2023ಕ್ಕೆ 900 ಮಿಲಿಯನ್ ದಾಟಲಿದೆ ಭಾರತದ ಇಂಟರ್ನೆಟ್ ಬಳಕೆದಾರರ ಸಂಖ್ಯೆ: ಸಿಸ್ಕೊ ವರದಿ

ಸಿಸ್ಕೋ ವರದಿಯ ಪ್ರಕಾರ, ಭಾರತವು 2023 ರ ವೇಳೆಗೆ 907 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದುವ ನಿರೀಕ್ಷೆಯಿದೆ ಮತ್ತು 2018 ರಲ್ಲಿ 398 ಮಿಲಿಯನ್ ಬಳಕೆದಾರರಿದ್ದರು.

2023ಕ್ಕೆ 900 ಮಿಲಿಯನ್ ದಾಟಲಿದೆ ಭಾರತದ ಇಂಟರ್ನೆಟ್ ಬಳಕೆದಾರರ ಸಂಖ್ಯೆ: ಸಿಸ್ಕೊ ವರದಿ

Wednesday February 19, 2020,

2 min Read

ಭಾರತವು 2023 ರ ವೇಳೆಗೆ 907 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದುವ ನಿರೀಕ್ಷೆಯಿದೆ ಮತ್ತು ಇದು 2018 ರಲ್ಲಿ 398 ಮಿಲಿಯನ್ ಇತ್ತು ಎಂದು ಮಂಗಳವಾರ ಬಿಡುಗಡೆಗೊಂಡ ಸಿಸ್ಕೋ ವರದಿಯಲ್ಲಿ ಹೇಳಲಾಗಿದೆ.


ಅಲ್ಲದೆ, 2023 ರ ವೇಳೆಗೆ 2.1 ಬಿಲಿಯನ್ ನೆಟ್‌ವರ್ಕ್ ಸಾಧನಗಳಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಆ ನೆಟ್ ವರ್ಕ್‌ಗಳು ಮಷಿನ್-ಟು-ಮಷಿನ್ (ಎಂ 2 ಎಂ) ಮಾಡ್ಯೂಲ್‌ಗಳು ಸಾಧನಗಳಲ್ಲಿ 25 ಪ್ರತಿಶತ (524.3 ಮಿಲಿಯನ್) ಪಾಲನ್ನು ಹೊಂದಲಿವೆ.


ವರದಿಯ ಪ್ರಕಾರ, 2023 ರ ವೇಳೆಗೆ ಭಾರತದಲ್ಲಿ 907 ಮಿಲಿಯನ್ ಇಂಟರ್ನೆಟ್ ಬಳಕೆದಾರರು (ಜನಸಂಖ್ಯೆಯ 64 ಪ್ರತಿಶತ) ಇರಲಿದ್ದಾರೆ, ಇದು 2018 ರಲ್ಲಿನ 398 ಮಿಲಿಯನ್ ನಿಂದ (29 ಪ್ರತಿಶತ ಜನಸಂಖ್ಯೆ) ಹೆಚ್ಚಿದೆ.




2023 ರ ವೇಳೆಗೆ ಒಟ್ಟು 966 ಮಿಲಿಯನ್ ಮೊಬೈಲ್ ಬಳಕೆದಾರರನ್ನು ಭಾರತ ಹೊಂದಲಿದೆ (ಅಂದರೆ ಜನಸಂಖ್ಯೆಯ 68 ಪ್ರತಿಶತ). 2018 ರಲ್ಲಿ 763 ಮಿಲಿಯನ್ ಇದ್ದ ಈ ಸಂಖ್ಯೆ 966 ಮಿಲಿಯನ್‌ ನಷ್ಟು (ಅಂದರೆ ಜನಸಂಖ್ಯೆಯ 56 ಪ್ರತಿಶತ) ಹೆಚ್ಚಾಗಿದೆ.


ಅಲ್ಲದೆ, 20 ಸಂಪರ್ಕಗಳಲ್ಲಿ ಒಂದು 5 ಜಿ ಆಗಿರಲಿದೆ, 2023 ರ ವೇಳೆಗೆ 67.2 ಮಿಲಿಯನ್ ಮೊಬೈಲ್ ಸಂಪರ್ಕಗಳನ್ನು ಭಾರತ ಹೊಂದಿರುತ್ತದೆ ಎಂದು ವರದಿ ಹೇಳಿದೆ.


"ಭಾರತದಲ್ಲಿ, ಜನಸಂಖ್ಯೆ (1 ಶೇಕಡಾ ಸಿಎಜಿಆರ್) ಗಿಂತ ಸಾಧನಗಳು ಮತ್ತು ಸಂಪರ್ಕಗಳು ವೇಗವಾಗಿ ಬೆಳೆಯುತ್ತಿವೆ (ಅಂದರೆ ಶೇಕಡಾ 7 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ). ಈ ಬೆಳವಣಿಗೆಯು ಪ್ರತಿ ಮನೆ ಮತ್ತು ತಲಾವಾರು ಸರಾಸರಿ ಸಾಧನಗಳ ಮತ್ತು ಸಂಪರ್ಕಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ," ಎಂದು ವರದಿ ತಿಳಿಸಿದೆ.


ಸ್ಮಾರ್ಟ್ ಮೀಟರ್, ಸಿಸಿಟಿವಿ, ಆರೋಗ್ಯ, ಸಾರಿಗೆ, ಮತ್ತು ಪ್ಯಾಕೇಜ್ ಅಥವಾ ಆಸ್ತಿ ಟ್ರ್ಯಾಕಿಂಗ್‌ನಂತಹ ಹೆಚ್ಚುತ್ತಿರುವ ಎಂ 2 ಎಂ ಅಪ್ಲಿಕೇಶನ್‌ಗಳ ಬಳಕೆಯು ಸಾಧನಗಳು ಮತ್ತು ಸಂಪರ್ಕಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತವೆ.


