ಪರಿಸರ ಸ್ನೇಹಿ‌ ಮಾರ್ಗದಲ್ಲಿ ಮರುಬಳಕೆಯ ಬಟ್ಟೆಯನ್ನು ಟ್ರೆಂಡಿ ಉಡುಪುಗಳನ್ನಾಗಿ ಪರಿವರ್ತಿಸುತ್ತಿರುವ ಇಬ್ಬರು ವಿನ್ಯಾಸಕಾರರು

ಫ್ಯಾಶನ್‌ ಉದ್ಯಮವು ಪರಿಸರ ಮತ್ತು ಸಮಾಜಕ್ಕೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುವಂತಹ ಉತ್ಪನ್ನಗಳೊಂದಿಗೆ ತುಂಬಿ ಹೋಗಿರುವ ಕಾಲದಲ್ಲಿ, ʼಖಲೂಮ್ʼ ಮರುಬಳಕೆಯ ಬಟ್ಟೆಯೊಂದಿಗೆ ಫ್ಯಾಷನ್ ಉದ್ಯಮದ ಆರ್ಥಿಕತೆಗೆ ಹೊಸದೊಂದು ದಾರಿ ತೋರಿದ್ದಾರೆ.

ಪರಿಸರ ಸ್ನೇಹಿ‌ ಮಾರ್ಗದಲ್ಲಿ ಮರುಬಳಕೆಯ ಬಟ್ಟೆಯನ್ನು ಟ್ರೆಂಡಿ ಉಡುಪುಗಳನ್ನಾಗಿ ಪರಿವರ್ತಿಸುತ್ತಿರುವ ಇಬ್ಬರು ವಿನ್ಯಾಸಕಾರರು

Monday September 16, 2019,

5 min Read

ಇಬ್ಬರು ಮಕ್ಕಳ ತಾಯಿಯಾಗಿ ಶೋಭಾ ತನ್ನನ್ನು ಮತ್ತು ತನ್ನ ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ಹಾಗೂ ಅವರನ್ನು ಬೆಂಬಲಿಸಲು ಹೆಣಗಾಡುತ್ತಿದ್ದರು. ತಮ್ಮ ಜೀವನೋಪಾಯದ ಹುಡುಕಾಟದಲ್ಲಿ 36 ವರ್ಷದ ಶೋಭಾ ರಾಮನಗರದ ಕುದುರ್ ಗ್ರಾಮದಿಂದ ಬೆಂಗಳೂರಿಗೆ ವಲಸೆ ಬಂದರು. ಕೇವಲ 3 ನೇ ತರಗತಿಯವರೆಗೆ ಮಾತ್ರ ಅಧ್ಯಯನ ಮಾಡಿದ್ದ ಅವರು ತಮ್ಮ ಉದ್ಯೋಗಾವಕಾಶದ ಬಗ್ಗೆ ಚಿಂತೆ ಮಾಡುತ್ತಿದ್ದರು. ಆ ಸಮಯಕ್ಕೆ ಸರಿಯಾಗಿ ಅವರ ಸಮಸ್ಯೆಗೆ ಬೆಂಗಳೂರು ಮೂಲದ ಖಲೂಮ್ ಜವಳಿ ಇಂಡಿಯಾದ ಮೂಲಕ ಪರಿಹಾರವು ಒದಗಿ ಬಂದಿತು, ಅದು ಅವರಿಗೆ ಕೌಶಲ್ಯ ಅವಕಾಶಗಳನ್ನು ಒದಗಿಸಿದ್ದಲ್ಲದೇ, ನೇಕಾರರಾಗಿ ಉದ್ಯೋಗವನ್ನೂ ಕೂಡ ನೀಡಿತು. ಅದರ ಪರಿಣಾಮವಾಗಿ ಇಂದು ಅವರು ವಾರ್ಷಿಕ 2 ಲಕ್ಷ ರೂ ಗಳ ಆದಾಯಗಳಿಸುತ್ತಿದ್ದಾರೆ‌.


"ಖಲೂಮ್ ಕೈಮಗ್ಗ, ನೇಕಾರರಿಗೆ ಉದ್ಯೋಗವನ್ನು ಸೃಷ್ಟಿಸುವ ಹಾಗೂ ಮರುಬಳಕೆಯ ಬಟ್ಟೆಗಳ ಬಳಕೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಪ್ರಾರಂಭವಾಯಿತು" ಎಂದು ಸಹ ಸಂಸ್ಥಾಪಕಿ ನಂದಿತಾ ಸುಲೂರ್ ಹೇಳುತ್ತಾರೆ.

