ಸಾವಿನ ಮನೆಯಲ್ಲಿ ಸಾಮಾಜಿಕ ಪ್ರಜ್ಞೆ ಮೆರೆದ ಮಹೇಂದ್ರ ದೀಕ್ಷಿತ್

ರಸ್ತೆ ಅಪಘಾತದಲ್ಲಿ ಪ್ರಾಣಕಳೆದುಕೊಂಡ ತಮ್ಮ 25 ವರ್ಷದ ಮಗ ಲಕ್ಕಿ ದೀಕ್ಷಿತ್ ಅವರ ಸಂತಾಪ ಸಭೆಯಲ್ಲಿ, ತಮ್ಮ ಮಗನಿಗಾದ ಸಾವು ಇನ್ನಾರಿಗೂ ಬಾರದಿರಲಿ ಎಂದು, ಉಚಿತವಾಗಿ ಹೆಲ್ಮೆಟ್ ಹಂಚುವ ಕಾಯಕದಲ್ಲಿ ತೊಡಗಿದ್ದಾರೆ, ಮಧ್ಯಪ್ರದೇಶದ ಮಹೇಂದ್ರ ದೀಕ್ಷಿತ್.

ಸಾವಿನ ಮನೆಯಲ್ಲಿ ಸಾಮಾಜಿಕ ಪ್ರಜ್ಞೆ ಮೆರೆದ ಮಹೇಂದ್ರ ದೀಕ್ಷಿತ್

Wednesday December 11, 2019,

2 min Read

ಬದುಕು ಕೆಲವೊಮ್ಮೆ ನೀಡುವ ತಿರುವು ಮಹತ್ವದ್ದಾಗಿರುತ್ತದೆ. ಕೆಲವೊಂದು ತಿರುವುಗಳು ಘಟನೆಗಳು ನಮ್ಮ ಜೀವನದ ಮೇಲೆ ಮಹತ್ತರ ಪ್ರಭಾವನ್ನು ಬೀರುವುದು ಸುಳ್ಳಲ್ಲಾ. ತನ್ನ ಗರ್ಭಿಣಿ ಪತ್ನಿ ಬೆಟ್ಟದಿಂದ ಬಿದ್ದು ಪ್ರಾಣ ಬಿಟ್ಟ ಘಟನೆ, ದಶರಥ್ ಮಾಂಜಿ ಊರ ನಡುವಿನ ಬೆಟ್ಟವನ್ನೇ ಕೊರೆದು ವಾಸಿರ್ ಗಂಜ್ ಮತ್ತು ಗೆಹಲೋರ್ ಘಾಟ್ ನಡುವೆ ದಾರಿ ನಿರ್ಮಿಸುವಂತೆ ಮಾಡಿತು. ರಸ್ತೆ ಅಪಘಾತದಲ್ಲಿ ಮೃತಪಟ್ಟ ತಮ್ಮ ಮಗಳ ಹೆಸರಿನಲ್ಲೇ ಶುರುವಾದ ಅರುಂಧತಿ ಫೌಂಡೇಶನ್‌, ಜನರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿದೆ.


ಇಂತಹದ್ದೇ ಒಂದು ಸ್ಫೂರ್ತಿದಾಯಕ ಕತೆ ಮಹೇಂದ್ರ ದೀಕ್ಷಿತ್ ಅವರದ್ದು. ರಸ್ತೆ ಅಪಘಾತದಲ್ಲಿ ಪ್ರಾಣಕಳೆದುಕೊಂಡ ತಮ್ಮ 25 ವರ್ಷದ ಮಗ ಲಕ್ಕಿ ದೀಕ್ಷಿತ್ ಅವರ ಸಂತಾಪ ಸಭೆಯಲ್ಲಿ, ತಮ್ಮ ಮಗನಿಗಾದ ಸಾವು ಇನ್ನಾರಿಗೂ ಬಾರದಿರಲಿ ಎಂದು, ಉಚಿತವಾಗಿ ಹೆಲ್ಮೆಟ್ ಹಂಚುವ ಕಾಯಕದಲ್ಲಿ ತೊಡಗಿದ್ದಾರೆ ಮಧ್ಯಪ್ರದೇಶದ ಮಹೇಂದ್ರ ದೀಕ್ಷಿತ್.


