ಭಾರತದಲ್ಲಿ ವಾಯುಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ತನ್ನ ಕಾರ್ಪೊರೇಟ್ ಕೆಲಸವನ್ನು ತ್ಯಜಿಸಿದ ವ್ಯಕ್ತಿ

ಮೋಹಿತ್ ಬೀತ್ರಾ ಅವರು ಏರ್‌ಟೆಲ್‌ನಲ್ಲಿ ತಮ್ಮ ಕೆಲಸವನ್ನು ಬಿಟ್ಟು ಏರ್ ಪೊಲ್ಯೂಷನ್ ಆಕ್ಷನ್ ಗ್ರೂಪ್ ಅನ್ನು ಸ್ಥಾಪಿಸಿದರು. ಈ ಸಂಸ್ಥೆಯು ನಾಗರಿಕರಲ್ಲಿ ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮಗಳನ್ನು ಜಾರಿಗೆ ತರಲು ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ.

ಭಾರತದಲ್ಲಿ ವಾಯುಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ತನ್ನ ಕಾರ್ಪೊರೇಟ್ ಕೆಲಸವನ್ನು ತ್ಯಜಿಸಿದ ವ್ಯಕ್ತಿ

Saturday November 16, 2019,

4 min Read

51 ವರ್ಷದ ಮೋಹಿತ್ ಬಿಯೋತ್ರಾ ಅವರು ಏರ್‌ಟೆಲ್‌ನಲ್ಲಿ ಮುಖ್ಯ ಬ್ರಾಂಡ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾಗ ಅವರು ಸಮಾಜದಲ್ಲಿ ಏನಾದರೊಂದು ಮಾಡಬೇಕೆಂದು ನಿರ್ಧರಿಸಿದರು. ಕಾರ್ಪೊರೇಟ್ ಜಗತ್ತಿನಲ್ಲಿ ಎರಡು ದಶಕಗಳನ್ನು ಕಳೆದ ನಂತರ, ಪ್ರತಿದಿನದ ಅದೇ ದಿನಚರಿಗಳು, ಸಭೆಗಳು ಮತ್ತು ರಚನಾತ್ಮಕ ಪ್ರಕ್ರಿಯೆಗಳ ಸುಳಿಯಲ್ಲಿ ಸಿಕ್ಕಿಬಿದ್ದ ಅವರು, ಬದಲಾವಣೆಯನ್ನು ಸೃಷ್ಟಿಸಲು ಉತ್ಸುಕರಾಗಿದ್ದರು. ಆದರೆ, ಸಾಮಾಜಿಕ ವಲಯವನ್ನು ಹೇಗೆ ಪ್ರವೇಶಿಸುವುದು ಎಂದು ಅವರಿಗೆ ತಿಳಿದಿರಲಿಲ್ಲ.


ಹರಿಯಾಣದ ಗುರಗಾಂವ್‌ನಲ್ಲಿ ಇಂಡಿಯನ್ ಲೀಡರ್ಸ್ ಫೋರ್ ಸೋಶಿಯಲ್ ಸೆಕ್ಟರ್ (ಐಎಲ್‌ಎಸ್‌ಎಸ್) ಅವರ ಬಳಿ ತರಬೇತಿ ಕಾರ್ಯಕ್ರಮವನ್ನು ಕೈಗೊಳ್ಳಲು ಅವರು ನಿರ್ಧರಿಸಿದರು.


ಐಎಲ್‌ಎಸ್‌ಎಸ್ ಕಾರ್ಯಕ್ರಮದ ಅವಧಿಯಲ್ಲಿ ಮೋಹಿತ್, ಸಾಮಾಜಿಕ ವಲಯದ ನೀತಿ ಮತ್ತು ನಿಯಮಗಳು ಹಾಗೂ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸುವವರೊಂದಿಗೆ ಪರಿಚಿತರಾದ ನಂತರ, ವಿಶೇಷವಾಗಿ ಭಾರತದ ಎಲ್ಲಾ ಮಹಾನಗರಗಳಲ್ಲಿ ವಾಯುಮಾಲಿನ್ಯದ ಸಮಸ್ಯೆಯನ್ನು ಬಗೆಹರಿಸಲು ಅವರು ಸಿದ್ಧರಾದರು.


