ನೀರಿನಿಂದ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವ ಪಾಚಿಯಿಂದ ರಚಿತವಾದ ಟೈಲ್ಸುಗಳನ್ನು ಅಭಿವೃದ್ಧಿಪಡಿಸಿರುವ ಭಾರತೀಯ ವಾಸ್ತುಶಿಲ್ಪಿ

ಇಂಡಸ್ ಎಂದು ನಾಮಕರಣಗೊಂಡಿರುವ ಪಾಚಿಯ ಟೈಲ್ಸುಗಳು ಬಯೋರಿಯಾಕ್ಟರ್ ವಾಲ್‌ ಘಟಕದ ಸಹಾಯದಿಂದ ನೀರಿನಲ್ಲಿರುವ ಮಾಲಿನ್ಯಕಾರಕಗಳನ್ನು ಬಯೋರೀಮೀಡಿಯೇಷನ್ ಎಂಬ ಪ್ರಕ್ರಿಯೆಯ ಮೂಲಕ ಹೀರಿಕೊಂಡು ನೀರನ್ನು ಸ್ವಚ್ಛಗೊಳಿಸುತ್ತವೆ.

ನೀರಿನಿಂದ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವ ಪಾಚಿಯಿಂದ ರಚಿತವಾದ ಟೈಲ್ಸುಗಳನ್ನು ಅಭಿವೃದ್ಧಿಪಡಿಸಿರುವ ಭಾರತೀಯ ವಾಸ್ತುಶಿಲ್ಪಿ

Friday October 18, 2019,

2 min Read

ನಾವು ಇಂದು ಹೆಚ್ಚುತ್ತಿರುವ ಮಾಲಿನ್ಯವನ್ನೂ ಮತ್ತು ಅದರಿಂದ ಉಂಟಾಗುತ್ತಿರುವ ಹವಾಮಾನ ವೈಪರೀತ್ಯವನ್ನು ನೋಡುತಿದ್ದೇವೆ. ಸಮುದ್ರ ಸೇರುತ್ತಿರುವ ಇಂಧನದ ಎಣ್ಣೆಗಳು ಮತ್ತು ಪ್ಲಾಸ್ಟಿಕ್ಕುಗಳು ಜಲಚರ ಜೀವಿಗಳಿಗೆ ಸಂಕಷ್ಟ ತಂದೊಡ್ಡಿವೆ. ಸಮುದ್ರ ತೀರಗಳಲ್ಲಿ ಸತ್ತ ಮೀನುಗಳು ಮತ್ತು ಇತರ ಸತ್ತ ಜಲಚರಗಳನ್ನು ಕಾಣುವುದು ಸಾಮಾನ್ಯ ದೃಶ್ಯವಾಗಿದೆ. ನಾವು ಈ ಸಂಗತಿಯನ್ನು ಎಚ್ಚರಿಕೆಯನ್ನಾಗಿ ತೆಗೆದುಕೊಂಡು ನಮ್ಮ ಭೂಗ್ರಹವನ್ನು ಇಂತಹ ದುಷ್ಪರಿಣಾಮಗಳಿಂದ ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.


ಭಾರತೀಯ ವಾಸ್ತುಶಿಲ್ಪಿ ಶ್ನೀಲ್ ಮಲಿಕ್ ಇಂತಹ ಒಂದು ಮಹತ್ಕಾರ್ಯದಲ್ಲಿ ತೊಡಗಿಕೊಂಡು ಇಂಡಸ್ ಎಂಬ ಪಾಚಿಯಿಂದ ರಚಿತವಾದ ಟೈಲ್ಸುಗಳನ್ನು ವಿನ್ಯಾಸಗೊಳಿಸಿದ್ದಾರೆ. ಇವು ನೀರಿನಲ್ಲಿರುವ ಮಾಲಿನ್ಯಕಾರಕ ಮತ್ತು ವಿಷಕಾರಿ ವಸ್ತುಗಳನ್ನು ಹೀರಿಕೊಳ್ಳತ್ತವೆ.


ಶ್ನೀಲ್ ಮಲಿಕ್ (ಚಿತ್ರಕೃಪೆ: ಟ್ವಿಟ್ಟರ್)

ದೆಹಲಿಯ ನಿವಾಸಿಯಾಗಿರುವ ಶ್ನೀಲ್ ಲಂಡನ್ನಿನ ಯುನಿವರ್ಸಿಟಿ ಕಾಲೇಜಿನಿಂದ ಬಾರ್ಟಲೆಟ್ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಏಕಜೀವಕೋಶದ ಹೂಬಿಡದ, ಸಮುದ್ರದಲ್ಲಿ ದೊರಕುವ ಪಾಚಿಯನ್ನು ಉಪಯೋಗಿಸಿಕೊಂಡು ಶ್ನೀಲ್ ಬಯೋರೀಮೀಡಿಯೇಷನ್ ಎಂಬ ಪ್ರಕ್ರಿಯೆಯಿಂದ ಪರಿಸರದಿಂದ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವಂತ ಟೈಲ್ಸುಗಳನ್ನು ರಚಿಸಿದ್ದಾರೆ.


