ಲಾಕ್‌ಡೌನ್‌ ನಡುವೆ ಹಲವರಿಗೆ ಮನೆಗೆ ಮರಳಲು ಸಹಾಯ ಮಾಡಿದ್ದಾರೆ ಈ ಮಹಿಳಾ ಕ್ಯಾಬ್‌ ಚಾಲಕಿ

ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡ ವಿದ್ಯಾ ಶೆಳ್ಕೆಯವರು ತಮ್ಮದೇ ಟ್ಯಾಕ್ಸಿಯಲ್ಲಿ ಕಡಿಮೆ ದರದಲ್ಲಿ 150 ಕ್ಕೂ ಹೆಚ್ಚು ಜನರಿಗೆ ಮನೆ ಸೇರಲು ಸಹಾಯಮಾಡಿದ್ದಾರೆ.
0 CLAPS
0

ಕೊರೊನಾವೈರಸ್‌ ತಡೆಯಲು ಜಾರಿಗೊಳಿಸಿದ್ದ ಲಾಕ್‌ಡೌನ್‌ ಹಲವರ ಬದುಕನ್ನು ದುರ್ಬರವಾಗಿಸಿದ್ದಲ್ಲದೆ, ಬೃಹತ್‌ ಮಟ್ಟದಲ್ಲಿ ಜನರು ಕೆಲಸಕಳೆದುಕೊಳ್ಳುವಂತೆ ಮಾಡಿದೆ. ನಿರ್ಮಾಣ ಘಟಕಗಳು, ಸಣ್ಣ ಉದ್ದಿಮೆಗಳು, ಕ್ಯಾಬ್‌ ಸೇವೆಗಳು, ಜಿಮ್‌ಗಳು ಸೇರಿದಂತೆ ಇತರ ವಲಯಗಳು ತೀರಾ ಕಷ್ಟದಲ್ಲಿವೆ.

ಈ ಮಹಾಮಾರಿಯಿಂದ ಸಂಕಷ್ಟಕ್ಕೊಳಗಾದವರಲ್ಲಿ ಒಬ್ಬರು ಮುಂಬೈನ ವಿದ್ಯಾ ಶೆಳ್ಕೆ(28). ಇವರು ಕ್ಯಾಬ್‌ ಅಗ್ರಗೆಟರ್‌ ಕಂಪನಿ ಒಂದರಲ್ಲಿ ಕೆಲಸ ಮಾಡಿತ್ತಿದ್ದರು. ಲಾಕ್‌ಡೌನ್‌ನಿಂದ ಇವರು ಕೆಲಸ ಕಳೆದುಕೊಂಡಿದ್ದಾರೆ.

ವಿದ್ಯಾ ಶೆಳ್ಕೆ (ಚಿತ್ರಕೃಪೆ: ದಿ ಬೆಟರ್‌ ಇಂಡಿಯಾ)“ನಾನು ನನ್ನ ಹರೆಯ ವಯಸ್ಸಿನಲ್ಲೆ ಕಾರು ಓಡಿಸುವುದನ್ನು ಕಲಿತೆ, ಕಾರಿನ ಜೊತೆ ಇರುವುದೆಂದರೆ ನನಗೆ ತುಂಬಾ ಇಷ್ಟ. ನಾನು ಯಾವ ರಂಗದಲ್ಲಿ ಕೆಲಸ ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳಬೇಕಾದಾಗ, ಆಯ್ಕೆ ತುಂಬಾ ಸುಲಭವಾಯಿತು- ಕಾರು ಓಡಿಸುವ ನನ್ನ ಹವ್ಯಾಸವೆ ವೃತ್ತಿಯಾಗಿ ಬದಲಾಯಿತು,” ಎಂದು ವಿದ್ಯಾ ದಿ ಬೆಟರ್‌ ಇಂಡಿಯಾ ಗೆ ಹೇಳಿದರು.

ಇಬ್ಬರು ಮಕ್ಕಳ ತಾಯಿಯಾದ ವಿದ್ಯಾ ತಮ್ಮ ಸ್ವಂತ ಟ್ಯಾಕ್ಸಿ ಸೇವೆಯನ್ನು ಆರಂಭಿಸಿ, ಮುಂಬೈನ ಮುಲುಂದ್‌ ಪ್ರದೇಶದಲ್ಲಿ ಸುತ್ತುತ್ತಾ ವಿಶೇಷಚೇತನರು, ಹಿರಿಯ ಮಹಿಳೆಯರು ಮತ್ತು ಅಗತ್ಯವಿರುವವರಿಗೆ ಕಳೆದ ಎರಡು ತಿಂಗಳಿನಿಂದ ಸೇವೆ ಒದಗಿಸುತ್ತಿದ್ದಾರೆ. ಇಲ್ಲಿಯವರೆಗೂ ವಿದ್ಯಾ ಅವರು 150 ಕ್ಕೂ ಹೆಚ್ಚು ಜನರು ಮನೆಗೆ ಮರಳಲು ಸಹಾಯ ಮಾಡಿದ್ದಾರೆ.

