Kannada Latest

ಇ-ತ್ಯಾಜ್ಯಗಳ ಪುನರ್ಬಳಕೆ ಮೂಲಕ ಆಕರ್ಷಕ ಶಿಲ್ಪಗಳನ್ನು ರಚಿಸುತ್ತಿರುವ ಮುಂಬೈನ ಕಲಾವಿದರಾದ ಹರಿಬಾಬು ನಟೇಶನ್‌

ಹರಿಬಾಬು ನಟೇಶನ್‌ರವರು ಎಸೆಯಲ್ಪಟ್ಟ ಸೀಡಿಗಳು, ಸೆಲ್‌ಫೋನ್‌ಗಳು, ಲ್ಯಾಪ್‌ ಟಾಪ್‌ನ ಬಿಡಿ ಭಾಗಗಳು, ಮೈಕ್ರೋವೇವ್‌ಗಳು ಹಾಗೂ ಮದರ್‌ಬೋರ್ಡ್‌ಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಆಕೃತಿಗಳನ್ನು ತಯಾರಿಸುವ ಮೂಲಕ ಪರಿಸರವನ್ನುಳಿಸಲು ನೆರವಾಗುತ್ತಿದ್ದಾರೆ.

Team YS Kannada
13th Aug 2019
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಭಾರತದಲ್ಲಿ ವರ್ಷಕ್ಕೆ ಎಷ್ಟು ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದೆ ಎನ್ನುವುದು ನಿಮಗೆ ತಿಳಿದಿದೆಯೇ? ಒಂದು ವರದಿಯ ಪ್ರಕಾರ ದೇಶದಲ್ಲಿ 2 ಮಿಲಿಯನ್‌ ಮೆಟ್ರಿಕ್‌ ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತಿದೆ(2016), ಮತ್ತು ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಕಡಾ 82 ರಷ್ಟು ವೈಯಕ್ತಿಕ ಸಾಮಗ್ರಿಗಳೇ ಆಗಿರುತ್ತವೆ. ಅಪಾಯಕಾರಿ ರಾಸಾಯನಿಕಗಳು ಮತ್ತು ಲೋಹಗಳಿಂದ ಮಾಡಲ್ಪಟ್ಟಿರುವ ಇ-ತ್ಯಾಜ್ಯಗಳನ್ನು ತೆರೆದ ಪ್ರದೇಶಗಳಲ್ಲಿ ಎಸೆಯುವುದರಿಂದ ಹಾನಿಕಾರಕ ವಸ್ತುಗಳು ಭೂಮಿಯನ್ನು ಸೇರುವಂತಾಗುತ್ತಿದೆ.


ನೀತಿ ನಿರೂಪಕರು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನಮ್ಮ ಪರಿಸರವನ್ನು ಸ್ವಚ್ಛಗೊಳಿಸುವ ಪ್ರಯತ್ನದಲ್ಲಿದ್ದಾರೆ, ಮುಂಬೈ ಮೂಲದ ಹರಿಬಾಬು ನಟೇಶನ್‌ರವರು ತಮ್ಮದೇ ಆದ ರೀತಿಯಲ್ಲಿ ಸಣ್ಣ ಕೊಡುಗೆ ನೀಡುತ್ತಿದ್ದಾರೆ. ಎಸೆದಿರುವ ಇಲೆಕ್ಟ್ರಾನಿಕ್‌ ತ್ಯಾಜ್ಯ ಬಳಸಿ ಕಲೆಯನ್ನು ವಿನ್ಯಾಸಗೊಳಿಸುವುದರ ಮೂಲಕ ಇವರು ಪ್ರಸಿದ್ಧಿಗಳಿಸಿದ್ದಾರೆ.


ಹರಿಬಾಬುರವರು 2009 ರಲ್ಲಿ ಎನಿಮೇಷನ್‌ ಕೆಲಸವನ್ನು ಬಿಟ್ಟ ನಂತರ ವಿಶಿಷ್ಟ ಕಲೆಯನ್ನು ರಚಿಸಲು ಬಯಸಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ. ಹರಿಬಾಬುರವರು ಮದರ್ ಬೋರ್ಡ್‌, ಫ್ಲಾಪಿ ಡಿಸ್ಕ್‌, ಸೀಡಿ ಡ್ರೈವ್‌ಗಳು, ಸೆಲ್ ಫೋನ್‌ಗಳು ಮತ್ತು ಸೀಡಿಗಳಂತಹ ಇ-ತ್ಯಾಜ್ಯಗಳನ್ನು ಬಳಸಿಕೊಂಡು ಆಕರ್ಷಕ ಕಲಾಕೃತಿಯನ್ನು ರಚಿಸುತ್ತಾರೆ.


