ಮೋದಿಯವರ 69ನೇ ಹುಟ್ಟುಹಬ್ಬದಂದು ಹಸಿರು ಭಾರತಕ್ಕಾಗಿ ಅವರು ಕೈಗೊಂಡ ಕಾರ್ಯಕ್ರಮಗಳ ಮೇಲೊಂದು ನೋಟ

2014ರಲ್ಲಿ ಭಾರತದ ಪ್ರಧಾನಿಯಾಗಿ ಆಯ್ಕೆಯಾದ ಶ್ರೀ ನರೇಂದ್ರ ಮೋದಿ ದೇಶದಲ್ಲಿ ಬದಲಾವಣೆಯ ಹೊಸ ಪರ್ವವನ್ನು ಆರಂಭಿಸುವ ಇಚ್ಚೆ ತೋರಿದ್ದರು. ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಆಶ್ವಾಸನೆ ನೀಡಿದ ಹಲವು ಮುಖ್ಯ ವಿಷಯಗಳಲ್ಲಿ ಸ್ವಚ್ಛತೆಯೂ ಒಂದು. ಸ್ವಚ್ಛ ಭಾರತ ಅಭಿಯಾನ, ನಮಾಮಿ ಗಂಗಾ ಯೋಜನೆಯಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

ಮೋದಿಯವರ 69ನೇ ಹುಟ್ಟುಹಬ್ಬದಂದು ಹಸಿರು ಭಾರತಕ್ಕಾಗಿ ಅವರು ಕೈಗೊಂಡ ಕಾರ್ಯಕ್ರಮಗಳ ಮೇಲೊಂದು ನೋಟ

Tuesday September 17, 2019,

4 min Read

ಹವಾಮಾನ ಬದಲಾವಣೆ ತನ್ನ ಉಚ್ಛ್ರಾಯ ಸ್ಥಿತಿ ತಲುಪಿದಂತಿದೆ ಹಾಗೂ ರಾಷ್ಟ್ರೀಯ, ಅಂತರಾಷ್ಟ್ರೀಯ ಸಂಘಟನೆಗಳು ಕಾರ್ಯರೂಪಕ್ಕೆ ಬರಲು ಇದು ಸೂಕ್ತ ಸಮಯವೆ. ಸ್ಟೇಟ್‌ ಆಫ್‌ ಇಂಡಿಯಾʼಸ್‌ ಎನ್ವಿರಾನ್ಮೆಂಟ್‌ (ಎಸ್‌ಒಈ) ವರದಿಯ ಪ್ರಕಾರ ಜಾಗತಿಕ ಪರಿಸರ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತದ ಸ್ಥಾನ 2016 ರಲ್ಲಿನ 141 ನೇ ಸ್ಥಾನದಿಂದ 2018 ರಲ್ಲಿ 177 ನೇ ಸ್ಥಾನಕ್ಕೆ ಕುಸಿದಿದೆ.


ದೇಶದ ಪ್ರತಿಯೊಬ್ಬ ಪ್ರಜೆಯೂ ಪರಿಸರ ಸಂರಕ್ಷಣೆಯ ಭಾಗವಾಗಬೇಕಿರುವ ಈ ಸಮಯದಲ್ಲಿ, ಸರಕಾರವೂ ಸಹ ತನ್ನ ಉಪಕ್ರಮಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪ್ರತಿ ಮನೆಗೂ ಶೌಚಾಲಯ ನಿರ್ಮಿಸುವ ಕಾರ್ಯದಿಂದ, ಸ್ವಚ್ಛ ಭಾರತದಂತ ಯೋಜನೆಗಳ ಮೂಲಕ ಸ್ವಚ್ಛತೆಗೆ ಹಾಗೂ ನೈರ್ಮಲ್ಯತೆಗೆ ಆದ್ಯತೆ ನೀಡುವವರೆಗೂ ಮೋದಿ ಸರಕಾರವು ಜನರ ಗಮನವನ್ನು ಸೆಳೆಯುವುದರಲ್ಲಿ ಹಾಗೂ ಒಳ್ಳೆಯ ಕಾರ್ಯಕ್ಕೆ ಬೆಂಬಲವನ್ನೂ ಗಳಿಸುವಲ್ಲಿ ಯಶಸ್ವಿಯಾಗಿದೆ.


