ಪರಿಸರಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿದ್ದಾರೆ ಜಾರ್ಖಂಡ್‌ನ ಮಹಿಳೆಯರು

ಜಾರ್ಖಂಡ್‌ನ ಸಿಮ್ಡೆಗಾ ಜಿಲ್ಲಾಡಳಿತವು ವಿಶ್ವಸಂಸ್ಥೆಯ ನೀರು ಸರಬರಾಜು ಹಾಗೂ ನೈರ್ಮಲ್ಯ ಸಹಕಾರಿ ಮಂಡಳಿಯ ಸಹಯೋಗದೊಂದಿಗೆ ನಡೆಸುತ್ತಿರುವ ಈ ಅಭಿಯಾನವು ಜೈವಿಕ ವಿಘಟನೀಯ ನೈರ್ಮಲ್ಯ ಕರವಸ್ತ್ರಗಳನ್ನು ತಯಾರಿಸಲು ಮತ್ತು ಬಳಸುವುದರ ಕುರಿತಾಗಿ ಮಹಿಳೆಯರಿಗೆ ತರಬೇತಿ ನೀಡುತ್ತಿದೆ.

ಪರಿಸರಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿದ್ದಾರೆ ಜಾರ್ಖಂಡ್‌ನ ಮಹಿಳೆಯರು

Saturday February 22, 2020,

2 min Read

ಜಾರ್ಖಂಡ್‌‌‌ನ ಸಿಮ್ಡೆಗಾ ಜಿಲ್ಲೆಯ ಮಹಿಳೆಯರ ಗುಂಪೊಂದು ನಡೆಸುತ್ತಿರುವ ಈ ಅಭಿಯಾನವು ಇದೇ ವೇಗದಲ್ಲಿ ಮುನ್ನಡೆದರೆ, ಭಾರತೀಯ ಮಹಿಳೆಯರು ವಿಶೇಷವಾಗಿ ಗ್ರಾಮೀಣ‌ ಪ್ರದೇಶದಲ್ಲಿರುವವರು ತಮ್ಮ ಪ್ರಗತಿಗೆ ಅಡ್ಡಿಯನ್ನುಂಟು ಮಾಡುತ್ತಿರುವ ನಿಷೇಧವನ್ನು ನಿವಾರಿಸುತ್ತಾರೆ.


ವಿಶ್ವಸಂಸ್ಥೆಯ ನೀರು ಸರಬರಾಜು ಮತ್ತು ನೈರ್ಮಲ್ಯ ಸಹಕಾರಿ ಮಂಡಳಿಯ ಸಹಯೋಗದೊಂದಿಗೆ ಸಿಮ್ಡೆಗಾ ಜಿಲ್ಲಾಡಳಿತವು 2019ರ ಮೇ ತಿಂಗಳಿನಲ್ಲಿ ಪ್ರಾರಂಭಿಸಿದ ಅಭಿಯಾನವು ಪರಿಸರಸ್ನೇಹಿ, ಪ್ಲಾಸ್ಟಿಕ್ ಮುಕ್ತ ಮತ್ತು ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳನ್ನು ಬಳಸುವುದರ ಕುರಿತಾಗಿ 3,000 ಮಹಿಳೆಯರಿಗೆ ತರಬೇತಿ ನೀಡಿದೆ.


'ಮಿಸ್ಸಿ ಗರಿಮಾ ಪ್ಯಾಡ್ಸ್' ಎಂಬ ಹೆಸರನ್ನು ಹೊಂದಿದ ಈ ಪ್ಯಾಡ್‌ಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಗ್ರಾಮೀಣ ಮಹಿಳೆಯರಿಗೆ ಸುಲಭವಾಗಿ ಲಭ್ಯವಾಗುತ್ತವೆ.


ಪರಿಸರಸ್ನೇಹಿ ಮಿಸ್ಸಿ ಗರಿಮಾ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಲು ಒಟ್ಟಾದ ಮಹಿಳೆಯರು (ಚಿತ್ರಕೃಪೆ: ಎನ್‌ಡಿಟಿವಿ)


ಮಿಸ್ಸಿ ಗರಿಮಾ ಪ್ಯಾಡ್‌ಗಳು ನಾಲ್ಕು ಪದರಗಳ ಹತ್ತಿ ಬಟ್ಟೆಯಿಂದ ತಯಾರಿಸಲ್ಪಿಟ್ಟಿದ್ದು ಅವುಗಳನ್ನು ಒಟ್ಟಾಗಿ ಸೇರಿಸಿ ಹೊಲಿಯಲಾಗುತ್ತದೆ ಮತ್ತು ಇವುಗಳನ್ನು ಶುಚಿಗೊಳಿಸಿ ಮರುಬಳಕೆ ಮಾಡಬಹುದಾಗಿದೆ. ಪ್ರತಿಯೊಂದು ಪ್ಯಾಡ್‌ನ್ನು ಹೊಲಿಯಲು 10-15 ನಿಮಿಷ ಬೇಕಾಗುತ್ತದೆ ಹಾಗೂ ಇದು ಸಂಪೂರ್ಣವಾಗಿ ರಾಸಾಯಿನಿಕ ಮುಕ್ತವಾಗಿದೆ. ಎಂಟು ಪ್ಯಾಡ್‌ಗಳನ್ನು‌ ಹೊಂದಿದ ಪ್ಯಾಕೇಟ್‌ 30-50 ರೂ ದರವನ್ನು ಹೊಂದಿದೆ.


