ಸಂಕ್ರಾಂತಿ ಸಡಗರದ ಸುತ್ತಮುತ್ತ

ಸೂರ್ಯ ತನ್ನ ಪಥ ಬದಲಿಸಿ ಉತ್ತರಾಯಣಕ್ಕೆ ಅಡಿ ಇಡುವ ಈ ಸಂದರ್ಭದಲ್ಲಿ ನಾಡಿನಾದ್ಯಂತ ರೈತರು ಬೆಳೆದ ಪೈರಿನ್ನು ಮನೆಗೆ ತಂದು ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಧಾರ್ಮಿಕತೆಯೊಂದಿಗೆ ಉತ್ತಮ ಮಾನವತಾವಾದ ಸಂದೇಶವು ಈ ಹಬ್ಬದಲ್ಲಿ ಅಡಕವಾಗಿದೆ.

15th Jan 2020
  • +0
Share on
close
  • +0
Share on
close
Share on
close

ಈ ಚಳಿಗಾಲವೇ ಹೀಗೆ ನೋಡಿ, ಬಿಟ್ಟೆನೆಂದರೂ ಬಿಡದ ಮಾಯೆ. ತಲೆಯಲ್ಲಿ ಅದೆಷ್ಟೇ ಯೋಚನೆ ಯೋಜನೆ, ಇದ್ದರೂ ಮುಂಜಾನೆ ಹೊದಿಕೆ ಸರಿಸಲೂ ಮನಸು ಬಾರದೆ ದೇಹ ಮತ್ತೆ ಮರಗಟ್ಟುತ್ತದೆ. ಜಗತ್ತನ್ನೇ ಬೆಳಗುವ ಸೂರ್ಯನೇ ಸೋಮರಿಯಾಗಿ ನಿದ್ದೆಕಣ್ಣೆಲ್ಲೇ ಏಳುವಾಗ ಇನ್ನು ಅಪ್ಪಟ್ಟ ಸೂರ್ಯವಂಶಸ್ಥರಿಗೆ ತಮ್ಮ ಪಿತಾಮಹನೇ ತಡವಾಗಿ ಏಳುವಾಗ ನಮ್ಮದೇನು ಮಹಾ ಎಂದು ಸ್ವಲ್ಪ ನಿಧಾನವಾಗಿ ಬೆಳಗಾದರೆ ಆಶ್ಚರ್ಯವೇನಿಲ್ಲ ಬಿಡಿ.


ಆದರೆ ಇನ್ನೂ ಮುಂದೆ ನಮ್ಮ ಸೂರ್ಯ ಚುರುಕಾಗಲಿದ್ದಾನೆ, ಬೆಚ್ಚನೆಯ ಚಳಿಗಾಲಕ್ಕೆ ಕಾರಣವಾಗಿದ್ದ ಧನುರ್ ಮಾಸದಿಂದ ಮಕರಮಾಸಕ್ಕೆ ಧಾವಿಸಲು ಸಜ್ಜಾಗಿದ್ದಾನೆ. ಮಕರ ಮಾಸದ ಈ ಅಮೋಘ ಘಳಿಗೆ ಮಕರ ಸಂಕ್ರಾಂತಿ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.


ಲೋಡಿ, ಪೊಂಗಲ್, ಮಾಘ ಬಿಹು, ಸಂಕ್ರಾಂತಿ… ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಕನ್ನಡಿಗರ ಮಕರ ಸಂಕ್ರಾಂತಿಗೆ ತನ್ನದೇ ಆದ ವಿಶೇಷ ಮೇರುಗಿದೆ. ಸೂರ್ಯ ತನ್ನ ಪಥವನ್ನುಬದಲಿಸುವುದು ಖಗೋಳಶಾಸ್ತ್ರದಲ್ಲಿ ಒಂದು ಸಮಾನ್ಯವಿಷಯವಾದರೂ ಅದು ಹವಮಾನದ ಮೇಲೆ ಉಂಟುಮಾಡುವ ಬದಲಾವಣೆ, ಅದರಿಂದ ಉಂಟಾಗುವ ಕೃಷಿ ಚಟುವಟಿಕೆ ಇವೆಲ್ಲವೂ ಈ ಮಕರ ಸಂಕ್ರಾಂತಿಯನ್ನು ಜನಸಾಮಾನ್ಯರ ಹಬ್ಬವಾಗಿಸಿದೆ.


