ಪ್ರತಿದಿನ 8000 ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಚೆನ್ನೈನ ಪಕ್ಷಿಪ್ರೇಮಿ

ಕಳೆದ 11 ವರ್ಷಗಳಿಂದ ಈ 63 ರ ಹರೆಯದ ಪಕ್ಷಿಮಿತ್ರ ತಮ್ಮ ದೈನಂದಿನ ಆದಾಯದ ಅರ್ಧದಷ್ಟನ್ನು ಪ್ರತಿದಿನ ಅವರ ಮನೆಯ ಮಾಳಿಗೆಗೆ ಭೇಟಿ ನೀಡುವ ಸಾವಿರಾರು ಗಿಳಿಗಳಿಗೆ ಆಹಾರ ಒದಗಿಸಲು ವಿನಿಯೋಗಿಸುತ್ತಿದ್ದಾರೆ.

ಪ್ರತಿದಿನ 8000 ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಚೆನ್ನೈನ ಪಕ್ಷಿಪ್ರೇಮಿ

Sunday December 08, 2019,

2 min Read

ವೃತ್ತಿಯಿಂದ ಕ್ಯಾಮೆರಾ ಮೆಕ್ಯಾನಿಕ್ ಆಗಿರುವ, ‘ಬರ್ಡ್ ಮ್ಯಾನ್ ಆಫ್ ಚೆನ್ನೈ’ ಎಂದೇ ಖ್ಯಾತರಾಗಿರುವ ಜೋಸೆಫ್ ಶೇಖರ್ ಪ್ರತಿದಿನ ಅವರ ಮನೆಯ ಮಾಳಿಗೆಗೆ ಭೇಟಿ ನೀಡುವ ಸಾವಿರಾರು ಗಿಳಿಗಳಿಗೆ ಆಹಾರ ಒದಗಿಸುತಿದ್ದಾರೆ. ಕಳೆದ 11 ವರ್ಷಗಳಿಂದ ಈ 63 ರ ಹರೆಯದ ಪಕ್ಷಿಮಿತ್ರ ತಮ್ಮ ದೈನಂದಿನ ಆದಾಯದ ಅರ್ಧದಷ್ಟನ್ನು ಈ ಅದ್ವಿತೀಯ ಕಾರ್ಯಕ್ಕಾಗಿ ವಿನಿಯೋಗಿಸುತ್ತಿದ್ದಾರೆ.


ಚಿತ್ರಕೃಪೆ: ಹಿಂದುಸ್ತಾನ್ ಟೈಮ್ಸ್

ಚೆನ್ನೈನ ರಾಯಪೆಟ್ಟಾ ಪ್ರದೇಶದ ನಿವಾಸಿಯಾಗಿರುವ ಜೋಸೆಫ್ ಪ್ರತಿದಿನ ತಮ್ಮ ಮನೆಯ ಮಾಳಿಗೆಯ ಮೇಲೆ 30 ಕಿಲೋಗ್ರಾಮ್ ಅಕ್ಕಿಯನ್ನು ಚೆಲ್ಲಿ ಸುಮಾರು 8000 ಪಕ್ಷಿಗಳಿಗೆ ಆಹಾರ ನೀಡುತಿದ್ದಾರೆ. ಈ ಮಹತ್ಕಾರ್ಯವನ್ನು ಅವರು ಬಹಳ ಹಿಂದಿನಿಂದ ಅಂದರೆ ಚೆನ್ನೈನಲ್ಲಿ ದುರಂತಮಯ ಸುನಾಮಿ ಘಟಿಸಿದ ಸಮಯದಲ್ಲಿ ಪ್ರಾರಂಭಿಸಿದರು. ಜೋಸೆಫ್ ಸ್ವಲ್ಪ ಅಕ್ಕಿಯನ್ನು ಅಳಿಲುಗಳು ಮತ್ತು ಗುಬ್ಬಚ್ಚಿಗಳಿಗಾಗಿ ತಮ್ಮ ಮನೆಯ ಮಾಳಿಗೆಯ ಮೇಲೆ ಇಡುತಿದ್ದರು. ಆದರೆ ಸುನಾಮಿಯ ಸಮಯದಲ್ಲಿ ಈಗಾಗಲೇ ಅಳಿವಿನ ಅಂಚಿನಲ್ಲಿರುವ ಕತ್ತಿನ ಸುತ್ತ ವೃತ್ತವಿರುವ ಒಂದು ಜೋಡಿ ಗಿಳಿಗಳು ಮಾಳಿಗೆಗೆ ಭೇಟಿ ನೀಡಲು ಪ್ರಾರಂಭಿಸಿದವು.


