ಫೇಸ್‌ ಮಾಸ್ಕ್‌ ತಯಾರಿಸುತ್ತಿರುವ ಮೈಸೂರಿನ ವಿದ್ಯಾರ್ಥಿಗಳು

ಲಾಕ್‌ಡೌನ್‌ ಸಮಯದಲ್ಲಿ ಮಾಸ್ಕ್‌ ಹೊಲಿದು ಕೊರೊನಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತಿದ್ದಾರೆ ಮೈಸೂರು ವಿವಿಯ ವಿದ್ಯಾರ್ಥಿಗಳು.

ಫೇಸ್‌ ಮಾಸ್ಕ್‌ ತಯಾರಿಸುತ್ತಿರುವ ಮೈಸೂರಿನ ವಿದ್ಯಾರ್ಥಿಗಳು

Tuesday April 21, 2020,

2 min Read

ದೇಶದೆಲ್ಲೆಡೆ ಕೊರೊನಾವೈರಸ್‌ ಹರಡದಂತೆ ತಡೆಯಲು ಲಾಕ್‌ಡೌನ್‌ ಹೇರಲಾಗಿದೆ. ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಎಲ್ಲರೂ ಹೊರಗೆ ಹೋಗಲಾಗದೆ ಮನೆಯಲ್ಲೆ ಕಾಲ ಕಳೆಯುತ್ತಿದ್ದಾರೆ. ಖಾಲಿ ಕೂತು ಈ ಸಮಯವನ್ನು ಹಾಳು ಮಾಡುವುದಕ್ಕಿಂತ ತಮ್ಮದೇ ಆದ ರೀತಿಯಲ್ಲಿ ಸಹಾಯಕ್ಕೆ ಮುಂದಾಗಿದ್ದಾರೆ ಮೈಸೂರು ವಿವಿಯ ಎನ್‌ಎಸ್‌ಎಸ್‌ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು.


ಈ ಲಾಕ್‌ಡೌನ್‌ ಸಮಯದಲ್ಲಿ ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸಿದ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್‌ ಮಾಡುವ ಉಪಾಯ ಹೊಳೆದಿದೆ.


ಮಾಸ್ಕ್‌ ಹೋಲಿಯುತ್ತಿರುನ ಎನ್‌ಎಸ್‌ಎಸ್‌ನ ಅಶ್ವಿನಿ(ಎಡ) ಮತ್ತು ಎನ್‌ಸಿಸಿ ಕೆಡೆಟ್(ಬಲ)


“ಎನ್‌ಸಿಸಿ ಕೆಡೆಟ್‌ಗಳು ಸ್ವಯಂ ಪ್ರೇರಿತರಾಗಿ ಮುಂದೆ ಬಂದು, ನಾವು ಮಾಸ್ಕ್‌ ಮಾಡುತ್ತೇವೆ ಎಂದರು, ಹೊಲಿಗೆ ಯಂತ್ರಗಳಿರುವವರು ತಾವೇ ಕಾಟನ್‌ ಬಟ್ಟೆಯನ್ನು ಹೊಂದಿಸಿಕೊಂಡು ಮಾಸ್ಕ್‌ ಹೊಲಿಯುತ್ತಿದ್ದಾರೆ,” ಎಂದೆನ್ನುತ್ತಾರೆ ೩ ಕರ್ನಾಟಕ ಗರ್ಲ್ಸ್‌ ಬೆಟಾಲಿಯನ್‌ ಎನ್‌ಸಿಸಿ ಮೈಸೂರು ಗ್ರೂಪ್‌ ಹೆಡ್‌ ಕ್ವಾಟರ್ಸ್‌ನ ಆಡಳಿತಾಧಿಕಾರಿ ಪ್ರತಿಭಾ ತಿವಾರಿ.


ಇಲ್ಲಿಯವರೆಗೂ 200 ಮಾಸ್ಕ್‌ಗಳನ್ನು ಮೈಸೂರಿನ ವಿದ್ಯಾರ್ಥಿಗಳು ತಯಾರಿಸಿದ್ದು, ಅವನ್ನು ರೇಷನ್ ಜೊತೆಗೆ ವಿತರಿಸಿದ್ದಾರೆ, ಮುಂದಿನ ದಿನಗಳಲ್ಲಿ 2,500 ಮಾಸ್ಕ್‌ ತಯಾರಿ ಮಾಡಬೇಕೆಂಬ ಗುರಿಯನ್ನು ಹೊಂದಿದ್ದಾರೆ. ಪ್ರಧಾನಿಯವರು ಈ ತಿಂಗಳ ಪ್ರಾರಂಭದಲ್ಲಿ ಮಾಸ್ಕ್‌ ತಯಾರಿಗೆ ಕರೆ ನೀಡಿದ್ದರು.


