ಕಾರಿನಲ್ಲಿ ಮಗುವು ಸಿಕ್ಕಿಹಾಕಿಕೊಂಡರೆ ಶಬ್ದ ಮಾಡುವ ಸೆನ್ಸರ್ ಕಂಡುಹಿಡಿದ ಸಂಶೋಧಕರು

ಚಿಕ್ಕ ಮಕ್ಕಳು ಆಥವಾ ಸಾಕುಪ್ರಾಣಿಗಳು ಕಾರಿನೊಳಗೆ ಒಂಟಿಯಾಗಿ ಉಳಿದುಹೋದರೆ, ಅವನ್ನು ಉಳಿಸುವದಕ್ಕೆಂದು ನವ್ಯ ಮಾದರಿಯ, ಕಡಿಮೆ ವೆಚ್ಚದ ಕೃತಕ ಬುದ್ಧಿಮತ್ತೆ ಉಪಯೋಗಿಸಿ ಸೆನ್ಸರ್‌ ತಯಾರಿಸಲಾಗಿದೆ ಎಂದು ಸೋಮವಾರ ವಿಜ್ಞಾನಿಗಳು ತಿಳಿಸಿದ್ದಾರೆ.

ಕಾರಿನಲ್ಲಿ ಮಗುವು ಸಿಕ್ಕಿಹಾಕಿಕೊಂಡರೆ ಶಬ್ದ ಮಾಡುವ ಸೆನ್ಸರ್ ಕಂಡುಹಿಡಿದ ಸಂಶೋಧಕರು

Wednesday November 13, 2019,

2 min Read

ವಾಟರ್‌ಲೂ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಈ ಸೆನ್ಸಾರ್ ರಡಾರ್ ತಂತ್ರಜ್ಞಾನದೊಂದಿಗೆ ಎಐ ಜೊತೆಗೂಡಿ, ಕಾರಿನಲ್ಲಿ ಗಮನಿಸದೆ ಹಾಗೆ ಬಿಟ್ಟುಹೋದ ಮಕ್ಕಳನ್ನು ಅಥವಾ ಪ್ರಾಣಿಗಳನ್ನು ಸುಲಭವಾಗಿ ಹಾಗೂ ನೂರು ಪ್ರತಿಶತದಷ್ಟು ನಿಖರವಾಗಿ ಪತ್ತೆ ಮಾಡುತ್ತದೆ.


ಮೂರು ಸೆಂ. ಮೀ. ವ್ಯಾಸದ ಈ ಸಾಧನವು ಅಂಗೈಯಲ್ಲಿ ಕೂರಬಹುದಾದಷ್ಟು ಚಿಕ್ಕದಾಗಿದ್ದು, ಅದನ್ನು ಸೀಲಿಂಗ್ ಅಥವಾ ಹಿಂಬದಿ ವೀಕ್ಷಣಾ ಕನ್ನಡಿಯಲ್ಲಿ ಅಳವಡಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದರು.


ಈ ತಂತ್ರಜ್ಞಾನ ವ್ಯವಸ್ಥೆಯು ಮನುಷ್ಯರನ್ನು, ವಸ್ತುಗಳನ್ನು ಹಾಗೂ ಪ್ರಾಣಿಗಳನ್ನು ತಲುಪಿ ಪ್ರತಿಫಲಿಸುವ ರಡಾರ್ ಸಿಗ್ನಲ್‌ಗಳನ್ನು ಹೊರಬಿಡುತ್ತದೆ. ಪ್ರತಿಫಲಿಸಿದ ಸಿಗ್ನಲ್‌ಗಳನ್ನು ಸಾಧನದಲ್ಲಿರುವ ಕೃತಕ ಬುದ್ಧಿಮತ್ತೆಯು ವಿಷ್ಲೇಶಿಸುತ್ತದೆ.


“ಇದು ಪ್ರಪಂಚದ ಒಂದು ಗಂಭೀರ ಸಮಸ್ಯೆಯನ್ನು ಸರಿ ಮಾಡಬಲ್ಲದು. ಮುಂದಿನ ದಿನಗಳಲ್ಲಿ ಈ ಸಾಧನವು ಎಲ್ಲಾ ವಾಹನಗಳಲ್ಲಿ ಸಾಮಾನ್ಯವಾಗಬಹುದು” ಎನ್ನುತ್ತಾರೆ ವಾಟರ್‌ಲೂನ ಇಂಜಿನಿಯರಿಂಗ್ ಪ್ರೊಫೆಸರ್ ಜಾರ್ಜ್ ಶಾಕರ್‌


ನಿಸ್ತಂತು, ವೃತ್ತ-ಆಕಾರದ ಸಂವೇದಕದ/ಸೆನ್ಸಾರ್ ‌ನ ಅಭಿವೃದ್ಧಿಗೆ ಆಟೋಮೋಟಿವ್ ಪಾರ್ಟ್ಸ್ ತಯಾರಕರೊಬ್ಬರು ಭಾಗಶಃ ಹಣ ನೀಡಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ, ಆಟೋಮೋಟಿವ್ ಸಂಸ್ಥೆಯು 2020 ರ ಅಂತ್ಯದ ವೇಳೆಗೆ ಅದನ್ನು ಮಾರುಕಟ್ಟೆಗೆ ತರುವ ಗುರಿಯನ್ನು ಹೊಂದಿದೆ.


