ಕ್ಯಾಮ್‌ಸ್ಕ್ಯಾನರ್‌ಗೆ ಪರ್ಯಾಯ ಈ ಭಾರತೀಯ ಕಾಗಜ್‌ ಸ್ಕ್ಯಾನರ್‌ ಆ್ಯಪ್‌

ಚೀನಿ ಆ್ಯಪ್‌ಗಳು ನಿಷೇಧಗೊಂಡ ಮರುದಿನವೆ ಲೋಕಾರ್ಪಣೆಗೊಂಡ ಕಾಗಜ್‌ ಸ್ಕ್ಯಾನರ್‌, ಚಿತ್ರಗಳು ಮತ್ತು ದಾಖಲೆ ಪತ್ರಗಳನ್ನು ಅಂಡ್ರಾಯ್ಡ್‌ ಮತ್ತು ಐಒಎಸ್‌ ಮೊಬೈಲ್‌ ಫೋನ್ ಕ್ಯಾಮೆರಾ ಬಳಸಿ ಸ್ಕ್ಯಾನ್‌ ಮಾಡುವ ಆ್ಯಪ್‌ ಆಗಿದೆ.

ಕ್ಯಾಮ್‌ಸ್ಕ್ಯಾನರ್‌ಗೆ ಪರ್ಯಾಯ ಈ ಭಾರತೀಯ ಕಾಗಜ್‌ ಸ್ಕ್ಯಾನರ್‌ ಆ್ಯಪ್‌

Friday July 10, 2020,

2 min Read

ಭಾರತದ ಸಾರ್ವಭೌಮತೆ ಮತ್ತು ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆತರುತ್ತಿವೆ ಎಂಬ ನಿಟ್ಟಿನಲ್ಲಿ 59 ಆ್ಯಪ್ಗಳನ್ನು ನಿಷೇಧಿಸಿದ ಸರ್ಕಾರದ ನಡೆ ಭಾರತೀಯ ಆ್ಯಪ್ ನಿರ್ಮಾತೃಗಳಿಗೆ ದೊಡ್ಡ ಅವಕಾಶ ಮತ್ತು ಸಾಧ್ಯತೆಗಳನ್ನು ಸೃಷ್ಟಿಸಿದೆ. ಟಿಕ್‌ಟಾಕ್‌, ಕ್ಯಾಮ್‌ಸ್ಕ್ಯಾನರ್‌, ಯುಸಿ ಬ್ರೌಸರ್‌ ಮತ್ತು ಶೇರ್‌ಈಟ್‌ ನಂತಹ ಆ್ಯಪ್‌ಗಳನ್ನು ನಿಷೇಧಿಸಿದ ಬೆನ್ನಲ್ಲೆ ಭಾರತದ ಸ್ವಂತ ಆ್ಯಪ್‌ಗಳಿಗೆ ಬೇಡಿಕೆಯುಂಟಾಗಿದೆ.


ಚೀನಿ ಆ್ಯಪ್‌ ನಿಷೇಧಗೊಂಡ ಮರುದಿನವೆ ಲೋಕಾರ್ಪಣೆಗೊಂಡ ಕಾಗಜ್‌ ಸ್ಕ್ಯಾನರ್‌, ಚಿತ್ರಗಳು ಮತ್ತು ದಾಖಲೆ ಪತ್ರಗಳನ್ನು ಅಂಡ್ರಾಯ್ಡ್‌ ಮತ್ತು ಐಒಎಸ್‌ ಮೊಬೈಲ್‌ ಫೋನ್ ಕ್ಯಾಮೆರಾ ಬಳಸಿ ಸ್ಕ್ಯಾನ್‌ ಮಾಡುವ ಆ್ಯಪ್‌. ಗುರುಗ್ರಾಂ ಮೂಲದ ಆರ್ಡೆನಾಡೋ ಲ್ಯಾಬ್ಸ್‌ ಅಭಿವೃದ್ಧಿಪಡಿಸಿರುವ ಈ ಆ್ಯಪ್‌ ಕ್ಯಾಮ್‌ಸ್ಕ್ಯಾನರ್‌ಗೆ ಭಾರತೀಯ ಪರ್ಯಾಯವಾಗಿದೆ.