ಕರ್ಕಾಟಕ ಸಂಕ್ರಾಂತಿಯ ನಂತರ ಆರಂಭಗೊಳ್ಳುವ ದಕ್ಷಿಣಾಯನ, ಕೊನೆಗೊಳ್ಳುವುದು ಮಕರ ಸಂಕ್ರಾಂತಿಯಂದೇ. ಉತ್ತರಾಯಣ ಆರಂಭಕೊಳ್ಳುವ ಈ ಸಂದರ್ಭದಲ್ಲಿ ಸೂರ್ಯ ತನ್ನ ಪಥವನ್ನು ಉತ್ತರಕ್ಕೆ ಚಲಿಸಿದಂತೆಲ್ಲಾ, ಹಗಲುಹೆಚ್ಚಿ, ಚಳಿಕಡಿಮೆ ಆಗಿ, ಬಿಸಿಲು ಜಾಸ್ತಿಯಾಗುವುದು. ಇದೆ ಕಾರಣಕ್ಕೆ ಮುಂಬರುವ ಫೆಬ್ರವರಿ, ಮಾರ್ಚ್, ಏಪ್ರಿಲ್ ನಲ್ಲಿ ಹಗಲು ಜಾಸ್ತಿ ಇದ್ದು ಇರುಳು ಕಡಿಮೆಯಾಗುತ್ತದೆ.


ಈ ಉತ್ತರಾಯಣ ಕಾಲಘಟ್ಟವನ್ನು ಪುಣ್ಯಕಾಲ, ಶುಭ ಕಾಲ ಎನ್ನುತ್ತಾರೆ ಮತ್ತು ಈ ಸಮಯದಲ್ಲಿ ಶುಭಕಾರ್ಯಗಳು ಜರುಗಿದರೆ ಮಂಗಳ ಎಂಬ ನಂಬಿಕೆಯೂ ಇದೆ. ಮಹಾಭಾರತದ ಇಚ್ಚಾಮರಣಿ ಭೀಷ್ಮ ಪಿತಾಮಹ ತನ್ನ ಕೋಣೆಯುಸಿರೆಳೆಯಲು ಶರಷ್ಯೆಯೇ ಮೇಲೆ ಕಾಯುತ್ತಿದ್ದು ಇದೆ ಉತ್ತರಾಯಣಕ್ಕೆ.


ಕೃಷಿಯು…. ಸಂಕ್ರಾಂತಿಯೂ….

ಸಂಕ್ರಾಂತಿ ಕೃಷಿಕರ ಹಬ್ಬವೂ ಹೌದು. ಬೆಳೆದ ಪೈರು ಫಲಬಿಟ್ಟು ಬಿಸಿಲಿಗೆ ಬಾಗಿ ಕಟಾವಿಗೆ ಬರುವು ಕಾಲವೇ ಮಕರ ಸಂಕ್ರಾಂತಿಯ ಕಾಲ. ತಮ್ಮ ಇಷ್ಟು ದಿನಗಳ ಶ್ರಮಕ್ಕೆ ಬೆಲೆ ಸಿಗುವ ಹರ್ಷ ಹುಮ್ಮಸ್ಸು ಎಲ್ಲವೂ ರೈತರ ಮುಖದಲ್ಲಿ ಕಾಣಸಿಗುವುದು ಈ ಸಮಯದಲ್ಲೇ. ಆದ್ದರಿಂದ ರೈತಾಪಿ ವರ್ಗ ಈ ಸಂಕ್ರಾಂತಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.


ಎಳ್ಳುಬೆಲ್ಲಾ ತಿಂದು ಒಳ್ಳೆ ಒಳ್ಳೆಯ ಮಾತಾಡೋಣ…

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮೊದಲಾದ ಭಾಗದಲ್ಲಿ ಜನರು ಎಳ್ಳು, ಬೆಲ್ಲ, ಕೊಬ್ಬರಿ, ಹುರಿಗಡಲೆ, ಶೇಂಗಾ ಮೊದಲಾದ ತಿನಿಸುಗಳನ್ನು ಸೇರಿಸಿ, ಪರಸ್ಪರರಿಗೆ ಕೊಟ್ಟು, ಎಳ್ಳುಬೆಲ್ಲಾ ತಿಂದು ಒಳ್ಳೆ ಒಳ್ಳೆಯ ಮಾತಾಡೋಣ ಎಂದು ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುತ್ತಾರೆ.