ಕ

ತಾವು ರಚಿಸಿದ ಶಿಲ್ಪಾಕೃತಿಯೊಂದರ ಮುಂದೆ ನಿಂತಿರುವ ಹರಿಬಾಬು ನಟೇಶನ್‌ರವರು. ಮೂಲ: ಫಾಸ್ಸಿಲ್ಸ್


ಎಸೆಯಲ್ಪಡುವ ಇ-ತ್ಯಾಜ್ಯದ ಕುರಿತು ಹರಿಬಾಬುರವರು ಎನ್‌ಡಿಟಿವಿಗೆ ಹೀಗೆ ಹೇಳುತ್ತಾರೆ, “ ಬಳಕೆ ಮಾಡದ ವಾಕ್‌ ಮ್ಯಾನ್‌ಗಳು ಮತ್ತು ವಿಡೀಯೊ ಟೇಪ್‌ಗಳಿಂದ ಏನು ಮಾಡಬಹುದೆಂದು ಯೋಚಿಸಿದ್ದೀರಾ? ಹಾಗೆಯೇ, ಮೊಂಡಾದ ಗರಗಸದ ಬ್ಲೇಡ್‌ಗಳು ಮತ್ತು ಹಾಳಾದ ಸೆಲ್‌ಫೋನ್‌ಗಳು. ಹಳೆಯದಾದ ಫ್ಲಾಪಿ ಡಿಸ್ಕ್‌ ಮತ್ತು ಬೆಸುಗೆ ಹಾಕಿದ ಲೈಟ್‌ ಬಲ್ಬ್‌ಗಳು? ನಾವು ಸಾಮಾನ್ಯವಾಗಿ ‘ಸ್ಕ್ರ್ಯಾಪ್‌’ ಎಂದು ಕರೆಯುವ ವಸ್ತುಗಳು ಏನಾಗುತ್ತವೆ? ನಾವು ಈ ಸ್ಕ್ರ್ಯಾಪ್‌ ವಸ್ತುಗಳನ್ನು ಒಂದು ಮೂಲೆಯಲ್ಲಿ ಹಾಕಿಡುತ್ತೇವೆ, ಅಥವಾ ಅವುಗಳನ್ನು ಸುಡುತ್ತೇವೆ, ಈ ಪ್ರಕ್ರಿಯೆಯಲ್ಲಿ ಅವು ಹಾನಿಕಾರಕ ವಿಕಿರಣಗಳನ್ನು ಹೊರಸೂಸುತ್ತವೆ ಅದು ಅಪಾಯಕಾರಿಯಾಗಿರುತ್ತದೆ.”


ಹರಿಬಾಬುರವರು ತಮ್ಮ ಕಲೆಗೆ "ಗ್ರೀನ್ ಡಿಸೈನ್ ವರ್ಕ್ಸ್" ಎಂದು ಹೆಸರಿಟ್ಟಿದ್ದಾರೆ. ಅವರು ಮೊದಲು ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ನಂತರ ಅದನ್ನು ತಮ್ಮ ಸ್ಟುಡಿಯೋದ ಸ್ಕ್ರ್ಯಾಪ್ ಕೋಣೆಯಲ್ಲಿ ಸಂಗ್ರಹಿಸುತ್ತಾರೆ. ನಂತರ, ಅವರು ಗಾತ್ರ, ಆಕಾರ, ಬಣ್ಣ ಮತ್ತು ಪ್ರಕಾರದ ಆಧಾರದ ಮೇಲೆ ಎಲ್ಲಾ ಭಾಗಗಳನ್ನು ವರ್ಗೀಕರಿಸುತ್ತಾರೆ. ಅವುಗಳನ್ನು ಬೇರ್ಪಡಿಸಿದ ನಂತರ ಕಲಾಕೃತಿಯನ್ನು ರಚಿಸಲು ಈ ಬಿಡಿ ಬಾಗಗಳನ್ನು ಅತಿ ಜಾಗರೂಕತೆಯಿಂದ ಜೋಡಿಸುತ್ತಾರೆ.