ಇದರಿಂದಾಗಿ ಅಳಿವಿನ ಅಂಚಿನಲ್ಲಿರುವ ಈ ಗಿಳಿಸಮುದಾಯವನ್ನು ರಕ್ಷಿಸಲೆಂದು ಜೋಸೆಫ್ ಮತ್ತಷ್ಟು ಅಕ್ಕಿಯನ್ನು ಮಾಳಿಗೆಯ ಮೇಲೆ ಇಡಲು ಪ್ರಾರಂಭಿಸಿದರು. ಅವರು ಮಾಳಿಗೆಯ ಮೇಲೆ ಪಕ್ಷಿಗಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ಮರದ ಪಟ್ಟಿಗಳನ್ನು ಜೋಡಿಸಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ಮರದ ಪಟ್ಟಿಗಳ ಮೇಲೆ ಅಕ್ಕಿಯನ್ನು ಚೆಲ್ಲತೊಡಗಿದರು. ಇದರಿಂದಾಗಿ ಸಾವಿರಾರು ಗಿಳಿಗಳು ಅವರ ಮನೆಯ ಮಾಳಿಗೆಗೆ ಭೇಟಿ ನೀಡಿ ಅಕ್ಕಿಯನ್ನು ತಿಂದು ನಿರ್ಗಮಿಸತೊಡಗಿದವು.


2015 ರಲ್ಲಿ ಚೆನ್ನೈ ನಗರವು ನೆರೆ ಪ್ರವಾಹಕ್ಕೆ ತುತ್ತಾದಾಗ ಜೋಸೆಫರ ಮನೆಯ ಮಾಳಿಗೆಗೆ ಭೇಟಿ ನೀಡುವ ಪಕ್ಷಿಗಳ ಸಂಖ್ಯೆ ಹೆಚ್ಚಾಯಿತು. ಅವರ ಮಾಳಿಗೆಯ ಮೇಲೆ ಕೇವಲ 3000 ಪಕ್ಷಿಗಳು ಕುಳಿತು ಆಹಾರ ತಿನ್ನುವಷ್ಟು ಮಾತ್ರ ಮರದ ಪಟ್ಟಿಗಳು ಇದ್ದವು. ಆದರೆ 5000 ಪಕ್ಷಿಗಳು ಅಲ್ಲಿಗೆ ಭೇಟಿ ನೀಡಲು ಪ್ರಾರಂಬಿಸಿದವು. “ಪ್ರತಿದಿನ ನಾನು ಮಾಳಿಗೆಯನ್ನು ಎರಡು ಬಾರಿ ಶುಚಿಗೊಳಿಸಬೇಕಿತ್ತು. ಏಕೆಂದರೆ ಮಾಳಿಗೆಯ ಮೇಲೆ ಅಕ್ಕಿ ಕಾಳುಗಳು ಚೆಲ್ಲಾಡುತಿದ್ದವು. ಮಳೆಗಾಲದ ಸಮಯದಲ್ಲಿ ಈ ಅಕ್ಕಿಕಾಳುಗಳು ಕೊಚ್ಚಿಹೋಗದಂತೆ ಐದಾರು ಬಾರಿ ನಾನು ಮಾಳಿಗೆಯನ್ನು ಶುಚಿಗೊಳಿಸಬೇಕಿತ್ತು” ಎಂದು ಜೋಸೆಫ್ ದಿ ನ್ಯೂಸ್ ಮಿನಿಟ್ ಗೆ ಹೇಳಿದ್ದಾರೆ.


ಒಂದು ಕಾಲದಲ್ಲಿ ಅಳಿವಿನ ಅಂಚಿನಲ್ಲಿದ್ದ ಕತ್ತಿನ ಸುತ್ತ ವೃತ್ತ ಇರುವ ಗಿಳಿಗಳ ತಂಡ ಈಗ ಪ್ರತಿದಿನ ರಾಯಪೆಟ್ಟಾ ಪ್ರದೇಶದ ಆಕಾಶದ ತುಂಬಾ ಹಾರಾಡುತ್ತಿರುತ್ತವೆ. ಈ ಪಕ್ಷಿಗಳ ಆಹಾರದ ಬಗ್ಗೆ ಮಾತನಾಡುತ್ತಾ ಶೇಖರ್ ದಿ ಹಿಂದೂ ಪತ್ರಿಕೆಗೆ ಹೀಗೆ ಹೇಳಿದ್ದಾರೆ. “ಇವು ಮುಖ್ಯವಾಗಿ ಹಣ್ಣುಗಳನ್ನು ಇಷ್ಟಪಡುತ್ತವೆ. ಆದರೆ ಸುತ್ತಮುತ್ತಲಿನ ವಾಹನಗಳ ಸದ್ದಿನಿಂದ ಬೆದರಿ ಧಾನ್ಯಗಳನ್ನು ಬೇಗ ತಿಂದು ಹಾರಿಹೋಗಬಹುದೆಂಬ ತಮ್ಮ ರಕ್ಷಣಾತ್ಮಕ ನಡೆಯಿಂದ ಧಾನ್ಯಗಳನ್ನು ಹೆಚ್ಚು ತಿಂದು ಮುಗಿಸಿದ ನಂತರ ಹಾರಿ ಹೋಗುತ್ತವೆ.”


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.