ಕ್ಯಾನ್ಸರ್‌ ರೋಗಿಗಳಿಗೆ ಸಹಾಯ ಮಾಡಲು ತನ್ನ ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌ ಕೆಲಸ ತೊರೆದ ವ್ಯಕ್ತಿ

ಲವ್‌ ಹೀಲ್ಸ್‌ ಕ್ಯಾನ್ಸರ್‌ ಎಂಬ ಸರ್ಕಾರೇತರ ಸಂಸ್ಥೆಯೊಂದನ್ನು ಆರಂಭಿಸುವ ಮೂಲಕ ಕ್ಯಾನ್ಸರ್‌ ರೋಗಿಗಳ ಬದುಕಲ್ಲಿ ಬದಲಾವಣೆಯ ಅಲೆಯೊಂದನ್ನು ತಂದಿದ್ದಾರೆ ಕಿಶನ್‌ ಶಾಹ್‌.

ಕ್ಯಾನ್ಸರ್‌ ರೋಗಿಗಳಿಗೆ ಸಹಾಯ ಮಾಡಲು ತನ್ನ ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌ ಕೆಲಸ ತೊರೆದ ವ್ಯಕ್ತಿ

Monday April 27, 2020,

3 min Read

ಕೇವಲ ಎರಡು ವರ್ಷಗಳ ಹಿಂದೆ ನೋಡುವುದಾದರೆ, 29ರ ಹರೆಯದ ಕಿಶನ್‌ ಶಾಹ್‌, ಕಣ್ಣನ್ನು ಕಂಪ್ಯೂಟರ್‌ ಸ್ಕ್ರೀನ್‌ನಲ್ಲಿ ನೆಟ್ಟು, ಅಲುಗಾಡದಂತೆ ತಮ್ಮ ಡೆಸ್ಕ್‌ನಲ್ಲಿ ಕುಳಿತುಕೊಳ್ಳುತ್ತಿದ್ದರು.


ಉದ್ಯೋಗತಹ ಇನ್ವೆಸ್ಟ್‌ಮೆಂಟ್‌ ಬ್ಯಾಂಕರ್‌ ಆಗಿದ್ದ ಕಿಶನ್‌, ಜೆಪಿ ಮೊರ್ಗಾನ್‌, ಜಿಐಸಿ ನಂತಹ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಮಹೋನ್ನತ ಕನಸುಗಳನ್ನು ಕಾಣುತ್ತಾ, ವೃತ್ತಿ ಜೀವನದಲ್ಲಿ ಮುಂದೆಬರಬೇಕೆಂದು ಕೆಲಸ ಮಾಡಿದವರು ಅವರು. ಆದರೆ ಅತ್ಯಾಕರ್ಷಕ ವೇತನ, ಅವಕಾಶಗಳ ಹೊರತಾಗಿಯೂ ಅವರು ತಮ್ಮ ಕೆಲಸವನ್ನು ತೊರೆದು, ಕ್ಯಾನ್ಸರ್‌ ರೋಗಿಗಳ ಬಾಳಲ್ಲಿ ಬದಲಾವಣೆ ತರಲೆಂದು ಲವ್‌ ಹೀಲ್ಸ್‌ ಕ್ಯಾನ್ಸರ್‌ ಪ್ರಾರಂಭಿಸಿದರು.


ಲವ್‌ ಹೀಲ್ಸ್‌ ಕ್ಯಾನ್ಸರ್‌ ನ ಸಹ ಸಂಸ್ಥಾಪಕ ಕಿಶನ್‌ ಶಾಹ್‌


“ನನ್ನೊಬ್ಬ ಗೆಳೆಯ ಕೊಲೊರೆಕ್ಟಲ್‌ ಕ್ಯಾನ್ಸರ್ ಜೊತೆ ಹೋರಾಡುವುದನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಸಂಧಿ ನೋವುಗಳು, ನಿದ್ರೆಯಿಲ್ಲದ ರಾತ್ರಿಗಳಿಂದ ಹಿಡಿದು ಅತೀ ಹೆಚ್ಚಿನ ಪ್ರಮಾಣದ ಔಷಧಿಗಳನ್ನು ತೆಗೆದುಕೊಂಡಿದ್ದು, ಕಿಮೋಥೆರಪಿ ಚಿಕಿತ್ಸೆ ತೆಗೆದುಕೊಂಡಿದ್ದು ಹೀಗೆ ಅವರು ಎಲ್ಲ ಅನುಭವಿಸಿದರು. ಆದರೆ ಕೊನೆಯಲ್ಲಿ ಅವರು ಜೀವ ಬಿಡಬೇಕಾಯಿತು,” ಎನ್ನುತ್ತಾರೆ ಲವ್‌ ಹೀಲ್ಸ್‌ ಕ್ಯಾನ್ಸರ್‌ ನ ಸಂಸ್ಥಾಪಕ ಕಿಶನ್‌ ಶಾಹ್‌.


ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಮ್‌ಆರ್‌) ಪ್ರಕಾರ, ಭಾರತದಲ್ಲಿ 25 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಯಾವುದಾದರೊಂದು ತರಹದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಪ್ರತಿವರ್ಷ ಸರಾಸರಿ 10 ಲಕ್ಷ ಜನರಿಗೆ ಈ ರೋಗವಿರುವುದು ಪತ್ತೆಯಾಗುತ್ತದೆ.


“ನಾನು ಇಂತಹ ಜನರಿಗೆ ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡಬೇಕೆಂದುಕೊಂಡೆ. ಆದ್ದರಿಂದ, ನನ್ನ ಕೆಲಸಕ್ಕೆ ರಾಜಿನಾಮೆ ನೀಡಿ, ನನ್ನ ಜೀವನವನ್ನು ಇದಕ್ಕೆ ಮುಡಿಪಾಗಿಡಲು ನಿರ್ಧರಿಸಿದೆ,” ಎನ್ನುತ್ತಾರೆ ಕಿಶನ್‌.


ತಮ್ಮ ಬ್ಯಾಚ್‌ಮೇಟ್‌ ಡಿಂಪಲ್‌ ಪರ್ಮಾರ್‌ ಜೊತೆಗೂಡಿ, ಕಿಶನ್‌ ಮುಂಬೈ ಮೂಲದ ಸರ್ಕಾರೇತರ ಸಂಸ್ಥೆ ಲವ್‌ ಹೀಲ್ಸ್‌ ಕ್ಯಾನ್ಸರ್‌ ಆರಂಭಿಸಿದರು. ಇದು ಕ್ಯಾನ್ಸರ್‌ ರೋಗಿಗಳು, ಅವರ ಪಾಲನೆ ಮಾಡುವವರು ಮತ್ತು ಅವರ ಕುಟುಂಬದವರಿಗೆ ಗುಣಮುಖರಾಗುವಲ್ಲಿ ಸಮಾಲೋಚನೆಯ ಮತ್ತು ಸಮುದಾಯದ ಬೆಂಬಲ ನೀಡುತ್ತದೆ.


ಚಿಕ್ಕ ವಯಸ್ಸಿನ ಕ್ಯಾನ್ಸರ್‌ ಪೀಡಿತ ಮಕ್ಕಳೊಂದಿಗೆ ಕಿಶನ್‌ ಶಾಹ್‌


ಅವರು ಕ್ಯಾನ್ಸರ್‌ ಸೇವೆಯ ಸುತ್ತಲಿನ ಹಲವು ವಿಚಾರಗಳನ್ನು ಅರಿತರು, ಅಷ್ಟೇ ಅಲ್ಲದೆ ಮನಸ್ಸು ದೇಹದ ಔಷಧಿ, ಗುಣಪಡಿಸುವ ವಲಯಗಳು, ಚಿಕಿತ್ಸೆಗಳು ಮತ್ತು ಹಿಮ್ಮೆಟ್ಟುವಿಕೆ, ಬುದ್ದಿವಂತಿಕೆಯ ಆರೈಕೆ, ಆಂಕೊಲಾಜಿ ಮತ್ತು ಜೀವನದ ಅಂತ್ಯದ ಸಂಭಾಷಣೆಯಂತಹ ವಿಷಯಗಳ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಮುಗಿಸಿದರು.


