ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಮಲಾಲಾ

ಶುಕ್ರವಾರ ಬ್ರಿಟನ್‌ನ ಪ್ರತಿಷ್ಟಿತ ವಿಶ್ವವಿದ್ಯಾಲಯ ಆಕ್ಸ್‌ಫರ್ಡ್‌ನಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಮಲಾಲಾ ಪದವಿ ಪಡೆದಿದ್ದಾರೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಮಲಾಲಾ

Monday June 22, 2020,

2 min Read

ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಟ ಮಾಡಿ ನೋಬಲ್‌ ಶಾಂತಿ ಪ್ರಶಸ್ತಿ ಪಡೆದ ಮಲಾಲಾ ಯುಸೂಫ್‌ ಝಾಯಿ ಕಳೆದ ಶುಕ್ರವಾರ ಬ್ರಿಟನ್‌ನ ಪ್ರತಿಷ್ಟಿತ ವಿಶ್ವವಿದ್ಯಾಲಯ ಆಕ್ಸ್‌ಫರ್ಡ್‌ನಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ.


ಆಕ್ಸ್‌ಫರ್ಡ್‌ನ ಲೇಡಿ ಮಾರ್ಗರೇಟ್‌ ಹಾಲ್‌ ಕಾಲೇಜಿನಲ್ಲಿ ಓದಿದ 22 ರ ಹರೆಯದ ಮಲಾಲಾ, ತಮ್ಮ ಕುಟುಂಬದೊಂದಿಗೆ ಈ ಸಂತಸವನ್ನು ಹಂಚಿಕೊಳ್ಳುತ್ತಿರುವ ಎರಡು ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೊಸ್ಟ್‌ ಮಾಡಿದ್ದಾರೆ.


“ಆಕ್ಸ್‌ಫರ್ಡ್‌ನಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿರುವುದಕ್ಕೆ ನನಗಾಗುತ್ತಿರುವ ಖುಷಿಯನ್ನು ಹೇಳಲಾಗದು,” ಎಂದು ಟ್ವೀಟ್‌ ಮಾಡಿದ್ದಾರೆ.


ಈಗ ತಾನೇ ಪದವಿ ಶಿಕ್ಷಣ ಮುಗಿಸಿರುವ ಇವರು ಕೆಲವು ದಿನಗಳನ್ನು ನೆಟ್‌ಪ್ಲಿಕ್ಸ್‌ ನಲ್ಲಿ ಚಿತ್ರ ನೋಡುವುದು, ಓದುವುದು ಮತ್ತು ಮಲಗುವುದರಲ್ಲಿ ಕಳೆಯಲಿದ್ದಾರೆ.


ತಮ್ಮ 17 ನೇ ವಯಸ್ಸಿನಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಮಾಡಿದ ಹೋರಾಟಕ್ಕಾಗಿ(2014) ನೋಬಲ್‌ ಶಾಂತಿ ಪ್ರಶಸ್ತಿಯನ್ನು ಭಾರತದ ಸಾಮಾಜಿಕ ಕಾರ್ಯಕರ್ತರಾದ ಕೈಲಾಶ್‌ ಸತ್ಯಾರ್ಥಿಯವರ ಜತೆ ಪಡೆದು, ವಿಶ್ವದಲ್ಲೆ ನೋಬಲ್‌ ಪ್ರಶಸ್ತಿ ಪಡೆದ ಅತೀ ಕಿರಿಯೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ಈ ಪ್ರಶಸ್ತಿಯನ್ನು ಪಡೆದ ಮೊದಲ ಪುಶ್ತುನ್‌ ಮತ್ತು ಮೊದಲ ಪಾಕಿಸ್ತಾನಿ ಪ್ರಜೆಯಾಗಿದ್ದಾರೆ. ನೋಬಲ್‌ ಪ್ರಶಸ್ತಿಯನ್ನು ಸ್ವೀಕರಿಸುವ ಸಮಯದಲ್ಲಿ ಅವರು,


“ನನ್ನ ಕಥೆ ವಿಭಿನ್ನವಾಗಿಲ್ಲವೆಂದೆ ನಾನು ಅದನ್ನು ಹೇಳುತ್ತೇನೆ. ಇದು ನನ್ನೊಬ್ಬಳ ಕಥೆಯಲ್ಲ, ನನ್ನಂತ ಅನೇಕ ಹುಡುಗಿಯರ ಕಥೆ,” ಎಂದಿದ್ದರು.


ಮಲಾಲಾ ಪಾಕಿಸ್ತಾನದಲ್ಲಿ ತಾಲಿಬಾನ್‌ನ ಪ್ರಭಾವ ಹೆಚ್ಚುತ್ತಿರುವ ಕುರಿತಾಗಿ ಗುಪ್ತನಾಮದಲ್ಲಿ 2008 ರಲ್ಲಿ ಬಿಬಿಸಿ ಉರ್ದುಗೆ ಬರೆಯತೊಡಗಿದರು. ಡಿಸೆಂಬರ್‌ 2012 ರಲ್ಲಿ ಈಶಾನ್ಯ ಪಾಕಿಸ್ತಾನದ ಸ್ವಾಟ್‌ ಕಣಿವೆಯಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಚಳುವಳಿ ಮಾಡುತ್ತಿದ್ದ ಸಮಯದಲ್ಲಿ ತಾಲಿಬಾನ್‌ನ ಬಂದೂಕುಧಾರಿಯೊಬ್ಬ ಗುಂಡು ಹೊಡೆದಾಗ ಮಲಾಲಾ ಹೆಸರು ಜಾಗತಿಕ ಮನ್ನಣೆ ಪಡೆಯಿತು.


