ದುರ್ಬಲ ವರ್ಗದ ವಿದ್ಯಾರ್ಥಿಗಳನ್ನು ಉನ್ನತ ವಿದ್ಯಾಭ್ಯಾಸಕ್ಕೆ ಸಜ್ಜುಗೊಳಿಸುತ್ತಿರುವ ಐಐಟಿಯ ಹಳೆ ವಿದ್ಯಾರ್ಥಿಗಳು

ಅಕ್ಷಯ ಸಕ್ಸೆನಾ ಮತ್ತು ಕೃಷ್ಣ ರಾಮ್‌ಕುಮಾರ್‌ ತಮ್ಮ ಗೆಳೆಯರೊಂದಿಗೆ ಸೇರಿ ಬಡ ವಿದ್ಯಾರ್ಥಿಗಳಿಗೆ ಭಾರತದ ಉನ್ನತ ಕಾಲೇಜುಗಳಲ್ಲಿ ಅಭ್ಯಸಿಸುವಂತೆ ಸಹಾಯಮಾಡಲು ಅವಂತಿ ಫೆಲ್ಲೋಸ್‌ ಅನ್ನು ಸ್ಥಾಪಿಸಿದರು.

ದುರ್ಬಲ ವರ್ಗದ ವಿದ್ಯಾರ್ಥಿಗಳನ್ನು ಉನ್ನತ ವಿದ್ಯಾಭ್ಯಾಸಕ್ಕೆ ಸಜ್ಜುಗೊಳಿಸುತ್ತಿರುವ ಐಐಟಿಯ ಹಳೆ ವಿದ್ಯಾರ್ಥಿಗಳು

Thursday October 22, 2020,

4 min Read

ಐಐಎಮ್‌, ಎಐಐಎಮ್‌ಎಸ್‌, ಐಐಟಿ, ಐಐಐಟಿಎಸ್‌, ಐಐಎಸ್‌ಇಆರ್‌ ಮತ್ತು ಎನ್‌ಐಟಿ ಯಂತಹ ಪ್ರಯುಖ ವಿಶ್ವವಿದ್ಯಾಲಯಗಳು ಸೇರಿದಂತೆ 1000 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ ಭಾರತ ಜನತ್ತಿನಲ್ಲೆ ಅತಿ ದೊಡ್ಡ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ. ಆದರೆ ಭಾರತದಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತ(ಜಿಇಆರ್‌) ಕೇವಲ ಶೇ. 25.2 ರಷ್ಟಿದೆ, ಅಭಿವೃದ್ಧಿ ಹೊಂದುತ್ತಿರುವ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ.


ಕಳಪೆ ಗುಣಮಟ್ಟದ ಶಿಕ್ಷಣ, ನುರಿತ ಸಿಬ್ಬಂಧಿಗಳ ಕೊರತೆ, ಪ್ರಾದೇಶಿಕ ಅಸಮಾನತೆ ಮತ್ತು ಶುಲ್ಕ ಭರಿಸಲು ಇರುವ ಆರ್ಥಿಕ ಸಮಸ್ಯೆಗಳು ಜಿಇಆರ್‌ ಕಡಿಮೆಯಾಗಲು ಪ್ರಮುಖ ಕಾರಣ.


2010ರಲ್ಲಿ ಅಕ್ಷಯ ಸಕ್ಸೆನಾ, ಕೃಷ್ಣ ರಾಮ್‌ಕುಮಾರ್‌, ವೈಭವ ದೇವನಾಥನ್‌, ರೋಹಿತ್‌ ಸಿಂಗ್‌, ಐಶ್ವರ್ಯ ರಾಮಕೃಷ್ಣನ್‌ ಮತ್ತು ರಾಹುಲ್‌ ಶ್ರೀನಿವಾಸನ್‌ ಎಂಬ ಆರು ಜನರು ಸೇರಿ ಈ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದರು. ಇವರು ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಅರ್ಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸರಕಾರೇತರ ಸಂಸ್ಥೆ ಅವಂತಿ ಫೆಲ್ಲೋಸ್‌ ಸ್ಥಾಪಿಸಿದರು.


