300 ವಿದ್ಯಾರ್ಥಿಗಳ ಶಾಲಾ ಶುಲ್ಕ ಮನ್ನಾ ಮಾಡಿದ ಮುಂಬೈ ದಂಪತಿಗಳು

ಮಿಗ್ಜಾ ಶೇಖ್‌ ಮತ್ತು ಫೈಯಾಜ್‌ ದಂಪತಿಗಳು ಕೋವಿಡ್‌-19 ಸಂಕಷ್ಟದ ಸಮಯದಲ್ಲಿ ತಮ್ಮ ಉಳಿತಾಯದ ಹಣವನ್ನು ವಿನಿಯೋಗಿಸಿ ಮುಂಬೈನ ಸೌಲಭ್ಯವಂಚಿತರಿಗೆ ಸಹಾಯ ಮಾಡುತ್ತಿದ್ದಾರೆ.

300 ವಿದ್ಯಾರ್ಥಿಗಳ ಶಾಲಾ ಶುಲ್ಕ ಮನ್ನಾ ಮಾಡಿದ ಮುಂಬೈ ದಂಪತಿಗಳು

Thursday July 30, 2020,

1 min Read

ಮುಂಬೈ ನಿವಾಸಿಗಳಾದ ಮಿಗ್ಜಾ ಶೇಖ್‌ ಮತ್ತು ಅವರ ಪತಿ ಫೈಯಾಜ್‌ ಮಲಾಡ್‌ನ ಉಪನಗರದಲ್ಲಿ ಜೀಲ್‌ ಇಂಗ್ಲೀಷ್‌ ಮಾಧ್ಯಮ ಶಾಲೆಯನ್ನು ನಡೆಸುತ್ತಾರೆ.


ಕೊರೊನಾ ಕಾರಣದಿಂದ ಸಂಕಷ್ಟಕ್ಕೊಳಗಾಗಿರುವ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಶಾಲೆಯ ಶುಲ್ಕವನ್ನು ಭರಿಸಲಾಗದೆ ತಮ್ಮ ಕಷ್ಟವನ್ನು ದಂಪತಿಗಳಲ್ಲಿ ಹೇಳಿಕೊಂಡಾಗ, ಅವರು ಸುಮಾರು 300 ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಮನ್ನಾ ಮಾಡಿದ್ದಾರೆ ಎಂದು ದಿ ಲಾಜಿಕಲ್‌ ಇಂಡಿಯನ್‌ ವರದಿ ಮಾಡಿದೆ.


ಬಡವರಿಗೆ ಆಹಾರವನ್ನು ನೀಡುತ್ತಿರುವ ಮಿಗ್ಜಾ ಶೇಖ್ ಮತ್ತು ಫೈಯಾಜ್.



ಅಷ್ಟೇ ಅಲ್ಲದೆ, ಕೊರೊನಾ ಕಾರಣದಿಂದ ನಿರುದ್ಯೋಗ ತಾಂಡವವಾಡುತ್ತಿರುವ ಸಮಯದಲ್ಲಿ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ದೃಷ್ಠಿಯಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಹಲವರಿಗೆ ಆಹಾರ ನೀಡುವ ಮೂಲಕ ಈ ದಂಪತಿಗಳು ನೆರವಾಗುತ್ತಿದ್ದಾರೆ.


“ಇಲ್ಲಿರುವವರಲ್ಲಿ ಹಲವರು ವಲಸೆ ಕಾರ್ಮಿಕರು ಮತ್ತು ದಿನಗೂಲಿ ನೌಕರರಾಗಿದ್ದಾರೆ. ಅವರ ಪರಿಸ್ಥಿತಿಯನ್ನು ಗಮನಿಸಿದ ನಂತರ ನಾನು ಒಂದಷ್ಟು ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಿ, ಖಿಚ್ಡಿ ನೀಡಲು ಪ್ರಾರಂಭಿಸಿದೆವು. ಈ ಕಾರ್ಯವಷ್ಟೇ ಸಾಲದು ಎಂಬುದು ನಮಗೆ ಬಹುಬೇಗನೆ ಅರ್ಥವಾಯಿತು. ನಾವಂದುಕೊಂಡದ್ದಕ್ಕಿಂತ ಪರಿಸ್ಥಿತಿ ಗಂಭೀರವಾಗಿದೆ. ಹಾಗಾಗಿ ಜನರಿಗೆ ಸಹಾಯ ಮಾಡಬೇಕೆಂದು ನಾವು ನಿರ್ಧರಿಸಿದೆವು,” ಎಂದು ಮಿಗ್ಜಾ ಹಿಂದೂಸ್ತಾನ್‌ ಟೈಮ್ಸ್‌ಗೆ ಹೇಳಿದರು.


ಮನೆ ಕಟ್ಟಬೇಕೆಂದು ಕೂಡಿಸಿಟ್ಟ ಹಣವನ್ನು ವಿನಿಯೋಗಿಸಿ ಇಲ್ಲಿಯವರೆಗೂ ದಂಪತಿಗಳು 1,800 ಜನರಿಗೆ ಆಹಾರ ವಿತರಿಸಿದ್ದಾರೆ.


“ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ಈ ಕಾರ್ಯಕ್ಕೆ ಹಣದ ಅವಷ್ಯಕತೆ ಹೆಚ್ಚುತ್ತಾ ಹೋಯಿತು, ಅದಕ್ಕಾಗಿ ನನ್ನ ಭವಿಷ್ಯ ನಿಧಿ(ಪಿಎಫ್‌)ಯನ್ನು ಬಳಸಲು ನಿರ್ಧರಿಸಿದೆ. ಇಲ್ಲಿಯವರೆಗೂ 4.5 ಲಕ್ಷ ರೂ. ಖರ್ಚಾಗಿದೆ,” ಎಂದರು ಫೈಯಾಜ್‌.


ಆಹಾರ ನೀಡಲು ಶುರುಮಾಡಿದ ನಂತರ ದಂಪತಿಗಳಿಗೆ ಹಲವು ಕಡೆಯಿಂದ ಆಹಾರ ನೀಡಿ ಎಂಬ ಮನವಿ ಬರತೊಡಗಿತು. ಶುರುವಿನಲ್ಲಿ ಸರ್ಕಾರೇತರ ಸಂಸ್ಥೆಗಳ ನೆರವು ಸಿಕ್ಕರೂ ನಂತರದಲ್ಲಿ ಅದು ನಿಂತು ಹೋಯಿತು.


ದಂಪತಿಗಳ ಈ ಕೆಲಸಕ್ಕೆ ದೇಶದೆಲ್ಲೆಡೆ ನೆಟ್ಟಿಗರಿಂದ ಪ್ರಶಂಸೆ ಬಂದಿದ್ದು, ಕೈಗಾರಿಕೋದ್ಯಮಿ ಆನಂದ್‌ ಮಹೀಂದ್ರಾ ಇವರ ಕಾರ್ಯವನ್ನು ಶ್ಲಾಘಿಸುತ್ತ, ಅವರ ಈ ಕೆಲಸಕ್ಕೆ ನಾನು ಕೊಡುಗೆ ನೀಡಲು ಬಯಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.