ಹೆಚ್ಚಿನ ಪ್ರೋಟಿನ್ ಮತ್ತು ದೇಹವನ್ನು ಬೆಚ್ಚಗಿಡುವ ಈ ಎಲ್ಲಾ ಪದಾರ್ಥಗಳು ಆರೋಗ್ಯಕ್ಕೆ ಉತ್ತಮ. ಮನೆಯಲ್ಲಿನ ಪುಟ್ಟ ಮಕ್ಕಳು ಸಂಪ್ರದಾಯಿಕ ಉಡುಗೆ ಉಟ್ಟು ಹರಿವಾಣದಲ್ಲಿ ಎಳ್ಳುಬೆಲ್ಲಾ, ಸಂಕ್ರಾಂತಿ ಕಾಳು, ಸಕ್ಕರೆ ಅಚ್ಚು ಮೊದಲಾದವುಗಳನ್ನು ಇಟ್ಟುಕೊಂಡು ಮನೆ ಮನೆಗೆ ತೆರಳಿ ಎಳ್ಳುಬೆಲ್ಲಾ ಹಂಚಿ ಬರುವ "ಎಳ್ಳೂಬೀರುವ" ಸಂಪ್ರದಾಯ ಸಹ ನಮ್ಮ ನಾಡಿನ ಹಲವೆಡೆಯಲ್ಲಿದೆ.


ಮನೆ ಮಂದಿಯೆಲ್ಲಾ, ಬಗೆ ಬಗೆಯ ರೊಟ್ಟಿ ಪಲ್ಯ ಹೋಳಿಗೆ ಸಿಹಿಯೊಂದಿಗೆ ಬುತ್ತಿಕಟ್ಟಿಕೊಂಡು ತಮ್ಮ ಹೊಲಗಳಿಗೆ ಹೋಗಿ ಊಟಮಾಡುವ ಸಂಭ್ರಮ ನಮ್ಮ ಉತ್ತರಕರ್ನಾಟಕದಲ್ಲಿ ಹೆಸರುವಾಸಿ.


ತಮಿಳರ ಪೊಂಗಲ್

ದಕ್ಷಿಣ ಭಾರತದ ತಿನಿಸುಗಳಲ್ಲಿ ಪ್ರಮುಖವಾದದ್ದು ಪೊಂಗಲ್. ತಮಿಳುನಾಡಿನ ಈ ತಿನಿಸು ಸಂಕ್ರಾಂತಿಯ ವಿಶೇಷವು ಹೌದು. ಹೆಸರು ಬೇಳೆ, ಬೆಲ್ಲಾ, ಕೊಬ್ಬರಿ, ಅಕ್ಕಿ, ಮೊದಲಾದ ಪದಾರ್ಥಗಳ ಮಿಶ್ರಣವೆ ಪೊಂಗಲ್. ಮಕರ ಸಂಕ್ರಾಂತಿಗೆ ತಮಿಳಿಗರು ಕರೆಯುವ ಹೆಸರು ಸಹ ಪೊಂಗಲ್. ಇಲ್ಲಿಯೂ ಕೃಷಿಪ್ರಧಾನ ಹಬ್ಬವಾಗಿದ್ದು, ಈ ಸಮಯದಲ್ಲಿ ಜಲ್ಲಿಕಟ್ಟು ಎಂಬ ಗೂಳಿಯೊಂದಿಗಿನ ಕಾಳಗವನ್ನು ನಡೆಸುತ್ತಾರೆ.


ಮಕರ ಜ್ಯೋತಿ

ಶಬರಿಮಲೆ ಅಯ್ಯಪ್ಪನ ಭಕ್ತರು ಹಲವು ದಿನಗಳಿಂದ ವೃತಾಚಾರಣೆಯಲ್ಲಿ ತೊಡಗಿ, ಕೇರಳದ ಶಬರಿಮಲೆಯ ಅಯ್ಯಪ್ಪನ ದರ್ಶನ ಪಡೆದು, ಮಲೆಯ ವಿರುದ್ಧ ದಿಕ್ಕಿಗೆ ಹೊಮ್ಮಿಬರುವ ಮಕರ ಜ್ಯೋತಿಯನ್ನು ಕಂಡು ಪುನೀತರಾಗುವುದು ಇದೆ ಸಂದರ್ಭದಲ್ಲಿ.