ಈ ತರಬೇತಿಯ ನಂತರ, ಅವರು ನೂರಾರು ರೋಗಿಗಳಿಗೆ ಕ್ಯಾನ್ಸರ್‌ ವಿರುದ್ಧ ಹೋರಾಡಲು ಪ್ರೇರಪಣೆ ನೀಡಲು ಪ್ರಾರಂಭಿಸಿದರು. ಗುಣಪಡಿಸುವ ವಲಯಗಳು ಮತ್ತು ಶಿಬಿರಗಳಿಂದ ಕಿಶನ್‌, ಕಾಯಿಲೆ, ಅದರ ಹರಡುವಿಕೆ ಬಗ್ಗೆ ಮಾತುಕತೆಗಳ ಸರಣಿಯೊಂದನ್ನು ಆರಂಭಿಸಿದರು. ಅದಲ್ಲದೇ ಇವರು ಭಾರತದ ಮೊದಲ ಸುಸಂಯೋಜಾತ್ಮಕ ಗ್ರಂಥಿಶಾಸ್ತ್ರ (ಓಂಕೊಲಾಜಿ) ಕೇಂದ್ರವಾದ ZenOnco.in ಅನ್ನು 2019ರಲ್ಲಿ ಆರಂಭಿಸಿದರು.


ಬದಲಾವಣೆಯ ಘಟ್ಟ

ರಾಜಸ್ಥಾನದ ಜೋಧಪುರ್‌ದಲ್ಲಿ ಕಿಶನ್‌ ಹುಟ್ಟಿದರೂ, ಒಂದು ವರ್ಷದವರಿದ್ದಾಗಲೆ ತಮ್ಮ ತಂದೆಯ ನೌಕರಿಯಿಂದಾಗಿ ಇಂಡೋನೆಷಿಯಾಗೆ ಹೋಗಬೇಕಾಯಿತು. ಆದ್ದರಿಂದ ಅವರು ಪಿಯುಸಿವರೆಗಿನ ತಮ್ಮ ವಿದ್ಯಾಭ್ಯಾಸವನ್ನು ಅಲ್ಲೆ ಮಾಡಬೇಕಾಯಿತು. 2002 ರಲ್ಲಿ ಭಾರತಕ್ಕೆ ಮರಳಿದ ಕಿಶನ್‌, ವಾಣಿಜ್ಯದಲ್ಲಿ ಪದವಿ ಶಿಕ್ಷಣವನ್ನು ಜೈ ನರೇನ್‌ ವ್ಯಾಸ ವಿಶ್ವವಿದ್ಯಾಲಯದಿಂದ ಪಡೆದರು. ಹಣಕಾಸಿನ ವಿಷಯದಲ್ಲಿ ಅವರಿಗಿದ್ದ ಆಸಕ್ತಿಯು ಅವರನ್ನು ಹಲವಾರು ವೃತ್ತಿಪರ ತರಬೇತಿಗಳನ್ನು ಪಡೆಯುವಂತೆ ಮಾಡಿತು.


ಡಿಂಪಲ್‌ ಪರ್ಮಾರ್‌ ಜೊತೆ ಕಿಶನ್‌ ಶಾಹ್‌.


“ಹಣಕಾಸಿನ ವಿಷಯದಲ್ಲಿ ನನಗೆ ಚಿಕ್ಕಂದಿನಿಂದಲು ಆಸಕ್ತಿಯಿತ್ತು. ಸಂಖ್ಯೆಗಳನ್ನು ಬಳಸಿ ಸಮಸ್ಯೆಗಳನ್ನು ಬಿಡಿಸುವುದು ನನ್ನ ಇಷ್ಟದ ಕೆಲಸವಾಗಿತ್ತು. ಹಣಕಾಸಿನ ಯೋಜನೆಗಳನ್ನು ತಯಾರಿಸುವುದು, ಖರ್ಚುವೆಚ್ಚಗಳ ನಿರ್ವಹಣೆ ಮತ್ತು ಬಂಡವಾಳಗಳ ವಿಶ್ಲೇಷಣೆಯೆಡೆಗಿನ ನನ್ನ ಆಸಕ್ತಿ ಎಂದಿಗೂ ಕೊನೆಯಾಗಲಿಲ್ಲ. ಅದಕ್ಕಾಗಿ ನಾನು ವಾಣಿಜ್ಯದಲ್ಲೆ ಸ್ನಾತಕೊತ್ತರ ಪದವಿ ಪಡೆದು, ಚಾರ್ಟರ್ಡ್ ಅಕೌಂಟನ್ಸಿ, ಫೈನಾನ್ಷಿಯಲ್ ರಿಸ್ಕ್ ಮ್ಯಾನೇಜ್‌ಮೆಂಟ್ ಮತ್ತು ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ ಪ್ರೋಗ್ರಾಂಗಳ ತರಬೇತಿಗಳನ್ನು ಪಡೆದೆ,” ಎಂದು ನೆನಪಿಸಿಕೊಳ್ಳುತ್ತಾರೆ ಕಿಶನ್‌.


