ನಿರ್ದಾಕ್ಷಿಣ್ಯವಾದ ಲಾಕ್‌ಡೌನ್ ಮತ್ತು ತ್ವರಿತಗತಿಯ ಪರೀಕ್ಷೆ: ಕೊರೊನಾ ವಿರುದ್ಧ ಹೋರಾಡಲು ರಾಜಸ್ಥಾನದ ಭಿಲ್ವಾರ್ ಕಂಡುಕೊಂಡ ಮಾರ್ಗ
ಇದು ರಾಜಸ್ಥಾನದ ಭಿಲ್ವಾರ್ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ 1 ರಿಂದ 27 ಕ್ಕೆ ಏರಿದ ಕೊರೊನಾ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸಿ, ಹೊಸ ಪ್ರಕರಣಗಳಾಗದಂತೆ ತಡೆದ ಕಥೆ.
ಕೊರೊನಾ ವೈರಸ್ ದಿನೇ ದಿನೇ ವಿಶ್ವವ್ಯಾಪ್ತಿಯಾಗಿ ಹರಡುತ್ತಿದೆ. ವರ್ಡೋಮೀಟರ್ ಪ್ರಕಾರ ಇಲ್ಲಿಯವರೆಗೆ ಈ ಸೋಂಕಿನಿಂದ 1.2 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಮತ್ತು 1.9 ಮಿಲಿಯನ್ ಜನರು ಈ ಸೋಂಕಿಗೆ ತುತ್ತಾಗಿದ್ದಾರೆ. ಭಾರತವು ಇದಕ್ಕೆ ಹೊರತಾಗಿಲ್ಲ, ಭಾರತದಲ್ಲಿ ಇಲ್ಲಿಯವರೆಗೆ ಸರಕಾರದ ವರದಿಯ ಪ್ರಕಾರ 9272 ಸಕ್ರೀಯ ಪ್ರಕರಣಗಳಿದ್ದು 1189 ಜನರು ಗುಣಮುಖರಾಗಿದ್ದಾರೆ ಮತ್ತು 353 ಜನರು ಜೀವಬಿಟ್ಟಿದ್ದಾರೆ. ಭಾರತ ಸರಕಾರ ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ಎಲ್ಲ ರೀತಿಯಿಂದ ಪ್ರಯತ್ನಿಸುತ್ತಿದೆ, ಇಂತಹ ಸಮಯದಲ್ಲಿ ಭಿಲ್ವಾರ್ ಜಿಲ್ಲೆಯ ಯಶಸ್ಸಿನ ಕಥೆಯ ಭಾರತದ ಎಲ್ಲ ಜೆಲ್ಲೆಗಳಿಗೆ ಮಾದರಿಯಾಗಬಹುದು.
ರಾಜಸ್ಥಾನದ ಜೈಪುರದಿಂದ ಸರಿಸುಮಾರು 250 ಕಿ ಮೀ ದೂರದಲ್ಲಿರುವ ಭಿಲ್ವಾರ್ ಜಿಲ್ಲೆಯಲ್ಲಿ ಭಾರತದ ಮೊದಲ ಪ್ರಕರಣ ಜನೇವರಿಯಲ್ಲಿ ಪತ್ತೆಯಾಗಿತ್ತು. ನೋಡುನೋಡುತ್ತ ಒಂದೇ ವಾರದಲ್ಲಿ ಸೋಂಕಿತರ 27 ಕ್ಕೆ ತಲುಪಿ, ಭಾರತ ಸರಕಾರವನ್ನು ತೊಂದರೆಗೆ ಸಿಲುಕಿಸಿತು. ಇದರಿಂದ ಎಚ್ಚೆತ್ತ ಅಧಿಕಾರಿಗಳ ಕಟ್ಟುನಿಟ್ಟಾದ ಲಾಕ್‌ಡೌನ್, ಸೋಂಕಿತರನ್ನು ಮನೆಯಿಂದ ಹೊರಬರದಂತೆ ನೋಡಿಕೊಳ್ಳುವಂತಹ ಕ್ರಮಗಳಿಂದ ಮತ್ತು ವೈದ್ಯಾಧಿಕಾರಿಗಳ ಶ್ರಮದಿಂದ ಇವತ್ತಿನವರೆಗೂ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.
ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗಿನ ಸಭೆಗಳಲ್ಲಿ, ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಭಿಲ್ವಾರ್ ಉದಾಹರಣೆಯನ್ನು ಸೂಚಿಸಿ, ಇದು ಕೋವಿಡ್-19 ನ ಹರಡುವಿಕೆಯನ್ನು ತಡೆಹಿಡಿಯುವ ಮಾರ್ಗವನ್ನು ಒಳಗೊಂಡಿರುವ ಸಂಭವನೀಯ ಮಾದರಿ ಎಂದು ಹೇಳಿದ್ದಾರೆ.
