ಭಾರತದ ಅನಾಥ ಮಕ್ಕಳ ಪಾಲಿಗೆ ಆಶಾಕಿರಣವಾಗಿರುವ ಟೆಕ್ಸಾಸ್ ಮೂಲದ ಮಿರಾಕಲ್ ಸಂಸ್ಥೆ

By Team YS Kannada|9th Sep 2019
ಯಾವುದೇ ಲಾಭದ ಉದ್ದೇಶವಿರದ ಟೆಕ್ಸಾಸ್ ಮೂಲದ ಮಿರಾಕಲ್ ಸಂಸ್ಥೆ ಭಾರತದ 6,075 ಅನಾಥ ಮಕ್ಕಳ ಧ್ವನಿಯಾಗಿದೆ ಮತ್ತು ಇವರಲ್ಲಿ ಸುಮಾರು 687 ಮಕ್ಕಳನ್ನು ಕುಟುಂಬಗಳಿಗೆ ಸೇರಿಸಲಾಗಿದೆ.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

21 ವರ್ಷದ ಕಲ್ಪನಾಳ ಮನಸ್ಸಿನಲ್ಲಿ ತಾನು ಚಿಕ್ಕವಳಿರುವಾಗಲೇ ತಂದೆ-ತಾಯಿಯನ್ನು ಕಳೆದುಕೊಂಡ ನೆನಪು ಹಸಿರಾಗಿದೆ. ಆಕೆ ಆ ನತದೃಷ್ಟ ಘಟನೆಯನ್ನು ಅರ್ಥಮಾಡಿಕೊಳ್ಳುವಷ್ಟು ಸಹ ಪ್ರಬುದ್ಧಳಾಗಿರಲಿಲ್ಲ. ಆದರೆ ಅವಳು ದೊಡ್ಡವಳಾದಂತೆ ಅದರ ತೀವ್ರತೆಯ ಅರಿವಾಗತೊಡಗಿತು.


“ನನಗೆ ಅದೊಂದು ಜೀವನದಲ್ಲಿ ತೀವ್ರ ನೋವನ್ನು ಅನುಭವಿಸಿದ ಹಂತವಾಗಿತ್ತು. ನನಗೆ ಅತೀವ ದುಃಖವಾಗುತಿತ್ತು ಮತ್ತು ದಾರಿ ಕಾಣದಾಗಿತ್ತು. ಒಂದು ಹಂತದವರಗೆ ನನ್ನ ಸಂಬಂಧಿಕರು ನನಗೆ ಆರ್ಥಿಕವಾಗಿ ಸಹಾಯ ಮಾಡಿದರೂ ಕೂಡ ಅವರಿಗೆ ಆ ಸಹಾಯವನ್ನು ಮುಂದುವರೆಸುವುದು ಸಾಧ್ಯವಾಗಲಿಲ್ಲ. ನಾನು ಒರಿಸ್ಸಾದ ಮಕ್ಕಳ ಪಾಲನಾ ಕೇಂದ್ರಕ್ಕೆ (ಚೈಲ್ಡ್ ಕೇರ್ ಇನ್ಸ್ಟಿಟ್ಯೂಷನ್-ಸಿಸಿಐ) ದಾಖಲಾಗಬೇಕಾಯಿತು. ಸಿಸಿಐ ಬಹುಬೇಗ ನನ್ನ ಕನಸುಗಳಿಗೆ ಭರವಸೆ ಮೂಡಿಸುವ ಮನೆಯಾಯಿತು. ಆದರೂ ನನ್ನ ಮನಸ್ಸು ನಾನು ನನ್ನದೇ ಕುಟುಂಬದಲ್ಲಿ ವಾಸಿಸಬೇಕೆಂದು ಯಾವಾಗಲೂ ತುಡಿಯುತ್ತದೆ” ಎಂದು ಕಲ್ಪನಾ ಯುವರ್ ಸ್ಟೊರಿಗೆ ಹೇಳಿದರು.


ಭಾರತವು ಪ್ರೀತಿ ಮತ್ತು ವಾತ್ಸಲ್ಯಕ್ಕೆ ಹಂಬಲಿಸುತ್ತಿರುವ ಹಲವಾರು ಅನಾಥ ಮಕ್ಕಳ ತಾಣವಾಗಿದೆ.


ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಂಸ್ಥೆಯ ಸರ್ವೆಯೊಂದರ ಪ್ರಕಾರ ಭಾರತದಲ್ಲಿ ಕಲ್ಪನಾಳಂತೆಯೇ ಕುಟುಂಬವಿಲ್ಲದ ಹಲವಾರು ಮಕ್ಕಳಿದ್ದಾರೆ. ಪ್ರತಿಶತಃ 5 ಭಾಗ ಹದಿನೆಂಟು ವಯಸ್ಸಿನ ಕೆಳಗಿರುವ ಮಕ್ಕಳು ಒಬ್ಬ ಅಥವಾ ಇಬ್ಬರೂ ಜೈವಿಕ ಪೋಷಕರಿಲ್ಲದೆ ವಾಸಿಸುತಿದ್ದಾರೆ. ಈ ಸಂಖ್ಯೆ 50 ಲಕ್ಷವನ್ನು ದಾಟುತ್ತದೆ. ಈ ಮಕ್ಳಳಲ್ಲಿ ಬಹಳಷ್ಟು ಮಂದಿ ಸಾಕು ಕುಟುಂಬದ ಬಾಗವಾಗಿದ್ದರೂ ಕೂಡ ಅವರು ಪೌಷ್ಟಿಕಾಂಶದ ಕೊರತೆ, ಶಿಕ್ಷಣವಿಲ್ಲದಿರುವುದು ಮತ್ತು ದೌರ್ಜನ್ಯಗಳಿಗೆ ಒಳಗಾಗಿ ಭೌತಿಕ, ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತಿದ್ದಾರೆ.


ದೆಹಲಿಯಲ್ಲಿರುವ ಟೆಕ್ಸಾಸ್ ಮೂಲದ ಲಾಭರಹಿತ ಸಂಸ್ಥೆ ಮಿರಾಕಲ್ ಸಂಸ್ಥೆ ಈ ಮಕ್ಕಳ ಭವಿಷ್ಯವನ್ನು ರೂಪಿಸಲು ಪ್ರಯತ್ನಿಸುತ್ತಿದೆ. 2000 ನೇ ಇಸವಿಯಲ್ಲಿ ಕ್ಯಾರೋಲಿನ್ ಬೊಡ್ರೆಕ್ಸ್ರಿಂದ ಸ್ಥಾಪಿತವಾದ ಸಂಸ್ಥೆ, ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಕುಟುಂಬಗಳನ್ನು ಹುಡುಕುವುದಲ್ಲದೇ, ಅನಾಥ ಮಕ್ಕಳಿಗೆ ಎಲ್ಲಾ ರೀತಿಯ ಆಸರೆ ನೀಡುವಂತೆ ಮಕ್ಕಳ ಪಾಲನಾ ಸಂಸ್ಥೆಗಳನ್ನು ಬಲಪಡಿಸುತ್ತಿದೆ.


ಮಿರಾಕಲ್ ಸಂಸ್ಥೆ ಸಂಸ್ಥೆ ಮಕ್ಕಳಿಗೆ ತರಬೇತಿ ನೀಡುತ್ತಿರುವುದು.


ಕಳೆದ ಒಂಬತ್ತು ವರ್ಷಗಳಿಂದ ಮಿರಾಕಲ್ ಸಂಸ್ಥೆ ಭಾರತದಲ್ಲಿ 106 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ 6,075 ಅನಾಥ ಮಕ್ಕಳನ್ನು ಬೆಂಬಲಿಸುತ್ತಿದೆ. ಇದಲ್ಲದೇ ಮಕ್ಕಳ ಜೀವನವನ್ನು ಸುಧಾರಿಸಲು 504 ಸಿಬ್ಬಂದಿಗಳಿಗೆ ಮಕ್ಕಳ ಅಭಿವೃದ್ಧಿ ಮತ್ತು ಶಿಸ್ತು ಪಾಲನೆ ವಿಷಯಗಳಲ್ಲಿ ತರಬೇತಿಯನ್ನು ನೀಡಿದೆ.