2016 ರಲ್ಲಿ ಸ್ಥಾಪನೆಯಾದ ಈ ಸ್ಟಾರ್ಟ್ಅಪ್, ಮರುಬಳಕೆಯ ಜವಳಿಗಳ ಬಳಕೆಯನ್ನು ಉತ್ತೇಜಿಸಲು ಮತ್ತು ಕಸದೊಂದಿಗೆ ಭೂಮಿಯಲ್ಲಿ ಹುದುಗಿ ಹೋಗುವ ಹತ್ತಿಯ ಪ್ರಮಾಣವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ವೇಗದ ಫ್ಯಾಷನ್ ಉದ್ಯಮದಿಂದ ಉಂಟಾಗುವ ನೀರಿನ ಹೆಜ್ಜೆ ಗುರುತನ್ನು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಿ ತ್ಯಜಿಸಿದ ಜವಳಿಗಳನ್ನು ಪುನರ್ ಉತ್ಪಾದಿಸಿ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ ಖಲೂಮ್.


ಸುಸ್ಥಿರ ಮತ್ತು ವೃತ್ತಾಕಾರದ ಫ್ಯಾಷನ್ ಶೈಲಿಯನ್ನು ಉತ್ತೇಜಿಸಲು, ಡಚ್ ಮಂತ್ರಿಗಳಾದ ಬ್ರೂನೋ ಬರ್ನಿಸ್ ಮತ್ತು ಸಿಗ್ರಿಡ್ ಕಾಗ್, ಖಲೂಮ್ ಮರುಬಳಕೆಯ ಬಟ್ಟೆಗಳಿಂದ ನೇಯ್ದ ಬಟ್ಟೆಗಳನ್ನು ಧರಿಸಿದ್ದರು.


ಅಂದಹಾಗೆ, ಸುಸ್ಥಿರ ಮತ್ತು 'ವೃತ್ತಾಕಾರದ ಫ್ಯಾಷನ್'ನ ಸಾಧ್ಯತೆಯನ್ನು ಪ್ರದರ್ಶಿಸಲು, ಮರುಬಳಕೆಯೊಂದಿಗೆ ಬಟ್ಟೆಯ ಜೀವನಚಕ್ರವನ್ನು ವಿಸ್ತರಿಸಲು ಸಮಗ್ರ ರೀತಿಯಲ್ಲಿಯೂ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಡಚ್ ವೈದ್ಯಕೀಯ ಆರೈಕೆ ಸಚಿವ ಬ್ರೂನೋ ಬ್ರೂಯಿನ್ಸ್ ರವರು ಖಲೂಮ್ ಕರಕುಶಲ ಸೂಟ್ ಧರಿಸಿದ್ದರು. ಅದನ್ನು ಹೊಸ ವಸ್ತುಗಳಿಂದ ತಯಾರಿಸಿದ ಹೊಸ ಸೂಟ್‌ಗೆ ಹೋಲಿಸಿದಾಗ, ಮರುಬಳಕೆಯ ಬಟ್ಟೆಯು ಸುಮಾರು ಐದು ಕೆಜಿ ಇಂಗಾಲದ ಡೈಆಕ್ಸೈಡ್ ಬಿಡುಗಡೆಯನ್ನು, 300 ಗ್ರಾಂ ಕೀಟನಾಶಕಗಳ ಬಳಕೆಯನ್ನು ತಡೆಹಿಡಿದಿರುವುದಲ್ಲದೆ, 6,500 ಲೀಟರ್ ನೀರನ್ನು ಉಳಿಸಿರುವುದು ಕಂಡುಬಂದಿತು.