ತಮ್ಮ 15 ನೇ ವಯಸ್ಸಿನಲ್ಲಿ ಶಿಕ್ಷಣ ಮಹಿಳೆಯರ ಹಕ್ಕು ಎಂದು ಸಾರ್ವಜನಿಕವಾಗಿ ಮಾತಾನಾಡಿದಾಗ ಮಲಾಲಾ ಉಗ್ರಗಾಮಿಗಳ ಗುರಿಯಾದರು ಮತ್ತು ಶಾಲೆಯಿಂದ ಮನೆಗೆ ಹೋಗುತ್ತಿರುವಾಗ ಅವರ ಮೇಲೆ ದಾಳಿ ಮಾಡಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪಾಕಿಸ್ತಾನದ ಮಿಲಿಟರಿ ಆಸ್ಪತ್ರೆಯಿಂದ ಇನ್ನೊಂದಕ್ಕೆ ವಿಮಾನದಿಂದ ಸಾಗಿಸಲಾಯಿತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯುಕೆಗೆ ಕಳುಹಿಸಲಾಯಿತು.


ಈ ದಾಳಿಯ ನಂತರ ತಾಲಿಬಾನ್‌ ಮಲಾಲಾ ಬದುಕುಳಿದರೆ ಮತ್ತೆ ನಮ್ಮ ದಾಳಿಗೆ ಒಳಗಾಗುತ್ತಾರೆ ಎಂದು ಹೇಳಿತು.


ಒಂದು ವರ್ಷದ ನಂತರ ಬರ್ಮಿಂಘಮ್‌ನ ಆಸ್ಪತ್ರೆಯಿಂದ ಚೇತರಿಸಿಕೊಂಡ ಮೇಲೆ ಮಲಾಲಾ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಲು ನಿರ್ಧರಿಸಿ 2013 ರಲ್ಲಿ ತಮ್ಮ ತಂದೆ ಝಿಯುದ್ದಿನ್‌ ಯೂಸೂಫ್‌ ಝಾಯಿ ಜತೆ ಸೇರಿ ಮಲಾಲಾ ಫಂಡ್‌ ಸ್ಥಾಪಿಸಿದರು. ಈ ಫಂಡ್‌ ಮತ್ತು ಅದರ ‘ಎಜ್ಯೂಕೇಷನ್‌ ಚಾಂಪಿಯನ್ಸ್‌ʼ ಎಂಬ ಜಾಲದ ಮೂಲಕ ಮಲಾಲಾ ವಿಶ್ವದಾದ್ಯಂತವಿರುವ ಹುಡುಗಿಯರನ್ನು ತಲುಪಿ ಅವರ ಕಥೆಗಳನ್ನು ಜಗತ್ತಿನೊಂದಿಗೆ ಹಂಚಿಕೊಂಡು, ಅವರಿಗಾಗುತ್ತಿರುವ ಶೋಷಣೆಯ ವಿರುದ್ಧ ಹೋರಾಡಲು ಅವರಿಗೆ ನೆರವಾಗುತ್ತಿದ್ದಾರೆ.


w

ಸಿರಿಯಾದ ನಿರಾಶ್ರಿತ ಹುಡುಗಿಯರಿಗಾಗಿ ಇವರು ಶಾಲೆಯೊಂದನ್ನು ಆರಂಭಿಸಿದ್ದಾರೆ, ಮಹಿಳಾ ಶಿಕ್ಷಣದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ ಅಲ್ಲದೆ ಟೈಮ್ಸ್‌ನ ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲು ಕಾಣಿಸಿಕೊಂಡಿದ್ದಾರೆ. ಇವರ ಕಥೆ ಆಧರಿಸಿ ಚಲನಚಿತ್ರ ತಯಾರಾಗಿದೆ.


ಕ್ರಿಸ್ಟಿನಾ ಲಂಬ್‌ ಜತೆ ಸೇರಿ ಮಲಾಲಾ ತಮ್ಮ ಅತ್ಮ ಚರಿತ್ರೆ ಐ ಯ್ಯಾಮ್‌ ಮಲಾಲಾ ಪುಸ್ತಕ ಬರೆದಿದ್ದಾರೆ. ಅವರ ಜನ್ಮದಿನವಾದ ಜುಲೈ 12 ಅನ್ನು ಜಾಗತಿಕವಾಗಿ ಮಲಾಲಾ ದಿನವೆಂದು ಆಚರಿಸಲಾಗುತ್ತದೆ.