51 ವರ್ಷದ ಮೋಹಿತ್ ಬಿಯೋತ್ರಾ


ಪ್ರಪಂಚದಾದ್ಯಂತದ ದೇಶಗಳು ಪ್ರತಿದಿನವೂ ಕಲುಷಿತ ಗಾಳಿಗೆ ಹೇಗೆ ಒಡ್ಡಿಕೊಳ್ಳುತ್ತಿವೆ ಎಂಬುದರ ಕುರಿತು ಒಂದು ವರ್ಷದ ಹಿಂದೆ ನಾನು ದಿ ಎಕನಾಮಿಸ್ಟ್‌ ನಲ್ಲಿ ಒಂದು ಲೇಖನವನ್ನು ಓದಿದಾಗ ಇದು ಪ್ರಾರಂಭವಾಯಿತು. ಹೆಚ್ಚಿದ ವಾಹನದ ಹೊಗೆ, ಹಸಿರು ಹೊದಿಕೆಯ ಕುಗ್ಗುವಿಕೆ, ಅತಿಯಾದ ತಾಪ ಮತ್ತು ಕಳಪೆ ತ್ಯಾಜ್ಯ ನಿರ್ವಹಣೆ ಮುಂತಾದ ಅಂಶಗಳಿಂದಾಗಿ ವಿಶ್ವದ 20 ಕಲುಷಿತ ನಗರಗಳಲ್ಲಿ 14 ಭಾರತದ ನಗರಗಳಿವೆ ಎಂದು ಈ ಲೇಖನವು ಉಲ್ಲೇಖಿಸಿದೆ” ಎಂದು ಅವರು ಹೇಳುತ್ತಾರೆ.


ಲೇಖನವು ಮೋಹಿತ್ ಅವರನ್ನು ಯೋಚನಾಲಹರಿಯಲ್ಲಿ ಮುಳುಗಿಸಿತು ಮತ್ತು ಅವರು ಈ ಕುರಿತು ಹೆಜ್ಜೆಯನ್ನು ಇಡಲು ಇದೇ ಸುಸಮಯ ಎಂದು ನಿರ್ಧರಿಸಿದರು.


ನಾನು ಇದರ ನಂತರ ಸುಮ್ಮನಿರಲು ಸಾಧ್ಯವಾಗಲಿಲ್ಲ ಮತ್ತು ಭಾರತಿ ಫೌಂಡೇಶನ್‌ನ ಮಾಜಿ ಸಿಇಒ ವಿಜಯ್ ಚಡ್ಡಾ ಮತ್ತು ಕ್ರೈಸಲಿಸ್ ಕ್ಯಾಪಿಟಲ್ ಮತ್ತು ಅಶೋಕ ವಿಶ್ವವಿದ್ಯಾಲಯದ ಸ್ಥಾಪಕ ಆಶಿಶ್ ಧವನ್ ಅವರೊಂದಿಗೆ ಸೇರಿ ದೆಹಲಿಯಲ್ಲಿ ಏರ್ ಪೊಲ್ಯೂಷನ್ ಆಕ್ಷನ್ ಗ್ರೂಪ್ (ಎ-ಪಿಎಜಿ) ಅನ್ನು ಸ್ಥಾಪಿಸಲು ಸಾಧ್ಯವಾಯಿತು" ಎಂದು ಮೋಹಿತ್ ಸೋಷಿಯಲ್ ಸ್ಟೋರಿಗೆ ಹೇಳಿದರು.