ಉದ್ಯಮದ ಆರಂಭ

ಜಾಗತಿಕ‌ ಮಟ್ಟದ ಸಾಮಾಜಿಕ ಉದ್ಯಮಗಳಲ್ಲಿ ಹೂಡಿಕೆ ಮಾಡುವ ನೆದರ್‌ಲ್ಯಾಂಡ್ ಮೂಲದ ಎನ್ನ್ವಿಯು ಎಂಬ ಕಂಪನಿ 2016 ರಲ್ಲಿ ಭಾರತದಲ್ಲಿನ ಪರಿಸರ ಸ್ನೇಹಿ ಸಂಸ್ಥೆಯೊಂದನ್ನು ಸ್ಥಾಪಿಸಿ ಮರು ಪಡೆದುಕೊಂಡ ಜವಳಿ ನಾರುಗಳನ್ನು ಬಳಸಿ ಕೈಮಗ್ಗದಿಂದ ತಯಾರಿಸಿದ ಬಟ್ಟೆಗಳನ್ನು ತಯಾರಿಸಲು ಬಯಸುತ್ತದೆ. ಈ ಯೋಜನೆಯ ಮುಂದುವರಿದ ಭಾಗವಾಗಿ ಮರುಬಳಕೆಯ ಹತ್ತಿ ನೂಲುಗಳಿಂದ ನೇಯ್ದ ಬಟ್ಟೆಯನ್ನು ತಯಾರಿಸಬಹುದೇ ಎಂದು ಕಂಡುಹಿಡಿಯಲು, ಬೆಂಗಳೂರಿನಲ್ಲಿ ನಂದಿತಾ (38) ಮತ್ತು ಫ್ಯಾಬ್ ಇಂಡಿಯಾದ ಮಾಜಿ ಹಿರಿಯ ವಿನ್ಯಾಸಕ ರಾಮ್ ಸೆಲ್ಲಾಲು (32) ಪ್ರಯತ್ನ ನಡೆಸಿದರು. ಅಲ್ಲಿ ಕೈಯಿಂದ ತೆಗೆದ ನೂಲನ್ನು ಮತ್ತು ಕೈಯಿಂದ ನೇಯ್ದ ಬಟ್ಟೆಯನ್ನು, ಮರುಬಳಕೆಯ ನಾರು ಮತ್ತು ದಾರದ ಎಳೆಗಳನ್ನು ಬಳಸಿ ತಯಾರಿಸಲಾಯಿತು. ಇದರ ಪರಿಣಾಮವಾಗಿ ಫ್ಯಾಬ್ರಿಕ್ ನೆದರ್ಲ್ಯಾಂಡ್ಸ್ ಮೂಲದ ಜವಳಿ ಮರುಬಳಕೆ ಕಂಪನಿಯಾದ ಸಿಂಪಾನಿಯು ಕೂಡ ಇದರ ಬಗ್ಗೆ ತನ್ನ ಆಸಕ್ತಿಯನ್ನು ತೋರಿತು ನಂತರ ಬೆಂಗಳೂರಿನ ದಕ್ಷಿಣದ ಗೊಟ್ಟಿಗೆರೆಯ ವೀವರ್ಸ್ ಕಾಲೋನಿಯಲ್ಲಿ ಖಲೂಮ್ ಟೆಕ್ಸ್ಟೈಲ್ಸ್ ಇಂಡಿಯಾವನ್ನು ಸ್ಥಾಪಿಸಲಾಯಿತು.


ಮಾಧ್ಯಮದೊಂದಿಗೆ ಮಾತನಾಡಿದ ನಂದಿತಾ "ನೇಯ್ಗೆಯನ್ನೇ ಪ್ರಮುಖ ಉದ್ಯೋಗವಾಗಿಟ್ಟುಕೊಂಡಿರುವ ಈ ಪ್ರದೇಶವು ಸಾಕಷ್ಟು ವಿದ್ಯುತ್ ಮಗ್ಗಗಳನ್ನು ಮತ್ತು ಸ್ಥಳೀಯ ಮಾರುಕಟ್ಟೆಗೆ ರೇಷ್ಮೆ / ಪಾಲಿಯೆಸ್ಟರ್ ಸೀರೆಗಳನ್ನು ನೇಯ್ಗೆ ಮಾಡುವ ನೇಕಾರರನ್ನು ಹೊಂದಿದೆ. ಈ ಪ್ರದೇಶವು ಬೆಂಗಳೂರಿನ ಕಬ್ಬನ್‌ಪೇಟೆ, ತುಮಕೂರಿನ ಕಲ್ಲೂರು, ತಿಪಟೂರು, ಹಳೆಪಾಲ್ಯದಲ್ಲಿರುವ ಇತರ ನೇಯ್ಗೆ ಸಮುದಾಯಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ನೇಕಾರರು, ಗಂಟು ಹಾಕುವವರು, ಪಿರ್ನ್-ವಿಂಡರ್‌ಗಳು, ಬಡಗಿಗಳು, ಲೋಹದ ಕೆಲಸಗಾರರು, ಕಾರ್ಡ್ ಪಂಚ್ ಮಾಡುವವರು, ವಾರ್ಪರ್‌ಗಳು, ರೇಷ್ಮೆ ಡೈಯರ್‌ಗಳು ಮತ್ತು ಲುರೆಕ್ಸ್ ಟ್ವಿಸ್ಟರ್‌ ಸೇರಿದಂತೆ ವಿವಿಧ ಉದ್ಯಮಿದಾರರೆಲ್ಲ ಸೇರಿ ಮರುಬಳಕೆಯ ನೂಲುಗಳ ಸಾಧ್ಯತೆಗಳನ್ನು ಅನ್ವೇಷಿಸಲು ಖಲೂಮ್‌ನ ನೇಯ್ಗೆ ಘಟಕದಲ್ಲಿ ಸೂಕ್ತವಾಗಿ ಬಳಸಿಕೊಳ್ಳಲಾಗುತ್ತಿದೆ” ಎಂದರು