“ಎಲ್ಲಾ ಮಕ್ಕಳಿಗೂ ಶಿಕ್ಷಣ, ಅವರನ್ನು ಪ್ರೀತಿಸುವ ಜನ ಮತ್ತು ಕುಟುಂಬ ಸಿಗಬೇಕೆಂದು ನಾನು ಆಶಿಸುತ್ತೇನೆ. ಇದೇ ಉದ್ದೇಶದಿಂದ ನಾನು ಮಿರಾಕಲ್ ಸಂಸ್ಥೆ ಸ್ಥಾಪಿಸಿದೆ. ನಾವು ಹಲವಾರು ವರ್ಷಗಳಿಂದ ಭಾರತದಲ್ಲಿ ಮತ್ತು ಪ್ರಪಂಚದ ಇತರ ಬಾಗಗಳ ಅನಾಥ ಮಕ್ಕಳ ಬದುಕನ್ನು ಹಸನುಗೊಳಿಸಿ ನಮ್ಮ ಉದ್ದೇಶವನ್ನು ಈಡೇರಿಸುವ ಸಲುವಾಗಿ ಬಹಳಷ್ಟು ಕೆಲಸ ಮಾಡುತಿದ್ದೇವೆ” ಎಂದು ಮಿರಾಕಲ್ ಸಂಸ್ಥೆ ಸಂಸ್ಥೆಯ ಸಂಸ್ಥಾಪಕಿ ಕ್ಯಾರೋಲಿನಾ ಬೋಡ್ರೆಕ್ಸ್ ಹೇಳುತ್ತಾರೆ.


ಮಿರಾಕಲ್ ಸಂಸ್ಥೆ ಜನ್ಮ ತಾಳಿದ ಬಗೆ

28 ವರ್ಷ ವಯಸ್ಸಿನಲ್ಲಿ ಕ್ಯಾರೋಲಿನಾ ಬೋಡ್ರೆಕ್ಸ್ ಆಸ್ಟಿನ್ನಿನ ಒಂದು ಟೀವಿ ಸ್ಟೇಷನ್ನಿನ್ನಲ್ಲಿ ಅಕೌಂಟ್ ಎಕ್ಸೆಕ್ಯೂಟಿವ್ ಕಾರ್ಯ ನಿರ್ವಹಿಸುತಿದ್ದರು. ಅವರು ಉತ್ತಮ ಸಂಪಾದನೆಯನ್ನು ಹೊಂದಿದ್ದರು. ಸ್ವಂತ ಮನೆಯಿತ್ತು. ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದರು. ಇದೆಲ್ಲವೂ ಇದ್ದು ಯಾವುದಾದರೂ ಮಹತ್ವದ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂಬ ಅಭಿಲಾಷೆಯನ್ನು ಹೊಂದಿದ್ದರು.


ಇದರಿಂದಾಗಿ ತನ್ನ ಯಾಂತ್ರಿಕ ಜೀವನ ಮತ್ತು ಕೆಲಸ ಇವೆರಡನ್ನೂ ತೊರೆದು ತನ್ನಂತೆಯೇ ಧ್ಯೇಯೋದ್ದೇಶಗಳನ್ನು ಹೊಂದಿದ್ದ ಸ್ನೇಹಿತೆ ಕ್ರಿಸ್ ಮೊನ್ಹೆಮ್ ಳೊಂದಿಗೆ ದೇಶ ಸುತ್ತಲು ಪ್ರಾರಂಭಿಸಿದರು. ಇದು ಮಿರಾಕಲ್ ಸಂಸ್ಥೆ ಸ್ಥಾಪನೆಗೆ ಮೊದಲ ಹೆಜ್ಜೆಯಾಯಿತು.

