70 ವರ್ಷದಲ್ಲಿ ಯಾರಿಂದಲೂ ಸಾಧ್ಯವಾಗದ ಗಣಿತ ಸಮಸ್ಯೆಯನ್ನು ಬಿಡಿಸಿ, ಶಾಂತಿ ಸ್ವರೂಪ್‌ ಭಟ್‌ನಗರ್‌ ಪ್ರಶಸ್ತಿಗೆ ಭಾಜನರಾದ 35 ರ ಗಣಿತ ಪ್ರಾಧ್ಯಾಪಕಿ

ಕಳೆದ 70 ವರ್ಷಗಳಲ್ಲಿ ಪ್ರಪಂಚದ ಗಣಿತಜ್ಞರಿಗೆ ಪರಿಹರಿಸಲು ಸಾಧ್ಯವಾಗ ಜಟಿಲ ಬೀಜಗಣಿತದ ಸಮಸ್ಯೆಯನ್ನು ನೀನಾ ಗುಪ್ತಾರವರು ಪರಿಹರಿಸಿ, ದೇಶದ ಪ್ರತಿಷ್ಠಿತ ಶಾಂತಿ ಸ್ವರೂಪ್‌ ಭಟ್‌ನಗರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

70 ವರ್ಷದಲ್ಲಿ ಯಾರಿಂದಲೂ ಸಾಧ್ಯವಾಗದ ಗಣಿತ ಸಮಸ್ಯೆಯನ್ನು ಬಿಡಿಸಿ, ಶಾಂತಿ ಸ್ವರೂಪ್‌ ಭಟ್‌ನಗರ್‌ ಪ್ರಶಸ್ತಿಗೆ ಭಾಜನರಾದ 35 ರ ಗಣಿತ ಪ್ರಾಧ್ಯಾಪಕಿ

Friday December 13, 2019,

2 min Read

ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯ/ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್ಸ್ಟಿಟ್ಯೂಶನ್‌ (ಐಎಸ್‌ಐ)ನ ಸೈದ್ಧಾಂತಿಕ ಅಂಕಿಅಂಶ ಮತ್ತು ಗಣಿತ ಘಟಕದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ|| ನೀನಾ ಗುಪ್ತ ಅವರು 2019ರ ಸಾಲಿನ ಶಾಂತಿ ಸ್ವರೂಪ್‌ ಭಟ್‌ನಗರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇಶದ ವಿಜ್ಞಾನ ಕ್ಷೇತ್ರದ ಸಾಧಕರಿಗೆ ಪ್ರೋತ್ಸಾಹಿಸುವ ಸಲುವಾಗಿ ನೀಡಲಾಗುವ ಈ ಪ್ರಶಸ್ತಿಯನ್ನು ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು‌ ನೀಡಿ ಸಾಧಕರಿಗೆ ಗೌರವ ಸೂಚಿಸಲಿದ್ದಾರೆ.


ಡಾ ನೀನಾ ಗುಪ್ತ (ಚಿತ್ರಕೃಪೆ : ರೀಸರ್ಚ್‌ ಮ್ಯಾಟರ್ಸ್)


ಪ್ರತೀ ವರ್ಷ ಸೆಪ್ಟೆಂಬರ್‌ 27ರಂದು ಪ್ರಶಸ್ತಿ ವಿಜೇತರ ಪಟ್ಟಿ ಘೋಷಿಸುವ ಸಮಿತಿಯು, ಮುಂದಿನ ವರ್ಷದ ಫೆಬ್ರವರಿಯಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತದೆ.


