ಸೆರೆಬ್ರಲ್ ಪಾಲ್ಸಿಯನ್ನು ಸೋಲಿಸಿ ನ್ಯಾಯಾಧೀಶರಾದ ಪುಣೆ ವಕೀಲರು

ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿನಿಂದ ಬಳಲುತ್ತಿದ್ದ ನಿಖಿಲ್ ಪ್ರಸಾದ ಬಾಜಿ ಅವರು ಈ ವರ್ಷದ ಡಿಸೆಂಬರ್‌ನಲ್ಲಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ಮತ್ತು ಸಿವಿಲ್ ಜಡ್ಜ್ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನ್ಯಾಯಾಧೀಶರಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಸೆರೆಬ್ರಲ್ ಪಾಲ್ಸಿಯನ್ನು ಸೋಲಿಸಿ ನ್ಯಾಯಾಧೀಶರಾದ ಪುಣೆ ವಕೀಲರು

Thursday January 09, 2020,

2 min Read

ಮನಸಿದ್ದರೆ ಮಾರ್ಗ ಎನ್ನುವಂತೆ ೩೧ ವರ್ಷದ ನಿಖಿಲ್ ಪ್ರಸಾದ ಬಾಜಿ ಅವರು ತಮ್ಮಲ್ಲಿನ ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರಮದಿಂದ ಸೆರೆಬ್ರಲ್ ಪಾಲ್ಸಿಯನ್ನು ಸೋಲಿಸಿ ನ್ಯಾಯಾಧೀಶರ ಹುದ್ದೆ ಅಲಂಕರಿಸಿದ್ದಾರೆ.

ಏನಿದು ಸೆರೆಬ್ರಲ್ ಪಾಲ್ಸಿ?

ಸೆರೆಬ್ರಲ್ ಪಾಲ್ಸಿ ನರಮಂಡಲಕ್ಕೆ ಸಂಬಂಧಿತ ಖಾಯಿಲೆಯಾಗಿದ್ದು, ಮಗುವಿನ ಮಿದುಳು ಅಭಿವೃದ್ಧಿ ಹಂತದಲ್ಲಿರುವಾಗ ಆಗುವ ಗಾಯ ಅಥವಾ ಮಿದುಳಿನ ಅಸಮರ್ಪಕ ರಚನೆಯಿಂದ ಉಂಟಾಗುತ್ತದೆ. ದೇಹದ ಚಲನೆ, ಮಾಂಸಖಂಡದ ನಿಯಂತ್ರಣ ಮತ್ತು ಸಂರಚನೆ, ಮತ್ತು ದೇಹದ ಭಾಗಗಳ ಸಮತೋಲನದ ಮೇಲೆ ಇದು ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ದೀರ್ಘಕಾಲದ ಅಸ್ವಸ್ಥತೆಗಳಲ್ಲಿ ಇದೂ ಒಂದು.


ನಿಖಿಲ್ ಪ್ರಸಾದ ಬಾಜಿ (ಚಿತ್ರಕೃಪೆ: ಎನ್‌ಡಿಟಿವಿ)


ನಿಖಿಲ ಅವರ ಕುಟುಂಬವು ಅವರನ್ನು ಸಾಮಾನ್ಯ ಬಾಲಕನ ಹಾಗೆ ಪೋಷಿಸಿ, ಅವರ ಖಾಯಿಲೆಯ ಕಾರಣದಿಂದ ಅವರು ವಿಭಿನ್ನ ಎನ್ನುವ ಭಾವನೆ ಬರದಂತೆ ಎಲ್ಲರ ಹಾಗೆಯೆ ಅವರನ್ನು ಬೆಳೆಸಿದ್ದಾರೆ.


ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ನಿಖಿಲ,


“ನನ್ನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ವಿಭಿನ್ನ ಸಾಮರ್ಥ್ಯದ ಮಗುವಾಗಿದ್ದಾಗಲೂ, ಸಾಮಾನ್ಯ ಶಾಲೆಗೆ ಹೋಗುವ ಮಕ್ಕಳೊಂದಿಗೆ ನನ್ನನ್ನು ಸಾಮಾನ್ಯ ಶಾಲೆಗೆ ಸೇರಿಸಲಾಯಿತು ಮತ್ತು ಇದು ನನ್ನ ಆತ್ಮವಿಶ್ವಾಸಕ್ಕೆ ಅಪಾರ ಕೊಡುಗೆ ನೀಡಿತು. ವಿಶೇಷ ಅಗತ್ಯಗಳನ್ನು ಹೊಂದಿರುವ ವಿಶೇಷ ಮಗು ಎನ್ನುವ ಭಾವನೆ ಬರದಂತೆ ಎಲ್ಲರು ನನ್ನನು ಸಾಮಾನ್ಯನಂತೆ ನೋಡಿಕೊಂಡರು,” ಎನ್ನುತ್ತಾರೆ.