ಖಲೂಮ್ ನ ತಂಡ




ನಂದಿತಾ ಹಾಗೂ ರಾಮ್ ಸೆಲ್ಲಾಲೂ ಸೇರಿ "ಮರುಬಳಕೆ" ಮೇಲಿನ ತಮ್ಮ ಉತ್ಸಾಹದಲ್ಲಿ ನಾಲ್ಕು ಸೆಕೆಂಡ್ ಹ್ಯಾಂಡ್ ಮಗ್ಗಗಳನ್ನೂ ಸಹ ಸಂಗ್ರಹಿಸಿದರು. ಕೈಮಗ್ಗ ನೇಕಾರರಿಗಾಗಿ ಹೊಸ‌ ಮಾರ್ಗದ ಕಾರ್ಯಕ್ಷೇತ್ರವನ್ನು ರಚಿಸಿ, ಉತ್ತಮ ಗುಣಮಟ್ಟದ ಮರುಬಳಕೆಯ ಜವಳಿಗಳನ್ನು ಉಡುಪು ಮಾರುಕಟ್ಟೆಯಲ್ಲಿ ಪರಿಚಯಿಸುವುದು, ಅಷ್ಟೇ ಅಲ್ಲದೇ ಕಾರ್ಖಾನೆಯಲ್ಲಿ ಕುಶಲಕರ್ಮಿಗಳನ್ನು ಗೌರವದಿಂದ ಪರಿಗಣಿಸಿ, ಯೋಗ್ಯವಾದ ಜೀವನವನ್ನು ರೂಪಿಸುವುದು ಎನ್ವಿಯು ಕಂಪನಿಯ ಉದ್ದೇಶವಾಗಿತ್ತು. ಗುಣಮಟ್ಟದ ಉದ್ಯಮದಲ್ಲಿ 8,000 ರಿಂದ 13,000 ರೂಗಳವರೆಗೆ ಗಳಿಸುತ್ತಿದ್ದ ನೇಕಾರರು, ಖಲೂಮ್ ನಲ್ಲಿ ತಿಂಗಳಿಗೆ 13,500 ರಿಂದ 15,000 ರೂಗಳವರೆಗೆ ಗಳಿಸುತ್ತಾರೆ. ಹಾಗೂ ಸಹಾಯಕರು ತಿಂಗಳಿಗೆ 12,000 ಗಳಿಸುತ್ತಾರೆ. ನಂದಿತಾ ಮತ್ತು ರಾಮ್ ಸೆಲ್ಲಾಲು ದೊಡ್ಡ ಉದ್ಯಮಗಳಂತೆ ಉತ್ತಮ-ಗುಣಮಟ್ಟದ ಬಟ್ಟೆಯನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾರೆ, ಅದರ ಗುಣಮಟ್ಟ ಗ್ರಾಹಕರುಗಳಿಗೆ ಮರುಬಳಕೆಯೋ ಹೊಸದೋ ಎಂಬುದನ್ನು ಗುರುತಿಸಲು ಸಾಧ್ಯವಾಗದಷ್ಟು ಚೆನ್ನಾಗಿರಬೇಕೆಂಬುದಾಗಿದೆ.