2014 ರಿಂದಲೂ ಮಹಾತ್ಮಾ ಗಾಂಧಿಯವರ ಜನ್ಮವಾರ್ಷಿಕೋತ್ಸವವನ್ನು ಒಂದಿಲ್ಲೊಂದು ಪರಿಸರಕ್ಕೆ ಸಂಬಂಧಿಸಿದ ಉಪಕ್ರಮವನ್ನು ಆರಂಭಿಸುವುದರೊಂದಿಗೆ ಭಾರತದಲ್ಲಿ ಆಚರಿಸಲಾಗುತ್ತಿದೆ. ಈ ಅಕ್ಟೋಬರ್‌ನಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ಲಾಸ್ಟಿಕ್‌ ಬಳಕೆಯ ವಿರುದ್ಧ ಹೊಸದೊಂದು ʼಸಾಮೂಹಿಕ ಚಳುವಳಿʼ ಆರಂಭಿಸಲು ಸಜ್ಜಾಗಿದ್ದಾರೆ.


ಯುವರ್‌ಸ್ಟೋರಿ, ಪ್ರಸ್ತುತದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೋದಿ ಸರಕಾರದ ಪರಿಸರ ಸಂರಕ್ಷಣಾ ಹಾಗೂ ಸ್ವಚ್ಛತಾ ಉಪಕ್ರಮಗಳು ಹಾಗೂ ಅದರ ಪ್ರಭಾವದ ಬಗ್ಗೆ ದೃಷ್ಟಿಹರಿಸಿದೆ.

ನಮಾಮಿ ಗಂಗೆ ಕಾರ್ಯಕ್ರಮ

ನರೇಂದ್ರ ಮೋದಿ 2014ರಲ್ಲಿ ಭಾರತದ ಪ್ರಧಾನಿಯಾಗಿ ಕಾರ್ಯಾರಂಭಿಸಿದರು. ಅದೇ ವರ್ಷದ ಜೂನ್‌ ತಿಂಗಳಿನಲ್ಲಿ, ಗಂಗಾ ನದಿಯ ಸಾಂಸ್ಕೃತಿಕ ಹಾಗೂ ಪರಿಸರದ ಪ್ರಾಮುಖ್ಯತೆಯನ್ನು ಗುರುತಿಸಿ, ʼನಮಾಮಿ ಗಂಗೆ ಕಾರ್ಯಕ್ರಮʼವನ್ನು ಕೇಂದ್ರ ಸರಕಾರ ಅನುಮೋದಿಸಿತು.


ಗಂಗಾ ನದಿಯ ಉಳಿವಿಗಾಗಿ ಹಾಗೂ ಅದರ ಪುನರುತ್ಥಾನಕ್ಕಾಗಿ ಕೇಂದ್ರವು 20,000 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತು. ಗಂಗಾ ನದಿಯ ಸ್ಥಿತಿಯನ್ನು ಸುಧಾರಿಸಲು ಹಲವು ಕಾರ್ಯಕ್ರಮಗಳಿದ್ದರೂ ಮೋದಿ ಸರಕಾರ ಈ ಸವಾಲನ್ನು ವಿಶಿಷ್ಟ ರೀತಿಯಲ್ಲಿ ಎದುರಿಸಲು ನಿರ್ಧರಿಸಿತು. ಇದರ ಕ್ರಮವು ನದಿಯ ದಡದಲ್ಲಿ ವಾಸಿಸುವ ಜನರನ್ನು ಒಳಗೊಂಡು ಅವರಿಗೆ ಸುಸ್ಥಿರ ಜೀವನೋಪಾಯವನ್ನು ಸಾಧಿಸಲು ಮತ್ತು ಅದರ ಪರಿಣಾಮವನ್ನು ಮೊದಲ ಬಾರಿಗೆ ಅನುಭವಿಸಲು ಸಹಾಯ ಮಾಡಿತು. ಇದು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತಿ ರಾಜ್ ಸಂಸ್ಥೆಗಳು ಸೇರಿದಂತೆ ತಳಮಟ್ಟದ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಇಚ್ಛಿಸಿತು.


