ಸೌತೆಕಾಯಿ ಸಿಪ್ಪೆಯ ಮೂಲಕ ಆಹಾರ ಪ್ಯಾಕ್‌ ಮಾಡುವ ಪದಾರ್ಥ ಕಂಡುಹಿಡಿದ ಐಐಟಿ ಖರಗ್‌ಪುರದ ಸಂಶೋಧಕರು

ಸೌತೆಕಾಯಿ ಸಿಪ್ಪೆಯ ತ್ಯಾಜ್ಯದಿಂದ ಅಭಿವೃದ್ಧಿಪಡಿಸಿರುವ ಸೆಲ್ಯುಲೋಸ್‌ ನ್ಯಾನೋ ಕ್ರಿಸ್ಟಲ್‌ಗಳು ಪ್ಲಾಸ್ಟಿಕ್‌ ಪ್ಯಾಕೆಜಿಂಗ್‌ಗೆ ಪರಿಸರ ಸ್ನೇಹಿ ಪರ್ಯಾಯವಾಗಿವೆ.
0 CLAPS
0

ಐಐಟಿ ಖರಗ್‌ಪುರದ ಸಂಶೋಧಕರು ಸೌತೆಕಾಯಿಯ ಸಿಪ್ಪೆಯಿಂದ ಸೆಲ್ಯುಲೋಸ್‌ ನ್ಯಾನೋ ಕ್ರಿಸ್ಟಲ್‌ಗಳನ್ನು ಅಭಿವೃದ್ಧಿಪಡಿಸಿ ಭವಿಷ್ಯದಲ್ಲಿ ಪರಿಸರ ಸ್ನೇಹಿಯಾಗಿ ಆಹಾರವನ್ನು ಪ್ಯಾಕೆಜ್‌ ಮಾಡುವ ಹೊಸ ಸಾಧ್ಯತೆಯನ್ನು ಕಂಡುಕೊಂಡಿದ್ದಾರೆ.

ಪರಿಸರದ ಬಗ್ಗೆ ಜಾಗೃತಿ ಇರುವ ಗ್ರಾಹಕರು ಏಕಬಳಕೆಯ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಿದ್ದರು ಇನ್ನೂ ವಿವಿಧ ಪಾಲಿಮರ್‌ಗಳನ್ನು ಆಹಾರದ ಪ್ಯಾಕೆಜಿಂಗ್‌ನಲ್ಲಿ ಬಳಸಲಾಗುತ್ತಿದೆ.

ಐಐಟಿ ಖರಗ್‌ಪುರದ ಪ್ರಾಧ್ಯಾಪಕರಾದ ಜಯೀತ್‌ ಮಿತ್ರಾ ಮತ್ತು ಸಂಶೋಧನಾ ವಿದ್ಯಾರ್ಥಿ ಎನ್‌ ಸಾಯಿ ಪ್ರಸನ್ನ ಆಹಾರ ಪ್ಯಾಕೆಜಿಂಗ್‌ ಮಾಡಲು ಬಳಸುವ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಸೌತೆಕಾಯಿ ಸಿಪ್ಪೆಯ ತ್ಯಾಜ್ಯದಿಂದ ಸೆಲ್ಯುಲೋಸ್‌ ನ್ಯಾನೋ ಕ್ರಿಸ್ಟಲ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಮಂಗಳವಾರದ ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಸೌತೆಕಾಯಿಯ ಸಿಪ್ಪೆಯನ್ನು ಅಥವಾ ಸಂಪೂರ್ಣ ಚೂರುಗಳನ್ನು ಸಂಸ್ಕರಿಸಿದ ನಂತರ ಸುಮಾರು 12 ಪ್ರತಿಶತದಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಸಂಸ್ಕರಿಸಿದ ವಸ್ತುವಿನಿಂದ ನಾವು ಸೆಲ್ಯುಲೋಸ್ ಸಾರವನ್ನು ಬಳಸಿದ್ದೇವೆ,” ಎಂದರು ಐಐಟಿ ಖರಗ್‌ಪುರದ ಕೃಷಿ ಮತ್ತು ಆಹಾರ ಇಂಜಿನೀಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಿತ್ರಾ.