ಆರಂಭ

ಮೋಹಿತ್ ಅವರ ತಂದೆ ಸೈನ್ಯದಲ್ಲಿದ್ದ ಕಾರಣ, ಅವರ ಬಾಲ್ಯವನ್ನು ದೇಶದ ಹಲವು ಭಾಗಗಳಲ್ಲಿ ಕಳೆದಿದ್ದರು. ಅವರು ಅಜ್ಮೀರ್‌ನ ಪ್ರಸಿದ್ಧ ಬೋರ್ಡಿಂಗ್ ಶಾಲೆಯಾದ ಮಾಯೊ ಕಾಲೇಜಿನಲ್ಲಿ ಅಧ್ಯಯನ ಮಾಡಿದರು ನಂತರ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಮಾರ್ಕೆಟಿಂಗ್ ಬಗ್ಗೆ ಅವರಿಗಿದ್ದ ಒಲವು 1988 ರಲ್ಲಿ ಐಐಎಂ-ಕಲ್ಕತ್ತಾದಿಂದ ಎಂಬಿಎ ವ್ಯಾಸಂಗ ಮಾಡಲು ಕಾರಣವಾಯಿತು, ನಂತರ ಅವರು 1990 ಮತ್ತು 2001 ರ ನಡುವೆ ಲಿಂಟಾಸ್ ಮತ್ತು ನೆಟ್‌ಡಿಸಿಷನ್ಗಳೊಂದಿಗೆ ಕೆಲಸ ಮಾಡಿದರು. ಈ ಅವಧಿಯ ನಂತರ ಏರ್‌ಟೆಲ್‌ನಲ್ಲಿ ಅವರು ಕೆಲಸ ಆರಂಭಿಸಿದರು.


2019 ರ ಮಧ್ಯದಲ್ಲಿ, ಯಾರೂ ನಡೆಯದ ರಸ್ತೆಯನ್ನು ತೆಗೆದುಕೊಳ್ಳಲು ಅವರು ನಿರ್ಧರಿಸಿದರು ಮತ್ತು ಏರ್ ಪೊಲ್ಯೂಷನ್ ಆಕ್ಟಿವ್ ಗ್ರೂಪ್ ಸ್ಥಾಪಿಸಿದರು, ಇದು ನಾಗರಿಕರಲ್ಲಿ ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.


ಆಶಿಮಾ ಅರೋರಾ, ಪಂಜಾಬ್‌ನಲ್ಲಿ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ

ಅದೃಷ್ಟವಶಾತ್, ನನ್ನ ಸ್ನೇಹಿತ ಆಶಿಶ್ ಎ-ಪಿಎಜಿ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಒಪ್ಪಿಕೊಂಡರು. ಫೌಂಡೇಶನ್ ಸ್ಥಾಪನೆಯಾದ ಸುಮಾರು ಒಂದು ತಿಂಗಳ ನಂತರ, ಇತರ ಮೂರು ಸದಸ್ಯರಾದ ನಿಪುನ್ ಮಾಟ್ರೆಜಾ, ಆಶಿಮಾ ಅರೋರಾ, ಮತ್ತು ಸಮರ್ತ್ ಅಯಸ್ಯ ತಮ್ಮ ವೃತ್ತಿಯನ್ನು ತ್ಯಜಿಸಿ ಈ ಪ್ರಯತ್ನಕ್ಕೆ ಸೇರಲು ನಿರ್ಧರಿಸಿದರು ಎಂದು,” ಮೋಹಿತ್ ನೆನಪಿಸಿಕೊಳ್ಳುತ್ತಾರೆ.


ನಂತರ ಅವರು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ವಾಯುಮಾಲಿನ್ಯದ ಕುರಿತು ನಾಗರಿಕರು ಯೋಚಿಸುವಂತಾಗಲಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಿದರು. ಅವರ ಐದು ಜನರ ತಂಡದೊಂದಿಗೆ, ಅವರು ‘ಪೊಲ್ಯೂಷನ್ ಕಾ ಕ್ಯಾ ಪ್ಲ್ಯಾನ್ ಹೈ?’ ಎಂಬ ಶೀರ್ಷಿಕೆಯ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದರು ಮತ್ತು ಆಕರ್ಷಕ ವೀಡಿಯೊಗಳ ರೂಪದಲ್ಲಿ ವಿಷಯವನ್ನು ನೀಡಲು ಪ್ರಾರಂಭಿಸಿದರು. ಮಾಲಿನ್ಯ, ಆರೋಗ್ಯಕ್ಕೆ ಉಂಟಾಗುವ ಅಪಾಯಗಳು ಮತ್ತು ಪರಿಸ್ಥಿತಿಯನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಚಕಿತಗೊಳಿಸುವ ಸಂಗತಿಗಳನ್ನು ವೀಡಿಯೊಗಳು ಪ್ರಸ್ತುತಪಡಿಸುತ್ತವೆ.


