ಕೇರಳದ ಈ ಶಾಲಾ ತಂಡ ಜಲ ಸಸ್ಯ ಬಳಸಿಕೊಂಡು ಜೈವಿಕ ವಿಘಟನೆ ಹೊಂದುವ ಕಡಿಮೆ ವೆಚ್ಚದ ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಸಿದೆ.

ಜಲ ಸಸ್ಯ(ಕಳೆ) ಬಳಸಿಕೊಂಡು ತಯಾರಿಸಿರುವ ಸ್ಯಾನಿಟರಿ ಪ್ಯಾಡ್‌ಗೆ ಸದ್ಯ ನಿಯಮಿತವಾಗಿ ಬಳಸುತ್ತಿರುವ ಪ್ಯಾಡ್‌ಗಿಂತ 12ಪಟ್ಟು ಹೆಚ್ಚು ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವಿದೆ, ಈ ಪ್ಯಾಡನ್ನು ಎಸೆಯಬಹುದು ಅಥವಾ ಜೈವಿಕ ಗೊಬ್ಬರವನ್ನಾಗಿ ಮಾರ್ಪಡಿಸಬಹುದು.

ಕೇರಳದ ಈ ಶಾಲಾ ತಂಡ ಜಲ ಸಸ್ಯ ಬಳಸಿಕೊಂಡು ಜೈವಿಕ ವಿಘಟನೆ ಹೊಂದುವ ಕಡಿಮೆ ವೆಚ್ಚದ ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಸಿದೆ.

Tuesday July 23, 2019,

2 min Read

ಇಂದಿನ ದಿನಗಳಲ್ಲಿಯೂ ಮುಟ್ಟಾಗುವಿಕೆಯನ್ನು ಭಾರತದ ಹಲವಾರು ಪ್ರದೇಶದಲ್ಲಿ ಬಹಿಷ್ಕಾರದ ವಿಷಯವೆಂದು ಪರಿಗಣಿಸಲಾಗುತ್ತಿದೆ. ಮುಟ್ಟಿನ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದ್ದು ಆ ವಿಷಯದ ಕುರಿತು ಸಮಾಜದಲ್ಲಿ ಮುಕ್ತವಾಗಿ ಚರ್ಚಿಸುವುದನ್ನು ನಿಷೇಧಿಸಲಾಗಿದೆ. ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಸೌಲಭ್ಯದ ಕೊರತೆಯಿಂದ ದೇಶದಲ್ಲಿ ಪ್ರತಿ ವರ್ಷ 23 ಮಿಲಿಯನ್‌ ಹೆಣ್ಣು ಮಕ್ಕಳು ಶಾಲೆಯನ್ನು ಬಿಡುತ್ತಿದ್ದಾರೆ. ಮುಟ್ಟಿನ ನೈರ್ಮಲ್ಯದ ಅರಿವಿನ ಕೊರತೆಯು ಗಂಭೀರವಾದ ಅನಾರೋಗ್ಯಕ್ಕೂ ಕಾರಣವಾಗುತ್ತಿದೆ.


ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಾಗುತ್ತಿಲ್ಲ, ಮತ್ತು ಅವುಗಳ ಬಳಕೆಯ ಕುರಿತು ಸಾಕಷ್ಟು ಮಾಹಿತಿ ಇಲ್ಲವಾಗಿದೆ. ಆದ್ದರಿಂದ ಅವರು ಮರುಬಳಕೆ ಮಾಡಬಲ್ಲ ಬಟ್ಟೆಯನ್ನೇ ಅವಲಂಬಿಸಿದ್ದಾರೆ, ಆದರೆ ಅದು ಆರೋಗ್ಯಕರ ವಿಧಾನವಾಗಿಲ್ಲ.


ಕ

ಹತ್ತನೇ ತರಗತಿಯ ಎಸ್‌ ಸೃಜೇಶ್‌ ವಾರಿಯರ್‌, ಇ ಅಶ್ವತಿ ಮತ್ತು ಪಿವಿ ಹೆನ್ನಾರವರು ಜಲ ಸಸ್ಯ ಬಳಸಿಕೊಂಡು ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಸುವ ಕೆಲಸ ಮಾಡಿದ್ದಾರೆ. (ಚಿತ್ರ: ಎನ್‌ಡಿಟಿವಿ)

