ಗಾಳಿಯಿಂದ ಶುದ್ಧ ಕುಡಿಯುವ ನೀರು ತಯಾರಿಸಿ ಪ್ರಯಾಣಿಕರಿಗೆ ನೀಡುತ್ತಿದೆ ಭಾರತೀಯ ರೈಲ್ವೆ ಇಲಾಖೆ

ಮೇಘದೂತ ಎಂಬ ಹೆಸರಿನ ವಾತಾವರಣದಲ್ಲಿನ ಗಾಳಿಯನ್ನೇ ಶುದ್ಧ ಕುಡಿಯುವ ನೀರಾಗಿ ಪರಿವರ್ತಿಸುವ ಯಂತ್ರವನ್ನು ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಅಳವಡಿಸುವ ಮೂಲಕ ಭಾರತೀಯ ರೈಲ್ವೆ ಹೊಸ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.

ಗಾಳಿಯಿಂದ ಶುದ್ಧ ಕುಡಿಯುವ ನೀರು ತಯಾರಿಸಿ ಪ್ರಯಾಣಿಕರಿಗೆ ನೀಡುತ್ತಿದೆ ಭಾರತೀಯ ರೈಲ್ವೆ ಇಲಾಖೆ

Monday December 23, 2019,

2 min Read

ಸದಾ ಒಂದಲ್ಲಾ ಒಂದು ಹೊಸತನಕ್ಕೆ ತನ್ನನ್ನು ತೆರೆದುಕೊಳ್ಳುವ ಭಾರತೀಯ ರೈಲ್ವೇ ಇದೀಗ ಸ್ವಚ್ಚ ಭಾರತ ಮತ್ತು ಇತರ ಉನ್ನತ ಸೇವಾ ಸೌಲಭ್ಯಗಳ ಜೊತೆಗೆ ತನ್ನ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರನ್ನು ಕೈಗೆಟಕುವ ದರದಲ್ಲಿ ನೀಡಲು ಮುಂದಾಗಿದೆ.


ಎಲ್ಲೆಡೆ ಕುಡಿಯುವ ನೀರಿನ ಕೊರತೆ ಇರುವುದು ಸಾಮಾನ್ಯ ಸಂಗತಿ, ಆದ್ದರಿಂದ ಭಾರತೀಯ ರೈಲ್ವೆ ಗಾಳಿಯನ್ನೇ ಸಂಸ್ಕರಿಸಿ ಶುದ್ಧ ಕುಡಿಯುವ ನೀರಾಗಿ ಪರಿವರ್ತಿಸಿ ಅದನ್ನು ತನ್ನ ಗ್ರಹಕರಿಗೆ ಕಡಿಮೆ ದರದಲ್ಲಿ ಮಾರಲು ಸಿದ್ಧವಾಗಿದೆ.


ವಿಶ್ವ ಆರೋಗ್ಯ ಸಂಸ್ಥೆಯಿಂದ ಮನ್ನಣೆ ಪಡೆದ ಯಂತ್ರ ಮೇಘದೂತ್ ವನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಇದು ಮೊದಲಿಗೆ ಗಾಳಿಯಲ್ಲಿನ ಆರ್ದ್ರತೆಯನ್ನು ಹೀರಿ ಅದನ್ನು ಫಿಲ್ಟರ್ ಮಾಡಿ ಕುಡಿಯುವ ನೀರಿಗೆ ಅಗತ್ಯವಿರುವ ಖನಿಜಾಂಶಗಳ ಪೂರೈಕೆ ಮಾಡಿ ಶುದ್ಧ ಕುಡಿಯುವ ನೀರನ್ನು ನೀಡುತ್ತದೆ.


ಹೈದ್ರಾಬಾದಿನ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಮೇಘದೂತ (ಚಿತ್ರಕೃಪೆ: ಟ್ವಿಟರ್)


ಯಂತ್ರವು ಏರ್ ಫಿಲ್ಟರ್ ಅನ್ನು ಒಳಗೊಂಡಿದ್ದು ಇದು ಗಾಳಿಯಲ್ಲಿನ ಆರ್ದ್ರತೆಯನ್ನು ನೀರಾಗಿ ಪರಿವರ್ತಿಸಲು ಸಹಕರಿಸುತ್ತದೆ. ಪ್ರತಿ ದಿನ ಸುಮಾರು 1,000 ಲೀಟರ್ ನೀರನ್ನು ಇದು ಗಾಳಿಯಿಂದ ಸಂಸ್ಕರಿಸಬಲ್ಲದು. ಇದೇ ಡಿಸೆಂಬರ್ 17 ರಂದು ಇದನ್ನು ಪ್ರಾಯೋಗಿಕವಾಗಿ ಹೈದ್ರಾಬಾದಿನ ಸಿಕಂದರ್ ಬಾದ್ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದೆ.


ಗ್ರಾಹಕಸ್ನೇಹಿ ಆಗಿರುವ ಈ ಸೌಲಭ್ಯ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಕುಡಿಗುವ ನೀರನ್ನು ಪೂರೈಸುತ್ತದೆ. ಕೇವಲ 5 ರೂಪಾಯಿಗೆ 1 ಲೀಟರ್ ನೀರನ್ನು ಪಡೆಯಬಹುದು. ಬಾಟಲಿ ಇಲ್ಲದೆ ಹೋದರೆ 8 ರೂಪಾಯಿಗೆ ಒಂದು ಲೀಟರ್ ನೀರನ್ನು ನೀಡುವ ಮೂಲಕ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಯತ್ನಿಸುತ್ತಿದ್ದಾರೆ. ಕೇವಲ 2 ರೂಪಾಯಿಗೆ ಒಂದು ಲೋಟ ನೀರನ್ನು ನೀಡುವ ವ್ಯವಸ್ಥೆಯು ಇದೆ.

ತಮ್ಮ ಈ ಹೊಸ ಪ್ರಯತ್ನದ ಬಗ್ಗೆ ಖುಷಿಯಿಂದ ರೈಲ್ವೇ ಮಂತ್ರಿ ಟ್ವಿಟ್ ಮಾಡಿದ್ದು, ಮುಂದಿನ ದಿನಗಳಲ್ಲಿ ಇದೇ ಕ್ರಮವನ್ನು ದೇಶದ ಇತರ ನಿಲ್ದಾಣಗಳಲ್ಲಿ ಮುಂದುವರೆಸುವ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಹಲವು ಸೌಲಭ್ಯಗಳ ಮೂಲಕ ಭಾರತೀಯ ತನ್ನ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುವತ್ತ ಹೆಜ್ಜೆ ಹಾಕುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯವಾಗಿದೆ.


ನೀರಿನ ಹಾಹಾಕಾರದ ಈ ಸಂದರ್ಭದಲ್ಲಿ ಗಾಳಿಯನ್ನೇ ಪರಿವರ್ತಿಸಿ ಕುಡಿಯುವ ನೀರನ್ನಾಗಿ ಜನರಿಗೆ ನೀಡುತ್ತಿರುವ ಈ ಯಂತ್ರ ಮುಂದಿನ ದಿನಗಳಲ್ಲಿ ಖಾಸಗಿ ಕಚೇರಿ, ಮನೆ, ಸಾರ್ವಜನಿಕ ಸ್ಥಳಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದರೆ ಅಚ್ಚರಿಯೇನಿಲ್ಲಾ.