ಸರ್ಕಾರದೊಂದಿಗೆ ಕೆಲಸ

ಮಾಲಿನ್ಯವನ್ನು ನಿಗ್ರಹಿಸುವ ಪ್ರಯತ್ನಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ಉದ್ದೇಶದಿಂದ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೆಚ್ಚಿನ ವೀಡಿಯೊಗಳನ್ನು ಬಿಡುಗಡೆ ಮಾಡಲಾಯಿತು. ಕೆಲವೇ ದಿನಗಳಲ್ಲಿ, ಚಾನೆಲ್‌ನಲ್ಲಿನ ಅನೇಕ ವೀಡಿಯೊಗಳು ವೈರಲ್ ಆಗಿದ್ದು ಆರು ದಶಲಕ್ಷಕ್ಕೂ ಹೆಚ್ಚು ಜನರ ಗಮನ ಸೆಳೆದವು.


ಸಮಸ್ಯೆಯ ಪ್ರಮಾಣ ಮತ್ತು ವ್ಯವಸ್ಥಿತ ಮತ್ತು ದೀರ್ಘಕಾಲೀನ ತೊಂದರೆಗಳಿಂದಾಗಿ ವಾಯುಮಾಲಿನ್ಯವನ್ನು ಎದುರಿಸಲು ರಾಜಕೀಯ ಇಚ್ಛಾಶಕ್ತಿ ನಿರ್ಣಾಯಕವಾಗಿದೆ. ಆದ್ದರಿಂದ, ಎ-ಪಿಎಜಿ ಸರ್ಕಾರದೊಂದಿಗೆ ಹೇಗೆ ಸಹಕರಿಸಬಹುದು ಮತ್ತು ಪ್ರಕ್ರಿಯೆಯಲ್ಲಿ ಅವರಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಮೋಹಿತ್ ಎರಡು ತಿಂಗಳುಗಳುಗಳ ಕಾಲ ಯೋಚಿಸಿದ್ದಾರೆ.


ದೆಹಲಿಯ ಇಂಡಿಯಾ ಗೇಟ್ ಹೊಗೆಯಿಂದ ತುಂಬಿರುವುದು.


ಗಾಳಿಯಲ್ಲಿನ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡಲು ಅಗತ್ಯವಾದ ಕ್ರಮಗಳನ್ನು ತಿಳಿದುಕೊಳ್ಳಲು ನಾವು, ಮಾಲಿನ್ಯ ನಿಯಂತ್ರಣ ಮಂಡಳಿ, ಸರ್ಕಾರಿ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಸರ್ಕಾರೇತರ ಸಂಸ್ಥೆಗಳಂತಹ ವಿವಿಧ ಪಾಲುದಾರರೊಂದಿಗೆ ನಾವು ಸಭೆಗಳನ್ನು ನಡೆಸಿದೆವು. ಅದರ ನಂತರ, ನನ್ನ ತಂಡ ಮತ್ತು ನಾನು ಪಂಜಾಬ್ ಮತ್ತು ದೆಹಲಿಯ ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದೆವು” ಎಂದು ಮೋಹಿತ್ ಹೇಳುತ್ತಾರೆ.