ಬೀಜಗಣಿತ ಜ್ಯಾಮಿತಿಯಯನ್ನು ರೂಪಿಸಿದ್ದ ಝರಿನ್ಸ್ಕಿ ಎಂಬ 20ನೇ ಶತಮಾನದ ಗಣಿತಜ್ಞರೊಬ್ಬರು ಬರೆದಿದ್ದ ಕಷ್ಟಕರ ಬೀಜಗಣಿತ ಪ್ರಶ್ನೆಯೊಂದು ಅರ್ಥೈಸಲು ಸುಲಭದ್ದಾಗಿದ್ದರೂ ಅದನ್ನು ಬಿಡಿಸುವಷ್ಟು ಕಷ್ಟಕರವಾದ ಕೆಲಸ ಮತ್ತೊಂದಿಲ್ಲ ಎಂದು ನೀನಾ ಗುಪ್ತ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಜರಿಸ್ಕಿ ರದ್ದತಿ ಸಮಸ್ಯೆಯನ್ನು ಬಿಡಿಸಿದ್ದಕ್ಕೆಂದೇ ನೀನಾ ಗುಪ್ತಾರಿಗೆ ಶಾಂತಿ ಸ್ವರೂಪ್‌ ಭಟ್‌ನಗರ್‌ ಪ್ರಶಸ್ತಿ ಲಭಿಸಿದ್ದುದು.


20ನೇ ಶತಮಾನದ ಅಂಚಿನಲ್ಲಿ ಮತ್ತು 21ನೇ ಶತಮಾನದ ಆರಂಭದಲ್ಲಿ ಹಲವಾರು ಗಣಿತಶಾಸ್ತ್ರಜ್ಞರು ಈ ಜರಿಸ್ಕಿ ಸಮಸ್ಯೆಯನ್ನು ಬಿಡಿಸಲು ಪ್ರಯತ್ನಿಸಿದ್ದರೂ ಸಫಲರಾಗಿರಲಿಲ್ಲ. ಆದರೆ 2014ರಲ್ಲಿ ಈ ಸಮಸ್ಯೆಯನ್ನು ಪರಿಹರಿಸಿದವರು ಡಾ. ನೀನಾ ಗುಪ್ತ. ಅವರ ಈ ಸಾಧನೆಯ ಬಗ್ಗೆ ಮಾತನಾಡುತ್ತ ಅವರು, “ನನ್ನ ಪಿಎಚ್‌ಡಿ ದಿನಗಳಿಂದಲೇ ಈ ಸಮಸ್ಯೆಯನ್ನು ನಾನು ತಿಳಿದಿದ್ದೆ, ಆದರೆ ಅದನ್ನು ಪರಿಹರಿಸಲು ನನಗೆ ಸಾಧ್ಯವಾಗುತ್ತದೆ ಎಂದು ನಾನು ಖಂಡಿತ ಊಹಿಸಿರಲಿಲ್ಲ,” ಎಂದರು.


ಜರಿಸ್ಕಿಯ ಬೀಜಗಣಿತ (ಚಿತ್ರಕೃಪೆ: ಫಸ್ಟ್‌ ಪೋಸ್ಟ್)




ರೀಸರ್ಚ್‌ ಮ್ಯಾಟರ್ಸ್‌ ಎಂಬ ಅಂತರ್ಜಾಲ ಪತ್ರಿಕೆಗೆ ಸಂದರ್ಶನ ನೀಡಿದ ಅವರು,


"ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ, ಅನೇಕ ಜನರಿರುತ್ತಾರೆ. ಸಾಧನೆ ಮಾಡುವುದಕ್ಕೆ ಇಡೀ ವ್ಯವಸ್ಥೆಯಿಂದ ಬೆಂಬಲ ಬೇಕು. ನನ್ನ ಪೋಷಕರು ನನಗೆ ಉನ್ನತ ಶಿಕ್ಷಣವನ್ನು ಕೊಡಿಸಲು ಬಹಳ ಉತ್ಸುಕರಾಗಿದ್ದರು. ನನ್ನ ಪಿಎಚ್‌ಡಿ ಮೇಲ್ವಿಚಾರಕ ಪ್ರೊ. ಅಮರ್ತ್ಯ ಕುಮಾರ್ ದತ್ತಾ ಅವರು ಬಹಳ ಪ್ರೋತ್ಸಾಹಿಸುತ್ತಿದ್ದಾರೆ. ನನಗೆ ಬಹಳಷ್ಟು ಬೆಂಬಲ ನೀಡುವ ಗಂಡ ಮತ್ತು ಅಳಿಯಂದಿರನ್ನು ಹೊಂದಲು ಅದೃಷ್ಟಶಾಲಿಯಾಗಿದ್ದೇನೆ ಎಂದು ಭಾವಿಸುತ್ತೇನೆ,” ಎಂದಿದ್ದಾರೆ.