ಕಿಚ್ಚು ಹಾಯಿಸುವುದು

ಸಂಕ್ರಾಂತಿ ಕೃಷಿಪ್ರಧಾನ ಹಬ್ಬವಾದ್ದರಿಂದ ಕೃಷಿಕಾರ್ಯದಲ್ಲಿ ರೈತರ ಸಂಗಾತಿಗಳಾದ ಎತ್ತುಗಳನ್ನು ಸಂಕ್ರಾಂತಿಯ ಸಂದರ್ಭದಲ್ಲಿ ವಿಶೇಷವಾಗಿ ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ. ಹೀಗೆ ಮಾಡುವುದರಿಂದ ಅವುಗಳ ಮೈಗೆ ಕೃಷಿಕೆಲಸದಲ್ಲಿ ತೊಡಗಿಕೊಂಡಾಗ ಹಿಡಿದಿರುವ ಕ್ರಿಮಿಕೀಟಗಳು ನಾಶವಾಗುತ್ತವೆ ಎಂಬ ಭಾವನೆ ಕೂಡಾ ಇದೆ.


ಗಾಳಿಪಟ ಉತ್ಸವ

ಗುಜರಾತ್, ಮಹಾರಾಷ್ಟ್ರ ಮೊದಲಾದ ಭಾಗದಲ್ಲಿ ಜನರು ಸಂಕ್ರಾಂತಿಯ ಸಮಯದಲ್ಲಿ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಬಣ್ಣ ಬಣ್ಣದ ಗಾಳಿಪಟವನ್ನು ಗಗನದೆತ್ತರಕ್ಕೆ ಹಾರಿಬಿಟ್ಟು ಸಂಭ್ರಮಿಸುತ್ತಾರೆ. ಸೂರ್ಯ ತನ್ನ ಪಥವನ್ನು ಬದಲಿಸುವ ಈ ಸಮಯದಲ್ಲಿ ಅವನ ಎಳೆಬಿಸಿಲಿಗೆ ಮೈಯೊಡ್ಡಿಕ್ಕೊಳುವುದು ಆರೋಗ್ಯಕ್ಕೆ ಉತ್ತಮವಾದದ್ದು. ಈ ಹಿನ್ನಲೆಯಲ್ಲಿ ಗಾಳಿಪಟ ಉತ್ಸವ ಕೂಡ ಮಹತ್ವದ್ದಾಗಿದೆ.


ಗಂಗಾ ನದಿ ತಟದಲ್ಲಿ ಪುಣ್ಯಸ್ನಾನ ಹಾಗೂ ಜಪತಪಗಳು ದೇಶದಾದ್ಯಂತ ನಡೆಯುತ್ತವೆ. ಆದರೆ ಸಂಕ್ರಾಂತಿಯ ವಿಶೇಷ ಇರುವುದು ಅದು ರೈತಾಪಿ ವರ್ಗದಲ್ಲಿ ಮೂಡಿಸುವ ಸಂತಸದಲ್ಲಿ. ಜನರಲ್ಲಿ ಸದ್ಭಾವಾನೆ ಬಿತ್ತುವ, ಎಲ್ಲರನ್ನೂ ಒಳಗೊಂಡು ಖುಷಿಯನ್ನು ಹಂಚಿ ಉಣ್ಣುವ ನಾಡಿನ ಹಬ್ಬ ಸಂಕ್ರಾಂತಿ ಮತ್ತೆ ಬಂದಿದೆ, ನಾವೆಲ್ಲರೂ ಎಳ್ಳುಬೆಲ್ಲಾ ತಿಂದು ಒಳ್ಳೆ ಒಳ್ಳೆಯ ಮಾತಾಡೋಣ ಏನಂತೀರಾ…?

  • +0
Share on
close
  • +0
Share on
close
Share on
close

Our Partner Events

Hustle across India