“ನಾವೆಲ್ಲ 2000 ದಿಂದ 2004 ರ ನಡುವೆ ಐಐಟಿ ಬಾಂಬೆಯಲ್ಲಿ ಕಲಿಯುತ್ತಿದ್ದಾಗ ಪಠ್ಯಕ್ರಮದೊಂದಿಗೆ ಕಷ್ಟಪಡುತ್ತಿದ್ದ ಹಲವು ಕಿರಿಯರನ್ನು ವಿಶೇಷವಾಗಿ ಬಡ ಕುಟುಂಬದಿಂದ, ಸಣ್ಣ ಕುಟುಂಬದಿಂದ ಬಂದ ವಿದ್ಯಾರ್ಥಿಗಳು ಪಡುತ್ತಿದ್ದ ಕಷ್ಟವನ್ನು ನಾವು ಗಮನಿಸಿದ್ದೇವೆ. ಈ ಸಮಸ್ಯೆಯ ಆಳಕ್ಕಿಳಿದು ಸ್ವಲ್ಪ ಮಾಹಿತಿ ಕಲೆಹಾಕಿದಾಗ ಉತ್ತಮ ಹಿನ್ನಲೆಯಿಂದ ಬಂದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಈ ವಿದ್ಯಾರ್ಥಿಗಳು ಐಐಟಿ ಸೇರುವ ಸಂಭವ 7 ರಷ್ಟು ಕಡಿಮೆಯಿರುತ್ತದೆ ಎಂದು ನಮಗೆ ತಿಳಿಯಿತು. ಆಗ ಇದರ ಬಗ್ಗೆ ಏನಾದರೂ ಮಾಡಬೇಕೆಂದು ನಮಗನಿಸಿತು,” ಎನ್ನುತ್ತಾರೆ ಅವಂತಿ ಫೆಲ್ಲೋಸ್‌ನ ಸಹ-ಸಂಸ್ಥಾಪಕರಾದ ಅಕ್ಷಯ ಸಕ್ಸೇನಾ.

ಮೊದಲ ಹೆಜ್ಜೆ

ಐಐಟಿ ಬಾಂಬೆಯಲ್ಲಿ ಕೆಮಿಕಲ್‌ ಇಂಜಿನೀಯರಿಂಗ್‌ ಮಾಡಿದ ಅಕ್ಷಯ ಹಾರ್ವರ್ಡ್‌ ಬ್ಯೂಸಿನೆಸ್‌ ಸ್ಕೂಲ್‌ನಿಂದ ಎಮ್‌ಬಿಎ ಪದವಿ ಪಡೆದು ಹರ್ಟ್‌ಫ್ಲೋ ಎಂಬ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾಗಿ ಮತ್ತು ಇತರೆಡೆ ಕೆಲಸಮಾಡಿದರು. ಕೃಷ್ಣ ರಸಾಯನಶಾಸ್ತ್ರದಲ್ಲಿ ಎಮ್‌ಎಸ್‌ಸಿ ಪದವಿ ಪಡೆದರು.


ಇಬ್ಬರು ತಮ್ಮ ಓದು ಮುಗಿದ ಬಳಿಕ ಕಾರ್ಪೊರೇಟ್‌ ವಲಯದಲ್ಲಿ ಕೆಲಸ ನಿರ್ವಹಿಸಿದರು, ಉನ್ನತ ಶಿಕ್ಷಣದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಹೇಗೆ ನಿವಾರಿಸಬಹುದೆಂದು ಯೋಚಿಸುತ್ತಿದ್ದರು. ಇದರ ಕುರಿತಾಗಿಯೆ ಅವರು 2010 ರಲ್ಲಿ ಮಾದರಿಯೊಂದನ್ನು ಸಿದ್ಧಪಡಿಸಿ ಪ್ರಮುಖ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿ ಸ್ವಯಂಸೇವಕರನ್ನು ಒಳಗೊಂಡು ಅವರಿಗೆ ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತೆ ಸಿದ್ಧಗೊಳಿಸಿದರು. ಇದರ ನಂತರ ಈ ಜೋಡಿ ಅವಂತಿ ಫೆಲ್ಲೋಸ್‌ ಅನ್ನು ಸ್ಥಾಪಿಸಿತು.


“ಕಷ್ಟದಲ್ಲಿದ್ದ ವಿದ್ಯಾರ್ಥಿಗಳನ್ನು ಗುರುತಿಸುವುದೆ ನಮಗಿದ್ದ ಮೊದಲ ತೊಂದರೆ. ಆದರೆ ನಮ್ಮ ಬ್ಯಾಚ್‌ ಗೆಳೆಯರು, ಶಾಲೆ, ತರಬೇತಿ ಕೇಂದ್ರಗಳ ಜಾಲವನ್ನು ಬಳಸಿಕೊಂಡಾಗ ಇದು ಸಲೀಸಾಯಿತು. 11, 12 ನೇ ತರಗತಿಯಲ್ಲಿನ ಹೆಚ್ಚಿನ ವಿದ್ಯಾರ್ಥಿಗಳಿಗೆ ಮುಂದಿರುವ ಅವಕಾಶಗಳ ಬಗ್ಗೆ ಅರಿವಿಲ್ಲದಿರುವುದರಿಂದ ನಾವು ಸೆಮಿನಾರ್‌ಗಳನ್ನು ನೀಡಲು ಪ್ರಾರಂಭಿಸಿದೆವು,” ಎನ್ನುತಾರೆ ಅಕ್ಷಯ.