ಪ್ರಸ್ತುತ ತಂಡದಲ್ಲಿ 10 ನೇಕಾರರು, 8 ಜನ ಸಹಾಯಕರು ಹಾಗೂ ಒಬ್ಬರು ಮೇಲ್ವಿಚಾರಕರು ಇದ್ದಾರೆ.

ಪರಿಸರಕ್ಕಾಗಿ ನೇಯ್ಗೆ

"ವೇಗವಾದ ಫ್ಯಾಷನ್ ಸಂಸ್ಕೃತಿಯಲ್ಲಿ ಬಟ್ಟೆಗಳ ಜೀವನ ಮುಗಿಯುವ ಮೊದಲೇ ಅವುಗಳನ್ನು ತ್ಯಜಿಸಲಾಗುತ್ತದೆ. ಇದು ನೀರು, ರಸಗೊಬ್ಬರಗಳು, ಹತ್ತಿ ಕೃಷಿಗೆ ಬಳಸುವ ಕೀಟನಾಶಕಗಳು ಅಥವಾ ಉಡುಪು ಉದ್ಯಮಗಳಲ್ಲಿ‌ ಉಳಿಯುವ ಹತ್ತಿ ತ್ಯಾಜ್ಯಗಳು ಪರಿಸರದ ಮೇಲೆ ಭಾರಿ ನಷ್ಟವನ್ನುಂಟುಮಾಡುತ್ತದೆ” ಎಂದು ನಂದಿತಾ ವಿವರಿಸುತ್ತಾರೆ.


ಖಲೂಮ್ ನಲ್ಲಿನ ಉತ್ಪಾದನಾ ಪ್ರಕ್ರಿಯೆಗೆ ಕೇವಲ ಮಾನವಶಕ್ತಿ ಅಗತ್ಯವಿರುತ್ತದೆ. ಆದರೆ ಯಂತ್ರ ಮಗ್ಗಗಳಿಗೆ ಪ್ರತಿ ಗಂಟೆಗೆ 126 ಕಿಲೋ ವ್ಯಾಟ್ ವಿದ್ಯುತ್ ಅಗತ್ಯವಿರುತ್ತದೆ. ಇದು 93 ಕೆಜಿ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಗೆ ಸಮನಾಗಿರುತ್ತದೆ.


ಪರಿಸರ ಸ್ನೇಹಿ ಉದ್ಯಮದ ಸ್ವರೂಪದ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ‘ಕಾರ್ಬನ್ ಹೆಜ್ಜೆಗುರುತು’ ಮತ್ತು ‘ನೀರಿನ ಹೆಜ್ಜೆ ಗುರುತು' ನೊಂದಿಗೆ, ಬ್ರ್ಯಾಂಡ್‌ಗಳು, ವಿನ್ಯಾಸಕರು ಮತ್ತು ಗ್ರಾಹಕರು ತಮ್ಮ ಆಯ್ಕೆಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಅಲ್ಲದೇ ಅನೇಕರು ಪರಿಸರ ಅಥವಾ ಸಾಮಾಜಿಕ ಮತ್ತು ಮಾನವೀಯ ಸುಲಭಮಾರ್ಗಗಳಿಂದ ಕಳಂಕಿತವಾಗಿ ಉತ್ಪಾದನೆಗೊಳ್ಳುವ ಬಟ್ಟೆಗಳಿಂದ ದೂರ ಉಳಿಯುತ್ತಿದ್ದಾರೆ.


ಮರುಬಳಕೆಯ ನೂಲುಗಳು ಹೆಚ್ಚು ಪ್ರಭಲವಾದುದಲ್ಲ ಹಾಗೂ ಭಾರತದಲ್ಲಿ, ಅವುಗಳನ್ನು ಹೆಚ್ಚಾಗಿ ಹೆಣಿಗೆಗಾಗಿ ಮಾತ್ರ ಬಳಸಲಾಗುತ್ತದೆ. ಕೆಲವು ಮರುಬಳಕೆಯ ಪಾಲಿಸ್ಟರ್ ನೂಲುಗಳನ್ನು ವಿದ್ಯುತ್ ಮಗ್ಗಗಳಿಂದ ನೇಯಲಾಗುತ್ತದೆ. ಅದರಿಂದ ತಯಾರಿಸಿದ ಬಟ್ಟೆಯು 100% ಪಾಲಿಸ್ಟರ್ ಆಗಿದ್ದು ತೇವಾಂಶ ಹೀರಿಕೊಳ್ಳುವಿಕೆಯು ಕಡಿಮೆ ಇರುವುದರಿಂದ ಉಡುಪುಗಳಿಗೆ ಸೂಕ್ತವಾಗಿರುವುದಿಲ್ಲ.


