ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಹಳೆಯ ಬಸ್ಸುಗಳನ್ನು ಸಂಚಾರಿ ಶಿಶುಧಾಮವನ್ನಾಗಿ ಮಾರ್ಪಡಿಸಲು ನಿರ್ಧರಿಸಿದ ಸರ್ಕಾರ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಹಳೆಯ ಕೆಎಸ್‌ಆರ್‌ಟಿಸಿ ಬಿಎಂಟಿಸಿ ಬಸ್‌ಗಳನ್ನು ಶಿಶುಧಾಮವನ್ನಾಗಿ ಮಾರ್ಪಡಿಸಿ ಆ ಮಕ್ಕಳಿಗೆ ಬಸ್‌ಗಳಲ್ಲಿಯೇ ಆಟವಾಡುವ ಓದುವ ವ್ಯವಸ್ಥೆ ಮಾಡಲು ಮಹತ್ವದ ಹೆಜ್ಜೆಯನ್ನು ಇಡುತ್ತಿದೆ.

ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಹಳೆಯ ಬಸ್ಸುಗಳನ್ನು ಸಂಚಾರಿ ಶಿಶುಧಾಮವನ್ನಾಗಿ ಮಾರ್ಪಡಿಸಲು ನಿರ್ಧರಿಸಿದ ಸರ್ಕಾರ

Wednesday October 23, 2019,

2 min Read

ಹೊಟ್ಟೆ ಪಾಡಿಗಾಗಿ ಬಡವರು ತಾವಿದ್ದ ಊರು ಬಿಟ್ಟು ನಗರಗಳಿಗೆ ಬಂದು ಕೆಲಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಕರ್ನಾಟಕದಲ್ಲಿಯೇ ಸಾಕಷ್ಟು ಜನ ಬೇರೆ ಕಡೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಲಕ್ಷಾಂತರ ಮಂದಿ ಕಟ್ಟಡ ಹಾಗೂ ಕೂಲಿ ಕಾರ್ಮಿಕರು ಬೆಂಗಳೂರಿಗೆ ಬಂದು ಕೆಲಸಗಳನ್ನು ಮಾಡುತ್ತಿದ್ದಾರೆ. ಕಟ್ಟಡ ಕೆಲಸಗಳಿಗೆ ಹೋದಾಗಲೂ ತಮ್ಮ ಮಕ್ಕಳನ್ನು ಕೆಲಸ ಮಾಡುವ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಾರೆ. ಹೀಗೆ ಎಷ್ಟೋ ಮಕ್ಕಳು ತಮ್ಮ ತಮ್ಮ ತಂದೆ ತಾಯಿ ಜೊತೆ ಕೆಲಸ ಮಾಡುವ ಪ್ರದೇಶದಲ್ಲಿ ಆಟವಾಡುತ್ತಲೇ ಬೆಳೆಯುತ್ತಾರೆ. ಬಿಸಿಲು ಮಳೆ ಎನ್ನದೇ ಪೋಷಕರು ಇದ್ದ ಜಾಗದಲ್ಲಿಯೇ ಮಕ್ಕಳು ಇರಬೇಕಾದ ಪರಿಸ್ಥಿತಿ ಸದ್ಯ ರಾಜ್ಯದಲ್ಲಿ ಇದೆ. ಇಂಥಹ ಮಕ್ಕಳಲ್ಲಿ ಶುಚಿತ್ವ ಇರುವುದಿಲ್ಲ. ಇದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.


ಸಾಂಧರ್ಭಿಕ ಚಿತ್ರ (ಚಿತ್ರಕೃಪೆ: ಸ್ಟೋರಿ ಪಿಕ್)


ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪುಟ್ಟ ಗುಡಿಸಲಿನ ಆಕಾರದಲ್ಲಿ ಸಂಚಾರಿ ಶಿಶುಧಾಮಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹಳೆಯ ಬಿಎಂಟಿಸಿ ಮತ್ತು ಕೆಎಸ್‌ಆರ್ ಟಿಸಿ ಬಸ್ಸುಗಳು ಹಾಗೂ ಅವುಗಳ ಬಿಡಿ ಭಾಗಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಸಿದೆ. ಇದರ ಜೊತೆಗೆ ಈ ಬಸ್ಸುಗಳನ್ನು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಮರು ವಿನ್ಯಾಸಿಸಿ ಹಾಗೂ ಬಣ್ಣ ಬಳಿಸಿ ಆಯಾಯ ಕಟ್ಟಡ ನಿರ್ಮಾದ ಸ್ಥಳಗಳಲ್ಲಿ ಇಡಲು ಚಿಂತನೆ ನಡೆದಿದೆ, ವರದಿ ದಿ ನ್ಯೂವ್ ಇಂಡಿಯನ್ ಎಕ್ಸ್‌ಪ್ರೆಸ್.