ನಂತರ ಕಿಶನ್‌ ಐಐಎಂ ಕಲ್ಕತ್ತಾದಲ್ಲಿ ಎಮ್‌ಬಿಎ ಪದವಿ ಪಡೆದರು. ಆ ಸಮಯದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ಗೆಳೆಯ ನಿತೇಶ್‌ ಪ್ರಜಾಪತ್‌ ಪಡುತ್ತಿದ್ದ ಕಷ್ಟವನ್ನು ನೋಡಿದರು. ನಿತೇಶ್‌ ಹಾಗೂ ಅವರ ಹೆಂಡತಿ ಡಿಂಪಲ್‌ ಕಾಯಿಲೆಯಿಂದ ಪಾರಾಗುವ ಹಲವಾರು ಮಾರ್ಗೋಪಾಯಗಳನ್ನು, ಕಾಯಿಲೆ ಗುಣಪಡಿಸುವ ಔಷಧಿಗಳನ್ನು, ಸಮಗ್ರ ಚಿಕಿತ್ಸೆ, ಆಹಾರ ಪಥ್ಯ, ಪ್ರಾನಿಕ್‌ ಹೀಲಿಂಗ್ಸ್‌ ಮತ್ತು ಪ್ರಕೃತಿ ಚಿಕಿತ್ಸೆಗಳನ್ನು ಮಾಡಿದರು. ಆದರೆ ನಿತೇಶ್‌ ಬದುಕುಳಿಯಲಿಲ್ಲ. ಇದು ಕಿಶನ್‌ ಅವರ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು.


ಸಮಾಲೋಚನ ಶಿಬಿರದಲ್ಲಿ ನಿರತರಾಗಿರುವ ಕಿಶನ್‌


“ಕ್ಯಾನ್ಸರ್‌ಗೆ ಒಳಗಾಗುವ ಹಲವರು ಸರಿಯಾದ ಚಿಕಿತ್ಸೆಯನ್ನು ಗುರುತಿಸುವುದಕ್ಕೆ ಕಷ್ಟ ಪಡುತ್ತಾರೆ. ವೈದ್ಯಕೀಯ ಭ್ರಾತೃತ್ವದೊಳಗೆ ಲಭ್ಯವಿರುವ ಹಲವಾರು ಚಿಕಿತ್ಸೆಗಳು ಮತ್ತು ರೋಗನಿವಾರಣೆಗಳಲ್ಲಿ ಅವರು ಕಳೆದುಹೋಗುತ್ತಾರೆ. ಆದ್ದರಿಂದ, ಡಿಂಪಲ್ ಮತ್ತು ನಾನು ಲವ್ ಹೀಲ್ಸ್ ಕ್ಯಾನ್ಸರ್ ಅನ್ನು ಸ್ಥಾಪಿಸಿದ್ದೇವೆ, ಕ್ಯಾನ್ಸರ್ ವಿರುದ್ಧದ ಪ್ರಯಾಣದಲ್ಲಿ ವ್ಯಕ್ತಿಗಳಿಗೆ ಸಹಾಯ ಮಾಡಲು ಬೆಂಬಲ, ಮಾಹಿತಿ ಮತ್ತು ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದೇವೆ,” ಎಂದು ಕಿಶನ್ ಹೇಳುತ್ತಾರೆ.


ಕಿಶನ್ ಎನ್‌ಜಿಒಗೆ ಅಡಿಪಾಯ ಹಾಕಿದರೂ, ಆರಂಭದಲ್ಲಿ, ಅರೆಕಾಲಿಕ ಆಧಾರದ ಮೇಲೆ ಅದರ ಕಾರ್ಯಚಟುವಟಿಕೆಗೆ ಅವರು ಕೊಡುಗೆ ನೀಡಿದರು, ಏಕೆಂದರೆ ಅವರು ಜೆಪಿ ಮೋರ್ಗಾನ್‌ ಮತ್ತು ಸಿಂಗಾಪುರದ ಕಂಪನಿ ಜಿಐಸಿ ನಲ್ಲಿ ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದ್ದರು. ಆದರೆ, ಶೀಘ್ರದಲ್ಲೇ, ಅವರು ತಮ್ಮ ಕನಸಿನ ವೃತ್ತಿಜೀವನವನ್ನು ತ್ಯಜಿಸುವ ಮತ್ತು ಸಾಮಾಜಿಕ ಬದಲಾವಣೆಯ ಜಗತ್ತಿನಲ್ಲಿ ಪ್ರವೇಶಿಸುವಂತಹ ದಿಟ್ಟ ಕ್ರಮವನ್ನು ಕೈಗೊಂಡರು.