ಸಾಧನವು ವಾಹನದಲ್ಲಿ ಕುಳಿತಿರುವವರ ಸಂಖ್ಯೆ ಮತ್ತು ಅವರ ಸ್ಥಳಗಳನ್ನು ವಿಶ್ಲೇಷಣೆ ಮಾಡಿ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.


ಆ ಮಾಹಿತಿಯನ್ನು ರೈಡ್-ಶೇರಿಂಗ್ ಸೇವೆಗಳು ಮತ್ತು ಟೋಲ್ ರಸ್ತೆಗಳಿಗೆ ದರಗಳನ್ನು ನಿಗದಿಪಡಿಸಲು ಅಥವಾ ಕಾರ್-ಪೂಲ್ ಲೇನ್‌ಗಳಿಗೆ ವಾಹನಗಳನ್ನು ಅರ್ಹಗೊಳಿಸಲು ಬಳಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.


ಆದಾಗ್ಯೂ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ವಾಹನದಲ್ಲಿ ಬಿಟ್ಟುಹೋದಾಗ ಅದನ್ನು ಕಂಡುಹಿಡಿಯುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ, ಈ ಸನ್ನಿವೇಶವು ಅತ್ಯಂತ ಬಿಸಿ ಉಷ್ಣ ಅಥವಾ ಶೀತ ವಾತಾವರಣದಲ್ಲಿ ಗಂಭೀರ ಹಾನಿ ಅಥವಾ ಸಾವಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು.


ಅಂತಹ ಸಂದರ್ಭಗಳಲ್ಲಿ, ವ್ಯವಸ್ಥೆಯು ವಾಹನದ ಬಾಗಿಲುಗಳನ್ನು ಲಾಕ್ ಆಗುವುದನ್ನು ತಡೆಯುತ್ತದೆ ಮತ್ತು ಸಮಸ್ಯೆ ಇದೆ ಎಂದು ಚಾಲಕ, ಪ್ರಯಾಣಿಕರು ಮತ್ತು ಪ್ರದೇಶದ ಇತರ ಜನರನ್ನು ಎಚ್ಚರಿಸಲು ಎಚ್ಚರಿಕೆಯ ಶಬ್ದವನ್ನು ನೀಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.


"ಕ್ಯಾಮೆರಾಗಳಿಗಿಂತ ಭಿನ್ನವಾಗಿ, ಈ ಸಾಧನವು ಗೌಪ್ಯತೆಯನ್ನು ಕಾಪಾಡುತ್ತದೆ ಮತ್ತು ಇದು ಯಾವುದೇ ತಪ್ಪು ಮಾಹಿತಿ ನೀಡುವುದಿಲ್ಲ ಏಕೆಂದರೆ ರಡಾರ್ ಆಸನಗಳನ್ನು ದಾಟಿ, ಅದರ ಹಿಂದಿನ ವಸ್ತುಗಳನ್ನು ಗುರುತಿಸುತ್ತದೆ. ಉದಾಹರಣೆಗೆ, ಹಿಂಭಾಗದ ಮುಖದ ಕಾರ್ ಸೀಟಿನಲ್ಲಿ ಶಿಶು ಇದೆಯೇ ಎಂದು ನಿರ್ಧರಿಸುತ್ತದೆ" ಎಂದು ಶಾಕರ್ ಹೇಳಿದರು.


ವಾಹನದ ಬ್ಯಾಟರಿಯ ಸಹಾಯದಿಂದ ಚಲಿಸುವ ಕಡಿಮೆ-ಶಕ್ತಿಯ ಈ ಸಾಧನವು ಸೂಕ್ಷ್ಮ ಉಸಿರಾಟದ ಚಲನೆಯನ್ನು ಪತ್ತೆಹಚ್ಚುವ ಮೂಲಕ ಜೀವಿಗಳು ಮತ್ತು ನಿರ್ಜೀವ ವಸ್ತುಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಸಂಶೋಧಕರು ವಿವರಿಸಿದರು.


ಚಾಲಕ ಆರೋಗ್ಯವಾಗಿದ್ದಾನೆಯೇ? ಅವನಿಗೆ ಆಯಾಸ, ವ್ಯಾಕುಲತೆ, ದೌರ್ಬಲ್ಯ, ಅನಾರೋಗ್ಯ ಅಥವಾ ಇತರ ಸಮಸ್ಯೆಗಳಿದ್ದಾವೆಯೇ ಎಂಬ ಸೂಚನೆಗಳಿಗಾಗಿ ಚಾಲಕರ ಪ್ರಮುಖ ಚಿಹ್ನೆಗಳನ್ನು ಮೇಲ್ವಿಚಾರಣೆ ಮಾಡಲು ಸಾಧನದ ಸಾಮರ್ಥ್ಯವನ್ನು ಬಳಸಬಹುದೇ ಎಂಬುದರ ಕುರಿತು ಅವರು ಈಗ ಅನ್ವೇಷಿಸುತ್ತಿದ್ದಾರೆ.