ಅವಂತಿ ಫೆಲ್ಲೋಸ್‌ನ ಸಹ-ಸಂಸ್ಥಾಪಕ ಅಕ್ಷಯ ಸಕ್ಸೆನಾ


ದುರ್ಬಲರಿಗೆ ಬಲ ನೀಡುವುದು

2012 ಅವಂತಿ ಫೆಲ್ಲೋಸ್‌ ಪರೀಕ್ಷೆಗಳ ಮೇಲೆ ಕೇಂದ್ರಿತವಾದ ಯೋಜನೆಯೊಂದನ್ನು ಪ್ರಾರಂಭಿಸಿತು. ಇದಕ್ಕಾಗಿ ಎನ್‌ಜಿಒ ಜವಾಹರ್‌ ನವೋದಯ ವಿದ್ಯಾಲಯದೊಂದಿಗೆ ಪಾಲುದಾರಿಕೆ ಹೊಂದಿತು.


ಈ ಯೋಜನೆಯ ಮುಖ್ಯ ಉದ್ದೇಶ ವಿವಿಧ ಜಿಲ್ಲೆಗಳ ಸರ್ಕಾರಿ ಕಾಲೇಜುಗಳಲ್ಲಿ 11, 12 ನೇ ತರಗತಿಯಲ್ಲಿ ಓದುತ್ತಿರುವ ದುರ್ಬಲ ವರ್ಗದ ಆಯ್ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡುವುದು ಮತ್ತು ತರಬೇತಿ ನೀಡುವುದಾಗಿತ್ತು.


“ಈ ವಿದ್ಯಾರ್ಥಿಗಳನ್ನು ಎರಡು ಹಂತದಲ್ಲಿ ಆಯ್ಕೆಮಾಡಲಾಗುತ್ತದೆ, ಒಂದು ಆಪ್ಟಿಟ್ಯೂಡ್‌ ಪರೀಕ್ಷೆ ಮತ್ತೊಂದು ಅವರ ಶೈಕ್ಷಣಿಕ ಅರ್ಹತೆ, ಪ್ರೇರಣೆ ಮತ್ತು ಆರ್ಥಿಕ ಹಿನ್ನೆಲೆಯನ್ನು ಆಧಾವಾಗಿಸಿಟ್ಟುಕೊಂಡ ಸಂದರ್ಶನದ ಮೂಲಕ. ನಂತರ ಅವರನ್ನು 6, 7 ಜನರ ಗುಂಪುಗಳಾಗಿ ವಿಂಗಡಿಸಿ, ಅವರಿಗೆ ಜೆಇಇ, ನೀಟ್‌ ಪರೀಕ್ಷೆಗೆ ಸಹಕಾರಿಯಾಗುವಂತಹ ಸಮಗ್ರ ಅಭ್ಯಾಸದ ವಸ್ತುಗಳನ್ನು, ಪುಸ್ತಕಗಳನ್ನು ಮತ್ತು ಆನ್‌ಲೈನ್‌ ಸಂಪನ್ಮೂಲಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಅಭ್ಯಸಿಸುವುದನ್ನು ಪ್ರೋತ್ಸಾಹಿಸಲಾಗುತ್ತದೆ,” ಎಂದು ವಿವರಿಸುತ್ತಾರೆ ಅಕ್ಷಯ.


ಕಳೆದ ಕೆಲವು ವರ್ಷಗಳಲ್ಲಿ ಈ ಯೋಜನೆಯಿಂದ ಪಾಂಡಿಚೆರಿ, ಬಿದರ್‌, ಹಾಸನ, ಕೊಪ್ಪಳ, ಶಿಗ್ಗಾವ್‌, ವಾರ್ಧಾ ಮತ್ತು ಪಾಲ್ಘಾರ್ ಮತ್ತು ಇತರೆ ವಿವಿಧ ಶಾಲೆಗಳ 10,000 ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

ಅವಂತಿ ಫೆಲ್ಲೋಸ್‌ನ ವಿದ್ಯಾರ್ಥಿಗಳು


ಅವಂತಿ ಫೆಲ್ಲೋಸ್‌ ಈ ಯೋಜನೆಯಲ್ಲಿ ಸಣ್ಣ ಬದಲಾವಣೆ ತರಲಿದ್ದು, ಶಿಕ್ಷಕರನ್ನು ಒಳಗೊಳ್ಳಲು ವಿನಂತಿಸಿಕೊಳ್ಳುತ್ತಿದೆ ಇದರಿಂದ ಮಕ್ಕಳ ಪ್ರಗತಿಯನ್ನು ಉತ್ತಮವಾಗಿ ಮೇಲ್ವಿಚಾರಣೆ ಮಾಡಬಹುದಾಗಿದೆ.