ಆರ್ಡೆನಾಡೋ ಲ್ಯಾಬ್ಸ್‌ನ ಸಹ-ಸಂಸ್ಥಾಪಕ ಗೌರವ್ ಶ್ರೀಶ್ರೀಮಲ್, ಲಿಂಕ್ಡ್‌ಇನ್‌ ಪೋಸ್ಟ್‌ನಲ್ಲಿ, ಸ್ಟಾರ್ಟ್‌ಅಪ್‌ನ ತಂಡವು “ಸ್ಥಳೀಯ ಮತ್ತು ಆತ್ಮನಿರ್ಭರ ಭಾರತಕ್ಕಾಗಿ ನಮ್ಮ ಪ್ರಧಾನ ಮಂತ್ರಿಗಳ ಕರೆಯ ನಂತರ ಕಾಗಾಜ್ ಸ್ಕ್ಯಾನರ್ ಅನ್ನು ಒಂದು ಹೆಚ್ಚುವರಿ ಯೋಜನೆಯಾಗಿ ನಿರ್ಮಿಸಿದೆ,” ಎಂದು ಹೇಳಿದರು.



ಆ್ಯಪ್‌ ಬಳಕೆ ಹೇಗೆ?

ಸ್ಟೋರ್‌ನಿಂದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ ಮತ್ತು ಯಾವುದೇ ಖಾತೆಯನ್ನು ಸೃಷ್ಟಿಸದೆಯೆ ಆ್ಯಪ್‌ ಬಳಸಲು ಶುರುಮಾಡಬಹುದು.


ಹೋಮ್‌ಪೇಜ್‌ನ ಕೆಳಗಿನ ಬಲಭಾಗದಲ್ಲಿ ‘+ʼ ಚಿಹ್ನೆಯಿದ್ದು, ಅದನ್ನು ಒತ್ತುವ ಮೂಲಕ ನೀವು ನಿಮ್ಮ ಕಾಗದ ಪತ್ರಗಳು, ಬಿಲ್‌ಗಳನ್ನು ಸ್ಕ್ಯಾನ್‌ ಮಾಡಬಹುದು. ಸ್ಕ್ಯಾನ್‌ ಮಾಡಬೇಕಾದ ಪತ್ರವನ್ನು ಸಮನಾದ ಮೇಲ್ಮೈನಲ್ಲಿಟ್ಟು, ಚಿತ್ರ ಸೆರೆಹಿಡಿದು, ಚಿತ್ರದ ಅಂಚುಗಳನ್ನು ಸರಿಹೊಂದಿಸಿ ಯಾವ ಮೋಡ್‌ನಲ್ಲಿ ಸ್ಕ್ಯಾನ್‌ ಮಾಡಬೇಕು ಎಂದು ಆರಿಸಿಕೊಂಡರೆ ಸ್ಕ್ಯಾನ್‌ ಮಾಡಿದ ಕಾಗದ ಪತ್ರಗಳು ಸಿದ್ಧವಾಗಿರುತ್ತವೆ. ಇದರ ಹೊರತಾಗಿ ನಿಮ್ಮ ಗ್ಯಾಲರಿಯಲ್ಲಿರುವ ಚಿತ್ರಗಳನ್ನು ಮೇಲಿನ ಸೂಚನೆಗಳನ್ನು ಅನುಸರಿಸುವ ಮೂಲಕ ಸ್ಕ್ಯಾನ್‌ ಮಾಡಬಹುದು.


ಚಿತ್ರಗಳು ಮತ್ತು ಕಾಗಜ್‌ ಸ್ಕ್ಯಾನರ್‌ನಿಂದ ಸ್ಕ್ಯಾನ್‌ ಮಾಡಿದ ಕಾಗದ ಪತ್ರಗಳೆಲ್ಲವನ್ನು ಸೇರಿಸಿ ಪಿಡಿಎಫ್‌ ಕೂಡ ಮಾಡಬಹುದು.