"ಮರುಬಳಕೆಯ ನೂಲುಗಳ ನೇಯ್ಗೆ ಸಾಮರ್ಥ್ಯವು ಅತ್ಯಂತ ಕಡಿಮೆಯಿದೆ. ಆರಂಭದಲ್ಲಿ ನಾವು ಅತ್ಯಂತ ಕಡಿಮೆ ಶಕ್ತಿ, ಅತಿಯಾದ ಪಿಲ್ಲಿಂಗ್, ಶೆಡ್ ತೆರೆಯದಿರುವುದು ಮತ್ತು ಹಲವಾರು ಒಡೆಯುವಿಕೆಯ ಸಮಸ್ಯೆಗಳನ್ನು ಎದುರಿಸಿದ್ದೇವೆ” ಎಂದು ನಂದಿತಾ ನೆನಪಿಸಿಕೊಳ್ಳುತ್ತಾರೆ.




ಇಲ್ಲಿ ವಿಭಿನ್ನ ರೀತಿಯ ಮಗ್ಗಗಳನ್ನು ಹೊಂದಿರುವುದು ವಿಭಿನ್ನ ನೇಯ್ಗೆ ವಿಧಾನಗಳನ್ನು ಅನ್ವೇಷಿಸಲು ಸಹಾಯ ಮಾಡಿತು. ಹಲವು ತಿಂಗಳುಗಳ ಪ್ರಯೋಗಗಳ ಅಂತಿಮ ಫಲವಾಗಿ, ಅವರು ಮರುಬಳಕೆಯ ನೂಲುಗಳಿಗಾಗಿ ಅತ್ಯುತ್ತಮವಾದ ವಿಧಾನವನ್ನು ಕಂಡುಕೊಂಡು, ನೇಕಾರರು ವಿವಿಧ ವರ್ಗದ ಮರುಬಳಕೆಯ ನೂಲುಗಳನ್ನು ನೇಯ್ಗೆ ಮಾಡಲು ಪ್ರಯತ್ನಿಸಿದರು. ಹೀಗೆ ವಿವಿಧ ರೀತಿಯ ಬಟ್ಟೆಗಳನ್ನು ತಯಾರಿಸಲು ಮರುಬಳಕೆಯ ನೂಲುಗಳ ಎಲ್ಲಾ ರೀತಿಯ ಸಂಯೋಜನೆಗಳನ್ನು‌‌ ಒಳಗೊಂಡ ಗ್ರಂಥಾಲಯವನ್ನು ಕೂಡ ರಚಿಸಿದರು. ಅಲ್ಲದೇ ಅವರು ಸುತ್ತಲು ಬಳಸುವ ರೇಷ್ಮೆ ಅಥವಾ ಹತ್ತಿಯಂತಹ ಹೊಸ ನೂಲುಗಳನ್ನು ಹಾಸುಗಳಾಗಿ ಮತ್ತು ಕಡಿಮೆ-ಸಾಮರ್ಥ್ಯದ ಮರುಬಳಕೆಯ ನೂಲುಗಳನ್ನು ಹೊಕ್ಕುಗಳಾಗಿ (ಗಂಟುಗಳು) ಬಳಸಿ ಉತ್ತಮ ದರ್ಜೆಯ ಬಟ್ಟೆಗಳನ್ನು ತಯಾರಿಸಿದರು.


10 ಕೈಮಗ್ಗಗಳ ಸೌಲಭ್ಯಗಳೊಂದಿಗೆ ಖಲೂಮ್ ಪ್ರಸ್ತುತ ತಿಂಗಳಿಗೆ 1,500-2,000 ಮೀಟರ್‌ ಬಟ್ಟೆಯನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

ಸ್ವಾಗತಾರ್ಹ

ಭಾರತವು ಖಾದಿ ಉತ್ಪನ್ನಗಳನ್ನು ಬಳಸುವ ಪರಂಪರೆಯನ್ನು ಹೊಂದಿದ್ದರು, ವಿದ್ಯುತ್ ಮಗ್ಗಗಳು ಮತ್ತು ಯಂತ್ರ ತಯಾರಿಸಿದ ಉತ್ಪನ್ನಗಳ ಯುಗದಲ್ಲಿ ಕೈಯಿಂದ ನೇಯ್ದ ಮತ್ತು ಕೈಮಗ್ಗ ಉತ್ಪನ್ನಗಳ ಬಳಕೆ ತುಂಬಾ ಕಡಿಮೆಯಾಗಿದೆ.