ಗ್ರೀನ್ ಮ್ಯಾಗಜಿನಿನ ವರದಿಯ ಪ್ರಕಾರ ಲಂಡನ್ನಿನ ಯುನಿವರ್ಸಿಟಿ ಕಾಲೇಜು ನೀರಿನ ಮಾಲಿನ್ಯವನ್ನು ತಡೆಗಟ್ಟಲು ಒಂದು ಯೋಜನೆಯನ್ನು ಸಿದ್ಧಪಡಿಸಿದೆ. ಈ ಯೋಜನೆಯಲ್ಲಿ ಇಂಡಸ್ ರೂಪದ ದ್ರಾವಣವನ್ನು ಸಿದ್ಧಪಡಿಸಿ, ಇದರಿಂದ ಟೈಲ್ಸುಗಳನ್ನು ರಚಿಸಲಾಗುತ್ತದೆ. ಇವು ಬಯೋರಿಯಾಕ್ಟರ್ ವಾಲ್‌ ಗಳನ್ನು ಹೊಂದಿದ್ದು ಈ ವಾಲ್ ನೀರಿನಲ್ಲಿರುವ ಮಾಲಿನ್ಯಕಾರಕಗಳನ್ನು ಹೀರಿಕೊಂಡು ನೀರನ್ನು ಸ್ವಚ್ಛಗೊಳಿಸುತ್ತದೆ.


“ಈ ಟೈಲ್ಸುಗಳನ್ನು ಸ್ಥಳೀಯ ಪ್ರದೇಶಗಳಲ್ಲಿ ಲಭ್ಯವಿರುವ ವಸ್ತುಗಳಿಂದ ತಯಾರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ಇದಕ್ಕೆ ಬೇಕಾಗಿರುವ ಬಂಡವಾಳದ ಪ್ರಮಾಣವು ಕಡಿಮೆಯಾಗುತ್ತದೆ” ಎಂದು ಶ್ನೀಲ್ ಗ್ರೀನ್ ಮ್ಯಾಗಜಿನಿಗೆ ಹೇಳಿದ್ದಾರೆ.


ರಚನೆಯ ಮಾದರಿ (ಚಿತ್ರಕೃಪೆ: ಔಟ್ ಡೋರ್ ಡಿಸೈನ್ ಸೋರ್ಸಸ್)

ಈ ಟೈಲ್ಸುಗಳನ್ನು ಸಣ್ಣ ಪ್ರಮಾಣದ ಕುಶಲ ಕೈಗಾರಿಕೆಗಳಲ್ಲಿ ಗೋಡೆಯ ಮೇಲೆ ಅಥವಾ ಛಾವಣಿಯ ಮೇಲೆ ಇಡಬಹುದಾಗಿದೆ. ಇದು ಒಂದು ಘಟಕಕ್ಕೆ ಮಾತ್ರ ಸೀಮಿತವಾಗಬಹುದಾಗಿದೆ. ಆದರೆ ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಲು ಒಂದು ಮರದ ಹಲಗೆಯಂತಹ ರಚನೆಯನ್ನು ಸಿದ್ಧಪಡಿಸಿ ಅದರ ಮೇಲೆ ಟೈಲ್ಸುಗಳನ್ನು ಒಂದರ ಪಕ್ಕ ಒಂದು ಜೋಡಿಸಬಹುದು.

ಈ ಟೈಲ್ಸುಗಳನ್ನು ಎಲೆಯಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿರುವ ಪಾಚಿಯ ಮೇಲೆ ನೀರು ಹಾದುಹೋಗುತ್ತದೆ. ಪಾಚಿಯು ಜೈವಿಕ ಹೈಡ್ರೋಜೆಲ್ ಅಂಶವನ್ನು ಒಳಗೊಂಡಿದ್ದು ಇದು ಯಾವಾಗಲೂ ಪಾಚಿಯನ್ನು ಜೀವಂತವಾಗಿರುವಂತೆ ಮಾಡುತ್ತದೆ ಮತ್ತು ಇದು ಜೈವಿಕ ವಿಘಟನೀಯವಾಗಿದ್ದು ಮರುಬಳಕೆಯನ್ನೂ ಮಾಡಬಹುದಾಗಿದೆ.


ಈ ಟೈಲ್ಸುಗಳನ್ನು ಸುಲಭವಾಗಿ ರಚಿಸಬಹುದಾಗಿದೆ. ಪಾಚಿಯನ್ನು ತಯಾರಿಸುವ ವಸ್ತುಗಳು ಹಿಟ್ಟಿನ ರೂಪದಲ್ಲಿ ದೊರೆಯುತ್ತವೆ. ಇವುಗಳನ್ನು ಬೇಯಿಸಿ ಟೈಲ್ಸುಗಳಿಗೆ ಬೇಕಾದ ಹೈಡ್ರೋಜೆಲ್ ತಯಾರಿಸಿಬಹುದು ಎಂದು ಶ್ನೀಲ್ ಔಟ್ ಡೋರ್ ಡಿಸೈನ್ ಪತ್ರಿಕೆಗೆ ಹೇಳಿದ್ದಾರೆ.