ಒಳಚರಂಡಿ ಸಂಸ್ಕರಣಾ ಸಾಮರ್ಥ್ಯ, ನದಿಯ ಮುಂಭಾಗದ ಅಭಿವೃದ್ಧಿ ಮತ್ತು ಮೇಲ್ಮೈ ಶುಚಿಗೊಳಿಸುವಿಕೆಯನ್ನು ರಚಿಸಿರುವುದು ಇದರ ಪ್ರಮುಖ ಸಾಧನೆಗಳು. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಸ್ವಚ್ ಗಂಗಾ ರಾಷ್ಟ್ರೀಯ ಮಿಷನ್ (ಎನ್‌ಎಂಸಿಜಿ) ಮತ್ತು ರಾಜ್ಯ ಮಟ್ಟದಲ್ಲಿ ರಾಜ್ಯ ಕಾರ್ಯಕ್ರಮ ನಿರ್ವಹಣಾ ಗುಂಪುಗಳು (ಎಸ್‌ಪಿಎಂಜಿ) ಜಾರಿಗೊಳಿಸುತ್ತಿವೆ. ಇದಲ್ಲದೆ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ 63 ಒಳಚರಂಡಿ ನಿರ್ವಹಣಾ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಹಸಿರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

ತಾಂತ್ರಿಕ ಅಥವಾ ಕೈಗಾರಿಕಾ ಕೌಶಲ್ಯದಿಂದ ದೂರಸರಿದು, ಹಸಿರು ಕೌಶಲ್ಯ ಅಭಿವೃದ್ಧಿಗೆ ಒತ್ತುನೀಡುವ ಕಾರ್ಯಕ್ರಮವನ್ನು ಜೂನ್ 2017 ರಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪ್ರಾರಂಭಿಸಿತು.


‘ಹಸಿರು ಕೌಶಲ್ಯಗಳು’ ಪರಿಸರವನ್ನು ಸಂರಕ್ಷಿಸಲು ಮತ್ತು ಪುನಃಸ್ಥಾಪಿಸಲು ಮತ್ತು ಸುಸ್ಥಿರ ಭವಿಷ್ಯವನ್ನು ಸೃಷ್ಟಿಸಲು ತಮ್ಮ ಕೊಡುಗೆ ನೀಡುವವರನ್ನು ಕುರಿತು ಸೂಚಿಸುತ್ತದೆ. ಆದ್ದರಿಂದ, ಪರಿಸರ ಮತ್ತು ಅರಣ್ಯ ಕ್ಷೇತ್ರದಲ್ಲಿ ಯುವಕರಲ್ಲಿ ಕೌಶಲ್ಯಗಳನ್ನು ಬೆಳೆಸುವ ಬಗ್ಗೆ ಯೋಜನೆಯು ಗಮನಹರಿಸುತ್ತದೆ. ಪ್ರಾಯೋಗಿಕ ಹಂತದಲ್ಲಿ, ಸಚಿವಾಲಯವು 10 ವಿವಿಧ ಸ್ಥಳಗಳಲ್ಲಿ ಮೂರು ತಿಂಗಳ ಕಾಲ ಜೀವವೈವಿಧ್ಯ ಸಂರಕ್ಷಣಾವಾದಿಗಳು ಮತ್ತು ಪ್ಯಾರಾ-ಟ್ಯಾಕ್ಸಾನಮಿಸ್ಟ್‌ಗಳಿಗೆ ಕೋರ್ಸ್‌ಗಳನ್ನು ಪರಿಚಯಿಸಿತು.


ಮೇ 2018 ರಲ್ಲಿ ಜಿಎಸ್‌ಡಿಪಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡುವಾಗ ಅಂದಿನ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಹರ್ಷ್ ವರ್ಧನ್, ಮುಂದಿನ ವರ್ಷದ ವೇಳೆಗೆ ಜಿಎಸ್‌ಡಿಪಿ ಮೂಲಕ 2.25 ಲಕ್ಷ ಜನರಿಗೆ ಉದ್ಯೋಗ ನೀಡಲಾಗುವುದು ಮತ್ತು 2021 ರ ವೇಳೆಗೆ ಸುಮಾರು ಐದು ಲಕ್ಷ ಜನರಿಗೆ ಉದ್ಯೋಗ ನೀಡಲಾಗುವುದು ಎಂದು ಹೇಳಿದರು.