ಎನ್‌ಡಿಟಿವಿಯೊಂದಿಗೆ ಮಾತನಾಡಿದ ನೀತಿ ಆಯೋಗದ ಮಹತ್ವಾಕಾಂಕ್ಷಿ ಜಿಲ್ಲಾ ಸಹವರ್ತಿ ಬಿಸ್ವಂಭರ್ನಾತ ನಾಯ್ಕ್ ,


"ಈ ಜಿಲ್ಲೆಯು ಮುಖ್ಯವಾಗಿ ಗ್ರಾಮೀಣ ಪ್ರದೇಶವಾಗಿದ್ದು, 2.5 ಲಕ್ಷ ಬಾಲಕಿಯರು ಹಾಗೂ ಮಹಿಳೆಯರು ಮುಟ್ಟಾಗುತ್ತಾರೆ. ಇಲ್ಲಿ ಹೆಚ್ಚಿನ ಹುಡುಗಿಯರು ಮತ್ತು ಮಹಿಳೆಯರಿಗೆ ನೈರ್ಮಲ್ಯ ಕರವಸ್ತ್ರಗಳ ಬಳಕೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲ ಎಂಬುದನ್ನು ನಾವು ಕಂಡುಕೊಂಡೆವು. ಋತುಸ್ರಾವದ ಸಂದರ್ಭದಲ್ಲಿ ಅವರು ಬಟ್ಟೆಯ ತುಂಡುಗಳನ್ನು ಬಳಸುತ್ತಿದ್ದರು. ಅದನ್ನು ಸರಿಯಾಗಿ ಶುಚಿಗೊಳಿಸದೆ ಹಾಗೂ ಒಣಗಿಸದೆ ಪುನಃ ಬಳಸುತ್ತಿರುವುದು ಆಘಾತಕಾರಿಯಾಗಿತ್ತು."


ಮುಜುಗರವನ್ನು ತಪ್ಪಿಸಿಕೊಳ್ಳಲು ಈ ಮಹಿಳೆಯರಲ್ಲಿ ಹೆಚ್ಚಿನವರು ತೊಳೆದ ಹಾಗೂ ಒದ್ದೆಯಾದ ಈ ಬಟ್ಟೆ ತುಂಡುಗಳನ್ನು ತಮ್ಮ ಬಟ್ಟೆಯೊಳಗೆ ಮರೆ ಮಾಡುತ್ತಿದ್ದರು. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚು ಆರೋಗ್ಯಕರ ಮತ್ತು ಸುರಕ್ಷಿತ ಆಯ್ಕೆಗಳ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ನಾಯ್ಕ್ ಹೇಳುತ್ತಾರೆ.


"ಅವರಿಗೆ ಅರಿವು ಮೂಡಿಸಿದರೆ ಸಾಕಾಗುವುದಿಲ್ಲ ಎಂದು ನಾವು ಅರಿತುಕೊಂಡೆವು. ಆದ್ದರಿಂದ ಜಿಲ್ಲೆಯಾದ್ಯಂತ ತೀವ್ರವಾದ ಹಸ್ತಕ್ಷೇಪ ಮಾಡುವಂತಹ ಕಾರ್ಯಕ್ರಮವನ್ನು ಯೋಜಿಸಲು ಮತ್ತು ಬಟ್ಟೆಯನ್ನು ಬಳಸುವ ರೂಢಿಯನ್ನು ತಪ್ಪಿಸಲು ನಿರ್ಧರಿಸಿದೆವು. ನಾವು ಗರಿಮಾ ಅಭಿಯಾನವನ್ನು ಆರಂಭಿಸಿದ್ದು ಹೀಗೆ."


ಮಹಿಳೆಯರು ಈಗ 100ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳನ್ನು ರಚಿಸಿಕೊಂಡಿದ್ದು, ಈ ಗುಂಪುಗಳು ಈಗ ದಿನಕ್ಕೆ 100-150 ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳನ್ನು ತಯಾರಿಸುತ್ತವೆ.


ಫಲಾನುಭವಿಗಳಲ್ಲಿ ಒಬ್ಬರಾದ ರಾಹಿಲ್ ಡಂಗ್‌ಡುಂಗ್, "ಮಿಸ್ಸಿ ಗರಿಮಾ ಪ್ಯಾಡ್‌ಗಳಿಗೆ ಧನ್ಯವಾದಗಳು, ನಾವು ಈಗ ಪರಸ್ಪರ ಹಾಗೂ ಪುರುಷರೊಂದಿಗೂ ಕೂಡ ಮುಟ್ಟಿನ ಬಗ್ಗೆ ಮಾತನಾಡಲು ಸಮರ್ಥರಾಗಿದ್ದೇವೆ. ಈ ಅಭಿಯಾನವು ಜೀವನದ ನಿರ್ಣಾಯಕ ಭಾಗದ ಕುರಿತಾಗಿ ಅರಿಯಲು ಸಹಾಯ ಮಾಡಿದ್ದಲ್ಲದೆ, ಆರ್ಥಿಕವಾಗಿಯೂ ನನ್ನನ್ನು ಬಲಪಡಿಸಿದೆ ಎಂದೆನ್ನುತ್ತಾರೆ, ವರದಿ ಎನ್‌ಡಿಟಿವಿ.

Share on
close