ಪಂಜಾಬ್ ಮತ್ತು ಹರಿಯಾಣದಲ್ಲಿ ಸುಗ್ಗಿಯ ನಂತರ ಉಳಿದಿರುವ ಒಣಹುಲ್ಲಿನ ಕೋಲಿಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವ ಅಭ್ಯಾಸವು ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತದೆ. ಅದನ್ನು ಪರಿಹರಿಸಲು ಮೋಹಿತ್ ಮತ್ತು ಅವರ ತಂಡ ಪಂಜಾಬ್‌ನ ಸರ್ಕಾರಿ ಅಧಿಕಾರಿಗಳೊಂದಿಗೆ ಕೆಲಸ ಮಾಡಲು ನಿರ್ಧರಿಸಿತು. ಈ ಅವಧಿಯಲ್ಲಿ, ರೈತರು ಪರ್ಯಾಯ ಮಾರ್ಗದ ಬಗ್ಗೆ ತಿಳಿಯದಿರುವ ಕಾರಣ ಬೆಳೆ ಅವಶೇಷಗಳನ್ನು ತೊಡೆದುಹಾಕಲು ಬೇರೆ ವಿಧಾನಗಳನ್ನು ಬಳಸುತ್ತಿಲ್ಲ ಎಂದು ಅವರು ಅರಿತುಕೊಂಡರು.


ಹ್ಯಾಪಿ ಸೀಡರ್ ಯಂತ್ರಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದರೂ, ಕೃಷಿಕರು ಅವುಗಳ ಬಳಕೆಯ ಬಗ್ಗೆ ತಿಳಿದಿರಲಿಲ್ಲ. ಆದ್ದರಿಂದ, ಮೋಹಿತ್ ಮತ್ತು ಅವರ ತಂಡವು ಪಂಜಾಬ್ ರಾಜ್ಯ ರೈತರ ಆಯೋಗದೊಂದಿಗೆ ಕೆಲಸ ಮಾಡಿ ಯಂತ್ರದ ಕಾರ್ಯವೈಖರಿ ಮತ್ತು ಉತ್ತರಗಳೊಂದಿಗೆ ಕೆಲವು ಪ್ರಮಾಣಿತ ಎಫ್‌ ಎ ಕ್ಯೂ ಗಳನ್ನು ರೂಪಿಸಿತು. ಈ ವೀಡಿಯೊಗಳನ್ನು ನಂತರ ರೈತರಿಗೆ ನೇರವಾಗಿ ಮಲ್ಟಿಮೀಡಿಯಾ ಮೆಸೇಜಿಂಗ್ ಸರ್ವಿಸ್ (ಎಂಎಂಎಸ್) ಮೂಲಕ ಕಳುಹಿಸಲಾಗಿದೆ,” ಎಂದು ಅವರು ಹೇಳುತ್ತಾರೆ.


ಎ-ಪಿಎಜಿ ಮೂಲಕ ವಾಯುಮಾಲಿನ್ಯದ ಬಿಕ್ಕಟ್ಟನ್ನು ನಿವಾರಿಸಲು ಪ್ರಯತ್ನಿಸುವ ಕಾರ್ಯವನ್ನು ಮುಂದುವರಿಸಲು ಮೋಹಿತ್ ಯೋಜಿಸಿದ್ದಾರೆ.


ಜನರಲ್ಲಿ ಪರಿವರ್ತನೆ ತರಲು ನಾನು ಕೆಲಸಗಳನ್ನು ಮಾಡುವುದರಿಂದ ನಾನು ಸಂತೃಪ್ತನಾಗುತ್ತೇನೆ ಎಂದು ನಾನು ಅರಿತುಕೊಂಡಿದ್ದೇನೆ. ಆದ್ದರಿಂದ, ಮಾಲಿನ್ಯದ ಸಮಸ್ಯೆಗಳನ್ನು ನಿಭಾಯಿಸಲು ನಾಗರಿಕರು ಮತ್ತು ಇನ್ನೂ ಅನೇಕ ರಾಜ್ಯ ಸರ್ಕಾರಗಳೊಂದಿಗೆ ತೊಡಗಿಸಿಕೊಳ್ಳುವುದು ನನ್ನ ಉದ್ದೇಶ. ಈ ಪ್ರಯತ್ನದ ಫಲಿತಾಂಶಗಳು ತಕ್ಷಣವೇ ತೋರಿಸದಿರಬಹುದು, ಆದರೆ ಒಂದು ದಿನ ಅದು ಫಲಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಮೋಹಿತ್ ಹೇಳುತ್ತಾರೆ.