ಗ್ರಾಮೀಣ ಪ್ರದೇಶದ ಮಹಿಳೆಯರ ಈ ಸಮಸ್ಯೆಗೆ ಕಾರ್ಯ ಸಾಧ್ಯವಾಗುವ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಕೇರಳದ ಅಹ್ಮದ್‌ ಕುರಿಕ್ಕಲ್‌ ಮೆಮೋರಿಯಲ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಇವರ ತಂಡವು ಜಲ ಸಸ್ಯ(ಹಾಯಸಿಂಥ್) ಬಳಸಿಕೊಂಡು ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಸಿದ್ದು ಇದು ಸದ್ಯ ನಿಯಮಿತವಾಗಿ ಬಳಸುತ್ತಿರುವ ನ್ಯಾಪ್ಕಿನ್‌ಗಿಂತ 12ಪಟ್ಟು ಹೆಚ್ಚು ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅತ್ಯಂತ ಕೆಟ್ಟ ಜಲ ಸಸ್ಯಗಳೆಂದು ಗುರುತಿಸಲ್ಪಡುವ ಇವುಗಳು ನೀರಿನಲ್ಲಿ ದುಪ್ಪಟ್ಟು ವೇಗದಲ್ಲಿ ಬೆಳೆಯುತ್ತವೆ, ಮತ್ತು ನೀರಿನ ಮೇಲೆ ಪದರಗಳನ್ನು ಸೃಷ್ಟಿಸಿ ಜಲಚರಗಳಿಗೆ ಅಪಾಯವನ್ನುಂಟು ಮಾಡುತ್ತವೆ.


ಈ ಯೋಜನೆಯ ಕುರಿತು ವಿದ್ಯಾರ್ಥಿಗಳಿಗೆ ಅವರ ಜೀವಶಾಸ್ತ್ರ ಶಿಕ್ಷಕರು ಮಾರ್ಗದರ್ಶನ ನೀಡಿದ್ದಾರೆ. ಜಲ ಸಸ್ಯದ ಕುರಿತು ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ ಶರತ್‌ ಕೆಎಸ್‌ರವರು ಹೀಗೆ ಹೇಳುತ್ತಾರೆ,


"ಜಗತ್ತಿನಾದ್ಯಂತ ಈಗಾಗಲೇ ಜಲ ಸಸ್ಯ ಬಳಸಿಕೊಡು ಡೈನಿಂಗ್‌ ಟೇಬಲ್‌ ಮ್ಯಾಟ್‌, ದೀಪ, ಚಾದರಗಳು ಮತ್ತು ಇನ್ನೂ ಅನೇಕ ಸಾಮಗ್ರಿಗಳನನ್ನು ತಯಾರಿಸಲಾಗಿದೆ. ನಮ್ಮ ಉಪಕ್ರಮವು ಹೇಗೆ ಭಿನ್ನವಾಗಿರಲಿದೆ? ಎನ್ನುವದೇ ನಮ್ಮ ಮುಂದಿರುವ ಪ್ರಶ್ನೆಯಾಗಿತ್ತು. ಆಗ ತ್ಯಾಜ್ಯ ಬಳಸಿಕೊಂಡು ಏನಾದರೂ ಪರಿಸರ ಸ್ನೇಹಿ ಉಪಕರಣ ತಯಾರಿಸಬೇಕೆಂಬ ಸರಳ ಉಪಾಯ ಹೊಳೆಯಿತು, ಆದ್ದರಿಂದ ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಸಲು ನಿರ್ಧರಿಸಿದೆವು.”


ಕ

ಜಲ ಸಸ್ಯಗಳಿಂದ ಮಾಡಲ್ಪಟ್ಟ ಸ್ಯಾನಿಟರಿ ನ್ಯಾಪ್ಕಿನ್‌ಗಳು ಪೇಟೆಂಟ್‌ ಪಡೆದುಕೊಳ್ಳಲು ಕಾಯುತ್ತಿದ್ದು ಸದ್ಯ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ. (ಚಿತ್ರ: ಎನ್‌ಡಿಟಿವಿ)

ಜಲ ಸಸ್ಯದಿಂದ ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಸುವ ವಿಧಾನದ ಕುರಿತಾಗಿ ಇ ಅಶ್ವತಿ, ಪಿವಿ ಹೆನ್ನಾ ಸುಮಿ ಮತ್ತು ಎಸ್‌ ಸೃಜೇಶ್‌ರವರ ತಂಡವು ಅಧ್ಯಯನ ನಡೆಸಿದೆ.


ಮೊದಲು ಈ ತಂಡವು ಪರಿಸರವಾದಿಯಾಗಿರುವ ಖದೀಜಾ ನರ್ಗೀಸ್‌ ಮತ್ತು ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಶಾಲೆಯ ಪ್ರಯೋಗಾಲಯದಲ್ಲಿ ಪ್ರಯೋಗವನ್ನು ನಡೆಸಿತು. ಕೇರಳದ ರಂಡಥಣಿ, ಕೆಜ್ಮುರಿ ಮತ್ತು ಇರ್ಕಾರ ಪ್ರದೇಶಗಳಲ್ಲಿ ಇವರು ಪ್ರಯೋಗವನ್ನು ನಡೆಸಿದರು, ಮತ್ತು ಜಲ ಸಸ್ಯಗಳಿರುವ ನಾಲ್ಕು ಕೆರೆಗಳ ಕುರಿತು ಅದ್ಯಯನ ನಡೆಸಿದರು.