“ನಮ್ಮ ಪ್ರಯಾಣದಲ್ಲಿ ನಾವು ಭಾರತಕ್ಕೆ ಭೇಟಿ ನೀಡಿದೆವು. ಕ್ರಿಸ್ ಒರಿಸ್ಸಾದಲ್ಲಿ ತಾನು ಪ್ರಾಯೋಜಿಸಿರುವ ಒಬ್ಬ ಅನಾಥ ಬಾಲಕನನ್ನು ನೋಡಲು ಇಚ್ಛಿಸಿದ್ದಳು. ಆ ಹುಡುಗ ನಾನು ನೋಡಿದ ಮೊದಲ ಅನಾಥ ಹುಡುಗನಾಗಿದ್ದ. ಅವನನ್ನು ನೋಡಿ ನಾನು ಒಂದು ಕ್ಷಣ ಮೂಕಳಾದೆ. ನಾವು ಆ ಹಳ್ಳಿಯಲ್ಲಿ ವಾಸ್ತವ್ಯ ಹೂಡಿದ ಕೆಲವು ದಿನಗಳ ನಂತರ ದಾಮೋದರ್ ಸಾಹೂ ಎಂಬುವರು ನಮ್ಮನ್ನು ಒಂದು ರಾತ್ರಿ ಭೊಜನಕ್ಕೆ ಆಹ್ವಾನಿಸಿದರು. ನಾವು ಅವರ ಸ್ಥಳಕ್ಕೆ ಹೋದಾಗ ನೂರಕ್ಕಿಂತ ಹೆಚ್ಚು ಮಂದಿ ಅನಾಥ ಮಕ್ಕಳಿಂದ ಸ್ವಾಗತಿಸಲ್ಪಟ್ಟೆವು. ದಾಮೋದರ್ ಸಾಹೂ ಎರಡು ದಶಕಗಳ ಹಿಂದೆ ಒಂದು ಅನಾಥ ಮಗುವನ್ನು ದತ್ತು ತೆಗೆದುಕೊಂಡಿದ್ದರು ಮತ್ತು ವರ್ಷಗಳು ಉರುಳಿದಂತೆ ಹೆಚ್ಚು ಹೆಚ್ಚು ಅನಾಥ ಮಕ್ಕಳನ್ನು ಪೋಷಿಸತೊಡಗಿದ್ದರು. ಅವರ ಕಥೆಯನ್ನು ಕೇಳಿ ನನಗೆ ಮಹದಾನಂದವಾಯಿತು” ಎಂದು ಕ್ಯಾರೋಲಿನಾ ನೆನೆಪಿಸಿಕೊಳ್ಳುತ್ತಾರೆ.


ಅನಾಥ ಮಕ್ಕಳೊಂದಿಗೆ ಕ್ಯಾರೋಲಿನ್ ಬೊಡ್ರೆಕ್ಸ್, ಸಂಸ್ಥಾಪಕಿ, ಮಿರಾಕಲ್ ಸಂಸ್ಥೆ


ಕ್ರಿಸ್ ಮತ್ತು ಕ್ಯಾರೋಲಿನ್ ಮಕ್ಕಳ ಜೊತೆ ಸಮಯ ಕಳೆಯುವಾಗ ಶೀಬಾನಿ ಎಂಬ ಚಿಕ್ಕ ಹುಡುಗಿ ಅವರ ಬಳಿ ಬಂದಳು. ಕೆಲವು ನಿಮಿಷಗಳ ನಂತರ ಶೀಬಾನಿ ಒಂದಷ್ಟು ಪ್ರೀತಿ ವಾತ್ಸಲ್ಯವನ್ನು ಗಳಿಸುವ ಸಲುವಾಗಿ ಕ್ಯಾರೋಲಿನ್ರ ತೊಡೆಯ ಮೇಲೆ ತಲೆಯಿಟ್ಟು ಮಲಗಿದಳು.


“ಆ ಒಂದು ಕ್ಷಣದಲ್ಲಿ ನನ್ನ ಹೃದಯ ಕರಗಿ ಹೋಯಿತು. ನಾನು ಆಕೆಗೆ ಲಾಲಿ ಹಾಡೊಂದನ್ನು ಹಾಡಿ ಅವಳನ್ನು ನನ್ನ ತೊಡೆಯ ಮೇಲೆಯೇ ತೂಗಿ ಮಲಗಿಸಿದೆ. ಆಕೆಯನ್ನು ತೊಟ್ಟಿಲಿನಲ್ಲಿ ಮಲಗಿಸಲೆಂದು ಮಹಡಿಯ ಮೊದಲ ಅಂತಸ್ತಿಗೆ ಹೋದೆ. ಅಲ್ಲಿ ಒಂದೂ ತೊಟ್ಟಿಲು ಇಲ್ಲದೆ ಇರುವುದನ್ನು ಕಂಡು ನನಗೆ ಆಘಾತವಾಯಿತು. ಇಡೀ ಕೊಠಡಿಯ ತುಂಬಾ ಮರದ ಹಲಗೆಗಳಿಂದ ಮಾಡಿದ ಗಡುಸಾದ ಹಾಸಿಗೆಗಳಿದ್ದವು. ನನಗೆ ಕೋಪ ಬಂದಿತು. ತೀವ್ರವಾದ ನೋವುಂಟಾಯಿತು. ತುಂಬಾ ಕಸಿವಿಸಿಯಾಯಿತು. ಅಂದೇ ನಾನು ಈ ಮಕ್ಕಳಿಗಾಗಿ ಏನನ್ನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿಕೊಂಡೆ” ಎನ್ನುತ್ತಾರೆ ಕ್ಯಾರೋಲಿನಾ.