ಈ ಅನ್ವೇಷಣೆಯ ಬಗ್ಗೆ ಮಾತನಾಡುತ್ತಾ ಅವರು, “ಸೌತೆಕಾಯಿಯ ಸಿಪ್ಪೆಯಿಂದ ತೆಗೆದ ಸೆಲ್ಯುಲೋಸ್‌ ನ್ಯಾನೋ ಕ್ರಿಸ್ಟಲ್‌ಗಳು ಮಾರ್ಪಾಡುಗೊಳ್ಳುವ ಗುಣಹೊಂದಿವೆ. ಇದು ಉತ್ತಮ ಜೈವಿಕ ವಿಘಟನೆಗೆ ಮತ್ತು ಜೈವಿಕ ಹೊಂದಾಣಿಕೆಗೆ ಸಾಕ್ಷಿಯಾಗುತ್ತದೆ.”

“ತಮ್ಮ ವಿಶೇಷ ಗುಣಲಕ್ಷಣಗಳಿಂದ ಈ ನ್ಯಾನೋ ಸೆಲ್ಯುಲೋಸ್‌ ಪದಾರ್ಥ ದೃಢವಾದ, ನವೀಕರಿಸಬಹುದಾದ ಮತ್ತು ಆರ್ಥಿಕ ಪದಾರ್ಥವಾಗಿ ಹೊರಹೊಮ್ಮಿದೆ,” ಎಂದು ಅವರು ತಿಳಿಸಿದರು.

ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ಪೆಕ್ಸೆಲ್ಸ್‌)

ವರ್ಷಗಳಿಂದ ಪೆಟ್ರೋಲಿಯಂ ಮೂಲದ ಪ್ಲಾಸ್ಟಿಕ್‌ನಿಂದ ಆಹಾರ ಪ್ಯಾಕೆಜಿಂಗ್‌ ಮಾಡುತ್ತಿರುವುದು ಪರಿಸರ ಮಾಲಿನ್ಯದ ಮೂಲ ಕಾರಣವಾಗಿದೆ.

ಸೌತೆಕಾಯಿಯ ಸಿಪ್ಪೆಯು ಇತರೆ ಸಿಪ್ಪೆ ತ್ಯಾಜ್ಯಕ್ಕೆ ಹೋಲಿಸಿದರೆ ಅತೀ ಹೆಚ್ಚು ಸೆಲ್ಯುಲೋಸ್‌ ಪದಾರ್ಥವನ್ನು(ಶೇ 18.22) ಹೊಂದಿದೆ.

ಕಾಗದ ತಯಾರಿ, ಲೇಪನ, ಜೈವಿಕ ಸಂಯೋಜನೆಗಳು ಮತ್ತು ಪಾರದರ್ಶಕ ಫಿಲ್ಮ್‌ಗಳಲ್ಲಿ ಈ ಅನ್ವೇಷಣೆಯ ಅಳವಡಿಕೆಯ ಬಗ್ಗೆ ಸಂಶೋಧಕರು ಭರವಸೆ ಹೊಂದಿದ್ದಾರೆ.

“‌ಜೈವಿಕ ಪಾಲಿಮರ್‌ಗಳ ಮೇಲೆ ಕೇಂದ್ರಿತವಾದ ಹೆಚ್ಚಿನ ಸಂಶೋಧನೆ ಮತ್ತು ಉತ್ಪನ್ನಗಳ ಅಭಿವೃದ್ಧಿ ಜನತೆಗೆ ಈ ವಲಯದ ಬಗ್ಗೆ ತಿಳುವಳಿಕೆ ಮತ್ತು ಆರ್ಥಿಕವಾಗಿ ಪರಿಸರ ಸ್ನೇಹಿ ಪರ್ಯಾಯಗಳನ್ನು ಹೇಗೆ ನೀಡುತ್ತದೆ ಎಂಬ ಅರಿವನ್ನು ನೀಡುತ್ತದೆ,” ಎಂದರು ಡಾ, ಮಿತ್ರಾ.

Latest

Updates from around the world