ತಮ್ಮ ಮಗನ ಜತೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ತೇರ್ಗಡೆಯಾದ ಕೇರಳದ ದಂಪತಿಗಳು

ಮೊಹಮ್ಮದ ಮುಸ್ತಾಪಾ ಮತ್ತು ಅವರ ಪತ್ನಿ ನೌಸಿಬಾ 12 ನೇ ತರಗತಿ ಸಮಾನತಾ ಪರೀಕ್ಷೆಯಲ್ಲಿ ತಮ್ಮ ಮಗ ಶಮ್ಮಾಸ್‌ ಜತೆಗೆ ತೇರ್ಗಡೆ ಹೊಂದಿದ್ದಾರೆ.

ತಮ್ಮ ಮಗನ ಜತೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ತೇರ್ಗಡೆಯಾದ ಕೇರಳದ ದಂಪತಿಗಳು

Wednesday August 05, 2020,

2 min Read

ಶಿಕ್ಷಣಕ್ಕೆ ವಯಸ್ಸು ಯಾವತ್ತೂ ಅಡ್ಡಿಯಲ್ಲ. ಈ ಮಾತಿಗೆ ತಕ್ಕ ಉದಾಹರಣೆಯಂತಿದ್ದಾರೆ ತಮ್ಮ ಮಗನೊಡನೆ 12 ನೇ ತರಗತಿಯಲ್ಲಿ ಈ ವರ್ಷ ತೇರ್ಗಡೆ ಹೊಂದಿದ ಕೇರಳದ ದಂಪತಿಗಳು.


ಕೇರಳದ ಮಲಪ್ಪುರಂನ ಮೊಹಮ್ಮದ ಮುಸ್ತಾಪಾ ಮತ್ತು ಅವರ ಪತ್ನಿ ನೌಸಿಬಾ 12 ನೇ ತರಗತಿ ಸಮಾನತಾ ಪರೀಕ್ಷೆಯಲ್ಲಿ ತಮ್ಮ ಮಗ ಶಮ್ಮಾಸ್‌ ಜತೆಗೆ ತೇರ್ಗಡೆ ಹೊಂದಿದ್ದಾರೆ.


ಚಿತ್ರಕೃಪೆ: ದಿ ಲಾಜಿಕಲ್‌ ಇಂಡಿಯನ್‌


ವ್ಯಾಪಾರಿಯಾಗಿರುವ ಮುಸ್ತಫಾ 10 ನೇ ತರಗತಿ ಮುಗಿದೊಡನೆ ಕೆಲಸ ಹುಡುವುದಕ್ಕಾಗಿ ಗಲ್ಫ್‌ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಅಬು ದಾಬಿಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ 4 ವರ್ಷಗಳ ಕಾಲ ಕೆಲಸ ಮಾಡಿ, ನಂತರ ತಮ್ಮ ತಾಯ್ನಾಡಿನಲ್ಲಿ ಮದುವೆಯಾಗಿ ಮತ್ತೆ ಗಲ್ಫ್‌ ಸೇರಿದರು.


5 ವರ್ಷದ ಹಿಂದೆ ಕೇರಳಕ್ಕೆ ಮರಳಿದ ದಂಪತಿಗಳು 12 ನೇ ತರಗತಿ ಪರೀಕ್ಷೆಗಳ ಬಗ್ಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ವಿಚಾರಿಸ ತೊಡಗಿದರು. ಆಗ ಅವರಿಗೆ ಕೇರಳ ಸಾಕ್ಷರತಾ ಮಿಷನ್‌ನ ಸಮಾನತಾ ಪರೀಕ್ಷೆಗಳ ಬಗ್ಗೆ ತಿಳಿಯಿತು ಮತ್ತು ಅವರು ರವಿವಾರದ ತರಗತಿಗಳಿಗೆ ಸೇರಿಕೊಂಡರು.