ಕ್ಯಾರೋಲಿನಾ ತಮ್ಮ ಪ್ರವಾಸವನ್ನು ಮುಗಿಸಿಕೊಂಡು ಟೆಕ್ಸಾಸಿಗೆ ಹಿಂದಿರುಗಿದ ತಕ್ಷಣ ಮಿರಾಕಲ್ ಸಂಸ್ಥೆ ಪ್ರಾರಂಭಿಸಲು ಕಾಗದ ಪತ್ರಗಳನ್ನು ತಯಾರಿಸಿದರು.


ಮುಂದಿನ ಉತ್ತಮ ದಿನಗಳಿಗಾಗಿ ಒಂದು ಪ್ರಯತ್ನ


ಹಲವಾರು ಕಾರ್ಯಕ್ರಮಗಳ ಮೂಲಕ ಅನಾಥ ಮಕ್ಕಳ ಬದುಕನ್ನು ಹಸನುಗೊಳಿಸುವ ಸಲುವಾಗಿ ಮಿರಾಕಲ್ ಸಂಸ್ಥೆ ಪ್ರಪಂಚದಾದ್ಯಂತ ಕೆಲಸ ಮಾಡುತ್ತಿದೆ. ಈ ಸಂಸ್ಥೆಯು 2011 ರಲ್ಲಿ ಬಾರತಕ್ಕೆ ಕಾಲಿಟ್ಟ ತಕ್ಷಣದಿಂದಲೇ ದೇಶದಲ್ಲಿ ತನ್ನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಾರಂಭಿಸಿತು.


ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿರುವ ದೇಶದ 106 ಮಕ್ಕಳ ಪಾಲನಾ ಕೇಂದ್ರಗಳಲ್ಲಿರುವ ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮಿರಾಕಲ್ ಸಂಸ್ಥೆಯು ಭಾರತ ಸರ್ಕಾರದ ಸಹಭಾಗಿತ್ವದೊಂದಿಗೆ ಕೆಲಸ ಮಾಡುತ್ತಿದೆ. ಬಹಳಷ್ಟು ಅನಾಥ ಮಕ್ಕಳು ತಮ್ಮ ಜೀವನದಲ್ಲಿ ಕಹಿ ಅನುಭವಗಳನ್ನು ಪಡೆದಿರುತ್ತಾರೆ ಮತ್ತು ಕಳೆದುಕೊಂಡಿರುವ ತಮ್ಮ ಪೋಷಕರನ್ನು ಮರೆಯುವುದು ಅವರಿಗೆ ಸುಲಭವಾಗಿ ಸಾಧ್ಯವಿರುವುದಿಲ್ಲ. ಇದಕ್ಕಾಗಿ ಮಿರಾಕಲ್ ಸಂಸ್ಥೆ ಅಂತಹ ಮಕ್ಕಳಿಗೆ ಬೆಂಬಲ, ಮಾರ್ಗದರ್ಶನ ಮತ್ತು ಉತ್ತೇಜನ ನೀಡಲು ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ.