ಲವ್‌ ಹೀಲ್ಸ್‌ ಕ್ಯಾನ್ಸರ್‌ನ ಕಾರ್ಯಗಾರದಲ್ಲಿ ಕಿಶನ್‌.


“ನನ್ನ ಅನೇಕ ಸಂಬಂಧಿಕರು ಮತ್ತು ಸ್ನೇಹಿತರು ನನ್ನ ನಿರ್ಧಾರದ ಪರವಾಗಿರಲಿಲ್ಲ. ಆರಂಭದಲ್ಲಿ ಸ್ವಲ್ಪ ವಿರೋಧವಿತ್ತು. ಕ್ಯಾನ್ಸರ್ ಪೀಡಿತ ಜನರಿಗೆ ಸೇವೆ ಸಲ್ಲಿಸಲು ನಾನು ಏಕೆ ಉತ್ತಮ ಉದ್ಯೋಗವನ್ನು ತೊರೆಯುತ್ತದ್ದೇನೆ ಎಂದು ಅವರಿಗೆ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಇದು ನನಗೆ ಕಠಿಣ ಹಂತವಾಗಿತ್ತು, ಆದರೆ ನಾನು ಅದನ್ನು ದಾಟಿದೆ,” ಎಂದು ಕಿಶನ್ ಹೇಳುತ್ತಾರೆ.


ಪರಿಣಾಮ

ಇಂದು, ಲವ್ ಹೀಲ್ಸ್ ಕ್ಯಾನ್ಸರ್ ಮೂಲಕ, ಕಿಶನ್ ಕ್ಯಾನ್ಸರ್ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಗುಣಪಡಿಸುವ ಆಯ್ಕೆಗಳು ಮತ್ತು ಸಮಗ್ರ ಚಿಕಿತ್ಸೆಯನ್ನು ಒಳಗೊಂಡಿರುವ ಮಾಹಿತಿಯ ಸಂಪೂರ್ಣ ಡೇಟಾಬೇಸ್‌ಗೆ ಪ್ರವೇಶವನ್ನು ಪಡೆಯಲು ಸಹಾಯ ಮಾಡುತ್ತಾರೆ. ಅಷ್ಟೇ ಅಲ್ಲದೆ ಕಿಶನ್ ಕ್ಯಾನ್ಸರ್ ರೋಗಿಗಳಿಗೆ ಬೆಂಬಲ ಗುಂಪುಗಳನ್ನು ರಚಿಸಲು ಜನರನ್ನು ಒಟ್ಟುಗೂಡಿಸುತ್ತಾರೆ.


ಇದಲ್ಲದೆ, ಅವರು ಲವ್ ಹೀಲ್ಸ್ ಕ್ಯಾನ್ಸರ್ ಮತ್ತು ZenOnco.io ದ ಭಾಗವಾಗಿ ಉಪಕ್ರಮಗಳನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಜನರನ್ನು ತಲುಪಲು ಸಹ ಕೆಲಸ ಮಾಡುತ್ತಿದ್ದಾರೆ.

“ನಾನು ಈಗ ಏನು ಮಾಡುತ್ತಿದ್ದೇನೆಯೋ ಅದನ್ನೆ ನನ್ನ ಜೀವನದುದ್ದಕ್ಕೂ ಮುಂದುವರಿಸಲು ನಾನು ಯೋಜಿಸುತ್ತಿದ್ದೇನೆ. ಈ ಮೊದಲು, ಜನರ ಬ್ಯಾಲೆನ್ಸ್ ಶೀಟ್‌ಗಳನ್ನು ಉತ್ತಮಗೊಳಿಸಲು ನಾನು ಕೆಲಸ ಮಾಡುತ್ತಿದ್ದೆ, ಆದರೆ ಈಗ, ಅವರ ಜೀವನವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಎರಡನೆಯದರಿಂದ ನಾನು ಪಡೆಯುವ ತೃಪ್ತಿ ಹೆಚ್ಚು,” ಎಂದು ಕಿಶನ್ ಅಭಿಪ್ರಾಯಪಡುತ್ತಾರೆ.