“ಕೆಲವು ಸಮಯದ ನಂತರ ಹೈಡ್ರೋಜೆಲ್ ತನ್ನ ಪರಿಣಾಮಕಾರಿ ಶಕ್ತಿಯನ್ನು ಕಳೆದುಕೊಳ್ಳುದರಿಂದ ಅದನ್ನು ಬದಲಾಯಿಸಬೇಕಾಗುತ್ತದೆ. ಇದರ ಅವಧಿಯು ನೀರಿನಲ್ಲಿರುವ ಒಟ್ಟು ಮೊತ್ತದ ಮಾಲಿನ್ಯಕಾರಕಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ನಾವು ಹಲವಾರು ತಿಂಗಳುಗಳವರಗೆ ಬಾಳಿಕೆ ಬರುವಂತಹ ಬಹಳಷ್ಟು ರಚನೆಗಳನ್ನು ಸಿದ್ಧಪಡಿಸಿದ್ದೇವೆ” ಎಂದು ಶ್ನೀಲ್ ವಿವರಿಸುತ್ತಾರೆ.


ಎಲೆಯಂತಹ ರಚನೆ (ಚಿತ್ರಕೃಪೆ: ಗ್ರೀನ್ ಮ್ಯಾಗಜಿನ್)

ಸ್ವಲ್ಪ ಅವಧಿಯ ನಂತರ ಟೈಲ್ಸುಗಳಲ್ಲಿರುವ ಪಾಚಿಯನ್ನು ಹೊಸ ಪಾಚಿಯಿಂದ ಬದಲಾಯಿಸಬೇಕಾಗುತ್ತದೆ. ಇದಕ್ಕೆ ಅದೇ ಟೈಲ್ಸುಗಳನ್ನು ಉಪಯೋಗಿಸಬಹುದು. ಈ ಕಾರಣದಿಂದ ಟೈಲ್ಸುಗಳನ್ನು ಒಂದಕ್ಕೊಂದು ಜೋಡಿಸಲಾಗಿರುತ್ತದೆ ಮತ್ತು ಅವುಗಳಿಗೆ ಯಾವುದೇ ಹಾನಿಯಾಗದಂತೆ ಅವುಗಳನ್ನು ಬೇರ್ಪಡಿಸಬಹುದು.


“ನೀರು ಮಾಲಿನ್ಯಗೊಳ್ಳುವ ಕೆಲವು ಪ್ರದೇಶಗಳಿಗೆ ನಾವು ಭೇಟಿ ನೀಡಿದಾಗ ತಿಳಿದದ್ದು ಏನಂದರೆ ಅಲ್ಲಿನ ಕುಶಲಕರ್ಮಿಗಳಿಗೆ ಪಾಶ್ಚಿಮಾತ್ಯ ರೀತಿಯ ಹೆಚ್ಚಿನ ತಂತ್ರಜ್ಞಾನದ ನೀರಿನ ಸಂಸ್ಕರಣಾ ಘಟಕಗಳನ್ನು ಉಪಯೋಗಿಸಲು ಸಾಕಷ್ಟು ಸ್ಥಳವಿರುವುದಿಲ್ಲ. ಇದರಿಂದಾಗಿ ಅವರಿಗೆ ಸ್ಥಳದ ಅಭಾವವನ್ನು ನೀಗಿಸುವ ಮತ್ತು ಸುಲಭವಾಗಿ ರಚಿಸಿ ನಿರ್ವಹಿಸಬಹುದಾದ ಒಂದು ಪದ್ಧತಿಯ ಅವಶ್ಯಕತೆ ಇದೆ” ಎಂದು ಶ್ನೀಲ್ ಔಟ್ ಡೋರ್ ಡಿಸೈನ್ ಪತ್ರಿಕೆಗೆ ಹೇಳಿದ್ದಾರೆ.


ಅಚ್ಚುಗಳ ಸಹಾಯದಿಂದ ತಯಾರಾಗುತ್ತಿರುವ ಟೈಲ್ಸುಗಳನ್ನು ಈ ಯೋಜನೆಯು ಕಾರ್ಯಗತವಾದ ನಂತರ ಗ್ರಾಹಕರ ಬಯೋ-ಐಡಿ ಲ್ಯಾಬ್ ಮುಖಾಂತರ ಅವರ ಅವಶ್ಯಕತೆಗೆ ಬೇಕಾದಂತೆ ಸಿದ್ಧಪಡಿಸಬಹುದು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಬೇರೆ ಬೇರೆಯ ಮಾಲಿನ್ಯಕಾರಕಗಳನ್ನು ಹೀರುವಂತೆ ಮಾಡಬಹುದಾಗಿದೆ.