ಸ್ವಚ್ಛ ಭಾರತ ಅಭಿಯಾನ

ರಾಷ್ಟ್ರೀಯ ಸ್ವಚ್ಛತಾ ಕಾರ್ಯಕ್ರಮ - ಸ್ವಚ್ಛ ಭಾರತ ಅಭಿಯಾನ - ಬಹುಶಃ ಮೋದಿ ಸರ್ಕಾರವು ಕೈಗೊಂಡ ಪರಿಸರಕ್ಕೆ ಸಂಬಂಧಿಸಿದ ಅತ್ಯಂತ ಜನಪ್ರಿಯ ಅಭಿಯಾನವಾಗಿದೆ. ಅಕ್ಟೋಬರ್ 2, 2014 ರಂದು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯಂದು ಪ್ರಾರಂಭವಾದ ಈ ಆಂದೋಲನವು ಭಾರತದಾದ್ಯಂತ ರಸ್ತೆಗಳನ್ನು ಸ್ವಚ್ಛ ಗೊಳಿಸಲು ಜನರನ್ನ ಬೀದಿಗಿಳಿಯಲು ಪ್ರೇರೇಪಿಸಿತು. ಸ್ವತಃ ಮೋದಿಯವರು ಪೊರಕೆ ಹಿಡಿದು ರಸ್ತೆಯನ್ನ ಸ್ವಚ್ಛಗೊಳಿಸಿದ ಚಿತ್ರಪಟಗಳು ದೇಶಾದ್ಯಂತ ಸಂಚಲನ ಮೂಡಿಸಿದ್ದವು. ಇದು ತಮ್ಮ ಮೊದಲನೆ ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿಸಲು ಸರಕಾರಕ್ಕೆ ಮತ್ತಷ್ಟು ಪ್ರೇರೇಪಣೆ ನೀಡಿದವು.


ವರ್ಷಗಳಲ್ಲಿ, ಅಭಿಯಾನದ ವಿಭಿನ್ನ ಆವೃತ್ತಿಗಳನ್ನು ಪ್ರಾರಂಭಿಸಲಾಯಿತು. ಇದರಲ್ಲಿ ಗ್ರಾಮೀಣ ಸ್ವಚ್ಛ ಭಾರತ ಮಿಷನ್ ಮತ್ತು ಬಾಲ ಸ್ವಚ್ಛತಾ ಅಭಿಯಾನವೂ ಸೇರಿವೆ. ಗ್ರಾಮೀಣ ಭಾರತದಲ್ಲಿ ಅದೇ ಪ್ರಯತ್ನವನ್ನು ಕಾರ್ಯಗತಗೊಳಿಸಲು ಮತ್ತು ಮಕ್ಕಳಲ್ಲಿ ಕ್ರಮವಾಗಿ ಅದೇ ಮೌಲ್ಯಗಳನ್ನು ಬೆಳೆಸಲು ಇವು ಗಮನಹರಿಸಿದವು.

ಪ್ರಾರ್ಥನಾ ಸ್ಥಳಗಳಿಗಿಂತ ಶೌಚಾಲಯಗಳು ಮುಖ್ಯ

2013 ರಲ್ಲಿ ಪ್ರಧಾನಿ ಹುದ್ದೆಗೆ ತಮ್ಮ ಉಮೇದುವಾರಿಕೆಯನ್ನು ನಡೆಸುತ್ತಿರುವಾಗ, ದೆಹಲಿಯಲ್ಲಿ ಸುಮಾರು 7,000 ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು ದೇವಾಲಯಗಳಿಗಿಂತ ಮುಖ್ಯವಾಗಿ ಶೌಚಾಲಯಗಳನ್ನು ನಿರ್ಮಿಸಲು ಬಯಸುತ್ತಾರೆ ಎಂದು ಹೇಳಿದ್ದರು. ಅದರ ನಂತರ, ‘ಪೆಹ್ಲೆ ಶೌಚಾಲಯ, ಫಿರ್ ದೇವಾಲಯ’ ಎಂಬುದು ಜನಪ್ರಿಯ ಘೋಷಣೆಯಾಯಿತು.