ಮರುಬಳಕೆಯ ಕೈಮಗ್ಗ ಉತ್ಪನ್ನಗಳ ಮಾರಾಟಕ್ಕೆ ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆಗಳು ಕೇಳಿಬಂದಿವೆ. ಅವರು ಬಟ್ಟೆಯು ಗುಣಮಟ್ಟದ, ನಿಖರತೆ ಬಗ್ಗೆ ನಿಯಾತಾಂಕಗಳನ್ನು ನೀಡಲು ಸಂಶಯ ವ್ಯಕ್ತ ಪಡಿಸುತ್ತಾರೆ. ಹಾಗಾಗಿ ಮರುಬಳಕೆಯ ಕೈಮಗ್ಗದ ಬಟ್ಟೆಗೆ ಇನ್ನೂ ಯಾವುದೇ ಪ್ರಮಾಣಿತ ನಿಯತಾಂಕಗಳಿಲ್ಲವಾದರೂ, ಖಲೂಮ್ ತನ್ನ ಬಟ್ಟೆಯನ್ನು ಪ್ರಸ್ತುತ ವಿದ್ಯುತ್ ಮಗ್ಗದ ವರ್ಜಿನ್ ಬಟ್ಟೆಗೆ ಹೋಲಿಸಿ ಗುಣಮಟ್ಟವನ್ನು ಪರಿಶೀಲಿಸುತ್ತದೆ.


ಪ್ರಸ್ತುತ ಉದ್ಯಮವನ್ನು ವೃದ್ಧಿಸುವುದು ಖಲೂಮ್‌ಗೆ ಒಂದು ಪ್ರಮುಖ ಸವಾಲಾಗಿದೆ, ಏಕೆಂದರೆ ಸುಸ್ಥಿರತೆಯಲ್ಲಿ ಆಸಕ್ತಿ ಹೊಂದಿರುವ ಬ್ರ್ಯಾಂಡ್‌ಗಳಿಗೆ ಸ್ಟಾರ್ಟ್‌ ಅಪ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಬಟ್ಟೆಯ ಅವಶ್ಯಕತೆಯನ್ನು ಹೊಂದಿರುತ್ತವೆ. ಆದ್ದರಿಂದ, ಇದು ಚಿಲ್ಲರೆ ಮತ್ತು ಸಗಟು ವ್ಯಾಪಾರಿ ಅಂಗಡಿಯಲ್ಲಿ ಮಾತ್ರ ಮಾರಾಟವಾಗುತ್ತಿವೆ.


“ನಾವು ಸಾಕಷ್ಟು ಮರುಬಳಕೆಯ ಬಟ್ಟೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಲು, ವಿಸ್ತರಿಸಲು, ಲಾಭದಾಯಕವಾಗಲು ಮತ್ತು ಹೆಚ್ಚಿನ ಜನರನ್ನು ನೇಮಿಸಿಕೊಳ್ಳಲು ಬಯಸುತ್ತೇವೆ. ಆದರೆ ಪ್ರತಿಯೊಂದು ಅಂಶದಲ್ಲೂ ಹೊಸ ಬಟ್ಟೆಯಷ್ಟೇ ಉತ್ತಮವಾದ ಬಟ್ಟೆಯನ್ನು ತಯಾರಿಸುವುದು ನಮ್ಮ ದೀರ್ಘಾವಧಿಯ ಗುರಿಯಾಗಿದೆ” ಎಂದು ನಂದಿತಾ ವಿವರಿಸಿದರು.


ಪ್ರಸ್ತುತದಲ್ಲಿ ಅವರ ಹೊಸ ಪ್ರಯತ್ನವು ಜವಳಿ ಕ್ಷೇತ್ರದಲ್ಲಿ ಇತರರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಜವಳಿಗಳನ್ನು ಮರುಬಳಕೆ ಮಾಡಲು ಸಹಾಯ ಮಾಡುತ್ತದೆ ಎಂದು‌ ನಂದಿತಾ ಹಾಗೂ ರಾಮ್ ನಂಬಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.