ಸಂಸ್ಥೆಯ ಇನ್ನೊಂದು ಯೋಜನೆ ಸರ್ಕಾರಿ ಶಾಲೆಗಳನ್ನು ಸಶಕ್ತಗೊಳಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಮೂಲ ವಿಷಯಗಳಾದ ಗಣಿತ ಮತ್ತು ವಿಜ್ಞಾನವನ್ನು ಅರ್ಥೈಸಿಕೊಳ್ಳುವುದು ತುಂಬಾ ಮುಖ್ಯ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗೆ. ಆದರೆ ಶಾಲಾ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟ ಕಳಪೆಯಾದರೆ ಮಕ್ಕಳು ಹಿಂದೆ ಬೀಳುತ್ತಾರೆ.


ಈ ನಿಟ್ಟಿನಲ್ಲಿ ಅವಂತಿ ಫೆಲ್ಲೋಸ್‌ ಸರ್ಕಾರಿ ಶಾಲೆಯ ಶಿಕ್ಷಕರೊಂದಿಗೆ ಕೆಲಸ ಮಾಡಲು ಶುರುಮಾಡಿತು.


“ಚೆನ್ನೈನ ಕೆಲವು ಸರ್ಕಾರಿ ಶಾಲೆಗಳ ಮೇಲೆ ನಾವು ಅಧ್ಯಯನ ನಡೆಸಿದೆವು, ಅದರಲ್ಲಿ ಶೇ. 60 ರಷ್ಟು ಮಕ್ಕಳಿಗೆ ಇಂಗ್ಲೀಷ್‌ನಲ್ಲಿ ವಾಕ್ಯಗಳನ್ನು ಓದಲು ಬರೆಯಲು ಬರುವುದಿಲ್ಲ ಎಂದು ತಿಳಿಯಿತು. ಹಾಗಾಗಿ ಶಿಕ್ಷಕರಿಗೆ ವ್ಯವಸ್ಥಿತ ವಿಷಯದ ಬಳಕೆ, ವಿಡಿಯೋ ಪಾಠಗಳನ್ನು ತೆಗೆದುಕೊಳ್ಳುವುದು ಹೇಗೆ, ಮತ್ತು ಉತ್ತಮ ಶಿಕ್ಷಣಶಾಸ್ತ್ರವನ್ನು ಅನ್ವಯಿಸುವುದು ಹೇಗೆ ಎಂಬ ತರಬೇತಿ ನೀಡಲು ನಿರ್ಧರಿಸಿದೆವು. ಪ್ರಸ್ತುತ ನಾವು ಹರಿಯಾಣದ 240 ಶಾಲೆಗಳ 600 ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದು, ಇದನ್ನು ವಿಸ್ತರಿಸಲು ಬಯಸಿದ್ದೇವೆ,” ಎಂದರು ಅಕ್ಷಯ.


ಕೋವಿಡ್‌-19 ಆನ್‌ಲೈನ್‌ ಶಿಕ್ಷಣವನ್ನು ಅನಿವಾರ್ಯವಾಗಿಸಿದೆ. ಹಾಗಾಗಿ ಅವಂತಿ ಫೆಲ್ಲೋಸ್‌ ತನ್ನದೆ ಆದ ಸ್ವಂತ ಆನ್‌ಲೈನ್‌ ಕಲಿಕೆಯನ್ನು ಪ್ರಾರಂಭಿಸಿದ್ದು, ಹರಿಯಾಣದ ಹಲವು ಶಾಲೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಘರ್‌ ಪೇ ಸ್ಕೂಲ್‌ ಪ್ರಾರಂಭಿಸಿ ದೈನಿಕ ಪಾಠದ ಯೋಜನೆ, ಓದಲು ನೋಟ್ಸ್‌, ವಿಡಿಯೋ ಮತ್ತು ಇತರ ಡಿಜಿಟಲ್‌ ಕಂಟೆಂಟೆ ಅನ್ನು ಮಕ್ಕಳಿಗೆ ವಾಟ್ಸ್ಯಾಪ್‌ ಮೂಲಕ ಅವರದೆ ಸ್ವಂತ ಭಾಷೆಯಲ್ಲಿ ಕಳಿಸುತ್ತದೆ.