ಮುಂದುವರೆದು, ತಾವು ಪರಿಹರಿಸಿದ ಜರಿಸ್ಕಿ ಸಮಸ್ಯೆಯ ಕುರಿತು ಅವರು,


"ರದ್ದತಿ ಸಮಸ್ಯೆ ನೀವು ಎರಡು ಜ್ಯಾಮಿತೀಯ ರಚನೆಗಳ ಮೇಲೆ ಸಿಲಿಂಡರ್‌ಗಳನ್ನು ಹೊಂದಿದ್ದರೆ ಮತ್ತು ಅವು ಒಂದೇ ರೀತಿಯ ರೂಪಗಳನ್ನು ಹೊಂದಿದ್ದರೆ, ಮೂಲ ರಚನೆಗಳು ಒಂದೇ ರೀತಿಯ ರೂಪಗಳನ್ನು ಹೊಂದಿವೆ ಎಂದು ತೀರ್ಮಾನಿಸಬಹುದೇ?" ಎನ್ನುವ ಪ್ರಶ್ನೆಯನ್ನೇ ತಾವು ಪರಿಹರಸಿದ್ದು ಎಂದಿದ್ದಾರೆ.


ಶಾಂತಿ ಸ್ವರೂಪ ಭಟ್‌ನಗರ್‌ ಅವರ ಭಾವಚಿತ್ರವಿರುವ ಸ್ಟಾಂಪ್ (ಚಿತ್ರಕೃಪೆ: ಫಸ್ಟ್‌ ಪೋಸ್ಟ್)


ಎಸ್‌ಎಸ್‌ಬಿ ಪ್ರಶಸ್ತಿಗೆ ಭಾಜನರಾಗಿರುವ ಅತ್ಯಂತ ಕಿರಿಯ ಗಣಿತ ಪ್ರಾಧ್ಯಾಪಕಿ ಡಾ. ನೀನಾ. ಎಂಬುದು ಗಣಿತ ಲೋಕಕ್ಕೆ ಹಾಗೂ ಭಾರತಕ್ಕೆ ಹೆಮ್ಮೆಯ ವಿಷಯ. ಎಪ್ಪತ್ತು ವರ್ಷಗಳ ಕಾಲ ಜಟಿಲವಾಗಿ ಅಸಾಧ್ಯವೆನಿಸುವಂತೆ ಕಾಣಿಸುತ್ತಿದ್ದ ಜರಿಸ್ಕಿ ಸಮಸ್ಯೆಯನ್ನು ಪರಿಹರಿಸಿದ ಕುರಿತು ಮಾತನಾಡುತ್ತ ಅವರು "ಗಣಿತ ವೆಂದರೆ ಹಾಗೆ ಯಾರೂ ತಮ್ಮ ಸ್ವಂತ ಬುದ್ಧಿಯಿಂದ ಪರಿಹರಿಸಬಲ್ಲರೋ ಅವರಿಗದು. ಗಣಿತಶಾಸ್ತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನನಗೆ ದೊರಕುವ ಸಂತೋಷವು ಯಾವುದೇ ಪ್ರಶಸ್ತಿಗಿಂತ ಹೆಚ್ಚಿನದಾಗಿದೆ," ಎಂದು ಹೇಳಿದ್ದಾರೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.