“ಭಿಲ್ವಾರಾದಲ್ಲಿ ನಾವು ಏನು ಮಾಡಿದೆವು ಎಂದು ಕೇಳಲಾಯಿತು. ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ನಾವು ನಿರ್ದಾಕ್ಷಿಣ್ಯವಾಗಿ ನಿಯಂತ್ರಣ ಮಾಡುವ ತೀರ್ಮಾನಕ್ಕೆ ಬಂದೆವು. ಅದರಂತೆ ಕಾರ್ಯಗತರಾಗಿ ಲಾಕ್‌ಡೌನ್ ಅನ್ನು ಹೇರಲಾಯಿತು, ಕೇಂದ್ರವು ಅದನ್ನು ಗಮನಿಸಿ ಈಗ ಅತಿ ಸೂಕ್ಷ್ಮ ವಲಯಗಳಲ್ಲಿ ಅದನ್ನು ಶಿಫಾರಸು ಮಾಡುತ್ತಿದೆ, ನಿರ್ದಾಕ್ಷಿಣ್ಯವಾದ ನಿಯಂತ್ರಣವು ಮುಂದಿನ ಮಾರ್ಗವಾಗಿದೆ,” ಎಂದು ರೋಹಿತ್ ಕುಮಾರ್ ಸಿಂಗ್ ಇಂಡಿಯಾ ಟುಡೇ ಗೆ ಹೇಳಿದರು.
“ಪ್ರಸ್ತುತ, ರಾಜಸ್ಥಾನದಲ್ಲಿ 34 ಸ್ಥಳಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಕರ್ಫ್ಯೂ ವಿಧಿಸುವುದರ ಜೊತೆಗೆ ಕೋವಿಡ್-19 ಹೊಂದಿರುವ ಎರಡು ಕಿಲೋಮೀಟರ್ ಪ್ರದೇಶದಲ್ಲಿ ಜನರ ಸಂಚಾರವನ್ನು ನಿಯಂತ್ರನದಲ್ಲಿಟ್ಟು ತಪಾಸಣೆ ಮಾಡಲಾಗುತ್ತದೆ," ಎಂದು ಅಶೋಕ್ ಗೆಹಲೋಟ್ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರಿಗೆ ಹೇಳಿದರು. ಇದರ ಫಲವಾಗಿ ರಾಜಸ್ಥಾನದಲ್ಲಿ ಸೋಂಕು ಹರಡುವ ವೇಗವು ಕಡಿಮೆಯಾಗಿದೆ.
ಕೊರೊನಾ ವಿರುದ್ಧ ಹೋರಾಡಲು ಲಾಕ್‌ಡೌನ್ ಮಾಡುವುದು ಮತ್ತು ಹೆಚ್ಚೆಚ್ಚು ಜನರ ಪರೀಕ್ಷೆ ಮಾಡುವುದು ಸರಿಯಾದ ಮಾರ್ಗವಾಗಿದೆ. ಇದನ್ನೇ ಅನುಸರಿಸಿದ ಭಿಲ್ವಾರ್ ಅಧಿಕಾರಿಗಳು ನಿರಂತರವಾಗಿ ಯಾವುದೇ ವಿರಾಮವಿಲ್ಲದೆ ಕೆಲಸ ಮಾಡಿದ್ದಾರೆ.
"ನಾವು ಈಗ ಯುದ್ಧ ಸನ್ನದ್ಧ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಕರ್ಫ್ಯೂ ಹೇರುವುದು, ಪೋಲಿಸ್‌ರಿಂದ ಕಾಲೋನಿಗಳ ಸಮೀಕ್ಷೆ ನಡೆಸುವುದು ಮತ್ತು ಬಂಗಾರ್ ಆಸ್ಪತ್ರೆಗೆ ಭೇಟಿ ನೀಡಿದವರ ತಪಾಸಣೆ ಮಾಡುತ್ತಿದ್ದೇವೆ,” ಎಂದು ಭಿಲ್ವಾರ್‌ನ ಪೊಲೀಸ್ ಅಧೀಕ್ಷಕರಾದ ಹರೇಂದ್ರ ಮಹಾವರ್ ಹೇಳಿದರು.
“ಯಾವುದೇ ಅಂಗಡಿ, ಡೈರಿ, ಅಥವಾ ಔಷಧಿ ಅಂಗಡಿ ತೆರೆಯುವುದಿಲ್ಲ. ಜನರಿಗೆ ಏನೇ ಬೇಕಾದರು, ಅವರು ನೇರವಾಗಿ ನಮಗೆ ಕರೆಮಾಡಬಹುದು. ಅದು ಔಷಧಿ, ಆಹಾರ ಅಥವಾ ಇನ್ನೇನಾದರೂ ಆಗಿರಬಹುದು. ಇದಕ್ಕಾಗಿ, ಹಲವಾರು ಇಲಾಖೆಗಳ ಕನಿಷ್ಠ 4-5 ನಿಯಂತ್ರಣ ಕೊಠಡಿಗಳನ್ನು ನಿರ್ವಹಿಸಲಾಗುತ್ತಿದೆ ಮತ್ತು ನಾವು ಬೇಡಿಕೆಗಳನ್ನು ಈಡೇರಿಸುತ್ತಿದ್ದೇವೆ. ಮುಂದಿನ ಕೆಲವು ದಿನಗಳಲ್ಲಿ ಈ ಪ್ರದೇಶವನ್ನು ಕೋವಿಡ್-19 ನಿಂದ ಮುಕ್ತಗೊಳಿಸುವುದು ನಮ್ಮ ಗುರಿಯಾಗಿದೆ, ಸೋಂಕಿತರ ಸಂಖ್ಯೆ ಸೊನ್ನೆಗೆ ತಲುಪವರೆಗೂ ನಾವು ಯುದ್ಧ ಸನ್ನದ್ಧರಾಗಿ ಕೆಲಸ ಮಾಡುತ್ತೇವೆ," ಎಂದು ಲೈವ್ ಮಿಂಟ್ ಗೆ ಜಿಲ್ಲಾಧಿಕಾರಿ ರಾಜೇಂದ್ರ ಭಟ್ಟ ಹೇಳಿದರು.