ಅವಂತಿ ಫೆಲ್ಲೋಸ್‌ ಕಾರ್ಪೊರೇಟ್‌ ಮತ್ತು ಸಿಎಸ್‌ಆರ್‌ ನಿಧಿಯ ಮೇಲೆ ತನ್ನ ಕಾರ್ಯಚಾರಣೆಗಳನ್ನು ನಡೆಸುತ್ತದೆ. ಡೆಲ್‌ ಫೌಂಡೇಶನ್‌ ಮತ್ತು ಟಾಟಾ ತಂಡವು ಇದರಲ್ಲಿ ಸೇರಿದೆ.


ಅವಂತಿ ಫೆಲ್ಲೋಸ್‌ನ ಆನ್‌ಲೈನ್‌ ಪಾಠ


ಒಂದು ಬದಲಾವಣೆ

12 ನೇ ತರಗತಿ ಓದುತ್ತಿದ್ದ ಪ್ರಿಯಾಂಕಾ ಪಾಲಶೇಟ್ಕರ್‌ ಅವಂತಿ ಫೆಲ್ಲೋಸ್‌ನಲ್ಲಿ ಭಾಗಿಯಾದರು.


“ನಾನು ಚಿಕ್ಕವಳಿದ್ದಾಗ ಅವಂತಿಗೆ ಸೇರಿದ್ದು ದೊಡ್ಡ ಬದಲಾವಣೆ ತಂದಿತು. ನನ್ನ ಶಿಕ್ಷಣಕ್ಕೆ, ಜೆಇಇ ಗೆ ತಯಾರಿ ಮಾಡುವ ಪ್ರತಿ ಹಂತದಲ್ಲೂ ಅವರು ನನ್ನ ಜತೆಗಿದ್ದರು. ಇಂದು ಎನ್‌ಜಿಒನ ಸಹಾಯದಿಂದ ನಾನು ಎನ್‌ಎಸ್‌ಆರ್‌ಸಿಇಎಲ್‌, ಐಐಎಮ್‌-ಬೆಂಗಳೂರಿನಲ್ಲಿ ಇನ್ಕ್ಯೂಬೆಟ್‌ ಆದ ಅಲ್ಮಾಮೀಲ್‌ ಎಂಬ ಸ್ಟಾರ್ಟಪ್‌ ನಡೆಸುತ್ತಿದ್ದೇನೆ,” ಎನ್ನುತ್ತಾರೆ ಪ್ರಿಯಾಂಕಾ.


ಅವಂತಿಯಿಂದ ಪ್ರಯೋಜನ ಪಡೆದುಕೊಂಡ ಸಾವಿರಾರು ವಿದ್ಯಾರ್ಥಿಗಳಲ್ಲಿ ಪ್ರಿಯಾಂಕಾ ಒಬ್ಬರು. ಇಂದಿಗೆ ಸಂಸ್ಥೆ 50,000 ವಿದ್ಯಾರ್ಥಿಗಳೊಂದಿಗೆ ತರಗತಿ ಯೋಜನೆಗಳಲ್ಲಿ ಮತ್ತು 20 ಲಕ್ಷ ವಿದ್ಯಾರ್ಥಿಗಳನ್ನು ಆನ್‌ಲೈನ್‌ ಮೂಲಕ ತಲುಪುತ್ತಿದೆ.


“ಈ ಪ್ರಯಾಣದಲ್ಲಿ ಸರ್ಕಾರದಿಂದ, ಶಿಕ್ಷಕರಿಂದ ಮತ್ತು ವಿದ್ಯಾರ್ಥಿಗಳಿಂದ ನಾವು ನಂಬಿಕೆಗಳಿಸಿದ್ದೇವೆ. ಇದೆ ನಮ್ಮ ದೊಡ್ಡ ಸಾಧನೆ. ವಿದ್ಯಾರ್ಥಿಗಳ ಸಾಮರ್ಥ್ಯದಲ್ಲಿ ನಂಬಿಕೆ ಇಡುವ ನಮ್ಮ ಸಂಸ್ಥೆ ಹಣದ ಸಮಸ್ಯೆಯಿಂದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆಯಲಾಗದಿರುವುದನ್ನು ತಡೆಯುತ್ತದೆ,” ಎಂದರು ಅಕ್ಷಯ.