“ನಾವಿಬ್ಬರೂ ಸೇರಿ ಉದ್ಯಮ ಮಾಡುತ್ತಿದ್ದೇವೆ. ಹಾಗಾಗಿ ಓದಲು ಜಾಸ್ತಿ ಸಮಯವಿರುತ್ತಿರಲಿಲ್ಲ. ನಾವು ತರಗತಿಗೆ ಸೇರಿಕೊಂಡದ್ದು ನಮ್ಮ ಮಗನಿಗೆ ಖುಷಿಯ ವಿಷಯವಾಗಿತ್ತು. ಅವನು ನಮ್ಮೆಲ್ಲ ಸಂದೇಹಗಳಿಗೆ ಉತ್ತರಿಸುತ್ತಾನೆ, ಪ್ರಶ್ನೆಗಳನ್ನು ಕೇಳುತ್ತಾನೆ. 10 ಮತ್ತು 11ನೇ ತರಗತಿಯಲ್ಲಿ A+ ಅಂಕ ಗಳಿಸಿದ್ದಾನೆ ಮತ್ತು ಓದುವುದರಲ್ಲಿ ಅವನು ಯಾವಾಗಲೂ ಮುಂದಿದ್ದಾನೆ,” ಎಂದು ಮುಸ್ತಪಾ ದಿ ನ್ಯೂಸ್‌ ಮಿನಿಟ್‌ಗೆ ಹೇಳಿದರು.


ನೌಸಿಬಾ ಪರೀಕ್ಷೆಯಲ್ಲಿ ಶೇ. 80 ರಷ್ಟು ಅಂಕಗಳಿಸಿದರೆ, ಮುಸ್ತಫಾ ವ್ಯಾಪಾರದ ಪ್ರಯಾಣಗಳಿಂದ ತರಗತಿಗಳನ್ನು ಹಾಜರಾಗದೆ ಇದ್ದಿದ್ದರಿಂದ ಮೊದಲ ಶ್ರೇಣಿಯಲ್ಲಿ ತೇರ್ಗಡೆಯಾದರು.


“ನಾನು ಮತ್ತು ನನ್ನ ಪತ್ನಿ ಪರೀಕ್ಷೆ ಬರೆಯುವ ವಿಚಾರವನ್ನು ಮೊದಮೊದಲು ನಮ್ಮ ಕುಟುಂಬದಲ್ಲೆ ಇರುವಂತೆ ನೋಡಿಕೊಂಡಿದ್ದೆವು. ನಾವು ತುಂಬಾ ತಡವಾಗಿ ಓದುತ್ತಿದ್ದರಿಂದ ಸ್ವಲ್ಪ ಮುಜುಗರವಿತ್ತು,” ಎನ್ನುತ್ತಾರೆ ಮುಸ್ತಫಾ, ವರದಿ ದಿ ಲಾಜಿಕಲ್‌ ಇಂಡಿಯನ್‌.


“ಶುಭಾಶಯ ಕೊರಲು ಬಂದ ಕರೆಗಳೆಲ್ಲವನ್ನೂ ನೋಡಿ ಮುಜುಗರಪಡಲು ಯಾವುದೇ ಕಾರಣವಿಲ್ಲ ಎಂದು ನಮಗೆ ಅರ್ಥವಾಯಿತು. ಓದುವುದಕ್ಕೆ ವಯಸ್ಸು ಅಡ್ಡಿಯಿಲ್ಲವೆಂದು ಒಂದಷ್ಟು ಜನರನ್ನು ಪ್ರೇರೆಪಿಸುವಲ್ಲಿ ನಾವು ಸಫಲರಾಗಿದ್ದೇವೆ,” ಎಂದರು ಅವರು.


ಮೂರು ಜನರು ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಶಿಕ್ಷಣವನ್ನು ಮುಂದುವರೆಸಲಿದ್ದಾರೆ. ಚಾರ್ಟರಡ್‌ ಅಕೌಂಟೆನ್ಸಿಗೆ ಮಗ ಶಮ್ಮಾಸ್‌ ಅರ್ಜಿ ಸಲ್ಲಿಸಿದ್ದಾರೆ, ಮತ್ತು ಅವನ ಪೋಷಕರು ವಾಣಿಜ್ಯ ವಿಷಯದಲ್ಲಿ ಪದವಿ ಪಡೆಯಲಿದ್ದಾರೆ.


ಹೀಗೆಯೆ ಜುಲೈನಲ್ಲಿ 50 ವರ್ಷದ ಮೇಘಾಲಯದ ಲಕೆಂಟಿವ್‌ ಸಿಮ್ಲಿಯವರು 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಚ್ಚರಿ ಮೂಡಿಸಿದ್ದರು.