ಟಿಕ್‌ಟಾಕ್‌, ವೀಚಾಟ್‌ ಸೇರಿ 50+ ಚೀನಿ ಆ್ಯಪ್‌ಗಳ ಮೇಲೆ ನಿಗಾ ಇರಿಸಿದ ಭಾರತೀಯ ಗುಪ್ತಚರ ಇಲಾಖೆಗಳು

ಟಿಕ್‌ಟಾಕ್‌, ವೀಚಾಟ್‌ ಸೇರಿದಂತೆ ಇತರ 50 ಕ್ಕೂ ಹೆಚ್ಚು ಚೀನಿ ಆ್ಯಪ್‌ಗಳ ಭಾರತದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಹುದೆಂದು ಭಾರತೀಯ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ.

ಟಿಕ್‌ಟಾಕ್‌, ವೀಚಾಟ್‌ ಸೇರಿ 50+ ಚೀನಿ ಆ್ಯಪ್‌ಗಳ ಮೇಲೆ ನಿಗಾ ಇರಿಸಿದ ಭಾರತೀಯ ಗುಪ್ತಚರ ಇಲಾಖೆಗಳು

Friday June 19, 2020,

2 min Read

ಗಡಿಯಲ್ಲಿ ಚೀನಾದೊಂದಿಗೆ ಆದ ಸೆಣೆಸಾಟದಿಂದ ಚೀನಾದೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳು ಹದಗೆಡುತ್ತಿರುವಾಗ, ದೇಶದ ತುಂಬಾ ಚೀನಾ ವಿರೋಧಿ ಮನೋಭಾವವು ವ್ಯಾಪಿಸುತ್ತಿದೆ.


ಎಲೆಕ್ಟ್ರಾನಿಕ್‌ ಉಪಕರಣದಿಂದ ಹಿಡಿದು ಆ್ಯಪ್‌ಗಳವರೆಗೆ ಚೀನಾ ಸರಕುಗಳನ್ನು ಬಹಿಷ್ಕರಿಸುವಂತೆ ಧ್ವನಿ ಕೇಳಿಬರುತ್ತಿದೆ.


ಇದರ ಬೆನ್ನಲ್ಲೆ ಭಾರತೀಯ ಗುಪ್ತಚರ ಇಲಾಖೆಗಳು ದತ್ತಾಂಶ ಸುರಕ್ಷತೆಯ ದೃಷ್ಟಿಯಿಂದ 52 ಚೀನಿ ಆ್ಯಪ್‌ಗಳು ಅಪಾಯವನ್ನುಂಟು ಮಾಡಬಹುದು ಎಂದು ಹೇಳಿವೆ. ಈ ಆ್ಯಪ್‌ಗಳ ಮೇಲೆ ನಿರ್ಬಂಧ ಹೇರಿ, ಜನರಿಗೆ ಅವುಗಳನ್ನು ಬಳಸಿದಿರುವಂತೆ ಕೇಂದ್ರಕ್ಕೆ ಒತ್ತಾಯಿಸಿವೆ.


ಈ ಬೆಳವಣಿಗೆಯ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ಮೊದಲು ವರದಿಮಾಡಿದೆ.


ನಿಷೇಧದ ಪಟ್ಟಿಯಲ್ಲಿರುವ ಆ್ಯಪ್ಗಳಲ್ಲಿ ಭಾರತದಲ್ಲಿ ಅತೀ ಹೆಚ್ಚು ಡೌನ್‌ಲೋಡ್‌ ಮಾಡಲಾಗಿರುವ ವಿವಿಧ ಆ್ಯಪ್ಗಳಿದ್ದು, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಇ-ಕಾಮರ್ಸ್‌, ಬ್ರೌಸಿಂಗ್‌, ಫೈಲ್‌ ಶೇರಿಂಗ್‌ ಮತ್ತು ಇತರೆ ರಂಗಗಳ ವಿವಿಧ ಆ್ಯಪ್ಗಳಿವೆ. ಟಿಕ್‌ಟಾಕ್‌, ಹೆಲೊ, ವೀಚಾಟ್‌, ಯುಸಿ ಬ್ರೌಸರ್‌, ಶೇರ್‌ಇಟ್‌, ಎಮ್‌ಐ ಸ್ಟೋರ್‌, ಕ್ಲಬ್‌ ಫಾಕ್ಟರಿ, ಶೆನ, ವಿವಾ ವಿಡಿಯೋ, ಬ್ಯೂಟಿ ಪ್ಲಸ್‌ ಸೇರಿದಂತೆ ಇತರೆ 40 ಆ್ಯಪ್‌ಗಳ ಮೇಲೆ ನಿಗಾ ಇರಿಸಲಾಗಿದೆ.




ಗುಪ್ತಚರ ಇಲಾಖೆಗಳ ಈ ಶಿಫಾರಸುಗಳಿಗೆ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯವು ಬೆಂಬಲ ಸೂಚಿಸಿದ್ದು, ಈ ಆ್ಯಪ್‌ಗಳು ಭಾರತದ ಸುರಕ್ಷತೆಗೆ ಧಕ್ಕೆ ತರಬಹುದೆಂದು ಅದು ಕೂಡಾ ಅಭಿಪ್ರಾಯ ಪಟ್ಟಿದೆ.


“ಈ ಶಿಫಾರಸುಗಳ ಕುರಿತ ಚರ್ಚೆಗಳು ನಡೆಯುತ್ತಲಿವೆ,” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಆ್ಯಪ್‌ನಿಂದ ಎದುರಾಗುವ ಅಪಾಯವನ್ನು ಪರಿಕ್ಷಿಸಲಾಗುತ್ತಿದೆ ಎಂದರು ಅವರು.