ಕ

ಮೂಲ: ಫಾಸ್ಸಿಲ್ಸ್


ಅವರ ಅಧಿಕೃತ ವೆಬ್‌ಸೈಟ್ ಫಾಸ್ಸಿಲ್ಸ್ ನ ಪ್ರಕಾರ, ಹರಿಬಾಬುರವರು ಚೆನ್ನೈನ ಸರ್ಕಾರಿ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನಿಂದ ಲಲಿತಕಲೆಯಲ್ಲಿ ಪದವಿ ಪಡೆದಿದ್ದಾರೆ. ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ನಲ್ಲಿ(ಎನ್‌ಐಡಿ) ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವೇಳೆ, 'ಇ-ತ್ಯಾಜ್ಯ' ಕರಕುಶಲತೆಯನ್ನು ಪ್ರದರ್ಶಿಸಲು ಅವರಿಗೆ ವೇದಿಕೆ ದೊರಕಿತು, ಅದು ಅವರಿಗೆ ಅಪಾರ ಮೆಚ್ಚುಗೆ ಮತ್ತು ಪುರಸ್ಕಾರವನ್ನು ತಂದುಕೊಟ್ಟಿತು.


ನಟೇಶನ್‌ರವರು ಕಳೆದ ವರ್ಷ ಗಣೇಶ ಚತುರ್ಥಿಯ ಸಂದರ್ಭದಲ್ಲಿ 800 ಕೆಜಿ ಆಲಮ್‌ ಬಳಸಿ ಗಣೇಶನ ವಿಗ್ರಹವನ್ನು ಸ್ಥಾಪಿಸಿದ್ದರು, ಆಲಮ್‌ಅನ್ನು ಕ್ಷೌರದ ಅಂಗಡಿಗಳಲ್ಲಿ ಮಾರ್ಜಕವಾಗಿ ಬಳಸುತ್ತಾರೆ. ಆಲಮ್‌ನ ಶುದ್ಧೀಕರಣ ಗುಣಗಳು ಅದನ್ನು ಬಳಸುವ ಹಿಂದಿನ ಪರಿಕಲ್ಪನೆಯಾಗಿದೆ; ಮೂರ್ತಿಯನ್ನು ಮುಳುಗಿಸಿದರೂ ಆ ನೀರು ಕಲುಷಿತವಾಗುವುದಿಲ್ಲ, ಬದಲಿಗೆ ನೀರನ್ನು ಶುದ್ದಗೊಳಿಸುತ್ತದೆ. ಶಿಲ್ಪಕಲೆಯ ಸಂಪೂರ್ಣ ಪ್ರಕ್ರಿಯೆಯನ್ನು ಫಾಸ್ಸಿಲ್ಸ್ ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ


ಕ

ಮೂಲ: ಫಾಸ್ಸಿಲ್ಸ್


ಹರಿಬಾಬುರವರು ತಮ್ಮ ಕಲೆಯನ್ನು ಪರಿಸರ ಜಾಗೃತಿ ಕುರಿತು ಅಭ್ಯಾಸ ಮಾಡಲು ಮತ್ತು ಕಲಿಸಲು ಬಳಸುತ್ತಾರೆ. ತಮ್ಮ ತತ್ತ್ವದ ಬಗ್ಗೆ ಹರಿಬಾಬು ಎನ್‌ಡಿಟಿವಿಗೆ ಹೀಗೆ ಹೇಳುತ್ತಾರೆ, “ಇ-ತ್ಯಾಜ್ಯದ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಕಲೆಯ ತತ್ವ. ಅದು ಕೇವಲ ಕಲೆ ಮಾತ್ರವಲ್ಲ. ನನ್ನ ಸ್ಟುಡಿಯೊದಲ್ಲಿ ಯುವ ಕಲಾವಿದರಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಿಯಮಿತವಾಗಿ ಕಾರ್ಯಾಗಾರಗಳನ್ನು ನಡೆಸುತ್ತೇನೆ, ಇದು ಅವರಿಗೆ ಎಸೆದ ವಸ್ತುಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಕಲೆಯನ್ನು ರಚಿಸುವ ತಂತ್ರವನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ನಮ್ಮ ಭೂಮಿಯನ್ನು ಕಲುಷಿತಗೊಳಿಸುತ್ತಿರುವ ಕೈಗಾರಿಕಾ ತ್ಯಾಜ್ಯಗಳನ್ನು ಮರುಬಳಕೆ ಮಾಡುವುದು ನಮ್ಮ ಆಲೋಚನೆಯಾಗಿದೆ.”

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest

Latest Stories