10ನೇ ತರಗತಿ ನಂತರ ವಿದ್ಯಾಭ್ಯಾಸ ತೊರೆದ ವಿದ್ಯಾ, ಒಬ್ಬರ ದುಡಿಮೆಯಿಂದ ಮನೆ ನಡೆಸುವುದು ಕಷ್ಟ ಎಂದು ಅರಿತರು. ಕ್ಯಾಬ್‌ ಶೇರಿಂಗ್‌ ಕಂಪನಿಯಲ್ಲಿ ಕೆಲಸ ಸಿಗುವುದಕ್ಕೂ ಮುನ್ನ ಅವರು ಆಟೋ ರಿಕ್ಷಾ ಓಡಿಸುವಂತಹ ವಿವಿಧ ಕೆಲಸಗಳನ್ನು ಮಾಡಿದ್ದಾರೆ.

ಎರಡೆರಡು ಕೆಲಸಗಳಿಂದ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತ, ಮನೆಯನ್ನು ನಿಭಾಯಿಸುತ್ತಿದ್ದರು. ಆದರೆ ಲಾಕ್‌ಡೌನ್‌ ಜಾರಿಯಾದ ಬಳಿಕ ಅವರ ಕ್ಯಾಬ್‌ ಕಂಪನಿಯ ಕೆಲಸ ಹೋಯಿತು.

“ಬಸ್ಸು, ರೈಲುಗಳು ಸ್ಥಗಿತಗೊಂಡಿದ್ದರಿಂದ ಹಲವರು ಮನೆಗೆ ಹೋಗಲು ಕಷ್ಟ ಪಡುತ್ತಿದ್ದರು. ಪರಿಸ್ಥಿತಿಯ ತೀವ್ರತೆಯನ್ನು ಅರಿತ ನಾನು ಏನಾದರೂ ಮಾಡಲೆಬೇಕೆಂದು ನಿರ್ಧರಿಸಿದೆ. ನನ್ನ ಪತಿಯ ಕಾರನ್ನು ನಾನು ಮೊದಲು ನನ್ನ ಕೆಲಸಕ್ಕಾಗಿ ಬಳಸುತ್ತಿದ್ದೆ, ಅದನ್ನೆ ತೆಗೆದುಕೊಂಡು, ಅವಶ್ಯಕತೆ ಇರುವವರಿಗೆ ನಾನು ಕ್ಯಾಬ್‌ ಸೇವೆ ನೀಡುತ್ತೇನೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟೆ,” ಎಂದರು ವಿದ್ಯಾ.

ವಿಡಿಯೋ ಬಿಟ್ಟ 10 ನಿಮಿಷದಲ್ಲಿ ಹಿರಿಯ ನಾಗರಿಕರು, ಗರ್ಭಿನಿಯರು ಮತ್ತು ವಲಸಿಗರ ಕುಟುಂಬದವರಿಂದ ಅವರಿಗೆ ಕರೆಗಳು ಬರಲಾರಂಭಿಸಿದವು. ಮಹಾರಾಷ್ಟ್ರದ ಸುತ್ತಲೂ ಅವರನ್ನು ತಮ್ಮ ಕ್ಯಾಬ್‌ನಲ್ಲಿ ತಲುಪಿಸಿದ್ದಾರೆ ಈ ಮಹಿಳಾ ಚಾಲಕಿ.

ಕ್ಯಾಬ್‌ ಒಳಗಡೆ ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸಿದ ಇವರು, ಹೆಚ್ಚುವರಿ ಮಾಸ್ಕ್‌ಗಳು ಮತ್ತು ಸ್ಯಾನಿಟೈಸರ್‌ ಬಾಟಲಿಗಳನ್ನು ಕಾರಿನಲ್ಲಿ ಇಟ್ಟುಕೊಂಡಿದ್ದಾರೆ. ಮಕ್ಕಳನ್ನು ಹೊರತುಪಡಿಸಿ ಕಾರಿನ ಹಿಂದಿನ ಸೀಟ್‌ನಲ್ಲಿ ಕೂರಲು ಇಬ್ಬರಿಗೆ ಅನುಮತಿಸುತ್ತಾರೆ.

“ನನ್ನ ಟ್ಯಾಕ್ಸಿಯಲ್ಲಿ ಸಾಮಾಜಿಕ ಅಂತರದ ಎಲ್ಲ ಷರತ್ತುಗಳನ್ನು ಪಾಲಿಸುತ್ತಿದ್ದೇನೆ. ವಾಹನವನ್ನು ಶುಚಿಗೊಳಿಸಿರುತ್ತೇನೆ ಮತ್ತು ಅಗತ್ಯವಿರುವ ಯಾರ ಸೇವೆಗೂ ನಾನು ಯಾವಾಗಲೂ ಸಿದ್ಧ,” ಎನ್ನುತ್ತಾರೆ ವಿದ್ಯಾ.

1 ಕಿ.ಮೀ.ಗೆ 12 ರೂ. ತೆಗೆದುಕೊಳ್ಳುವ ಇವರು, ಹಲವು ಪ್ರಯಾಣಿಕರಿಗೆ ಇ-ಪಾಸ್‌ ತೆಗೆದುಕೊಳ್ಳಲು ಸಹಾಯಮಾಡಿದ್ದಾರೆ.

Latest

Updates from around the world