ಹೆಲ್ಮೆಟ್ ವಿತರಿಸುತ್ತಿರುವ ಮಹೇಂದ್ರ ದೀಕ್ಷಿತ್ (ಚಿತ್ರ ಕೃಪೆ: ಇಂಡಿಯಾ ಟುಡೇ)


ಭಾರತ ಸರಕಾರದ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಮೀಕ್ಷೆ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ಗಂಟೆಗೆ 17 ಜನ ರಸ್ತೆ ಅಪಘಾತದಲ್ಲಿ ಮರಣಹೊಂದುತ್ತಾರೆ. ಇದರಲ್ಲಿ ಶೇಕಡ 24.3 ರಷ್ಟು ಜನ ಮೃತರಾಗುವುದು ಹೆಲ್ಮೆಟ್ ರಹಿತ ವಾಹನ ಚಲಾಯಿಸುವುದರಿಂದ.


25 ವರ್ಷದ ತರುಣ ಲಕ್ಕಿ ದೀಕ್ಷಿತ್ ನವೆಂಬರ್ 23 ರಂದು ಹೆಲ್ಮೆಟ್ ಧರಿಸದೆ ವಾಹನ ಚಾಲಾಯಿಸುತ್ತಿದ್ದರು, ರಸ್ತೆಯಲ್ಲಿ ಅಡ್ಡವಾಗಿ ಬಂದ ಪ್ರಾಣಿಯನ್ನು ತಪ್ಪಿಸುವ ಭರದಲ್ಲಿ ಲಕ್ಕಿ ಅವರ ಬೈಕ್ ಸ್ಕಿಡ್ ತಲೆಗೆ ಪೆಟ್ಟಾದ ಕಾರಣ ಅಸುನೀಗಿದರು, ವರದಿ, ಇಂಡಿಯಾ ಟುಡೇ.


ಈ ಘಟನೆಯಿಂದ ಮನನೊಂದ ಅವರ ತಂದೆ ಮಹೇಂದ್ರ ದೀಕ್ಷಿತ್ ವಯಸ್ಸಿನ ಮಗನನ್ನು ಕಳೆದುಕೊಂಡ ತನ್ನ ನೋವು ಇನ್ನಾವ ತಂದೆಗೂ ಬಾಧಿಸದಿರಲಿ ಎಂದು, ತಮ್ಮ ಮಗನ ಸಂತಾಪ ಸಭೆಯಲ್ಲಿ 18 ವರ್ಷ ಮೇಲ್ಪಟ್ಟ ಸ್ಥಳೀಯ ಯುವಕರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸುವ ಮೂಲಕ ರಸ್ತೆ ಸುರಕ್ಷತೆಗೆ ಕರೆ ನೀಡಿದರು.


ಮಹೇಂದ್ರ ದೀಕ್ಷಿತ್ ಅವರ ಕಾರ್ಯವನ್ನು ಗಮನಿಸಿದ ದಮೋಹ್‌ನ ಜಿಲ್ಲಾಧಿಕಾರಿ ತರುಣ್ ರತಿ ಕೂಡ ಮೆಚ್ಚುಗೆಯ ನುಡಿಗಳನ್ನು ಲಾಜಿಕಲ್ ಇಂಡಿಯಾ ಜೊತೆ ಹಂಚಿಕೊಂಡಿದ್ದಾರೆ.


"ಜನರು ತಮ್ಮ ಸುರಕ್ಷತೆಗಾಗಿ ಸಂಚಾರ ನಿಯಮಗಳನ್ನು ಅನುಸರಿಸಲು ಮಹೇಂದ್ರ ದೀಕ್ಷಿತ್ ಸಲಹೆ ನೀಡುತ್ತಿದ್ದಾರೆ. ಜಾಗೃತಿ ಮೂಡಿಸಲು ಮತ್ತು ಅಪಘಾತಗಳನ್ನು ಕಡಿಮೆ ಮಾಡಲು ಆಡಳಿತ ಮಂಡಳಿಯು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ,” ಎಂದು ಅವರು ಹೇಳಿದರು.


ಇನ್ನಾದ್ರೂ ನಮ್ಮ ಯುವ ಜನಾಂಗ ಎಚ್ಚೆತ್ತು, ರಸ್ತೆ ಸಾರಿಗೆ ನಿಯಮಗಳೆಲ್ಲವನ್ನು ಸರಿಯಾಗಿ ಪಾಲಿಸಿ ಸುರಕ್ಷಿತ, ಪಯಾಣವನ್ನು ಕೈಗೊಳ್ಳಬೇಕು. ಅಂತೆಯೇ ಮಗನ ಸಾವಿನ ನೋವಿನಲ್ಲಿ ಸಾಮಾಜಿಕ ಕಳಕಳಿಯನ್ನು ಮೆರೆದಿರುವ ಮಹೇಂದ್ರ ದೀಕ್ಷಿತ್ ಅವರ ಕಾಳಜಿಯನ್ನು ಅರ್ಥೈಸಿಕೊಂಡು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ ಎಂದು ಆಶಿಸೋಣ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.