ಅಸ್ಗರ್ ಅವರು ತಮ್ಮ ಜಿಲ್ಲಾ ಕೇಂದ್ರದಲ್ಲಿ ಮೊದಲ ಮಹಿಳಾ ಸಮಾವೇಶವನ್ನು ಆಯೋಜಿಸಿದರು. ಅದರಲ್ಲಿ ಋತುಸ್ರಾವದ ಸಮಯದಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಅವರ ಉದ್ದೇಶವಾಗಿತ್ತು.


ತಮ್ಮ ಜಿಲ್ಲೆಯಲ್ಲಿ ಶುದ್ಧ ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ 1,200 ಶಾಲೆಗಳಲ್ಲಿ ಸುಮಾರು 300 ಬಾಲಕಿಯರು ಶಾಲೆಯನ್ನು ತೊರೆದಿದ್ದಕ್ಕೆ ಸಾಕ್ಷಿಯಾಗಿದ್ದ ಇವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ಎಲ್ಲಾ ಬಾಲಕಿಯರ ಶಾಲೆ ಹಾಗೂ ಕಾಲೇಜುಗಳ ಆವರಣದಲ್ಲಿ ನೈರ್ಮಲ್ಯ ಕರವಸ್ತ್ರ (ಸ್ಯಾನಿಟರಿ‌ ಪ್ಯಾಡ್) ವಿತರಕ ಯಂತ್ರ ಹಾಗೂ ದಹನಕಾರಿ ಯಂತ್ರಗಳನ್ನು ಅಳವಡಿಸಬೇಕೆಂದು‌ ಆದೇಶ ಹೊರಡಿಸಿದರು.


'ದಿ ಇಂಡಿಯನ್ ಎಕ್ಸ್ ಪ್ರೆಸ್' ಜೊತೆಗಿನ ಸಂವಾದದಲ್ಲಿ ಅವರು,


"ಎಲ್ಲಾ ದಹನಕಾರಿ ಯಂತ್ರ ಮತ್ತು ನೈರ್ಮಲ್ಯ ಕರವಸ್ತ್ರ ವಿತರಕಗಳನ್ನು ಜಿಲ್ಲೆಯ 106 ಹೈಯರ್ ಸೆಕೆಂಡರಿ ಶಾಲೆಗಳು, ಐದು ಪದವಿ ಕಾಲೇಜುಗಳು ಮತ್ತು ಒಂದು ಐಟಿಐಗಳಲ್ಲಿ ಇರಿಸಲಾಗುವುದು. ಅಲ್ಲದೆ, ನೈರ್ಮಲ್ಯ ಕರವಸ್ತ್ರ ವಿತರಕಗಳನ್ನು ಡಿಸಿ ಕಚೇರಿಯಲ್ಲಿ ಮತ್ತು ಜಿಲ್ಲೆಯಲ್ಲಿ ಬರುವ ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಇರಿಸಲಾಗುವುದು". 


ಇಲ್ಲಿಯವರೆಗೆ, ಮುಟ್ಟಿನ ಆರೋಗ್ಯಕ್ಕಾಗಿ ರಾಜ್ಯ ಅಥವಾ ಕೇಂದ್ರ ಸರ್ಕಾರವು ಯಾವುದೇ ಬಜೆಟ್ ಹಂಚಿಕೆ ಮಾಡಿಲ್ಲ. ರಾಜ್ಯದ ಗ್ರಾಮೀಣಾಭಿವೃದ್ಧಿಗಾಗಿ ಮೀಸಲಿಟ್ಟ ನಿಧಿಯಿಂದ ಅಸ್ಗರ್ ಅವರು ಸರಿಯಾದ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ವಿಮಾನ ನಿಲ್ದಾಣ ಪ್ರಾಧಿಕಾರ (AAI)ನ ಸಾಂಸ್ಥಿಕ‌ ಸಾಮಾಜಿಕ ಜವಾಬ್ದಾರಿ(CSR) ಕಾರ್ಯಕ್ರಮದ ನೆರವಿನ ಮೂಲಕ ಹೆಚ್ಚಿನ ಅವಶ್ಯಕತೆಗಳನ್ನು ಪೂರೈಸಲಾಗುತ್ತಿದೆ.


ಕಣಿವೆಯಲ್ಲಿ ನಿರಂತರ ಕಲಹಗಳ ಹೊರತಾಗಿಯೂ ಅಸ್ಗರ್ ಅವರು ಯುವತಿಯರಿಗೆ ಸುರಕ್ಷಿತ ವಾತಾವರಣವನ್ನು‌ ರೂಪಿಸಿ ಕೊಡಲು ಪ್ರಯತ್ನಿಸುತ್ತಿದ್ದಾರೆ.

"ಮಹಿಳೆಯರು ತಮ್ಮ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವ ಮತ್ತು ಅದರ ಬಗ್ಗೆ ನಾಚಿಕೆ ಪಡದ ಮುಕ್ತ ವಾತಾವರಣದ ಸಮಾಜವನ್ನು ರೂಪಿಸಲು ನಾವು ಪ್ರಯತ್ನಿಸಬೇಕು ಮತ್ತು ರಚಿಸಬೇಕು. ಘನತೆಯಿಂದ ಬದುಕುವುದು ಅವರ ಹಕ್ಕು, ಮತ್ತು ಮುಟ್ಟಿನ ಸುತ್ತಲಿನ ಕಳಂಕವನ್ನು ಪರಿಹರಿಸಬೇಕಾಗಿದೆ” ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.