ಯಾವಾಗಲು ನಗುನಗುತ್ತಾ ಆತ್ಮವಿಶ್ವಾಸದಿಂದ ಇರುವ ನಿಖಿಲ ಮುಂದುವರಿದು ಮಾತನಾಡುತ್ತಾ,


"ಕನಿಷ್ಠ ದೈಹಿಕ ಚಲನೆಯೊಂದಿಗೆ ಸಂಪೂರ್ಣವಾಗಿ ನಾನು ಆಟದಲ್ಲಿ ತೊಡಗಿಸಿಕೊಳ್ಳಲಾಗದಿದ್ದರು ಸಹ, ನಾನು ಪ್ರತಿ ದೈಹಿಕ ತರಬೇತಿ ಅವಧಿಯಲ್ಲಿ ಭಾಗವಹಿಸುತ್ತಿದ್ದೆ. ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ, ನನಗೂ ಆಟವಾಡಲು ಮನಸಾಯಿತು ಆದರೆ ಅಂಗವೈಕಲ್ಯದಿಂದಾಗಿ ನನಗೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಅಂಪೈರ್ ಆಗಲು ನಿರ್ಧರಿಸಿದೆ ಮತ್ತು ನಾನು ಆಡಲು ಸಾಧ್ಯವಾಗದಿದ್ದರೂ ನಾನು ಉತ್ತಮ ಅಂಪೈರ್ ಆಗಬಹುದು ಎಂದು ನಿರ್ಧರಿಸಿದೆ,” ಎನ್ನುತ್ತಾರೆ.



ಹನ್ನೆರಡನೆಯ ತರಗತಿಯ ನಂತರ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT)ಯಲ್ಲಿ ಉತ್ತೀರ್ಣರಾಗಿ ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಜಿಎನ್‌ಎಲ್‌ಯು) ಸೇರಿಕೊಂಡು ತಮ್ಮ ಪದವಿಯನ್ನು ಪೂರೈಸಿದರು. ನಂತರ ಸಾಲ ಮರುಪಡೆಯುವಿಕೆ ನ್ಯಾಯಮಂಡಳಿಯಲ್ಲಿ ಕೆಲಸ ಆರಂಭಿಸಿದರು. ಯಾವಾಗಲು ನ್ಯಾಯಾಧೀಶರಾಗಲು ಬಯಸಿದ್ದ ಅವರು ಕೆಲಸ ಮಾಡುತ್ತಲೇ ಸಿವಿಲ್ ಜಡ್ಜ್ ಜೂನಿಯರ್ ವಿಭಾಗದ ಪರೀಕ್ಷೆಯ ಅಭ್ಯಾಸವನ್ನು ಆರಂಭಿಸಿ ಅದರಲ್ಲಿ ಉತ್ತೀರ್ಣರಾದರು ಕೂಡ.


ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಅವರು,


“ನಾನು ಪ್ರತಿದಿನ ಮೂರು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ನಾನು ಟ್ರಿಬ್ಯೂನಲ್‌ನಲ್ಲಿ ಕೆಲಸ ಮಾಡುತ್ತಿರುವುದರಿಂದ, ಹೊಸಬರಿಗಿಂತ ಕಾನೂನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅದು ನನಗೆ ಸಹಾಯ ಮಾಡಿತು. ಖಂಡಿತವಾಗಿಯೂ ಪರೀಕ್ಷೆಯಲ್ಲಿ ನನಗೆ ಇದರ ಸಹಾಯ ಅಪಾರವಾದದ್ದು,” ಎನ್ನುತ್ತಾರೆ.


ಜೀವನದಲ್ಲಿ ಯಾವುದೇ ತೊಂದರೆಗಳು ಬಂದರು ಎದೆಗುಂದದೆ ಛಲಬಿಡದೆ ಅವುಗಳನ್ನು ಎದುರಿಸಬೇಕು ನಮ್ಮನ್ನು ನಾವು ಯಾವಾಗಲು ಸಕಾರಾತ್ಮಕ ದೃಷಿಕೋನಗಳಿಂದ ತುಂಬಿಕೊಳ್ಳಬೇಕು ಇದರಿಂದ ನಾವು ಯಂತಹ ಕಠಿಣ ಗುರಿಗಳನ್ನು ತಲುಪಬಹುದು ಎನ್ನುವುದು ಅವರ ಭಾವನೆ.


“ನಾನು ಹುದ್ದೆಗೆ ಆಯ್ಕೆಯಾಗಿರುವುದು ನನಗೆ ಸಂತಸ ತಂದಿದೆ. ಹುದ್ದೆಗೆ ನ್ಯಾಯ ಒದಗಿಸಲು ನಮ್ಮ ಮೇಲೆ ಸವಾಲುಗಳು ಮತ್ತು ಜವಾಬ್ದಾರಿಗಳಿವೆ. ನ್ಯಾಯಾಂಗವು ಯಾವಾಗಲು ತನ್ನ ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಅದಕ್ಕೆ ನಾನು ಯಾವುದೇ ದಕ್ಕೆ ಬರದಂತೆ ಅದರ ಗೌರವವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತೇನೆ,” ಎಂದು ಅವರು ಇಂಡಿಯನ್ ಎಕ್ಸ್ಪ್ರೆಸ್ ಹೇಳಿದರು.


ಇವರ ಸಾಧನೆಯ ಎಲ್ಲರಿಗೂ ಸ್ಪೂರ್ತಿಯಾಗಲಿ ಮತ್ತು ಜನರು ಇವರಿಂದ ಪ್ರೇರಿತರಾಗಿ ತಮ್ಮ ಗುರಿಗಳನ್ನು ಮುಟ್ಟುವಂತಾಗಲಿ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.