ಸ್ವಚ್ಛ ಭಾರತ ಮಿಷನ್‌ನ ಭಾಗವಾಗಿ ಜಾರಿಗೆ ತರಲಾದ ಯೋಜನೆಯ ಅಂಗವಾಗಿ ಸರ್ಕಾರವು ಒಂಬತ್ತು ಕೋಟಿ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿಕೊಂಡಿದೆ ಮತ್ತು 32 ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳನ್ನು ಅಕ್ಟೋಬರ್ 2, 2014 ರಿಂದ ಮುಕ್ತ ಮಲವಿಸರ್ಜನೆ ಮುಕ್ತವೆಂದು ಘೋಷಿಸಲಾಗಿದೆ.

ಕಾಂಪೆನ್ಸೇಟರಿ ಅಫಾರೆಸ್ಟೇಷನ್ ಫಂಡ್ ಆಕ್ಟ್ (ಕ್ಯಾಂಪಾ)

ಮೋದಿ ನೇತೃತ್ವದ ಸರ್ಕಾರವು 2016 ರಲ್ಲಿ ಕಾಂಪೆನ್ಸೇಟರಿ ಅಫಾರೆಸ್ಟೇಷನ್ ಫಂಡ್ ಆಕ್ಟ್ (ಕ್ಯಾಂಪಾ) ಅನ್ನು ಪರಿಚಯಿಸಿತು. ಇದು ಅದೇ ವರ್ಷದಲ್ಲಿ ರಾಷ್ಟ್ರೀಯ ಪರಿಹಾರ ಅಫಾರೆಸ್ಟೇಷನ್ ಫಂಡ್ ಮತ್ತು ರಾಜ್ಯ ಕಾಂಪೆನ್ಸೇಟರಿ ಅಫಾರೆಸ್ಟೇಷನ್ ಫಂಡ್ ಅನ್ನು ಸ್ಥಾಪಿಸಿತು. ಈ ಕಾಯಿದೆಯಡಿ, ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬಳಸಲು ಉದ್ದೇಶಿಸಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ದಂಡ ವಿಧಿಸಲಾಗುತ್ತದೆ.


ಕಾಯಿದೆಯ ನಿಬಂಧನೆಗಳ ಪ್ರಕಾರ, ದಂಡ ಸಂಗ್ರಹಣೆಯಲ್ಲಿ ಕಾಡಿನ ಪ್ರಸ್ತುತ ನಿವ್ವಳ ಮೌಲ್ಯ, ಪರಿಹಾರದ ಅರಣ್ಯೀಕರಣ ಮತ್ತು ಪರಿಸರಕ್ಕೆ ಸಂಬಂಧಿಸಿದ ಇತರ ನಿರ್ದಿಷ್ಟ ಯೋಜನೆಗಳು ಸೇರಿವೆ. ಇದರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಿಧಿಗಳು ಕ್ರಮವಾಗಿ 10 ಪ್ರತಿಶತ ಮತ್ತು 90 ಪ್ರತಿಶತವನ್ನು ಪಡೆಯುತ್ತವೆ. ಉತ್ಪತ್ತಿಯಾಗುವ ಹಣವನ್ನು ಅರಣ್ಯ ಪರಿಸರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಬಳಸಲಾಗುತ್ತದೆ.


ವಿಷೇಷವೆಂದರೆ, ಇಂಡಿಯಾ ಸ್ಟೇಟ್‌ ಆಫ್‌ ಫಾರೆಸ್ಟ್‌ ವರದಿಯ ಪ್ರಕಾರ 2015 ಕ್ಕಿಂತ 2017 ರಲ್ಲಿ ಭಾರತ ತನ್ನ ಒಟ್ಟೂ ಅರಣ್ಯ ಪ್ರದೇಶದ ಶೇಕಡಾ ಒಂದು ಪ್ರತಿಶತದಷ್ಟು ಹೆಚ್ಚಳ ಕಂಡಿದೆ ಅಂದರೆ 6,788 ಚದುರ ಕಿಮೀನಷ್ಟು ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ ಎನ್ನಲಾಗಿದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.