ಫಲಿತಾಂಶ

ಸ್ಕ್ಯಾನ್‌ ಮಾಡಿದ ಕಾಗದ ಪತ್ರಗಳು ಬಳಸಲು ಯೋಗ್ಯವಾಗಿದ್ದವು, ಪಠ್ಯವನ್ನು ದೊಡ್ಡದು ಮತ್ತು ಸ್ಪಷ್ಟವಾಗಿಸುವ ಮ್ಯಾಜಿಕ್‌ ಫಿಲ್ಟರ್‌ ಆಯ್ಕೆ ವಿಶೇಷವಾಗಿ ನಮಗೆ ತುಂಬಾ ಇಷ್ಟವಾಯಿತು. ಸ್ಕ್ಯಾನರ್ನಲ್ಲಿ ಮೂರು ಸ್ಕ್ರೀನಿಂಗ್ ಮೋಡ್‌ಗಳಿವೆ: ಬ್ಲ್ಯಾಕ್‌ ಆಂಡ್‌ ವೈಟ್‌, ಕಲರ್‌ ಸ್ಕ್ಯಾನ್ ಮತ್ತು ಗ್ರೇಸ್ಕೇಲ್. ಸ್ಕ್ಯಾನ್ ಮಾಡಿದ ವಿವಿಧ ಫೈಲ್‌ಗಳನ್ನು ಬಿಡಿಬಿಡಿಯಾಗಿ ಇಡುವ ಬದಲು ಅವುಗಳನ್ನೆಲ್ಲ ಒಂದೆಡೆ ಸೇರಿಸಿ ಪಿಡಿಎಫ್ ಫೈಲ್‌ ಆಗಿ ಸೇವ್‌ ಮಾಡುವ ಆಯ್ಕೆಯು ಇದೆ.


ಸ್ಕ್ಯಾನ್‌ ಮಾಡಿದ ಪಿಡಿಎಫ್‌ ಫೈಲ್‌ ಅನ್ನು ನೀವು ಇಮೈಲ್‌ ಮತ್ತು ವಾಟ್ಸ್ಯಾಪ್‌ನಂತಹ ಆ್ಯಪ್‌ಮೂಲಕವು ಕಳುಹಿಸಬಹುದು. ನೀವು ಸ್ಕ್ಯಾನ್‌ ಮಾಡಿದ ಎಲ್ಲವೂ ಒಂದೆಡೆ ಇರುವ ಲೈಬ್ರರಿ ಉಪಯುಕ್ತವಾಗಿದೆ.


ಕೊನೆಯ ಮಾತು

ಆ್ಯಪ್‌ ಬಳಸಲು ತುಂಬಾ ಸುಲಭವಾಗಿದ್ದು, ಫ್ಯೂಚರ್‌ ಫೋನ್‌ ಬಳಸಿದವರು ಇದನ್ನು ಸರಾಗವಾಗಿ ಉಪಯೋಗಿಸಬಹುದು.


ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 4 ಕ್ಕೂ ಅಧಿಕ ರೇಟಿಂಗ್‌ ಹೊಂದಿರುವ ಈ ಆ್ಯಪ್‌ನಲ್ಲಿ ಹೆಚ್ಚುವರಿ ಎಡಿಟಿಂಗ್‌ ಆಯ್ಕೆಗಳು ಇರಬೇಕಿತ್ತು ಎಂದು ಬಳಕೆದಾರರು ತಮ್ಮ ಅನಿಸಿಕೆ ಬರದಿದ್ದಾರೆ. ಇದು ಹೊಸ ಆ್ಯಪ್‌ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಹಲವು ಆಯ್ಕೆಗಳನ್ನು ನಿರೀಕ್ಷಿಸಬಹುದು.

ಭಾರತೀಯರು ಈ ಆ್ಯಪ್‌ ನಿರ್ಮಿಸಿದ್ದಾರೆಂಬ ಕಾರಣದಿಂದ ಮಾತ್ರವಲ್ಲದೇ ತನ್ನ ಗುಣಮಟ್ಟದಿಂದಲೇ ಕಾಗಜ್‌ ಸ್ಕ್ಯಾನರ್‌ ಇತರ ಆ್ಯಪ್‌ಗಳ ಮಧ್ಯೆ ಎದ್ದು ಕಾಣುತ್ತದೆ. ಆ್ಯಪ್‌ ಬಳಸಲು ಸೈನ್‌-ಇನ್‌ ಮಾಡಬೇಕಿಲ್ಲ, ವಾಟರ್‌ ಮಾರ್ಕ್‌ಗಳಿಲ್ಲ ಮತ್ತು ಬಳಸಲು ಉಚಿತವಾಗಿದೆ ಈ ಆ್ಯಪ್‌.