“2023 ರ ವೇಳೆಗೆ, ಒಟ್ಟು ಸಾಧನಗಳು ಮತ್ತು ಸಂಪರ್ಕಗಳಲ್ಲಿ ಎಂ 2 ಎಂ ಸಂಪರ್ಕ ಸಾಧನಗಳೇ 25 ಪ್ರತಿಶತದಷ್ಟು ಇರುತ್ತದೆ,” ಎಂದು ವರದಿ ತಿಳಿಸಿದೆ.


2023ಕ್ಕೆ ಎಲ್ಲಾ ನೆಟ್‌ವರ್ಕ್ ಸಾಧನಗಳಲ್ಲಿ ಸ್ಮಾರ್ಟ್‌ಫೋನ್‌ಗಳು 38 ಪ್ರತಿಶತ (781 ಮಿಲಿಯನ್) ದಷ್ಟಿರಲಿವೆ ಮತ್ತು ಟಿವಿಗಳು 12 ಪ್ರತಿಶತ (255.8 ಮಿಲಿಯನ್) ಪಾಲನ್ನು ಹೊಂದಿರಲಿವೆ ಎಂದು ಅಂವಾಜಿಸಲಾಗಿದೆ.


ಭಾರತದಲ್ಲಿ, 2023 ರ ವೇಳೆಗೆ ಎಲ್ಲಾ ನೆಟ್‌ವರ್ಕ್ ಸಾಧನಗಳಲ್ಲಿ 78 ಪ್ರತಿಶತ ಗ್ರಾಹಕ ವಿಭಾಗದಲ್ಲಿರಲಿದೆ ಹಾಗೂ 2018 ರಲ್ಲಿ ಇದು 83 ಪ್ರತಿಶತದಷ್ಟಿತ್ತು ಎಂದು ವರದಿ ಹೇಳಿದೆ.


ಇದಲ್ಲದೆ, ಸೋಷಿಯಲ್ ನೆಟ್ವರ್ಕಿಂಗ್, ವಿಡಿಯೋ ಸ್ಟ್ರೀಮಿಂಗ್ ಮತ್ತು ಡೌನ್‌ಲೋಡ್‌ಗಳು, ವ್ಯವಹಾರ, ಇಕಾಮರ್ಸ್ ಮತ್ತು ಗೇಮಿಂಗ್ ಮುಂತಾದವುಗಳು ಮೊಬೈಲ್ ಅಪ್ಲಿಕೇಶನ್‌ಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, 2023 ರ ವೇಳೆಗೆ ಸುಮಾರು 46.2 ಬಿಲಿಯನ್ ನಷ್ಟು ಡೌನ್‌ಲೋಡ್ ಮಾಡುವ ಸಂಖ್ಯೆಯು ಹೆಚ್ಚಲಿದೆ ಎಂದು ವರದಿ ಹೇಳುತ್ತದೆ.


ಡಿಜಿಟಲ್ ಸಾಕ್ಷರತೆ, ಹೆಚ್ಚಿನ ಮೊಬೈಲ್ ಬಳಕೆ ಮತ್ತು ಇಂಟರ್ನೆಟ್ ಸಂಪರ್ಕಗಳು ಅತಿ ಆಳಕ್ಕೆ ಬೆಳೆಯುತ್ತಿದ್ದಂತೆ, ದೇಶಾದ್ಯಂತ ಇಂಟರ್ನೆಟ್ ಬಳಕೆ ಮತ್ತು ಬಳಕೆಯ ಮಾದರಿಗಳಲ್ಲಿ ಭಾರಿ ಬದಲಾವಣೆ ಸೃಷ್ಟಿಯಾಗಲಿದೆ ಎಂದು ಸಿಸ್ಕೋ ಇಂಡಿಯಾ ಮತ್ತು ಸಾರ್ಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಭಾಸ್ಕರ್ ಹೇಳಿದರು.


ಸಂಪರ್ಕಗಳಲ್ಲಿನ ಈ ಏರಿಕೆ ಮತ್ತು ಬಳಕೆಯ ಮಾದರಿಗಳಲ್ಲಿನ ಬದಲಾವಣೆಯು ಸೇವಾ ಪೂರೈಕೆದಾರರು ತಮ್ಮ ಗ್ರಾಹಕರಿಗೆ ನೀಡುವ ಸೇವೆಯ ಸಾಮರ್ಥ್ಯವನ್ನು ಪ್ರಶ್ನಿಸುತ್ತದೆ ಎಂದು ಅವರು ಹೇಳಿದರು.

"ಸೇವಾ ಪೂರೈಕೆದಾರರು ಮತ್ತು ಉದ್ಯಮಗಳು ಸಾಫ್ಟ್‌ವೇರ್ ಆಧಾರಿತ ಮತ್ತು ಎಡ್ಜ್ ಕಂಪ್ಯೂಟಿಂಗ್ ಕಡೆಗೆ ತಮ್ಮ ಗಮನವನ್ನು ಮುಂದುವರೆಸುತ್ತವೆ ಮತ್ತು ಅವುಗಳ ಒಟ್ಟಾರೆ ವೆಚ್ಚವನ್ನು ಸ್ವಲ್ಪ ಕಡಿಮೆ ಮಾಡಿ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುತ್ತವೆ,” ಎಂದು ಅವರು ಹೇಳಿದರು.