ಬಸ್ಸುಗಳ ಭಾಗಗಳನ್ನು ಜೋಡಿಸಿ ಸಣ್ಣ ಮನೆಗಳ ರೀತಿ ವರ್ಣಮಯ ಚಿತ್ತಾರಗಳ ಮೂಲಕ ಕಲಾವಿದರ ಕೈಯಲ್ಲಿ ನಿರ್ಮಾಣ ಮಾಡಿಸಲಾಗುತ್ತದೆ. ಇನ್ನು ಮಕ್ಕಳು ಓದಲು ಕೆಲವೊಂದು ಪುಸ್ತಕಗಳನ್ನು ಕೂಡ ಈ ಬಸ್‌ಗಳಲ್ಲಿ ಇಡಲು ಚಿಂತಿಸಲಾಗಿದೆ. ಇದನ್ನು ಸರ್ಕಾರೇತರ ಸಂಘಟನೆಗಳಿಗೆ ನೀಡಿ ಅವುಗಳು ನಡೆಸಿಕೊಂಡು ಹೋಗುವಂತೆ ಚಿಂತನೆ ನಡೆಸಲಾಗಿದೆ. ಹೀಗೆ ಮಾಡಿದ್ದಲ್ಲಿ, ಕಾರ್ಮಿಕರು ಈ ಸಂಚಾರಿ ಶಿಶುವಾಹಾರದೊಳಗೆ ಮಕ್ಕಳನ್ನು ಬಿಟ್ಟು ನಿಶ್ಚಿಂತೆಯಿಂದ ಕೆಲಸ ಮಾಡಬಹುದು ಎಂಬುದು ಸರ್ಕಾರದ ಯೋಚನೆ. ಇನ್ನು ಮುಂದುವರೆದಂತೆ ಮಕ್ಕಳಿಗೆ ಬೆಳಗಿನ ಉಪಹಾರವನ್ನು ನೀಡುವ ಯೋಜನೆಯಲ್ಲಿದೆ ಸರ್ಕಾರ. ಸದ್ಯ ರಾಜ್ಯಸಭಾ ಸದಸ್ಯ ಜಿ. ಚಂದ್ರಶೇಖರ್ ಅವರು ತಮ್ಮ ಸಂಸದ ನಿಧಿಯಿಂದ ೨೫ ಲಕ್ಷ ರೂ. ಮೀಸಲಿಡಲಾಗಿದ್ದು, ಬಸ್ಸುಗಳನ್ನು ಖರೀದಿಸಲು, ಅವುಗಳನ್ನು ನವೀಕರಿಸಲು ಮತ್ತು ನಂತರ ಅವುಗಳನ್ನು ಎನ್‌ಜಿಓ ಗಳಿಗೆ ಹಸ್ತಾಂತರಿಸಲು ಇದನ್ನು ಬಳಸಲಾಗುತ್ತದೆ. ಸದ್ಯ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಅವರು ರಾಜ್ಯದಾದ್ಯಂತ ೧೦೦ ಬಸ್ಸುಗಳನ್ನು ಖರೀದಿಸಲು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.


ಸಾಂಧರ್ಭಿಕ ಚಿತ್ರ (ಚಿತ್ರಕೃಪೆ: ಸ್ಟೋರಿ ಪಿಕ್)


ನಿರ್ಮಾಣ ಕಾಮಗಾರಿ ತಿಂಗಳುಗಟ್ಟಲೆ ನಡೆಯುವುದರಿಂದ ಈ ಸಂಚಾರಿ ಶಿಶುಧಾಮಗಳನ್ನು ಅಲ್ಲಿನ ಕೆಲಸ ಮುಗಿಯುವವರೆಗೆ ನಿಲ್ಲಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಮಕ್ಕಳು ಕೆಲವೊಮ್ಮೆ ಆಟವಾಡುತ್ತಾ ಗಾಯಗಳು, ಅಪಘಾತಗಳು ಕೂಡ ನಡೆಯುತ್ತವೆ. ಹಾಗಾಗಿ ಈ ಸಂಚಾರ ಶಿಶುಧಾಮಗಳು ಇರುವುದರಿಂದ ಅಪಘಾತಗಳನ್ನು ತಪ್ಪಿಸಬಹುದು ಎಂಬುದು ಸರ್ಕಾರದ ಚಿಂತನೆ. ಸದ್ಯ ಇಂಥಹದೊಂದು ಯೋಜನೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಯೋಜನೆಯಿಂದ ಕಟ್ಟಡ ಕಾರ್ಮಿಕರ ಮಕ್ಕಳು ಶೈಕ್ಷಣಿಕವಾಗಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯವಾಗಲಿದೆ. ಆದಷ್ಟು ಬೇಗ ಈ ಯೋಜನೆ ಜಾರಿಗೆ ಬರಲಿ ಅನ್ನೋದು ನಮ್ಮ ಆಶಯ.