ಅನಾಥ ಮಕ್ಕಳಿಗಾಗಿ ಮಿರಾಕಲ್ ಸಂಸ್ಥೆಯ ಯುವ ರಾಯಭಾರಿ ಕಾರ್ಯಕ್ರಮ


“ಭಾರತದ ಹಲವಾರು ಪ್ರದೇಶಗಳಲ್ಲಿ ಕೆಲಸ ಮಾಡುವ ವೃತ್ತಿಪರರ ಗುಂಪೊಂದನ್ನು ನಾವು ಹೊಂದಿದ್ದೇವೆ. ಅವರು ಬೇರೆ ಬೇರೆ ಮಕ್ಕಳಪಾಲನಾ ಕೇಂದ್ರಗಳಲ್ಲಿರುವ ಅನಾಥ ಮಕ್ಕಳಿಗೆ ಜೀವನ ಕೌಶಲ್ಯ ಮತ್ತು ವೃತ್ತಿ ನಿರ್ವಹಣಾ ತರಬೇತಿಗಳನ್ನು ನೀಡುತ್ತಾರೆ. ಇದರ ಜೊತೆಗೆ ಈ ವೃತ್ತಿಪರರ ಗುಂಪು ಕೌಟುಂಬಿಕ ಸಬಲೀಕರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನಾಥ ಮಕ್ಕಳು ಅವರ ಸಂಬಂಧಿಕರೊಂದಿಗೆ ಪುನರ್ಮಿಲನಗೊಳ್ಳುವಂತೆ ಅಥವಾ ಅನಾಥ ಮಕ್ಕಳಿಗೆ ಪ್ರೀತಿ-ವಾತ್ಸಲ್ಯ ತೋರುವ ಒಂದು ದೃಢವಾದ ಕುಟುಂಬವು ಅವರನ್ನು ದತ್ತು ತೆಗೆದುಕೊಳ್ಳುವಂತೆ ಮಾಡುತ್ತಾರೆ. ಅನಾಥ ಮಕ್ಕಳಿಗೆ ಕೇವಲ ಒಬ್ಬರು ಪೋಷಕರಿದ್ದು ಅವರು ಆರ್ಥಿಕ ತೊಂದರೆಯನ್ನು ಅನುಭವಿಸುತಿದ್ದರೆ, ಮಿರಾಕಲ್ ಸಂಸ್ಥೆ ಅವರಿಗೆ ಸಂಪನ್ಮೂಲಗಳನ್ನು ನೀಡಿ ಸಹಾಯ ಮಾಡುತ್ತದೆ” ಎನ್ನತ್ತಾರೆ ಕ್ಯಾರೋಲಿನಾ.


ಮಕ್ಕಳಿಗೆ ತರಬೇತಿ ನೀಡುವುದೇ ಅಲ್ಲದೆ ಮಕ್ಕಳ ಜೀವನವನ್ನು ರೂಪಿಸುವ ಜವಾಬ್ದಾರಿ ಹೊತ್ತಿರುವ ಮಕ್ಕಳ ಪಾಲನಾ ಕೇಂದ್ರದಲ್ಲಿರುವ ಸಿಬ್ಬಂದಿಗಳಿಗೂ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ಮಿರಾಕಲ್ ಸಂಸ್ಥೆ ಏರ್ಪಡಿಸುತ್ತದೆ. ಸಂಸ್ಥೆಯ ನೌಕರರು ಸಿಸಿಐ ಸಿಬ್ಬಂದಿಗಳಿಗೆ ಮಕ್ಕಳ ಅಭಿವೃದ್ಧಿಯ ಮುಖ್ಯ ಸಂಗತಿಗಳಾದ ಆರೋಗ್ಯ ರಕ್ಷಣೆ, ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಮಕ್ಕಳ ಮನಶಾಸ್ತ್ರದ ಬಗ್ಗೆ ತಿಳುವಳಿಕೆ ನೀಡಿ ಎಲ್ಲಾ ಮಕ್ಕಳಿಗೂ ಇದರಿಂದ ಅನುಕೂಲವಾಗುವಂತೆ ನೋಡಿಕೊಳ್ಳುತ್ತಾರೆ.


ಈಗ ಮಿರಾಕಲ್ ಫೌಂಡೇಶನ್ನಿನ್ನ ದೆಹಲಿ ಕಚೇರಿಯಲ್ಲಿ 66 ನೌಕರರು ಕೆಲಸ ಮಾಡುತಿದ್ದಾರೆ. ಸಂಸ್ಥೆಯ ಚಟುವಟಿಕೆಗಳಿಗೆ ಬಹಳಷ್ಟು ಹಣ ಖಾಸಗಿ ವ್ಯಕ್ತಿಗಳಿಂದ ಬರುತ್ತಿರುವುದರಿಂದ, ದಾನಿಗಳಿಗೆ ತಮ್ಮ ಹಣದಿಂದ ಅನಾಥ ಮಕ್ಕಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತಿದೆ ಎಂಬುದನ್ನು ಮನದಟ್ಟು ಮಾಡಲು ಸಂಸ್ಥೆಯು ಥ್ರೈವ್ ಸ್ಕೇಲ್ ಎಂಬ ಮಾನದಂಡವನ್ನು ಅಭಿವೃದ್ಧಿಪಡಿಸಿದೆ. ಈ ಮಾನದಂಡವನ್ನು ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಅನುಷ್ಠಾನತೆಯನ್ನು ಅಳೆಯಲು ಉಪಯೋಗಿಸುವ ಅಳತೆಯ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.