ಯುವರ್‌ ಸ್ಟೋರಿಯೊಂದಿಗೆ ಮಾತನಾಡಿದ ಹಾಸನ ಜಿಲ್ಲೆಯ ಎನ್‌ಎಸ್‌ಎಸ್‌ ಸ್ವಯಂ ಸೇವಕಿ ಅಶ್ವಿನಿ, “ಒಬ್ಬರು ಅಜ್ಜಿ ಹಳೆಯ ಹರಿದ ಕಾಟನ್‌ ಬ್ಯಾಗ್‌ ತೆಗೆದುಕೊಂಡು ಬಂದು ಮಾಸ್ಕ್‌ ಮಾಡಿಕೊಡು ಎಂದರು, ಆಗಲೇ ನನಗೆ ನಾವು ಮಾಸ್ಕ್‌ ಹೊಲಿಯಬಹುದು ಎಂಬ ಅರಿವಾಯಿತು. ನಾನೇ 50 ಮಾಸ್ಕ್‌ಗಳನ್ನು ತಯಾರಿಸಿ ನನ್ನ ಕುಟುಂಬಕ್ಕೆ ಮತ್ತು ನೆರೆಹೊರೆಯವರಿಗೆ ಹಂಚಿದ್ದೇನೆ,” ಎಂದರು.


ಇವರು ಯಾರೂ ಹೊಲಿಗೆಯಲ್ಲಿ ಪೂರ್ಣ ಪರಿಣಿತರಲ್ಲ, ತಾವೇ ಮುಂದೆ ಬಂದು ಈ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಿದೆ, ಮತ್ತು ಇದು ಹೇಗೆ ಸಹಾಯ ಮಾಡಬೇಕು ಎಂದು ತಿಳಿಯದೆ ಯೋಚಿಸುವವರಿಗೆ ಸಹಕಾರಿಯಾಗಬಲ್ಲದು ಎನ್ನುತ್ತಾರೆ ಪ್ರತಿಭಾ ತಿವಾರಿ.


ಇಷ್ಟೇ ಅಲ್ಲದೆ ಮೈಸೂರು ವಿವಿಯ ಎನ್‌ಎಸ್‌ಎಸ್‌ ವಿಭಾಗ ಯುನಿಸೆಫ್‌ ಮತ್ತು ಭಾರತೀಯ ಆರೋಗ್ಯ ಇಲಾಖೆಯ ಮಾರ್ಗದರ್ಶನದ ಮೇರೆಗೆ ಕೊರೊನಾವೈರಸ್‌ ಬಗೆಗಿನ ಹಲವಾರು ಜಾಗೃತಿ ಕಾರ್ಯಕ್ರಗಳನ್ನು ನಡೆಸುತ್ತಿದೆ. ಅದರಲ್ಲಿ ವಿಶೇಷವಾಗಿ ಹರಿಕಥೆಯ ಶೈಲಿಯಲ್ಲಿ ಕೊರೊನಾ ಕುರಿತ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದೆ.

“ನಾವು ಸಾಮಾಜಿಕ ಮಾಧ್ಯಮಗಳನ್ನು ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಬಳಸುತ್ತಿದ್ದೇವೆ. ಅಲ್ಲದೇ ಹೊಲಿಗೆ ಯಂತ್ರವಿರುವ ಹಲವು ವಿದ್ಯಾರ್ಥಿಗಳು, ಮನೆಯಲ್ಲೆ ಮಾಸ್ಕ್‌ ತಯಾರಿಸಿ ಸುತ್ತಮುತ್ತಲಿನವರಿಗೆ ನೀಡುತ್ತಿದ್ದಾರೆ. ಹಾಲು, ಕಿರಾಣಿಯಂತಹ ಅಗತ್ಯ ವಸ್ತುಗಳನ್ನು ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿಕೊಡಲಾಗುತ್ತಿದೆ,” ಎಂದರು ಮೈಸೂರು ವಿವಿಯ ಎನ್‌ಎಸ್‌ಎಸ್‌ ಕಾರ್ಯ ಕ್ರಮಾಧಿಕಾರಿ ಚಂದ್ರಶೇಖರ್‌ ತಿಳಿಸಿದರು.