ಇದರ ಹಂತಗಳನ್ನು ಶರತ್‌ ರವರು ಹೀಗೆ ವಿವರಿಸುತ್ತಾರೆ,


“ಎರಡನೇ ಹಂತವು ಸ್ಯಾನಿಟರಿ ನ್ಯಾಪ್ಕಿನ್‌ನ ಬಳಕೆ ಮತ್ತು ವಿಲೇವಾರಿಯ ಕುರಿತು ತಿಳಿದುಕೊಳ್ಳುವುದಾಗಿತ್ತು. ಇದರ ಕುರಿತು ಖಚಿತ ಮಾಹಿತಿ ಪಡೆದುಕೊಳ್ಳಲು ಆರೋಗ್ಯ ತಜ್ಞರ ಜತೆ ಮಾತನಾಡಿ 100 ಮನೆಗಳ ಸಮೀಕ್ಷೆ ನಡೆಸಲಾಯಿತು. ಶೇಕಡಾ 71ರಷ್ಟು ಗೃಹಿಣಿಯರು ಸ್ಯಾನಿಟರಿ ನ್ಯಾಪ್ಕಿನ್‌ ಬಳಸುತ್ತಾರೆ ಮತ್ತು ಅದರಲ್ಲಿ 97 ಶೇಕಡಾದಷ್ಟು ಗೃಹಿಣಿಯರು ಪ್ಲಾಸ್ಟಿಕ್‌ ನಿಂದ ತಯಾರಿಸಿದ ಸ್ಯಾನಿಟರಿ ನ್ಯಾಪ್ಕಿನ್‌ ಬಳಸುತ್ತಾರೆಂಬುದು ಸಮೀಕ್ಷೆಯಿಂದ ತಿಳಿದುಬಂದಿತು. ಇದರಲ್ಲಿ ಶೇಕಡಾ 48 ರಷ್ಟು ಜನರು ಉಪಯೋಗಿಸಿದ ಪ್ಯಾಡ್‌ಗಳನ್ನು ಸುಟ್ಟು ಹಾಕುತ್ತಿದ್ದರು ಶೇಕಡಾ 11 ರಷ್ಟು ಜನರು ಫ್ಲಷ್‌ ಮಾಡುತ್ತಿದ್ದರು. ಈ ಸಂಶೋದನೆಯು ಪರಿಸರ ಸ್ನೇಹಿ ಸ್ಯಾನಿಟರಿಗಳನ್ನು ಉತ್ಪಾದಿಸಲು ಮತ್ತು ಪ್ರತಿಯೊಬ್ಬರೂ ಅದನ್ನು ಬಳಸುವಂತೆ ಮಾಡಲು ನಮ್ಮನ್ನು ಉತ್ತೇಜಿಸಿತು.”


ಈ ಸಂಶೋದನೆಯ ಕೊನೆಯ ಹಂತ, ವಿದ್ಯಾರ್ಥಿಗಳು ಸಸ್ಯವನ್ನು ಸಂಗ್ರಹಿಸಿ, ಅದನ್ನು ಸ್ವಚ್ಛಗೊಳಿಸಿ, ಅದರಲ್ಲಿರುವ ಕ್ರಿಮಿಗಳನ್ನು ನಾಶಪಡಿಸಿ, ಸಸ್ಯದ ಕಾಂಡ ಮತ್ತು ಹತ್ತಿಯನ್ನು ಬಳಸಿಕೊಂಡು ಪದರವನ್ನು ತಯಾರಿಸಬೇಕಾಗಿತ್ತು. ಈ ಪದರದ ಮೇಲೆ ಮತ್ತು ಕೆಳಭಾಗದಲ್ಲಿ ಹತ್ತಿಯನ್ನು ಸೇರಿಸಲಾಗುತ್ತಿತ್ತು ಮತ್ತು ಇದನ್ನು ಜೇನು ಮೇಣ ಬಳಸಿ ಅಂಟಿಸಲಾಗುತ್ತಿತ್ತು. ನಂತರ ಪ್ಯಾಡ್‌ಗಳನ್ನು ಯುವಿ ಕಿರಣದ ಮೂಲಕ ಹಾಯಿಸಿ ಕ್ರಿಮಿಗಳನ್ನು ನಾಶಪಡಿಸಲಾಗುತ್ತಿತ್ತು.


ಈ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಪೇಟೆಂಟ್‌ಗಾಗಿ ಕಾಯುತ್ತಿದ್ದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ವಿಲೇವಾರಿ ಮಾಡಲು ಸಾಧ್ಯವಾಗುವ ಪ್ಯಾಡ್‌ಗಳ ಬೆಲೆಯು 3 ರೂ. ಆಗಿದ್ದು, ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಿರುವುದರಿಂದ ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸಬಹುದೆಂದು ಶರತ್‌ರವರು ವಿವರಿಸುತ್ತಾರೆ.


ಈ ಆವಿಷ್ಕಾರಕ್ಕಾಗಿ ಪ್ರಶಸ್ತಿಗಳನ್ನು ಪಡೆದ ಈ ತಂಡವು ಕೇರಳದ ಮಲಪ್ಪುರಂನಲ್ಲಿ ನಡೆದ ಉಪ ಜಿಲ್ಲಾ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ವರದಿಗಾರರು ಮಾತೃಭೂಮಿ.