ಇದಲ್ಲದೇ ವರ್ಲ್ಡ್ ಎಕಾನಾಮಿಕ್ ಫೋರಮ್, ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ (ಒ ಎನ್ ಜಿ ಸಿ), ಟಾಟಾ ಕ್ಯಾಪಿಟಲ್, ಐಐಎಫ್ಎಲ್ ವೆಲ್ತ್ ಮ್ಯಾನೇಜ್ ಮೆಂಟ್, ವಿ-ಗಾರ್ಡ್ ಮತ್ತು ಬ್ಲಾಕ್ ರಾಕ್ ನಂತಹ ಪ್ರತಿಷ್ಠಿತ ಸಂಸ್ಥೆಗಳು ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೈಗೊಂಡಿರುವ ಪ್ರಯತ್ನಗಳನ್ನು ಬೆಂಬಲಿಸುವ ಸಲುವಾಗಿ ಮಿರಾಕಲ್ ಸಂಸ್ಥೆ ಈ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ.


ಸಿಸಿಐ ಸಿಬ್ಬಂದಿಗಳಿಗೆ ಮಕ್ಕಳ ಅವಶ್ಯಕತೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಿರಾಕಲ್ ಫೌಂಡೇಸನ್ನಿನ ನೌಕರರು ನಿರತರಾಗಿರುವುದು.


ಅನಾಥ ಮಕ್ಕಳ ಜೀವನವನ್ನು ಸಮೃದ್ಧಗೊಳಿಸುತ್ತಿರುವ ಸಂಸ್ಥೆ


ಇಲ್ಲಿಯವರೆಗೆ ಮಿರಾಕಲ್ ಸಂಸ್ಥೆ ಭಾರತದ 6,075 ಅನಾಥ ಮಕ್ಕಳಿಗೆ ಧ್ವನಿಯಾಗಿದೆ. ಇವರಲ್ಲಿ ಸುಮಾರು 687 ಮಕ್ಕಳನ್ನು ಕುಟುಂಬಗಳೊಂದಿಗೆ ಸೇರ್ಪಡೆಗೊಳಿಸಲಾಗಿದೆ, 320 ಮಕ್ಕಳು ಜೀವನ ಕೌಶಲ್ಯ ಮತ್ತು ತಂತ್ರಜ್ಞಾನದ ತರಬೇತಿ ಪಡೆದಿದ್ದಾರೆ, 200 ಕ್ಕಿಂತ ಹೆಚ್ಚು ಮಕ್ಕಳು ಮಾನಸಿಕ ಆರೋಗ್ಯದ ಚಿಕಿತ್ಸೆ ಪಡೆದಿದ್ದಾರೆ. ಇದರ ಜೊತೆಗೆ 504 ಸಿಬ್ಬಂದಿ ಕೂಡ ಮಕ್ಕಳ ಅಭಿವೃದ್ಧಿ ವಿಷಯಗಳಲ್ಲಿ ತರಬೇತಿ ಪಡೆದಿದ್ದಾರೆ.

“ಈ ಕಾರ್ಯಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ ನಿಜವಾದ ಬದಲಾವಣೆಯನ್ನು ಕಾಣಬಹುದು ಎಂದು ನನಗೆ ಅನ್ನಿಸಿದೆ. 2040 ರ ಹೊತ್ತಿಗೆ ಪ್ರತಿಯೊಂದು ಅನಾಥ ಮಗುವು ಸಮಾಜದಲ್ಲಿ ಎಲ್ಲಾ ಇತರ ಮಕ್ಕಳ ಸಮಾನವಾಗಿ ಬದುಕುವಂತೆ ಮಾಡಲು ಪ್ರೀತಿ, ಭದ್ರತೆ ಮತ್ತು ಬೆಂಬಲಗಳನ್ನು ಒದಗಿಸುವುದು ನನ್ನ ಗುರಿಯಾಗಿದೆ. ಇದು ಅವರ ಅವಶ್ಯಕತೆಯಲ್ಲ. ಬದಲಾಗಿ ಅವರು ಅದಕ್ಕೆ ಅರ್ಹರಾಗಿದ್ದಾರೆ ಎಂಬುದು ವಾಸ್ತವದ ಸಂಗತಿ” ಎನ್ನುತ್ತಾರೆ ಕ್ಯಾರೋಲಿನಾ.
Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close