ಚೀನಿ ಆ್ಯಪ್‌ಗಳ ಮೇಲೆ ಈ ರೀತಿಯ ದೂರುಗಳು ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳಲ್ಲಿ ವಿವಾದಾತ್ಮಕ ವಿಡಿಯೋಗಳಿಂದ ಟಿಕ್‌ಟಾಕ್‌ ವಿರುದ್ಧ ಭಾರತೀಯ ಬಳಕೆದಾರರು ದೂರು ನೀಡಿದ್ದರು. ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ಗೆ ಕಡಿಮೆ ರೇಟಿಂಗ್‌ ನೀಡಲು ಶುರುಮಾಡಿದ್ದರಿಂದ ಟಿಕ್‌ಟಾಕ್‌ ರೇಟಿಂಗ್‌ 1.5 ಕ್ಕಿಂತ ಕೆಳಗೆ ಇಳಿದಿತ್ತು.


ಟಿಕ್‌ಟಾಕ್ ಇಂಡಿಯಾದ ವಕ್ತಾರರು ಯುವರ್‌ಸ್ಟೋರಿ ಜತೆ ಮಾತನಾಡುತ್ತಾ, "ಜನರನ್ನು ಟಿಕ್‌ಟಾಕ್‌ನಲ್ಲಿ ಸುರಕ್ಷಿತವಾಗಿರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಮತ್ತು ನಮ್ಮ ಸೇವಾ ಅವಧಿ ಮತ್ತು ಸಮುದಾಯ ಮಾರ್ಗಸೂಚಿಗಳಲ್ಲಿ ನಮ್ಮಲ್ಲಿ ಸ್ವೀಕಾರಾರ್ಹವಲ್ಲದ ವಿಷಯಗಳನ್ನು ಸ್ಪಷ್ಟವಾಗಿ ನಮೂದಿಸಿದ್ದೇವೆ. ನೀತಿಯ ಪ್ರಕಾರ ಇತರರ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ವಿಡಿಯೋಗಳನ್ನು ನಾವು ಅನುಮತಿಸುವುದಿಲ್ಲ... ಅಂತಹ ವಿಡಿಯೋಗಳು ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ... ಮತ್ತು ನಾವು ಅಂತಹವರ ವಿರುದ್ಧ ಸೂಕ್ತವಾದ ಕಾನೂನು ಕ್ರಮಗಳನ್ನು ಜಾರಿಗೊಳಿಸಲು ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ," ಎಂದರು.


ಚೀನಿ ಆ್ಯಪ್‌ಗಳನ್ನು ಹೊರತುಪಡಿಸಿ ಗುಪ್ತಚರ ಇಲಾಖೆ ಕೊರೊನಾವೈರಸ್‌ ಲಾಕ್‌ಡೌನ್‌ ವೇಳೆ ಜನಪ್ರಿಯವಾದ ವಿಡಿಯೋ ಕಾನ್ಫೆರೆನ್ಸ್‌ ಆ್ಯಪ್ ಝೂಮ್‌ ಅನ್ನು ನಮೂದಿಸಿದೆ.


ಭಾರತದ ರಾಷ್ಟ್ರೀಯ ಸೈಬರ್‌ ಸೆಕ್ಯುರಿಟಿ ಏಜೆನ್ಸಿಯಾದ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ ಆಫ್‌ ಇಂಡಿಯಾ (ಸಿಇಆರ್‌ಟಿ-ಇನ್‌) ಶಿಫಾರಸುಗಳನ್ನು ಅನುಸರಿಸಿ ಏಪ್ರಿಲ್‌ನಲ್ಲಿ ಗೃಹ ಸಚಿವಾಲಯವು ಝೂಮ್‌ ಬಳಕೆಯ ಕುರಿತು ಸಲಹೆಯನ್ನು ನೀಡಿತ್ತು. ಮೇ ನಂತರ, ಝೂಮ್ ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸ್ಪಂದಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿತು.


ಝೂಮ್‌ ವಕ್ತಾರರು, ”ಬಳಕೆದಾರರ ಗೌಪ್ಯತೆ, ಸುರಕ್ಷತೆ ಮತ್ತು ನಂಬಿಕೆಗಳನ್ನು ಝೂಮ್‌ ಗಂಭೀರವಾಗಿ ಪರಿಗಣಿಸುತ್ತದೆ. ಏಪ್ರಿಲ್‌ 1 ರಂದು ನಾವು ಘೋಷಿಸಿದ 90 ದಿನಗಳ ಯೋಜನೆಯಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯೆಡೆಗಿನ ಬದ್ಧತೆಯನ್ನು ವರ್ಧಿಸುತ್ತಿದ್ದೇವೆ ಮತ್ತು ಅದರಲ್ಲಿ ಒಳ್ಳೆಯ ಬೆಳವಣಿಗೆಗಳನ್ನು ಕಂಡಿದ್ದೇವೆ,” ಎಂದು ತಿಳಿಸಿದ್ದಾರೆ.


ಮೇಲೆ ನಮೂದಿಸಲಾಗಿರುವ ಎಲ್ಲ ಆ್ಯಪ್‌ಗಳು ಸರ್ಕಾರದ ಮುಂದಿನ ಸೂಚನೆ ಬರುವವರೆಗೂ ಭಾರತೀಯ ಆ್ಯಪ್ ಸ್ಟೋರ್‌ಗಳಲ್ಲಿ ಲಭ್ಯವಿವೆ.